ಗಡ್ಡ, ಟೋಪಿ, ನಿಕಾಬ್ ಎಂಬ ಶಂಕಿತ ಗುರುತು

0
315

@ ಏ.ಕೆ. ಕುಕ್ಕಿಲ

ಅಪಪ್ರಚಾರ
ಭೀತಿ

ಈ ಎರಡೂ ಪದಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಕಾರಣ ಇದೆ. 1. ಆರಿಫ್ ಹುಸೈನ್, 2. ಗುಜರಾತ್ ಸರಕಾರದ ಸುತ್ತೋಲೆ.

  1. ಎಕ್ಸ್ ಮುಸ್ಲಿಮ್ ಎಂದು ತನ್ನನ್ನು ತಾನು ಕರೆದುಕೊಳ್ಳುವ ಆರಿಫ್ ಹುಸೈನ್ ಎಂಬ ಕೇರಳದ ವ್ಯಕ್ತಿ ಜುಲೈ ಮೊದಲ ವಾರದಲ್ಲಿ ಲಂಡನ್ನಿನ ಸ್ಪೀಕರ್ಸ್ ಕಾರ್ನರ್‌ನಲ್ಲಿ ಒಂದು ಸಂವಾದದಲ್ಲಿ ಕಾಣಿಸಿಕೊಂಡರು. ಈ ಕುರಿತಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ, ಪರ-ವಿರೋಧ ಅಭಿಪ್ರಾಯಗಳಿಗೂ ಕಾರಣವಾಯಿತು. ‘ಓರ್ವ ತಂದೆ ತನ್ನ ಮಗಳನ್ನು ವಿವಾಹವಾಗಬಹುದು ಎಂಬುದಾಗಿ ಇಸ್ಲಾಮ್ ಪ್ರತಿಪಾದಿಸುತ್ತದೆ ಮತ್ತು ಇದಕ್ಕೆ ಕುರ್‌ಆನ್‌ನಲ್ಲಿ ಸಾಕ್ಷ್ಯ ಇದೆ..’ ಎಂದು ಆರಿಫ್ ಹುಸೈನ್ ಈ ಸ್ಪೀಕರ್ಸ್ ಕಾರ್ನರ್‌ನಲ್ಲಿ ನಿಂತು ಹೇಳಿದರು. ಇದನ್ನು ಅದ್ನಾನ್ ರಶೀದ್, ಹಾಶಿಮ್, ಮನ್ಸೂರ್, ಇಸ್ಲಾಮ್ ಹಕೀಮ್ ಮುಂತಾದವರನ್ನು ಒಳಗೊಂಡ ದಾವಾ ತಂಡವು ಆಕ್ಷೇಪಿಸಿತು. ನಿಮ್ಮ ವಾದಕ್ಕೆ ಪವಿತ್ರ ಕುರ್‌ಆನ್‌ನಲ್ಲಿರುವ ಆಧಾರವನ್ನು ತೋರಿಸಿ ಎಂದು ಇವರೆಲ್ಲ ಪಟ್ಟು ಹಿಡಿದರು. ಆರಿಫ್ ಹುಸೈನ್‌ರು ಕುರ್‌ಆನಿನ ವಚನವನ್ನು ಮೊಬೈಲ್‌ನಲ್ಲಿ ಹುಡುಕತೊಡಗಿದರು. ಆದರೆ,

ಅವರಿಗೆ ತನ್ನ ವಾದಕ್ಕೆ ಪೂರಕ ಸಾಕ್ಷ್ಯವನ್ನು ಕುರ್‌ಆನಿನಿಂದ ಹೆಕ್ಕಿ ಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ, ತನ್ನ ಮೊಬೈಲ್ ನಲ್ಲಿ ಇಂಟರ್‌ನೆಟ್ ಇಲ್ಲ ಎಂದು ಆರಿಫ್ ಹೇಳಿದರು. ಇದನ್ನು ಒಪ್ಪದ ಅದ್ನಾನ್ ಮತ್ತು ಇತರರು ತಮ್ಮ ಮೊಬೈಲನ್ನು ಆರಿಫ್‌ಗೆ ಕೊಟ್ಟು, ಇದರಲ್ಲಿ ಇಂಟರ್ ನೆಟ್ ಇದೆ, ಬಳಸಿಕೊಳ್ಳಿ ಎಂದು ಉತ್ತರಿಸಿದರು. ಆದರೆ ಆರಿಫ್ ಹುಸೈನ್ ಇದನ್ನು ಸ್ವೀಕರಿಸಲಿಲ್ಲ ಎಂಬ ವರದಿ ಇದೆ. ಅಂದಹಾಗೆ,

