✍️ ಮೌಲಾನಾ ಸೈಯದ್ ಯಹ್ಯಾ ತಂಙಳ್ ಮದನಿ
“ಅಲ್ಲಾಹನ ಮಾರ್ಗದಲ್ಲಿ ಕಾರ್ಯವೆಸಗುವ ಭರದಲ್ಲಿ ತಮ್ಮ ಸ್ವಂತ ಜೀವನೋಪಾಯಕ್ಕಾಗಿ ಭೂಮಿಯಲ್ಲಿ ಶ್ರಮಪಡಲು ಸಾಧ್ಯವಾಗದಿರುವ ಬಡಜನರು ಮುಖ್ಯವಾಗಿ ಸಹಾಯಕ್ಕೆ ಅರ್ಹರಾಗಿದ್ದಾರೆ. ಅರಿವಿಲ್ಲದವನು ಅವರ ಸ್ವಾಭಿಮಾನವನ್ನು ಕಂಡು ಅವರು ಸ್ಥಿತಿವಂತರೆಂದು ಊಹಿಸುತ್ತಾನೆ. ನೀವು ಅವರ ಮುಖಭಾವಗಳಿಂದ ಅವರ ಆಂತರಿಕ ಸ್ಥಿತಿಯನ್ನು ತಿಳಿದುಕೊಳ್ಳಬಲ್ಲಿರಿ. ಆದರೆ ಅವರು ಜನರ ಬೆಂಬತ್ತಿ ಬೇಡುವವರಲ್ಲ. ಅವರ ಸಹಾಯಾರ್ಥವಾಗಿ ನೀವು ಖರ್ಚು ಮಾಡುವ ಸಂಪತ್ತು ಅಲ್ಲಾಹನಿಂದ ಮರೆಯಾಗಿರದು.” (ಅಲ್ ಬಕರ: 273)
ಓರ್ವ ಮೌಲವಿಯವರ ಆತ್ಮಹತ್ಯೆಯ ಬಗ್ಗೆ ಸಮಾಜದಲ್ಲಿ ಇಂದು ಚರ್ಚೆಯಾಗುತ್ತಿದೆ.
ಉಮರ್ ಬಿನ್ ಖತ್ತಾಬ್ (ರ) ಅವರ ಆಡಳಿತ ಕಾಲದಲ್ಲಿ ಅವರು ಒಮ್ಮೆ ಕೆಲವು ಆಡುಗಳ ಕಳ್ಳರನ್ನು ಬಂಧಿಸಿದರು. ಹಲವು ಆಡುಗಳನ್ನು ಹೊಂದಿದ್ದ ಓರ್ವ ದೊಡ್ಡ ಮಾಲೀಕರಿಂದ ಕೆಲವು ಆಡುಗಳನ್ನು ಕಳ್ಳತನ ಮಾಡಿದ್ದು ಅವರ ಮೇಲಿನ ಆರೋಪವಾಗಿತ್ತು. ಆ ಕಳ್ಳರನ್ನು ಭೇಟಿಯಾಗಿ ಒಂದೆಡೆ ಕೂತು, “ನೀವು ಆರೋಗ್ಯದಲ್ಲಿ ದೃಢಕಾಯರಾಗಿದ್ದೀರಿ. ನೀವು ಯಾವ ಕಾರಣಕ್ಕಾಗಿ ಆಡುಗಳನ್ನು ಕಳವು ಮಾಡಿದಿರಿ?” ಎಂದು ಕೇಳಿದರು. ಅದಕ್ಕವರು, “ನಾವು ದೃಢಕಾಯರಾಗಿದ್ದರೂ ನಮಗೆ ಜೀವನ ಸವೆಸಲು ತ್ರಾಸದಾಯಕವಾಗಿತ್ತು. ಹಸಿವು ತಣಿಸಲು ವಿಧಿಯಿಲ್ಲದೆ ಆಡು ಕಳ್ಳತನ ಮಾಡಬೇಕಾಯಿತು” ಎಂದರು. ಉಮರ್ (ರ) ಕೂಡಲೇ ಅಲ್ಲಿನ ಎಲ್ಲಾ ಊರವರನ್ನು ಕರೆಸಿದರು. ಅವರೊಂದಿಗೆ, “ಕಳ್ಳನಿಗಿಂತ ಅಧಿಕಾರಿಯ ಕೈ ಕತ್ತರಿಸಲು ಆದೇಶವಿರುವ ಹದೀಸ್ ಅನ್ನು ನಾನು ಹುಡುಕುತ್ತಿದ್ದೇನೆ. ಅವರ ಹಕ್ಕನ್ನು ಸರಿಯಾದ ರೀತಿಯಲ್ಲಿ ನೀಡದೆ ಕಳ್ಳತನಕ್ಕೆ ಅವಕಾಶ ನೀಡಿರುವುದು ಇಲ್ಲಿನ ಆಡಳಿತಗಾರರು.” ಎಂದರು. ಕೊನೆಗೆ ಅವರು ಆಡುಗಳ ಮಾಲೀಕನನ್ನು ಕರೆದು ಝಕಾತ್ ನೀಡುವಂತೆ ಆದೇಶಿಸಿದರು. ಕಳ್ಳತನ ಮಾಡಿದವರಿಗೆ ಎರಡು ಆಡುಗಳನ್ನು ನೀಡಿ ಅವರನ್ನು ಆರೋಪಮುಕ್ತಗೊಳಿಸಿ, ಕ್ಷಮಿಸಿ ಬಿಡುಗಡೆಗೊಳಿಸಿದರು.
