✍️ ಲಬೀದ್ ಶಾಫಿ
ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ
ನಮ್ಮ ಸಂವಿಧಾನವು ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ – ಯಾವುದೇ ಭೇದಭಾವ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಎಂದು ಪ್ರತಿಪಾದಿಸುತ್ತದೆ. ಆದರೆ, ಭಾರತದಲ್ಲಿ ಕೀಳಾಗಿಸಲ್ಪಟ್ಟ ಬಹುಸಂಖ್ಯಾತ ಜಾತಿಗಳ ಸದಸ್ಯರುಗಳಿಗೆ ಸಮಾಜದ ಬಹುತೇಕ ರಂಗದಲ್ಲಿ ಸಮಾನತೆ ಮತ್ತು ಗೌರವದ ಬದುಕು ಸ್ವಾತಂತ್ರ್ಯಗಳಿಸಿ 79 ವರ್ಷಗಳಲ್ಲಿಯೂ ಲಭ್ಯವಾಗಿಲ್ಲ. “My birth is fatal incident” ನನ್ನ ಜನನವೇ ದೊಡ್ಡ ದುರಂತ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲ ಎಂಬ ದಲಿತ ಸಂಶೋಧನಾ ವಿದ್ಯಾರ್ಥಿಯ ಘಟನೆಯು ನಮ್ಮ ದೇಶದಲ್ಲಿ ಜಾತಿ ತಾರತಮ್ಯ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕಿರುವ ಸ್ಪಷ್ಟ ಉದಾಹರಣೆಯಾಗಿದೆ.
ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಜನಪ್ರತಿನಿಧಿಗಳೇ ಇಂತಹ ಭೇದಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ. ಸಮಾನತೆಯೆಂದರೆ ಅಶಕ್ತರಾಗಿರುವವರಿಗೆ, ಹಿಂದುಳಿದವರಿಗೆ ಅಗತ್ಯದ ಎಲ್ಲಾ ಅನುಕೂಲ, ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸುವುದರಲ್ಲಿದೆ. ಎಲ್ಲರೂ ಒಂದೇ ಎತ್ತರದವರಾಗಬೇಕೆಂದು ಕೆಲವರ ತಲೆ, ಕಾಲುಗಳನ್ನು ಕತ್ತರಿಸುವುದು ಸಮಾನತೆಯಾಗಲಾರದು. ಸಮಾನತೆಯೆಂದರೆ ಭಿನ್ನತೆಗಳನ್ನೆಲ್ಲಾ ಸಮಾನಗೊಳಿಸುವುದಲ್ಲ. ವಿವಿಧ ವಿಷಯಗಳನ್ನು ವಿವಿಧ ದೃಷ್ಟಿಯಿಂದ ನೋಡುವುದಾಗಿದೆ. ಸಮಾನ ಅವಕಾಶಗಳಿಂದ ಯಾರೂ ವಂಚಿತರಾಗದೇ ಇರುವಂತೆ ನೋಡಿಕೊಳ್ಳುವುದಾಗಿದೆ.
ಈ ರೀತಿಯ ಸಂತುಲಿತ ಸಮಾಜವನ್ನು ಪ್ರಾಯೋಗಿಕವಾಗಿ ತಮ್ಮ ಮಾತು ಮತ್ತು ಕೃತಿಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿಯಾಗಿದ್ದರು ಪ್ರವಾದಿ ಮಹಮ್ಮದ್(ಸ)ರು. ವ್ಯಾವಹಾರಿಕವಾಗಿ ಸಮ ಸಮಾಜದ ಮಾದರಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಮೇಧಾವಿ.
ನ್ಯಾಯ ಮತ್ತು ಸಮಾನತೆ ಎಂಬುದು ಇಸ್ಲಾಮಿನ ಮೂಲಭೂತ ಸಿದ್ಧಾಂತಗಳಾಗಿವೆ. ಅಸಮಾನತೆಯ ಉದ್ಭವವು “ಶ್ರೇಷ್ಠ” ಅಥವಾ “ಮೇಲು” ಎಂಬ ದುಷ್ಟ ಅಹಂನಿಂದ ಆರಂಭವಾಗುತ್ತದೆ. ಕೆಡುಕಿನ ಮೂಲವು “ಅನ ಖೈರುಂ ಮಿನ್’ಹು – ನಾನು ಆತನಿಗಿಂತಲೂ ಶ್ರೇಷ್ಠ”(7:12) ಎಂಬ ಅಹಂನಿಂದ ಆರಂಭವಾಯಿತೆಂದು ಪವಿತ್ರ ಕುರ್ಆನ್ ವಿವರಿಸುತ್ತದೆ. ಉತ್ತಮ ಮತ್ತು ಕನಿಷ್ಠ ಎಂಬ ಭಾವನೆಯು ನಾಗರಿಕ ಸಮಾಜಕ್ಕೆ ಮಾರಕವೆಂದು ಪ್ರವಾದಿ ಮುಹಮ್ಮದ್(ಸ) ಕಲಿಸಿದ್ದಾರೆ.
