✍️ ಖದೀಜ ನುಸ್ರತ್
ಮಾನವ ಜೀವನವು ಭಾವನೆ, ಕನಸು ಮತ್ತು ಗುರಿಗಳ ಸಂಕೀರ್ಣವಾದ ಸಂಯೋಜನೆಯಾಗಿದೆ. ಅದರಲ್ಲಿ ಸಂತೋಷ, ದುಃಖ, ಆಶಂಕೆ, ಆತಂಕ, ಸ್ನೇಹ, ವ್ಯಸನಗಳಂತಹ ಅನೇಕ ಅನುಭವಗಳಿರುತ್ತವೆ. ಅವು ನಮ್ಮ ದೈನಂದಿನ ಬದುಕನ್ನು ರೂಪಿಸುತ್ತವೆ. ಈ ಎಲ್ಲಾ ಮನೋಭಾವಗಳನ್ನು ಮೆದುಳಿನಲ್ಲಿ ಉತ್ಪತ್ತಿಯಾಗುವ ಡೊಪಮೈನ್ ಎಂಬ ರಾಸಾಯನಿಕ ಪದಾರ್ಥ ನಿಯಂತ್ರಿಸುತ್ತದೆ. ಇದು ನರಗಳ ಮೂಲಕ ಸಂದೇಶ ವಾಹಕವಾಗಿ ಕಾರ್ಯನಿರ್ವಹಿಸಿ, ನಮ್ಮ ಮನಃಸ್ಥಿತಿ, ಪ್ರೇರಣೆ ಮತ್ತು ವರ್ತನೆಗಳನ್ನು ನಿಯಂತ್ರಿಸುತ್ತದೆ. ಡೊಪಮೈನನ್ನು ಸಾಮಾನ್ಯವಾಗಿ ಸಂತೋಷದ ರಾಸಾಯನಿಕ ಎಂದು ಕರೆಯಲಾಗುತ್ತದೆ. ನಾವು ಯಾವುದಾದರೂ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದಾಗ ಅಥವಾ ಇಷ್ಟವಾದ ಅನುಭವವನ್ನು ಪಡೆದಾಗ ಮೆದುಳು ಡೊಪಮೈನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿ ಸಂತೋಷ ಮತ್ತು ಸಂತೃಪ್ತಿ ದೊರೆಯುತ್ತದೆ. ನಮಗೆ ಇಷ್ಟವಾದ ಆಹಾರ ಸೇವಿಸುವುದರಿಂದ, ಪ್ರಶಂಸೆಯನ್ನು ಪಡೆಯುವುದರಿಂದ ಮತ್ತು ಸರಿಯಾದ ಗುರಿಯನ್ನು ಸಾಧಿಸುವುದರಿಂದ ನಮ್ಮನ್ನು ಮತ್ತೆ ಮತ್ತೆ ಅದೇ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಡೊಪಮೈನ್ನ ಸಮತೋಲನವು ಆರೋಗ್ಯಕರ ಜೀವನಕ್ಕೆ ಆವಶ್ಯಕವಾಗಿದೆ. ಇದರ ಕೊರತೆಯಾದರೆ ಖಿನ್ನತೆ, ಉತ್ಸಾಹರಾಹಿತ್ಯ, ಕೆಲವು ನರ ಸಂಬಂಧಿತ ಮತ್ತು ಮಾನಸಿಕ ಕಾಯಿಲೆಗಳು ಉಂಟಾಗಬಹುದು. ಅದೇ ರೀತಿ ನೆಗೆಟಿವ್ ಡೊಪಮೈನ್ ಅತಿಯಾಗಿ ಉತ್ಪತ್ತಿಯಾದರೆ ಮನುಷ್ಯನು ವ್ಯಸನಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಒಬ್ಬ ವಿದ್ಯಾರ್ಥಿ ಪರಿಶ್ರಮ ಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣನಾದಾಗ ಅವನು ಅನುಭವಿಸುವ ಸಂತೋಷವು ಧನಾತ್ಮಕ ಡೊಪಮೈನ್ನ ಪರಿಣಾಮವಾಗಿದೆ. ಆದರೆ, ಅತಿಯಾದ ಮೊಬೈಲ್ ಬಳಕೆ ಅಥವಾ ಆನ್ಲೈನ್ ಆಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೊರೆಯುವ ಸಂತೋಷ ಕ್ಷಣಿಕವಾಗಿದ್ದು, ಋಣಾತ್ಮಕ ಡೊಪಮೈನ್ ಉತ್ತೇಜನೆಯಾಗುತ್ತಾ ಜೀವನದಲ್ಲಿ ದೀರ್ಘಕಾಲದ ಹಾನಿಕಾರಕವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ನಾವು ಮಾಡುವಂತಹ ಬೇರೆ ಬೇರೆ ಕೆಲಸ ಕಾರ್ಯ, ಚಟು ವಟಿಕೆಗಳು ಮೆದುಳಿನಲ್ಲಿ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತವೆ.