ಲಂಡನ್ನಿನ ಸ್ಪೀಕರ್ಸ್ ಕಾರ್ನರ್ ಎಂಬುದು ವಿಶ್ವದ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಮುಕ್ತ ಭಾಷಣ ಸ್ಥಳವಾಗಿ ಗುರುತಿಸಿಕೊಂಡಿದೆ. ಯಾರೇ ಆಗಲಿ, ಇಲ್ಲಿನ ಸೋಪ್ ಬಾಕ್ಸ್ ಎಂಬ ಹೆಸರಿನ ವೇದಿಕೆಯಲ್ಲಿ ನಿಂತು ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದು. ಹೆಚ್ಚಾಗಿ ಭಾನುವಾರ ಜನರು ಇಲ್ಲಿ ಸೇರುತ್ತಾರಾದರೂ, ಈ ವೇದಿಕೆಯನ್ನು ಬಳಸಿಕೊಳ್ಳುವುದಕ್ಕೆ ದಿನಗಳ ಮಿತಿಯೇನೂ ಇಲ್ಲ. ಪೊಲೀಸ್ ಅನುಮತಿಯ ಹಂಗಿಲ್ಲದೇ ಪ್ರತಿಭಟನೆ ಮತ್ತು ಭಾಷಣ ಮಾಡುವುದಕ್ಕೆ ಇರುವ ಅಪರೂಪದ ಸ್ಥಳ ಇದು. ಇದೇ ಸ್ಥಳದಲ್ಲಿ ಈ ಹಿಂದೆ ಕಾರ್ಲ್ ಮಾರ್ಕ್ಸ್, ವ್ಲಾದಿಮೀರ್ ಲೆನಿನ್, ಜಾರ್ಜ್ ಅರ್ವೇಲ್ ಮುಂತಾದವರು ಮಾತಾಡಿದ್ದಾರೆ. ಇಲ್ಲಿ ಧರ್ಮ ಪ್ರಚಾರಕರು, ರಾಜಕೀಯ ವಿಶ್ಲೇಷಕರು, ಧರ್ಮ ವಿರೋಧಿಗಳು ಸಹಿತ ಎಲ್ಲರೂ ಮಾತಾಡುತ್ತಾರೆ. ಕೇಳುಗರು ವಾದಿಸುತ್ತಾರೆ. ಇದೇ ಸ್ಥಳದಲ್ಲಿ ಈ ಮಾಜಿ ಮುಸ್ಲಿಮ್ ಆರಿಫ್ ಹುಸೈನ್ ಕುರ್‌ಆನನ್ನು ಪ್ರಶ್ನಿಸಿದ್ದಾರೆ. 2025ರಲ್ಲಿ ಇವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಹಾಲೋಕಾಸ್ಟ್ ಮ್ಯೂಸಿಯಂ ಅಥವಾ ಯಾದ್ ವ ಶೇಮ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಯಹೂದಿ ಸ್ನೇಹಿತರು ಮತ್ತು ಪ್ರಭಾವಿಗಳೊಂದಿಗೆ ಸಂವಾದವನ್ನೂ ನಡೆಸಿದ್ದರು.