ಪ್ರವಾದಿ ಮುಹಮ್ಮದ್(ಸ) ಸಾರಿದ ವಿಶ್ವಭಾತೃತ್ವದ ಸಂದೇಶ
ಪ್ರವಾದಿ ಮಹಮ್ಮದ್(ಸ) ಜನಿಸಿದ ಸಮಾಜವು ಅಸಮಾನತೆಯ ಕೇಂದ್ರವಾಗಿತ್ತು. ಜನರನ್ನು ಗುಲಾಮರನ್ನಾಗಿ ಮಾರಾಟ ಮಾಡುವ ವಹಿವಾಟು ವ್ಯಾಪಕವಾಗಿತ್ತು. ಕುಲ ಗೋತ್ರಗಳ ಹೆಸರಿನಲ್ಲಿ ಶ್ರೇಷ್ಠತೆಯ ಅಹಂ ಆಳವಾಗಿ ನೆಲೆಸಿತ್ತು. ಇಂದಿನ ಆಧುನಿಕ ಭಾಷೆಯಲ್ಲಿ ವರ್ಣಭೇದ ನೀತಿಯ ಕುರಿತು ಈ ರೀತಿ ಹೇಳಲಾಗುತ್ತದೆ: “white supremacy is not a shark; it is the water.” ಅಂದರೆ ಜನಾಂಗೀಯತೆಯು ಅಪರೂಪಕ್ಕೆ ಕಾಣುವ ತಿಮಿಂಗಿಲವಲ್ಲ; ಬದಲಾಗಿ ಅದು ಎಲ್ಲಾ ಕಡೆ ಹರಡಿಕೊಂಡಿರುವ ಕಡಲಾಗಿದೆ.
ಅರೇಬಿಯಾದಲ್ಲಿ ಉಚ್ಚನೀಚತೆಯು ಎಷ್ಟು ಆಳವಾಗಿ ಬೇರೂರಿತ್ತೆಂದರೆ; ಕುಲೀನ ಗೋತ್ರದ ಸರದಾರರು ಪ್ರವಾದಿಯವರ ಬಳಿ ಬಂದು ಹೀಗೆ ಹೇಳುತ್ತಾರೆ: “ನಾವು ನಿಮ್ಮ ಸಂದೇಶವನ್ನು ಸ್ವೀಕರಿಸುತ್ತೇವೆ. ಆದರೆ ಒಂದು ಷರತ್ತು ಇದೆ, ನಮಗೆ ಬೇರೆಯೇ ವ್ಯವಸ್ಥೆಯನ್ನು ನೀವು ಏರ್ಪಡಿಸಬೇಕು. ನಾವು ಈ ಗುಲಾಮರ ಜತೆ ಒಂದೇ ಪಂಕ್ತಿಯಲ್ಲಿ ಕುಳಿತುಕೊಳ್ಳಲು ಸಿದ್ಧರಿಲ್ಲ”. ಆದರೆ ಪ್ರವಾದಿವರ್ಯರು(ಸ) ಆ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.
ಪವಿತ್ರ ಕುರ್ಆನ್ ಈ ಕುರಿತು ಹೇಳುತ್ತದೆ: “ತಮ್ಮ ಒಡೆಯನ ಮೆಚ್ಚುಗೆಯನ್ನು ಅಪೇಕ್ಷಿಸುತ್ತಾ ಮುಂಜಾನೆಯೂ ಸಂಜೆಯೂ ಅವನನ್ನು ಕೂಗಿ ಪ್ರಾರ್ಥಿಸುತ್ತಿರುವವರ ಜೊತೆ ನೀವು ಸಂತೃಪ್ತರಾಗಿರಿ ಮತ್ತು ಅವರನ್ನು ಎಂದೂ ಕಡೆಗಣಿಸಬೇಡಿರಿ. ನೀವೇನು, ಲೌಕಿಕ ಬದುಕಿನ ಮೆರುಗನ್ನು ಬಯಸುತ್ತೀರಾ? ನಾವು ಯಾರ ಮನಸ್ಸಿನಿಂದ ನಮ್ಮ ನೆನಪನ್ನು ಮರೆಸಿ ಬಿಟ್ಟಿರುವೆವೋ ಅವನನ್ನು, ತನ್ನ ಸ್ವೇಚ್ಛೆಯನ್ನೇ ಅನುಸರಿಸುವವನನ್ನು ಮತ್ತು ಎಲ್ಲೆ ಮೀರಿ ವರ್ತಿಸುವಾತನನ್ನು ನೀವೆಂದೂ ಅನುಸರಿಸಬೇಡಿ. ನೀವು ಹೇಳಿ ಬಿಡಿ; ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ. (ಇದನ್ನು) ಇಷ್ಟ ಉಳ್ಳವನು ನಂಬಲಿ ಮತ್ತು ಧಿಕ್ಕರಿಸ ಬಯಸುವವನು ಧಿಕ್ಕರಿಸಲಿ” (28:28)
ಜನಾಂಗದ ಆಧಾರದಲ್ಲಿ ಹುಟ್ಟುವ ದರ್ಪ ಹಾಗೂ ಅಹಂಕಾರದ ಭಾವನೆಗಳ ಬಗ್ಗೆ ಎಚ್ಚರಿಸುತ್ತಾ ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು: “ಓ ಕುರೈಶರೇ, ಅಲ್ಲಾಹನು ಅಜ್ಞಾನ ಕಾಲದ ಜನಾಂಗೀಯ ಶ್ರೇಷ್ಠತೆ, ದರ್ಪದ ಭಾವನೆಗಳನ್ನು ನಿಷೇಧಿಸಿದ್ದಾನೆ. ಎಲ್ಲ ಮನುಷ್ಯರು ಆದಮರ ಸಂತತಿಯಾಗಿದ್ದು, ಆದಮರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ.”