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನವು ಮಾನವ ಜೀವನವನ್ನು ಸುಲಭ ಗೊಳಿಸಿದರೂ, ಅದರ ದುರುಪಯೋಗವು ಸಮಸ್ಯೆಗಳಿಗೂ ಕಾರಣವಾಗಿದೆ. ಮೊಬೈಲ್ ಫೋನ್ಗಳು, ಸಾಮಾಜಿಕ ಜಾಲತಾಣಗಳು, ಆನ್ಲೈನ್ ಆಟಗಳು, ರೀಲ್ಸ್ ಮತ್ತು ಅಶ್ಲೀಲ ವಿಡಿಯೋಗಳು ಮೆದುಳನ್ನು ಕೃತಕವಾಗಿ ಪ್ರಚೋದಿಸುತ್ತವೆ. ಇದರಿಂದ ವ್ಯಕ್ತಿ ಕ್ರಮೇಣ ಅವುಗಳಿಗೆ ಅವಲಂಬಿಯಾಗುತ್ತಾನೆ. ಪರಿಣಾಮವಾಗಿ, ಓದು, ಕೆಲಸ, ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಮಕ್ಕಳಲ್ಲಿ ಈ ಸಮಸ್ಯೆ ಗಂಭೀರವಾಗುತ್ತಿದೆ. ರೀಲ್ಸ್ ಮತ್ತು ನಿರಂತರ ಮನರಂಜನೆ ಅವರ ನೆನಪು ಶಕ್ತಿ, ಏಕಾಗ್ರತೆಯನ್ನು ಕುಗ್ಗಿಸುತ್ತವೆ. ತರಗತಿಯಲ್ಲಿ ಇದ್ದರೂ ಅವರ ಮನಸ್ಸು ಕಾಲ್ಪನಿಕ ಡಿಜಿಟಲ್ ಜಗತ್ತಿನಲ್ಲಿ ತೊಡಗಿಸಿಕೊಂಡಿರುತ್ತದೆ. ಇದು ಅವರ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮದ್ಯಪಾನ, ಡ್ರಗ್ಸ್ ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳು ಪ್ರಾರಂಭದಲ್ಲಿ ಸಂತೋಷವನ್ನು ನೀಡಿದರೂ, ನಂತರ ಅವುಗಳಿಲ್ಲದೆ ಬದುಕಲು ಕಷ್ಟವಾಗುತ್ತದೆ. ಇದು ದೇಹ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯನ್ನು ದಾಸ್ಯಭಾವಕ್ಕೆ ಒಳ ಪಡಿಸುತ್ತದೆ.
ಮಾನವನಲ್ಲಿ ತಿನ್ನುವ, ಕುಡಿಯುವ, ಲೈಂಗಿಕಾಸಕ್ತಿ, ಮನೋರಂಜನೆ, ತನ್ನವರಿಂದ ಪ್ರೀತಿಸಲ್ಪಡಬೇಕು, ಪರಿಗಣಿಸಲ್ಪಡಬೇಕೆಂಬ ಆಸೆಯು ಸಹಜವಾಗಿರುತ್ತದೆ. ಆದರೆ ಇದು ಧರ್ಮಸಮ್ಮತ ಹಾಗೂ ಧರ್ಮನಿಷಿದ್ಧ ಮೇರೆಯಲ್ಲಿ ಬುದ್ಧಿಶಕ್ತಿ, ಧಾರ್ಮಿಕ, ನೈತಿಕ ಹಾಗೂ ಸಮಗ್ರ ದೃಷ್ಟಿಕೋನದ ಸರಿಯಾದ ಮಾರ್ಗದರ್ಶನದಲ್ಲಿರಬೇಕು. ಇಲ್ಲವಾದರೆ ಆಸೆಯು ಮನುಷ್ಯನನ್ನು ನಾಶದೆಡೆಗೆ ಕೊಂಡೊಯ್ಯುತ್ತದೆ. ದೇವ ಸ್ಮರಣೆ, ದೈನಂದಿನ ಪ್ರಾರ್ಥನೆ ಮತ್ತು ತಮ್ಮ ಜವಾಬ್ದಾರಿಗಳನ್ನು ಮರೆತು ಬಿಡುವಂತೆ ಮಾಡುತ್ತದೆ. ಅವರು ಲೌಕಿಕ ಹಾಗೂ ಮರಣಾನಂತರದ ಭವಿಷ್ಯದ ಬಗ್ಗೆ ಆಲೋಚಿಸುವುದಿಲ್ಲ