  1. ಗಡ್ಡ ಬೆಳೆಸುವುದು, ಮಹಿಳೆಯರು ನಿಕಾಬ್ ಧರಿಸುವುದು, ಅರೇಬಿಕ್ ಪದಗಳನ್ನು ಹೆಚ್ಚಾಗಿ ಬಳಸುವುದು ‘ಉಗ್ರವಾದಿ ಚಿಂತನೆಯ’ ಲಕ್ಷಣಗಳಾಗಿ ಗುಜರಾತ್ ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ. ಜುಲೈ ಮಧ್ಯಭಾಗದಲ್ಲಿ ಈ ಸುತ್ತೋಲೆ ಬಿಡುಗಡೆಯಾಗಿದೆ. ಅಲ್ಲದೇ, ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುವುದು, ಜಾಗತಿಕ ಮಟ್ಟದಲ್ಲಿ ಮುಸ್ಲಿಮರ ವಿರುದ್ಧ ನಡೆಯುವ ಘಟನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುವುದನ್ನೂ ಉಗ್ರಗಾಮಿ ಚಿಂತನೆಯ ಭಾಗವಾಗಿ ಸುತ್ತೋಲೆಯಲ್ಲಿ ಕಾಣಲಾಗಿದೆ. ಗುಜರಾತ್ ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ವನಿಯಾ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ. ಅರೇಬಿಕ್ ಕಾಲೇಜುಗಳು ಹಾಗೂ ಮದ್ರಸಾಗಳಿಗೆ ಭೇಟಿ ನೀಡುವವರು, ಯಾವುದೇ ಕಾರ್ಯಾಚರಣೆಗೆ ಮುನ್ನ ಮಸೀದಿಯಲ್ಲಿ ಇಅï‌ತಿಕಾಫ್ ಆಚರಿಸುವವರು ಮತ್ತು ಇಸ್ಲಾಮಿಕ್ ಕರ್ತವ್ಯ ಊಲ್ಲೇಖಿಸಿ ಇದ್ದಕ್ಕಿದ್ದಂತೆ ಶಿಕ್ಷಣ ಅಥವಾ ಉದ್ಯೋಗ ತೊರೆಯುವವರನ್ನೂ ಸಂಭಾವ್ಯ ಉಗ್ರಗಾಮಿಗಳಾಗಿ ಸುತ್ತೋಲೆಯಲ್ಲಿ ಗುರುತಿಸಲಾಗಿದೆ. ನಿಜವಾಗಿ,

ಮುಸ್ಲಿಮ್ ಎಂಬುದು ಈ ದೇಶದಲ್ಲಿ ಬಹೂಪಯೋಗಿ ಪದ. ಮುಸ್ಲಿಮರನ್ನು ಈಗಾಗಲೇ ಶಂಕೆಯ ಮೊನೆಯಲ್ಲಿ ನಿಲ್ಲಿಸಲಾಗಿದೆ. ಹಾಗಂತ, ಮುಸ್ಲಿಮ್ ಶಂಕಿತನಾಗಿರುವುದು 2014ರ ಬಳಿಕದಿಂದ ಅಲ್ಲ. 2014ರ ಬಳಿಕ ಮುಸ್ಲಿಮರನ್ನು ಶಂಕಾಸ್ಪದಗೊಳಿಸುವ ಮತ್ತು ಅವರ ಮೇಲೆ ದೌರ್ಜನ್ಯ ನಡೆಸುವ ಪ್ರಕ್ರಿಯೆಗಳು ಸರಕಾರಿ ಮಾನ್ಯತೆಯೊಂದಿಗೆ ವೇಗವನ್ನು ಪಡೆದಿದೆ ಎಂದಷ್ಟೇ ಹೇಳಬಹುದು.

ಸ್ವಾತಂತ್ರ‍್ಯ ಪೂರ್ವದಿಂದಲೇ ಈ ಮಣ್ಣಿನಲ್ಲಿ ಮುಸ್ಲಿಮರ ಬಗ್ಗೆ ಪೂರ್ವಾಗ್ರಹಗಳಿತ್ತು. ಅಪಪ್ರಚಾರಗಳಿತ್ತು. ದೇಶ ವಿಭಜನೆಯ ಬಳಿಕ ಈ ಅಪಪ್ರಚಾರ ಮತ್ತು ಪೂರ್ವಾ ಗ್ರಹಗಳಿಗೆ ಇನ್ನಷ್ಟು ಬಲ ಸಿಕ್ಕಿತು. ಮುಸ್ಲಿಮರ ದೇಶ ನಿಷ್ಠೆಯನ್ನು ‘ಶಂಕಿತ’ಗೊಳಿಸುವುದಕ್ಕೆ ಈ ವಿಭಜನೆ ಸಾಕಷ್ಟು ನೀರು-ಗೊಬ್ಬರವನ್ನು ಹಾಕಿತು. ಆ ಬಳಿಕ ರಾಮಮಂದಿರ ಚಳವಳಿ ನಡೆಯಿತು. ಬಾಬರಿ ಮಸೀದಿಯನ್ನು ಕೇಂದ್ರವಾಗಿಟ್ಟುಕೊಂಡೇ ಈ ಚಳವಳಿ ಹುಟ್ಟಿ ಕೊಂಡಿರುವುದರಿಂದ, ಆವರೆಗೆ ಶಂಕಿತನಾಗಿದ್ದ ಮುಸ್ಲಿಮ್ ಇದರೊಂದಿಗೆ ‘ಹಿಂದೂ ವಿರೋಧಿಯಾಗಿಯೂ’ ಬಿಂಬಿತಗೊಂಡ. ನಿಜವಾಗಿ,