ಹೀಗೆ ಜಾತಿ, ಮತ, ಭಾಷೆ, ಜನಾಂಗೀಯ ಹಾಗೂ ರಾಷ್ಟ್ರೀಯತೆಯ ಆಧಾರದಲ್ಲಿರುವ ಕೃತಕ ಉಚ್ಚ-ನೀಚತೆಯ ಭೇದಭಾವಗಳನ್ನು ಅವರು ತೊಡೆದು ಹಾಕಿದರು. ಪ್ರವಾದಿ ಮಹಮ್ಮದ್(ಸ)ರು ಹೇಳಿದರು: “ಮಾನವ ಕುಲ ಏಕಕುಟುಂಬವಾಗಿದೆ, ನಿಮ್ಮಲ್ಲಿ ಅತ್ಯುತ್ತಮರು ಯಾರೆಂದರೆ ತಮ್ಮ ಕುಟುಂಬದ ಸದಸ್ಯರ ಜತೆ ಅತ್ಯುತ್ತಮವಾಗಿ ವ್ಯವಹರಿಸುವವರಾಗಿದ್ದಾರೆ”(ಬೈಹಕಿ). ಪ್ರವಾದಿವರ್ಯರು(ಸ) ಮಾನವ ಕುಲವನ್ನು ಸಹೋದರತೆಯ ದಾರದಲ್ಲಿ ಪೋಣಿಸುವ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದರು.
ಕುರ್ಆನ್ ಹೇಳುತ್ತದೆ: “ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.”(4:1)
ಪ್ರವಾದಿ ಮಹಮ್ಮದ್(ಸ) ಅವರು ಸಮಾನತೆಯ ಈ ಉನ್ನತ ಆದರ್ಶವನ್ನು ಸಮಾಜದಲ್ಲಿ ಪ್ರಚುರಪಡಿಸಲು ತಮ್ಮ ಅನುಯಾಯಿಗಳಿಗೆ ವಿದಾಯ ಭಾಷಣದಲ್ಲಿ ಹೀಗೆ ಕರೆ ಕೊಟ್ಟರು: “ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಧರ್ಮನಿಷ್ಠೆ ಮತ್ತು ದೇವಪ್ರಜ್ಞೆಯ ಹೊರತು”.
ಪ್ರವಾದಿ ಮುಹಮ್ಮದ್(ಸ) ಎತ್ತಿ ಹಿಡಿದ ಮಾನವ ಘನತೆ
ಘನತೆ ಮತ್ತು ಗೌರವ ಎಲ್ಲರೂ ತಮಗೆ ಸಿಗಬೇಕೆಂದು ಭಾವಿಸುತ್ತಾರೆ. ಇನ್ನೊಬ್ಬನ ಘನತೆಗೆ ಹಾನಿ ಮಾಡುವವನೂ ಕೂಡ ತನ್ನನ್ನು ಇತರರು ಗೌರವಿಸಬೇಕೆಂದು ಬಯಸುತ್ತಾನೆ. ಸಮಾನತೆಯ ಪಾಠವನ್ನು ಹೇಳುವವರು ಒಂದಲ್ಲಾ ಒಂದು ರೀತಿಯಲ್ಲಿ ನಾವು ಇತರಿಗಿಂತ ಮುಖ್ಯರು ಎಂದೇ ಭಾವಿಸುತ್ತಾರೆ. ಜಾರ್ಜ್ ಓರ್ವೆಲ್ ರವರ ʻಎನಿಮಲ್ ಫಾರ್ಮ್ʼ ಕಾದಂಬರಿಯಲ್ಲಿ ಹೀಗೊಂದು ಮಾತಿದೆ: “All Animals are equal but some are more equal than others”. ನಾವು ಇತರಿಗಿಂತಲೂ ಹೆಚ್ಚು ಘನತೆ ಮತ್ತು ಗೌರವಕ್ಕೆ ಅರ್ಹರೆಂದು ಈಗಲೂ ಹಲವರು ವಾದಿಸುತ್ತಾರೆ.
ಪ್ರವಾದಿವರ್ಯರು(ಸ) ಹೇಳಿರುವರು: “ಅಲ್ಲಾಹ್ ನಿಮ್ಮ ರೂಪ ಮತ್ತು ನಿಮ್ಮ ಸಂಪತ್ತನ್ನು ನೋಡುವುದಿಲ್ಲ. ಅಲ್ಲಾಹ್ ನಿಮ್ಮ ಅಂತರಂಗವನ್ನೂ ಕರ್ಮಗಳನ್ನೂ ನೋಡುತ್ತಾನೆ.” ಜನರ ದೇವಭಕ್ತಿಯಲ್ಲದೆ ಮತ್ತೇನೂ ಪ್ರವಾದಿಯವರನ್ನು(ಸ) ಪ್ರಭಾವಿತಗೊಳಿಸುತ್ತಿರಲಿಲ್ಲ ಎಂದು ಹ.ಆಯಿಶಾ(ರ) ಹೇಳಿದ್ದಾರೆ.
ಮನುಷ್ಯನ ಘನತೆ ಮತ್ತು ಗೌರವಕ್ಕೆ ಹಾನಿ ಮಾಡುವ, ತನ್ನ ಅನುಚರರ ವ್ಯವಹಾರದಲ್ಲಿ ಕಂಡುಬರುವ ಎಲ್ಲಾ ಸೂಕ್ಷ್ಮ ವಿಚಾರಗಳನ್ನೂ ಪ್ರವಾದಿವರ್ಯರು ತಿದ್ದುತ್ತಿದ್ದರು. ಅಸಮಾನತೆಯ ಸಣ್ಣ ಪದ ಪ್ರಯೋಗವನ್ನೂ ಅವರು ಸಹಿಸುತ್ತಿರಲಿಲ್ಲ. ಅಂತಹ ಮಾತುಗಳನ್ನು ಅವರು ಅಜ್ಞಾನಕ್ಕೆ ಸರಿಸಮಾನ ಎಂದು ಹೋಲಿಕೆ ಮಾಡುತ್ತಾರೆ. ಒಮ್ಮೆ ಅವರ ಒಬ್ಬ ಅನುಯಾಯಿ ಒಬ್ಬ ವ್ಯಕ್ತಿಗೆ “ವಿದೇಶಿ ಮಹಿಳೆಗೆ ಹುಟ್ಟಿದ ವ್ಯಕ್ತಿ” ಎಂದು ಸಂಬೋಧಿಸುತ್ತಾರೆ. ಈ ವಿಷಯ ಪ್ರವಾದಿ(ಸ)ಗೆ ತಿಳಿದಾಗ ಬಹಳ ಕಟುವಾದ ಭಾಷೆಯಲ್ಲಿ ಟೀಕಿಸುತ್ತಾ “ನಿನ್ನಲ್ಲಿ ಅಜ್ಞಾನ ಕಾಲದ ಸ್ವಭಾವ ಈಗಲೂ ಬಾಕಿ ಉಳಿದಿದೆ” ಎಂದು ಹೇಳಿ ಖಂಡಿಸಿದರು.
ಭಾರತದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ರವರು ಹೀಗೆ ಹೇಳಿದ್ದಾರೆ: “ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ ‘ಅಲ್ಲಾಹನೇ ಮಹಾನನು’ ಎಂದು ಘೋಷಿಸುತ್ತಾ ಸಾಷ್ಟಾಂಗ ಎರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ. ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮಿನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರಮುಗ್ಧಗೊಳಿಸಿದೆ.”
ಗುಲಾಮ ಪದ್ಧತಿ ಪ್ರಾಕೃತಿಕವಾಗಿದ್ದು ಕೆಲವು ಜನಾಂಗಗಳು ದಾಸರಾಗಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆಯೆಂಬುದು ರಾಜಕೀಯಶಾಸ್ತ್ರದ ಪಿತಾಮಹನಾದ ಅರಿಸ್ಟಾಟಲ್ನ ಸಿದ್ಧಾಂತವಾಗಿತ್ತು. ಆದರೆ ಪ್ರವಾದಿ ಮಹಮ್ಮದ್(ಸ) ಇತಿಹಾಸದಲ್ಲಿ ಜಗತ್ತೆಂದೂ ಕಂಡರಿಯದ ರೀತಿಯಲ್ಲಿ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟು ಗುಲಾಮತನದಿಂದ ಆ ಸಮಾಜವನ್ನು ಮೇಲೆತ್ತಿದರು. ಇಸ್ಲಾಮ್ ಗುಲಾಮರಿಗೆ ರಾಜಕೀಯ ನೇತೃತ್ವವನ್ನೂ ನೀಡಿತು. ಪ್ರವಾದಿಯವರು(ಸ) ಹೇಳಿದರು: “ನಿಮ್ಮನ್ನು ಆಳಲು ನೀಗ್ರೋ ಗುಲಾಮನನ್ನು ನೇಮಿಸಲಾದರೂ, ಆತನ ಆಜ್ಞಾಪಾಲನೆ ಮಾಡಿರಿ.” ಪ್ರವಾದಿ(ಸ) ತಮ್ಮ ಅನುಪಸ್ಥಿತಿಯಲ್ಲಿ ಈ ಮೊದಲು ಗುಲಾಮರಾಗಿದ್ದ ಹ.ಝೈದ್ ಬಿನ್ ಹಾರಿಸ್(ರ) ರವರನ್ನು ಮದೀನಾದ ಗವರ್ನರಾಗಿ ನೇಮಿಸಿರುವುದೇ ಒಂದು ಕ್ರಾಂತಿಕಾರಕ ನಡೆಯಾಗಿತ್ತು.