“ಸತ್ಯ ವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ ಮತ್ತು ಪ್ರತಿಯೊಬ್ಬನೂ, ತಾನು ನಾಳೆಗಾಗಿ ಏನನ್ನು ಸಿದ್ಧಪಡಿಸಿಟ್ಟಿರುವೆನೆಂಬುದನ್ನು ನೋಡಿಕೊಳ್ಳಲಿ. ಅಲ್ಲಾಹನನ್ನು ಭಯಪಡುತ್ತಲಿರಿ. ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಸಕಲ ಕರ್ಮಗಳನ್ನು ಅಲ್ಲಾಹನು ಬಲ್ಲವನಾಗಿರುತ್ತಾನೆ. ಯಾರು ಅಲ್ಲಾಹನನ್ನು ಮರೆತಾಗ ಅಲ್ಲಾಹನು ಅವರು ತಮ್ಮನ್ನು ತಾವೇ ಮರೆತು ಬಿಡುವಂತೆ ಮಾಡಿದನೋ ಅವರಂತೆ ನೀವಾಗಬಾರದು. ಅವರೇ ಕರ್ಮಭ್ರಷ್ಟರು.” (ಪವಿತ್ರ ಕುರ್ಆನ್ 59: 18-19)
ಅಗತ್ಯವಿಲ್ಲದ ರೀಲ್ಸ್ಗಳು ಡಿಜಿಟಲ್ ದಾಸರನ್ನಾಗಿ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ನಮ್ಮ ವಯಸ್ಸಿಗೆ ತಕ್ಕ ಬಣ್ಣ, ಆಸಕ್ತಿಗೆ ತಕ್ಕ ರಾಗ, ಮನ ಸ್ಸಿಗೆ ತಕ್ಕ ಆಕರ್ಷಣೆಯ ಮನಃಶಾಸ್ತ್ರವನ್ನು ಅಧ್ಯಯನ ಮಾಡಿದ ಕಂಪ್ಯೂಟರ್ಗಳ ತಂತ್ರಜ್ಞರು ವಿಶೇಷ ಅಲ್ಗೋರಿದಮ್ಗಳ ಮೂಲಕ ಸಾಫ್ಟ್ವೇರ್ಗಳನ್ನು ನಿರ್ಮಿಸುತ್ತಾರೆ. ಒಮ್ಮೆ ನಾವು ಅವನ್ನು ಬಳಸಲು ಪ್ರಾರಂಭಿಸಿದರೆ, ನಮ್ಮ ವಯಸ್ಸು, ಆಸಕ್ತಿ ಮತ್ತು ಅಭಿರುಚಿಗಳಿಗೆ ತಕ್ಕಂತೆ ವಿಷಯಗಳನ್ನು ತೋರಿಸುತ್ತಾ, ನಾವು ಗಮನಿಸದೇ ಸ್ಕ್ರೋಲ್ ಮಾಡುತ್ತಿರಲು ಪ್ರೇರೇಪಿಸುತ್ತವೆ. ಇದರಿಂದ ಡೊಪಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗಿ ಮತ್ತಷ್ಟು ಬಳ ಸುವ ಆಸೆ ಹೆಚ್ಚುತ್ತದೆ. ಇದರಿಂದ ನಮ್ಮ ಸಮಯವು ನಮಗರಿಯದಂತೆ ವ್ಯರ್ಥವಾಗುವುದನ್ನು ನಾವು ಕಾಣುತ್ತೇವೆ. ಮಕ್ಕಳು ಆಗ್ರಹಿಸುವ ಲೈಕ್, ಶೇರ್, ಉತ್ತಮ ಕಮೆಂಟ್ಗಳು ಅವರ ಮೌಲ್ಯ ಮಾಪನವನ್ನು ಕಾಲ್ಪನಿಕವಾಗಿ ಉತ್ತೇಜಿಸುತ್ತದೆ. ಒಂದು ದಿನದಲ್ಲಿ ಒಂದು ಗಂಟೆಗಿಂತ ಹೆಚ್ಚು ಯಾವುದೇ ರೀತಿಯ ಮನರಂಜನೆಯ ಮೇಲೆ ಅವಲಂಬಿತರಾಗದಂತೆ ಜಾಗರೂಕತೆ ವಹಿಸಬೇಕು. ಎರಡು ಮೂರು ದಿವಸ ಅವುಗಳನ್ನು ಉಪಯೋಗಿಸದಿರುವಾಗಲೂ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲದೆ ಜೀವಿಸಲು ಸಾಧ್ಯವಾಗಬೇಕು. ಇಲ್ಲವಾದರೆ ಡೊಪಮೈನ್ ನಮ್ಮ ಶತ್ರುವಾಗಿ ಮಾರ್ಪಡುವುದು. ನಮ್ಮ ಮಾನಸಿಕ ಹಾಗೂ ಶಾರೀರಿಕ ಸಂತುಲಿತಾವಸ್ಥೆಯನ್ನು ನಾಶ ಪಡಿಸಿ ರೋಗಾವಸ್ಥೆಗೆ ತಲುಪಿಸುತ್ತದೆ. ಆದ್ದರಿಂದ ಮೊಬೈಲ್ ಉಪಯೋಗಿಸುವವರು ತಮ್ಮ ಮನೋಭಾವವನ್ನು ಬದಲಿಸುತ್ತಾ ಶಿಸ್ತುಬದ್ಧವಾಗಿ ನಿಯಂತ್ರಿಸುವುದು ಅಗತ್ಯವಾಗಿದೆ.