ಬಡ ವ್ಯಕ್ತಿಯೊಬ್ಬನ ಮನೆಯಲ್ಲಿ ಯಾವುದಾದರೊಂದು ಸಣ್ಣ ವಾಹನ ಇದ್ದ ಕೂಡಲೇ ಆತನನ್ನು ಕಡೆಗಣಿಸುವುದು ಸರಿಯಲ್ಲ. ಈ ಮೌಲವಿಯವರ ಸಾವಿನ ಬಗ್ಗೆ, “ಈ ಮೌಲವಿಯವರು ಆತ್ಮಹತ್ಯೆಗಳಿಗೆ ಶುರುಹಚ್ಚಿದರಲ್ಲಾ” ಎನ್ನುವ ಬದುಲು, “ನನ್ನಿಂದ ಅವರಿಗೆ ನೆರವಾಗಲು ಸಾಧ್ಯವಾಗಲಿಲ್ಲವಲ್ಲಾ” ಎಂಬ ವ್ಯಥೆ ಮನದಲ್ಲಿ ಮೂಡಬೇಕು. ಸಾಲ ಪಡೆದು ತೀರಿಸಲಾಗದೆ, ಸಾಲ ತೀರಿಸಲು ಶ್ರಮಿಸಿ ನೀಡಿದ ಹಣವೆಲ್ಲಾ ಬಡ್ಡಿಯ ಪಾಲು ಸೇರಿ, ಮೂಲ ಸಾಲ ಹಾಗೆಯೇ ಬಾಕಿ ಉಳಿದಾಗ ಈ ದಾರಿ ತುಳಿದರು. ಆದರೆ ನಾವು ಇಲ್ಲಿ “ಆತ್ಮಹತ್ಯೆ ಮಾಡಿದವನ ಮಯ್ಯತ್ ನಮಾಝ್ ನಿರ್ವಹಿಸಬಾರದು” ಎಂಬ ಚಿಂತೆಯಲ್ಲಿದ್ದೇವೆ. ಆದರೆ ಯಾವ ರೀತಿಯ ಆತ್ಮಹತ್ಯೆಯ ಸಂದರ್ಭದಲ್ಲಿ ಈ ಆದೇಶ ಬಂತು ಎಂಬ ಬಗ್ಗೆ ಚಿಂತಿಸಬೇಕು.
ಪ್ರವಾದಿವರ್ಯರ(ಸ) ಕಾಲದಲ್ಲಿ, ಯಾವುದೋ ಕಾರಣಕ್ಕೆ ಪ್ರವಾದಿವರ್ಯರ ಜೊತೆಯಲ್ಲಿ ಸಹಾಬಿಯಂತೆ ನಟಿಸಿ ಓಡಾಡುತ್ತಿದ್ದ ಓರ್ವ ವ್ಯಕ್ತಿ ಶತ್ರುಗಳ ದಾಳಿಯಿಂದ ಉಂಟಾದ ಬಾಣದ ನೋವನ್ನು ತಾಳಲಾರದೆ, ತನ್ನಲ್ಲಿದ್ದ ಭರ್ಜಿಯಿಂದ ಸ್ವತಃ ತನ್ನೆದೆಗೆ ಚುಚ್ಚಿ ಆತ್ಮಹತ್ಯೆಗೈದನು. ಆಗ ಪ್ರವಾದಿವರ್ಯರು, “ಆತ್ಮಹತ್ಯೆಗೈದ ವ್ಯಕ್ತಿಗೆ ಜನಾಝಾ ನಮಾಝ್ ನಿರ್ವಹಿಸದಿರಿ” ಎಂದು ಆದೇಶಿಸಿದರು. ಇದು ಪ್ರಜ್ಞಾಪೂರ್ವಕವಾಗಿ ಮಾಡಿದ ಆತ್ಮಹತ್ಯೆಯಾಗಿದೆ. ಒಂದು ಬಾಣದ ಗಾಯವನ್ನು ಸಹಿಸಲಾಗದೆ ಸ್ವತಃ ಆತ್ಮಹತ್ಯೆಗೈದ ವ್ಯಕ್ತಿಗೆ ನಮಾಝ್ ನಿರ್ವಹಿಸಲು ಪ್ರವಾದಿವರ್ಯರು(ಸ) ನಿರಾಕರಿಸಿದರು. ಹೀಗಿರುವಾಗ ನಾವು ಇಲ್ಲಿ ಸರಿಯಾದ ರೀತಿಯಲ್ಲಿ ಝಕಾತ್ ಹಂಚದೆ, ಅವರು ಸಾಲಸೋಲದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುವಾಗ ಅವರು ಹೇಗೆ ಪರಾಜಿತರಾಗುತ್ತಾರೆ? ಸಮಾಜದಲ್ಲಿ ಇಷ್ಟೊಂದು ವ್ಯವಸ್ಥೆಗಳು ಇರುವಾಗ ಓರ್ವ ವ್ಯಕ್ತಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಏಕೆ ಮಾಡುತ್ತಾನೆ ಎಂಬುದರ ಹಿನ್ನೆಲೆಯನ್ನು ಗಮನಿಸಬೇಕು. ಆದ್ದರಿಂದ ಆ ವ್ಯಕ್ತಿಯ ಪರಲೋಕ ಮೋಕ್ಷಕ್ಕೆ ಪ್ರಾರ್ಥಿಸುವುದನ್ನು ತಡೆಯುವುದು ಸರಿಯಲ್ಲ.
ಪಾಲಕ್ಕಾಡ್ನಲ್ಲಿ ಓರ್ವನು ತನ್ನ ಅಂಧಳಾದ ಪತ್ನಿ ಹಾಗೂ ಈರ್ವರು ಮಕ್ಕಳ ಜೊತೆ ಬಡತನ ಸಹಿಸಲಾಗದೆ ಹೊಳೆಗೆ ಹಾರಿ ಆತ್ಮಹತ್ಯೆಗೈದನು. ನಾವು ಯಾವುದೇ ಒಂದು ವಿಚಾರದ ಬಗ್ಗೆ ಚರ್ಚಿಸುವಾಗ ಕೇವಲ ಅದರ ಶೀರ್ಷಿಕೆ ನೋಡಿದರೆ ಸಾಲದು. ಕುರ್ಆನ್, ಹದೀಸ್ನ ಆಧಾರದಲ್ಲಿ ಅದರ ಒಳಾರ್ಥವನ್ನು ಗಮನಿಸಬೇಕು. ಓರ್ವ ಮದ್ಯಪಾನಿ ಶರಾಬು ಸಿಗದೆ, ಓರ್ವ ವ್ಯಭಿಚಾರಿ ಹೆಣ್ಣು ಸಿಗದೆ ಇರುವಾಗ ಮಾಡಿದ ಆತ್ಮಹತ್ಯೆಯ ಸಾಲಿಗೆ ಇದನ್ನು ಸೇರಿಸಬಾರದು. ಅವರು ತಾಳ್ಮೆ, ಸಹನೆಯನ್ನು ಕಳೆದುಕೊಂಡರು ಎಂಬುದು ಅವರು ಮಾಡಿದ ಪಾಪವಾಗಿದೆ.