ಪ್ರವಾದಿ ಶಿಕ್ಷಣದ ಪ್ರಕಾರ ಗುಲಾಮರು ಸ್ವತಂತ್ರಗೊಂಡ ನಂತರ ಗುಲಾಮತನದ ಯಾವ ಛಾಯೆಯೂ ಅವರಲ್ಲಿ ಉಳಿಯುತ್ತಿರಲಿಲ್ಲ. ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅವರು ಅರ್ಹರಾಗುತ್ತಿದ್ದರು. ಜನರನ್ನು ವೈಚಾರಿಕವಾಗಿ ತಿದ್ದಲಿಕ್ಕಾಗಿ ಪ್ರವಾದಿ(ಸ) ತಮ್ಮ ಅತ್ತೆಯ ಮಗಳನ್ನು ಗುಲಾಮರಾಗಿದ್ದ ಅವರ ಸಾಕು ಮಗ ಹ.ಝೈದ್ರಿಗೆ(ರ) ವಿವಾಹ ಮಾಡಿಕೊಟ್ಟಿದ್ದರು.
ಮಕ್ಕಾ ವಿಜಯವಾದ ಬಳಿಕ ಪವಿತ್ರ ಕಅಬಾ ಭವನದ ಮೇಲೇರಿ ಸೃಷ್ಟಿಕರ್ತನ ಮಹಾನತೆಯ ಘೋಷಣೆ (ಅದಾನ್) ಯನ್ನು ಸಾರ್ವತ್ರಿಕವಾಗಿ ಸಾರುವಂತೆ ಒಬ್ಬ ಕರಿಯ ಗುಲಾಮನಾಗಿದ್ದ ಬಿಲಾಲ್(ರ) ಗೆ ಆಜ್ಞಾಪಿಸುತ್ತಾರೆ. ಮುಸ್ಲಿಮರೆಲ್ಲರೂ ಪ್ರತಿದಿನ ಐದು ಸಲ ಕಅಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಾರೆ. ಈ ಮೂಲಕ ಮಾನವ ಘನತೆಯನ್ನು ಪ್ರವಾದಿವರ್ಯರು(ಸ) ಎತ್ತಿ ಹಿಡಿದರು.
“ನಿಮ್ಮೆಲ್ಲರ ರಕ್ತ, ಸಂಪತ್ತು ಹಾಗೂ ಘನತೆ ಪವಿತ್ರವೆಂದು” ಪ್ರವಾದಿ ಮಹಮ್ಮದ್(ಸ) ಘೋಷಿಸುತ್ತಾರೆ. ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ: “ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು ಹಾಗೂ ಅವರನ್ನು ನೆಲದಲ್ಲೂ ಜಲದಲ್ಲೂ ಪ್ರಯಾಣಿಸುವವರಾಗಿ ಮಾಡಿದೆವು ಮತ್ತು ಅವರಿಗೆ ಶುದ್ಧ ಆಹಾರಗಳನ್ನು ಒದಗಿಸಿದೆವು ಮತ್ತು ನಮ್ಮ ಇತರ ಅನೇಕ ಸೃಷ್ಟಿಗಳೆದುರು ಅವರಿಗೆ ಸ್ಪಷ್ಟವಾದ ಶ್ರೇಷ್ಠತೆಯನ್ನು ದಯಪಾಲಿಸಿದೆವು” (17:70)
ಲಿಂಗ ತಾರತಮ್ಯವನ್ನು ಕಿತ್ತುಹಾಕಿದ ಪ್ರವಾದಿ