ಆರನೆಯ ಶತಮಾನದಲ್ಲಿ ಪವಿತ್ರ ಕುರ್ಆನ್ನಲ್ಲಿ ಮದ್ಯಪಾನವನ್ನು ಒಮ್ಮೆಲೇ ನಿಷೇಧಗೊಳಿಸಲಿಲ್ಲ. ಪ್ರಥಮವಾಗಿ ಅದರ ಸಂಪೂರ್ಣ ನಿಷೇಧಕ್ಕೆ ಜನಮನವನ್ನು ಸನ್ನದ್ಧಗೊಳಿಸಲಿಕ್ಕಾಗಿ ಅದೊಂದು ಪಾಪ ಕಾರ್ಯ ಎಂದಷ್ಟೇ ಸೂಚಿಸಲಾಗಿತ್ತು. ಅನಂತರ ಮದ್ಯಪಾನ ಮಾಡಿ ನಮಾಝ್ ಮಾಡುವುದನ್ನು ನಿಷೇಧಿಸಲಾಯಿತು. ಕೊನೆಗೆ ಮದ್ಯಪಾನ ಮತ್ತು ಜೂಜಾಟ ಗಳೂ ಆ ವರ್ಗಕ್ಕೆ ಸೇರಿದ ಎಲ್ಲ ವಸ್ತುಗಳೂ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟವು. ಯಾವುದೇ ಕೆಟ್ಟ ಅಭ್ಯಾಸವನ್ನು ಒಮ್ಮೆಲೇ ಬದಲಾಯಿಸಲು ಮಾನವ ಮನಸ್ಸು ಸಿದ್ಧವಾಗುವುದಿಲ್ಲ. ಬದಲಾವಣೆಗೆ ಸಹನೆಯ ಮೃದುವಾದ ಹೆಜ್ಜೆಗಳೊಂದಿಗೆ ಸಮಯ ಬೇಕಾಗುತ್ತದೆ. ಮನಸ್ಸು ಹೊಸ ಮಾರ್ಗವನ್ನು ಸ್ವೀಕರಿಸಲು ಸಾಮಾನ್ಯವಾಗಿ 21 ರಿಂದ 40 ದಿನಗಳ ಕಾಲ ಹೋರಾಡುತ್ತದೆ. ತಾಳ್ಮೆಯಿಂದ ಮುಂದುವರಿದರೆ ಅದು ನಿಧಾನವಾಗಿ ಹೊಸ ಬೆಳಕಿನತ್ತ ಸಾಗುತ್ತಾ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಮಕ್ಕಳನ್ನಾಗಲಿ ದೊಡ್ಡವರನ್ನಾಗಲಿ ಒಂದೇ ರೀತಿಯ ವಿಧಾನದಿಂದ ಸರಿಪಡಿಸಲು ಸಾಧ್ಯವಿಲ್ಲ. ಬದಲಾವಣೆ ಬಲವಂತದಿಂದ ಆಗುವುದಿಲ್ಲ. ನಿಧಾನವಾಗಿ, ಪ್ರೀತಿಯ ಹೆಜ್ಜೆಗಳಿಂದ ಮಾತ್ರ ಪರ್ಯಾಯ ಮಾರ್ಗಗಳು ಹೃದಯಕ್ಕೆ ತಾಗುತ್ತವೆ.