ಪವಿತ್ರ ಕುರ್ಆನ್ ಹೀಗೆ ಹೇಳುತ್ತದೆ: “ಓ ಸತ್ಯವಿಶ್ವಾಸಿಗಳೇ, ಸಹನೆ ಮತ್ತು ನಮಾಝಿನಿಂದ ಸಹಾಯ ಪಡೆಯಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ.” (ಅಲ್ ಬಕರ: 153)
ಸಹನೆ ಎಂದರೆ ಕೇವಲ ಮಾತಿನಲ್ಲಿ ಹೇಳಿದರೆ ಸಾಲದು. ಮದೀನಾಕ್ಕೆ ಪ್ರವಾದಿವರ್ಯರು(ಸ) ಬರುತ್ತಿರುವಾಗ ಓರ್ವ ಮಹಿಳೆಯು ಗೋರಿಯ ಪಕ್ಕದಲ್ಲಿರುವ ಗುರುತಿನ ಕಲ್ಲಿಗೆ ತಲೆ ಬಡಿದು ಅಳುತ್ತಿದ್ದರು. ಪ್ರವಾದಿವರ್ಯರು(ಸ) ಅವರನ್ನು ಕರೆದು “ಅಮ್ಮಾ! ಸಹನೆ ವಹಿಸಿರಿ” ಎಂದು ಹೇಳಿದರು. ಆಗ ಆ ಮಹಿಳೆಯು “ನೀವು ಹೋಗಿರಿ. ನನ್ನ ಮಗುವಿನ (ಅಥವಾ ತಾಯಿಯ) ಅಗಲಿಕೆಯ ನೋವಿನ ಬಗ್ಗೆ ನನಗಲ್ಲವೇ ತಿಳಿದಿರುವುದು” ಎನ್ನುತ್ತಾ ಮತ್ತೆ ಅಳತೊಡಗಿದರು. ಪ್ರವಾದಿವರ್ಯರು “ಸಹನೆ ವಹಿಸಿರಿ” ಎನ್ನುತ್ತಾ ಮುಂದುವರಿದರು. ಸ್ವಲ್ಪ ಸಮಯದ ಬಳಿಕ ಅವರನ್ನು ಪ್ರವಾದಿವರ್ಯರ ಸಮ್ಮುಖಕ್ಕೆ ಯಾರೋ ಕರೆತಂದು, “ಇದು ಯಾರೆಂದು ಗೊತ್ತೇ? ಇವರು ಪ್ರವಾದಿ ಮುಹಮ್ಮದ್(ಸ) ಆಗಿದ್ದಾರೆ” ಎಂದು ಮಹಿಳೆಗೆ ತಿಳಿಸಿದರು. ಆ ಮಹಿಳೆಯು ಇಸ್ಲಾಮ್ ಸ್ವೀಕರಿಸಿದ್ದರು, ಆದರೆ ಆ ತನಕ ಪ್ರವಾದಿವರ್ಯರನ್ನು ನೋಡಿರಲಿಲ್ಲ. “ಪ್ರವಾದಿಗಳೇ, ನಾನು ಸಹನೆ ವಹಿಸುವೆನು” ಎಂದು ಹೇಳಿದಳು. ಪ್ರವಾದಿವರ್ಯರು(ಸ) ಹೇಳಿದರು: “ಅಸ್ಸಬ್ರು ಇಂದ ಸದ್ಮತಿಲ್ ಊಲಾ” — ‘ವಿಪತ್ತು ಬಂದ ಮೊದಲ ಕ್ಷಣದಲ್ಲಿ ತಾಳುವ ಸಹನೆಯೇ ಅಸ್ಸಬ್ರ್ ಆಗಿದೆ.’ ಆಪತ್ತು ಬಂದಾಗ, ಉದಾಹರಣೆಗೆ ತಮ್ಮ ಪತಿ, ಸಹೋದರರು ಹೀಗೆ ಆಪ್ತ ಸಂಬಂಧಿಕರ ಮರಣದ ಸುದ್ದಿ ಬಂದಾಗ ವಹಿಸುವ ಸಹನೆಯಾಗಿದೆ. ಯಾವುದೇ ಸಮಸ್ಯೆ ಬಂದರೂ ಆತ್ಮಹತ್ಯೆ ಪರಿಹಾರವಲ್ಲ. ಯಾವ ಕಾರಣಕ್ಕೂ ಆ ಹಾದಿಯನ್ನು ತುಳಿಯಬಾರದು.
ಕುರ್ಆನ್ ಹೀಗೆ ಹೇಳುತ್ತದೆ: “ಅವರು ‘ಜಾಲೂತ್’ ಮತ್ತು ಅವನ ಸೇನೆಗಳನ್ನೆದುರಿಸಲು ಹೊರಟಾಗ ಹೀಗೆ ಪ್ರಾರ್ಥಿಸಿದರು, “ಓ ನಮ್ಮ ಪ್ರಭೂ, ನಮಗೆ ಸಹನೆಯನ್ನು ಪ್ರದಾನ ಮಾಡು. ನಮ್ಮ ಹೆಜ್ಜೆಗಳನ್ನು ಅಚಲಗೊಳಿಸು. ಸತ್ಯನಿಷೇಧಿ ತಂಡದ ಎದುರು ನಮಗೆ ವಿಜಯ ನೀಡು.”(ಅಲ್ ಬಕರ: 250)
ನಮ್ಮ ನಾಡಿನಲ್ಲಿ ವಿವಿಧ ಸಂಘಟನೆಗಳು, ನೇತಾರರು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಯಾಕೆ ಇಂತಹ ಲೋಪ ಘಟಿಸಿತು ಎಂದು ಎಲ್ಲರೂ ಆತ್ಮಾವಲೋಕನ ನಡೆಸಬೇಕು.