ಲಿಂಗ ತಾರತಮ್ಯವು ಆಧುನಿಕ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಲಿಂಗ ಅಸಮಾನತೆಯ ಸೂಚ್ಯಾಂಕದಲ್ಲಿ ಭಾರತವು 146 ರಾಷ್ಟ್ರಗಳಲ್ಲಿ 127ನೇ ಸ್ಥಾನ ಪಡೆದಿದೆ. ಮಹಿಳಾ ಮೀಸಲಾತಿ, ಮಹಿಳಾ ಸಬಲೀಕರಣದ ಘೋಷಣೆಗಳೆಲ್ಲವೂ ಕೇವಲ ಘೋಷಣೆಗಳಾಗಿಯೇ ಉಳಿದಿದೆ. ನಾವೆಲ್ಲರೂ ಮಹಿಳಾ ದಿನಾಚರಣೆಯಲ್ಲಿ ಸಬಲೀಕರಣದ ಕನಸನ್ನು ಕಾಣುತ್ತೇವೆ. ಆದರೆ ವಾಸ್ತವದಲ್ಲಿ ಈ ಆಚರಣೆಗಳು ಕೇವಲ ಔಪಚಾರಿಕವಾಗಿ ಉಳಿದಿದೆಯೇ ಹೊರತು ಬಹುಪಾಲು ಮಹಿಳೆಯರ ಜೀವನದಲ್ಲಿ ಯಾವುದೇ ಪರಿಣಾಮ ಬೀರುತ್ತಿಲ್ಲ. ಹೆಣ್ಣಿನ ದೌರ್ಬಲ್ಯದ ಬಗ್ಗೆ ನಿಂದನೀಯ ಟೀಕೆಗಳನ್ನು ಮಾಡುವುದು, ಆಕೆಯನ್ನು ಬೋಗದ ವಸ್ತುವಾಗಿ ಚಿತ್ರೀಕರಿಸುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆಧುನಿಕ ಸಮಾಜವು ತಮ್ಮ ʻಸಮಾನತೆಯ’ ಘೋಷಣೆಗಳ ಮೂಲಕ ಮಹಿಳೆಯರಿಗೆ ಅದಕ್ಕಿಂತಲೂ ಹೆಚ್ಚು ಹಾನಿಯನ್ನು ಉಂಟು ಮಾಡಿದೆ. ಹಳೆಯ ಸಂಪ್ರದಾಯ, ಕಟ್ಟಳೆಗಳಿಂದ ಕಳಚಿಕೊಂಡ ಮಹಿಳೆಯ ಜೀವನವು ಆಧುನಿಕ ಗುಲಾಮಗಿರಿಗೆ ತನ್ನನ್ನು ತೆರೆದುಕೊಂಡಿದೆ. ಅನಾಗರಿಕ ರೀತಿಯ ಗುಲಾಮಗಿರಿಯಿಂದ ಜಾಣ ಹಾಗೂ ಕೌಶಲ್ಯಗಳನ್ನು ಹೊಂದಿರುವ ಆಧುನಿಕ ಆವೃತ್ತಿಗೆ ಬದಲಾಗಿದೆ. ದೇಹವು ಕಾರ್ಪೊರೇಟ್ ಜಗತ್ತು ನಿಗದಿಪಡಿಸಿದ ಮೌಲ್ಯದ ಸರಕಾಗಿ ಬದಲಾಗಿದೆ. ಹೇಗೆ ನಡೆಯಬೇಕು? ಎಷ್ಟು ತಿನ್ನಬೇಕು? ಮೈಬಣ್ಣ, ಎತ್ತರ, ತೂಕ ಹೇಗಿರಬೇಕು? ಇತ್ಯಾದಿಗಳನ್ನು ಕಾರ್ಪೊರೇಟ್ ನಿರ್ಧರಿಸುತ್ತದೆ.
ಪ್ರವಾದಿ ಮಹಮ್ಮದ್(ಸ) ಅವರ ಸುಧಾರಣೆಯ ಕೆಲಸದಲ್ಲಿ ಅತ್ಯಂತ ಗಮನಾರ್ಹ ವಿಷಯ, ಲಿಂಗ ತಾರತಮ್ಯವೆಂಬ ಈ ಸಾಮಾಜಿಕ ಪಿಡುಗನ್ನು ನಿರ್ಣಾಮ ಮಾಡಿರುವುದಾಗಿದೆ. ಮಹಿಳಿಗೆ ಘನತೆಯ ಬದುಕನ್ನು ಅವರು ಪ್ರತಿಪಾದಿಸುತ್ತಾರೆ. ಪ್ರವಾದಿ ಮಹಮ್ಮದ್(ಸ) ತಮ್ಮ ವಿದಾಯ ಭಾಷಣದಲ್ಲಿ ಹೇಳುತ್ತಾರೆ: “ಓ ಜನರೇ ನಿಮ್ಮ ಸ್ತ್ರೀಯರಿಗೆ ಹಕ್ಕುಗಳಿವೆ”.