ಬಾಬರಿ ಮಸೀದಿಯು ಅಯೋಧ್ಯೆಯ ಸ್ಥಳೀಯ ಜಮೀನು ವಿವಾದವಾಗಿತ್ತೇ ಹೊರತು ಇನ್ನೇನೂ ಆಗಿರಲಿಲ್ಲ. ಭಾರತದ ಉಳಿದ ಕಡೆಯಿಂದ ಮುಸ್ಲಿಮರು ಅಲ್ಲಿಗೆ ಪವಿತ್ರ ಯಾತ್ರೆ ಹೋಗುತ್ತಿರಲಿಲ್ಲ. ಆ ಮಸೀದಿಕ್ಕೆ ವಿಶೇಷ ಸ್ಥಾನವೂ ಇರಲಿಲ್ಲ. ಬಾಬರಿ ಮಸೀದಿ ಇರುವ ಜಾಗವು ಹಿಂದೂಗಳಿಗೆ ಸಂಬಂಧಿಸಿದ್ದೋ, ವಕ್ಫ್ ಬೋರ್ಡ್ಗೆ ಸಂಬಂಧಿಸಿದ್ದೋ ಎಂಬ ವಿವಾದವಷ್ಟೇ ನ್ಯಾಯಾಲಯದಲ್ಲಿತ್ತು. ಉಳಿದ ಜಮೀನು ವಿವಾದಗಳಂತೆ ಇದನ್ನೂ ಅಲ್ಲಿನ ಹಿಂದೂ-ಮುಸ್ಲಿಮರೇ ಬಗೆಹರಿಸಿಕೊಳ್ಳಬೇಕಿತ್ತು. ಇಂಥದ್ದೊಂದು ಇತ್ಯರ್ಥಕ್ಕೆ ಎರಡೂ ಕಡೆಯವರು ಬಂದಿದ್ದರೂ ರಾಜಕೀಯ ಉದ್ದೇಶವನ್ನಿಟ್ಟು ಕೊಂಡವರು ಅದಕ್ಕೆ ಅಡ್ಡಗಾಲು ಹಾಕಿ ರಾಷ್ಟ್ರೀಯ ವಿವಾದವನ್ನಾಗಿ ಮಾಡಿದರು ಎಂಬುದು ಇವತ್ತು ಬಹಿರಂಗ ರಹಸ್ಯವಾಗಿದೆ.

ಇದರ ನಂತರ ಹೈದರಾಬಾದ್‌ನ ಮಕ್ಕಾ ಮಸೀದಿ, ಮಹಾರಾಷ್ಟ್ರದ ಮಾಲೆಗಾಂವ್ ಮಸೀದಿ ಸಹಿತ ದೇಶದ ವಿವಿಧೆಡೆ ಬಾಂಬ್ ಸ್ಫೋಟಗಳಾದುವು. 2001ರಲ್ಲಿ ಅಮೇರಿಕದ ಅವಳಿ ಗೋಪುರಗಳ ಮೇಲೆ ಭೀಕರ ದಾಳಿ ನಡೆಯಿತು. ಇದರ ಬೆನ್ನಿಗೇ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಶ್ ಅವರು ಕುಪ್ರಸಿದ್ಧ ಹೇಳಿಕೆಯೊಂದನ್ನು ನೀಡಿದರು. ‘ಒಂದೋ ನಮ್ಮೊಂದಿಗೆ ಇಲ್ಲವೇ ಭಯೋತ್ಪಾದಕರೊಂದಿಗೆ’ ಎಂಬ ಘೋಷಣೆಯೊಂದಿಗೆ ಭಯೋತ್ಪಾದಕರ ವಿರುದ್ಧ ಸಮರವನ್ನು ಸಾರಿದರು. ಇದಕ್ಕೆ ಭಾರತೀಯ ಮಾಧ್ಯಮಗಳೂ ಸಾಥ್ ನೀಡಿದುವು. ಮಸೀದಿಗಳೂ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟಗಳಿಗೆ ರಸವತ್ತಾದ ಕತೆಯನ್ನು ಹೆಣೆದುವು. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಿದುವು. ಹೀಗೆ,