ಒರ್ವ ಮಹಿಳೆ ಸ್ವತಂತ್ರವಾಗಿ ಮತ್ತು ಭಯಮುಕ್ತವಾಗಿ ಓಡಾಡಲು ಸಾಧ್ಯವಿರುವ ಒಂದು ಸಮಾಜವನ್ನು ಕಟ್ಟಲು ಪ್ರವಾದಿವರ್ಯ(ಸ)ರು ಬಯಸಿದ್ದರು. ಭಾರತದಲ್ಲಿ ಪ್ರತಿನಿತ್ಯ 86 ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಎನ್.ಸಿ.ಆರ್.ಬಿ ವರದಿ ಹೇಳುತ್ತದೆ. ನಮ್ಮ ಮಧ್ಯೆ ಮಹಿಳಾ ಸುರಕ್ಷತೆ ಈಗಲೂ ಒಂದು ದೂರದ ಕನಸಾಗಿ ಉಳಿದಿದೆ.
ಪ್ರವಾದಿವರ್ಯ(ಸ)ರು ಹೇಳುತ್ತಾರೆ: “ಸನ್’ಆದಿಂದ ಹದರಲ್ ಮೌತ್ ವರೆಗೆ ಒರ್ವ ಮಹಿಳೆ ಮುಕ್ತಳಾಗಿ ಪ್ರಯಾಣ ಮಾಡುವ ಒಂದು ಸಮಾಜದ ನಿರ್ಮಾಣ ಆಗುತ್ತದೆ”.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಮುತ್ತು ಇಂದು ತತ್ವವಾಗಿಯೇ ಉಳಿದಿದ್ದು, ಅನುಷ್ಠಾನಕ್ಕೆ ತರುವಲ್ಲಿ ನಾವು ನಿರಂತರವಾಗಿ ವಿಫಲರಾಗಿದ್ದೇವೆ. ಪ್ರವಾದಿ(ಸ) ಮಹಿಳೆಯ ಶಿಕ್ಷಣಕ್ಕೆ ಬಹಳ ಒತ್ತು ಕೊಡುತ್ತಾ ಹೇಳಿದರು: “ಶಿಕ್ಷಣವು ಪ್ರತಿಯೊಬ್ಬ ಸ್ತ್ರೀ ಪುರುಷರಿಗೂ ಕಡ್ಡಾಯವಾಗಿದೆ”. ಇತಿಹಾಸದ ಎಲ್ಲಾ ಕಾಲಗಳಲ್ಲಿಯೂ ಮಹಿಳೆಯು ಶೋಷಣೆಗೊಳಗಾಗುವ ವಿಭಾಗವಾದುದರಿಂದ ಇಸ್ಲಾಮ್ ಆಕೆಗೆ ವಿಶೇಷ ಪರಿಗಣನೆಯನ್ನು ನೀಡಿತು.
ಪೈಗಂಬರರು ಹೇಳಿದರು: “ಒಬ್ಬರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಿದ ಕಾರಣಕ್ಕಾಗಿ ಆತ ಸ್ವರ್ಗದ ಹಕ್ಕುದಾರನಾಗುತ್ತಾನೆ”. (ಬುಖಾರಿ)
“ಮೂವರು ಹೆಣ್ಣುಮಕ್ಕಳು ಅಥವಾ ಸಹೋದರಿಯರ ಕಾರಣದಿಂದ ಕಷ್ಟವನ್ನು ಅನುಭವಿಸುವವನಿಗೆ ಸ್ವರ್ಗ ಲಭಿಸದಿರದು”. (ತಹಾವಿ)
“ನೀವು ನಿಮ್ಮ ಮಕ್ಕಳ ಮಧ್ಯೆ ದಾನದಲ್ಲಿ ಸಮಾನತೆಯನ್ನು ಪಾಲಿಸಿರಿ, ನಾನು ಯಾರಿಗಾದರೂ ವಿಶೇಷತೆ ನೀಡುವವನಾಗಿದ್ದರೆ ಮಹಿಳಿಗೆ ಮೊದಲು ಪ್ರಾಶಸ್ತ್ಯ ನೀಡುತ್ತಿದ್ದೆ”.