ಭಾರತೀಯ ಮುಸ್ಲಿಮರು ಈಗಾಗಲೇ ಅಂಟಿಸಿಕೊಂಡಿದ್ದ ಶಂಕಿತ ಮತ್ತು ಹಿಂದೂ ವಿರೋಧಿ ಎಂಬ ಹಣೆಪಟ್ಟಿಯ ಜೊತೆಗೇ ‘ಭಯೋತ್ಪಾದಕ’ ಎಂಬ ಗುರುತನ್ನೂ ಅಂಟಿಸಿಕೊಳ್ಳಬೇಕಾಯಿತು. ಹಾಗಂತ, ಮಕ್ಕಾ ಮಸೀದಿ, ಮಾಲೆಗಾಂವ್ ಮಸೀದಿ, ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟಗಳಲ್ಲಿ ಬಂಧಿತರಾದ ಮುಸ್ಲಿಮರನ್ನು ವರ್ಷಗಳ ಬಳಿಕ ದೋಷಮುಕ್ತಗೊಳಿಸಲಾಯಿತಾದರೂ ‘ಭಯೋತ್ಪಾ ದಕ’ ಎಂಬ ಹಣೆಪಟ್ಟಿಯಿಂದ ಮುಸ್ಲಿಮರಿಗೆ ಬಿಡುಗಡೆ ದೊರೆಯಲಿಲ್ಲ. ಅಂದಹಾಗೆ,

ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಈ 2026ರ ವರೆಗೆ ಮುಸ್ಲಿಮರನ್ನು ಪದೇ ಪದೇ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದಕ್ಕೆ ಕಾರಣ ಏನೆಂದರೆ, ಧರ್ಮ. ಈ ಮಣ್ಣಿಗೆ ಮತ್ತು ಈ ಮಣ್ಣಿನಲ್ಲಿರುವ ಇತರೆಲ್ಲ ಧರ್ಮಗಳಿಗೆ ಹೋಲಿಸಿದರೆ, ಇಸ್ಲಾಮ್ ತೀರಾ ಭಿನ್ನ ಧರ್ಮ. ಅದು ಏಕದೇವಾರಾಧನೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪ್ರತಿಪಾದಿಸುತ್ತದೆ. ಆದರೆ, ಈ ಮಣ್ಣು ದೇವನಿಗೆ ಸಂಬಂಧಿಸಿ ಇಷ್ಟೊಂದು ಕಟ್ಟುನಿಟ್ಟನ್ನು ಕಂಡೇ ಇಲ್ಲ. ‘ಮುಕ್ಕೋಟಿ ದೇವರಿಗೆ ನಿಮ್ಮ ಅಲ್ಲಾಹ್‌ ಹೆಚ್ಚಲ್ಲ’ ಎಂಬ ಭಿನ್ನ ದೇವ ಪರಿಕಲ್ಪನೆ ಈ ಮಣ್ಣಿನದು. ಆದರೆ ಇಸ್ಲಾಮ್ ಇಬ್ಬರು ದೇವರನ್ನೇ ಒಪ್ಪಿಕೊಳ್ಳುವುದಿಲ್ಲ. ದೇವನ ವಿಷಯದಲ್ಲಿ ಇಸ್ಲಾಮ್ ಪ್ರತಿಪಾದಿಸುವ ಅತ್ಯಂತ ಸ್ಪಷ್ಟ ಮತ್ತು
ಕರಾರುವಾಕ್ ನಿಲುವು ಹೇಗೆ ಈ ಮಣ್ಣಿಗೆ ಭಿನ್ನವೋ ಅದು ಪ್ರತಿಪಾದಿಸುವ ‘ಸರ್ವರೂ ಸಮಾನರು’ ಎಂಬುದೂ ಅಷ್ಟೇ ಭಿನ್ನ. ‘ಮನುಷ್ಯರೆಲ್ಲ ಸಮಾನರು’ ಎಂಬ ವಾದವನ್ನು ಧರ್ಮವೊಂದು ಪ್ರತಿ ಪಾದಿಸಬಲ್ಲುದು ಎಂಬುದೇ ಈ ಮಣ್ಣಿಗೆ ಅಚ್ಚರಿಯ ಸಂಗತಿ. ಇದರ ಜೊತೆಗೆ ನಮಾಝ್‌, ಉಪವಾಸ, ಹಬ್ಬಗಳ ಆಚರಣೆ ಮತ್ತು ಮದ್ಯ ವಿರೋಧಿ ನಿಲುವುಗಳು ಈ ಮಣ್ಣಿನ ಪಾಲಿಗೆ ಆಕರ್ಷಕ ಎನಿಸಿಕೊಂಡವು. ದುರ್ಬಲರು ಮತ್ತು ತಳ ಸಮುದಾಯಗಳು ಈ ‘ಧರ್ಮ’ವನ್ನು ಆಸಕ್ತಿಯಿಂದ ನೋಡತೊಡಗಿದುವು. ಭಾರತದಲ್ಲಿ ಇವತ್ತು ಯಾರು ಮುಸ್ಲಿಮರೆಂದು ಗುರುತಿಸಿ ಕೊಂಡಿದ್ದರೋ ಅವರ ಪೂರ್ವಜರೆಲ್ಲ ಮುಸ್ಲಿಮರಲ್ಲ. ಇಂಥ ಆಕರ್ಷಣೆಗೆ ಒಳಗಾಗಿ ಧರ್ಮಾಂತರಗೊಂಡವರು.

ಇಂಥ ಬೆಳವಣಿಗೆಯೇ ‘ಅಪಪ್ರಚಾರ’ಗಳ ಹುಟ್ಟಿಗೆ ಕಾರಣವಾಗಿರಬೇಕು. ಇಸ್ಲಾಮನ್ನು ಹಿಂದೂ ವಿರೋಧಿಯಾಗಿ ಬಿಂಬಿ ಸುವ ಮತ್ತು ಮುಸ್ಲಿಮರನ್ನು ಶಂಕಿತರಂತೆ ಕಾಣುವ ಷಡ್ಯಂತ್ರ ಹೆಣೆದಿರಬೇಕು. ಇದಕ್ಕೆ ಪೂರಕವಾಗಿ ಮುಸ್ಲಿಮ್ ವ್ಯಕ್ತಿಗಳು ಮತ್ತು ರಾಜರುಗಳ ತಪ್ಪುಗಳನ್ನು ಬಳಸಿಕೊಳ್ಳಲಾಯಿತು. ಅದಕ್ಕೆ ಇಸ್ಲಾಮ್‌ನ ಬೋಧನೆಗಳೇ ಕಾರಣ ಎಂದು ಹೇಳಲಾಯಿತು. ಅವುಗಳಿಗೆ ರೆಕ್ಕ-ಪುಕ್ಕ ಸೇರಿಸಿ ವೈಭವೀಕರಿಸಲಾಯಿತು. ಮತ್ತೊಂದು ಕಡೆ ಕುರ್‌ಆನಿನ ವಚನಗಳನ್ನು ಸಂದರ್ಭ ಮತ್ತು ಸನ್ನಿವೇಶದಿಂದ ಬೇರ್ಪಡಿಸಿ, ತಪ್ಪಾಗಿ ವ್ಯಾಖ್ಯಾನಿಸಲಾಯಿತು. ಮದ್ರಸಾಗಳು, ಮಸೀದಿಗಳು, ಗಡ್ಡ, ಟೋಪಿ, ಹಿಜಾಬ್, ಬುರ್ಖಾ, ಕುರ್ತಾ-ಪೈಜಾಮ… ಸಹಿತ ಪ್ರತಿಯೊಂದನ್ನೂ ರಾಕ್ಷಸೀಕರಿಸುವುದು ಮತ್ತು ಅವುಗಳ ಸುತ್ತ ಭೀತಿಯನ್ನು ಹರಡುವುದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಯಿತು. ಅಷ್ಟಕ್ಕೂ,

ಕೇರಳದ ಆರಿಫ್ ಹುಸೈನ್ ಎಂಬ ಮಾಜಿ ಮುಸ್ಲಿಮ್ ವ್ಯಕ್ತಿ ಲಂಡನ್ನಿನ ಸ್ಪೀಕರ್ಸ್ ಕಾರ್ನರ್‌ನಲ್ಲಿ ಕುರ್‌ಆನಿನ ಬಗ್ಗೆ ಅಪ ಪ್ರಚಾರದಲ್ಲಿ ತೊಡಗಿದ್ದು ಮತ್ತು ಗುಜರಾತ್‌ನ ಪೊಲೀಸ್ ಸುತ್ತೋಲೆಯಲ್ಲಿ ಮುಸ್ಲಿಮ್ ಗಡ್ಡವನ್ನೇ ಶಂಕೆಯ ಪಟ್ಟಿಯಲ್ಲಿ ನಿಲ್ಲಿಸಿರುವುದಕ್ಕೆ ಬೇರೆ ಕಾರಣಗಳು ಕಾಣಿಸುತ್ತಿಲ್ಲ.