ಭಾರತದಲ್ಲಿ ಒಂದು ವರ್ಷದಲ್ಲಿ 50 ಲಕ್ಷ ಹೆಣ್ಣು ಭ್ರೂಣಗಳನ್ನು ಕೊಲ್ಲಲಾಗುತ್ತಿದೆಯೆಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್ನ ಪದಾಧಿಕಾರಿಗಳು ತಿಳಿಸುತ್ತಾರೆ. 20 ಲಕ್ಷವೆಂದು ಅಧಿಕೃತ ದಾಖಲೆಗಳು ಸೂಚಿಸುತ್ತವೆ. ಈ ಕ್ರೂರ ಹತ್ಯೆಯು ಪ್ರವಾದಿ ಮುಹಮ್ಮದ್(ಸ)ರ ಆಗಮನದ ಕಾಲದಲ್ಲಿ ಅರೇಬಿಯಾದ ಹಲವು ಗೋತ್ರಗಳಲ್ಲಿ ವ್ಯಾಪಕವಾಗಿತ್ತು. ಪವಿತ್ರ ಕುರ್ಆನ್ ಹೇಳುತ್ತದೆ: “ಇವರ ಪೈಕಿ ಯಾರಿಗಾದರೂ ಮಗಳು ಹುಟ್ಟಿದ ಸುವಾರ್ತೆಕೊಟ್ಟಾಗ ಅವನ ಮುಖ ಕಳೆಗುಂದಿ ಹೋಗುತ್ತದೆ ಮತ್ತು ಅವನು ಸಿಡಿಮಿಡಿಗೊಳ್ಳುತ್ತಾನೆ. ಈ ಅಶುಭ ವಾರ್ತೆಯ ಬಳಿಕ ಯಾರಿಗೂ ಮುಖ ತೋರಿಸಲಾಗದೆ ಜನರಿಂದ ತಲೆಮರೆಸಿಕೊಳ್ಳುತ್ತಾನೆ. ಈ ಅಪಮಾನದೊಂದಿಗೆ ಮಗುವನ್ನಿರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ.” (16:58-59)
ಇಸ್ಲಾಮ್ ಇದನ್ನು ನಿಷೇಧಿಸಿ ಮಹಾಪಾಪವೆಂದು ಸಾರಿತು: “ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವಾಗ, ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತು”. ಮನುಷ್ಯನು ದೇವಸನ್ನಿಧಿಯಲ್ಲಿ ಈ ಕುರಿತು ವಿಚಾರಿಸಲ್ಪಡುವನು ಎಂದು ಎಚ್ಚರಿಕೆ ನೀಡಿತು. (81:8-9)
ಹೀಗೆ ಪ್ರವಾದಿ(ಸ)ರು ಮಹಿಳೆಗೆ ಘನತೆಯಿಂದ ಬದುಕುವ ಹಕ್ಕನ್ನು ಕೊಡುವುದರ ಜೊತೆಗೆ ಹೆಣ್ಣು ಮಗುವನ್ನು ಕೊಲ್ಲುವ ಹೀನ ಕೃತ್ಯವನ್ನು ನಿಷೇಧಿಸಿದರು. ಅನಾಥೆ, ವಿಚ್ಛೇದಿತೆ ಹಾಗೂ ವಿಧವೆಯರ ವಿವಾಹಗಳನ್ನು ಪ್ರೋತ್ಸಾಹಿಸಿದರು. ಹೆಣ್ಮಕ್ಕಳನ್ನು ಪೋಷಿಸಿ, ಕಲಿಸಿ, ವಿವಾಹ ಮಾಡಿಕೊಡುವ ತಂದೆಯಂದಿರಿಗೆ ಸ್ವರ್ಗದ ಸುವಾರ್ತೆಯನ್ನು ನೀಡಿದರು. ತಾಯಿಯ ಪಾದದಡಿ ಸ್ವರ್ಗವೆಂದು ಕಲಿಸಿ ಮಹಿಳೆಯ ಸ್ಥಾನವನ್ನು ಉನ್ನತಿಗೇರಿಸಿದರು. ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ನೀಡಿದರು. ಹೆಣ್ಣು ಎಂಬ ಕಾರಣಕ್ಕೆ ಆ ಸಮಾಜದಲ್ಲಿ ಇದ್ದಂತಹ ಎಲ್ಲಾ ರೀತಿಯ ಅಸಮಾನತೆಯನ್ನು ಬುಡಸಮೇತ ಕಿತ್ತು ಹಾಕಿದರು. ಘನತೆಯ, ಸ್ವಾತಂತ್ರ್ಯದ ಭಯಮುಕ್ತ ಬದುಕನ್ನು ಅವರು ಮಹಿಳೆಯರಿಗೆ ಖಾತ್ರಿಪಡಿಸಿದರು.
ಸಮಾನತೆಯ ಸಮಾಜಕ್ಕೆ ನ್ಯಾಯದ ಬುನಾದಿಯನ್ನು ಹಾಕಿದ ಪ್ರವಾದಿ
ಮಕ್ಕಾ ಪಟ್ಟಣದಲ್ಲಿ ಮಖ್ಝಮ್ ಎಂಬ ಪ್ರತಿಷ್ಠಿತ ಗೋತ್ರದ ಮಹಿಳೆಯೊಬ್ಬಳು ಕಳವು ಮಾಡಿ ಸಿಕ್ಕಿಬಿದ್ದಳು. ವಿಚಾರಣೆಯ ಬಳಿಕ ಆಕೆಗೆ ಶಿಕ್ಷೆಯನ್ನು ವಿಧಿಸಲಾಯಿತು. ಆಗ ಆಕೆಯ ಬಂಧುಗಳು ಬಂದು, ಆಕೆ ಬಹಳ ಕುಲೀನ ಹಿನ್ನೆಲೆಯವಳಾದ್ದರಿಂದ ಆಕೆಯ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾರಂಭಿಸಿದರು. ಪ್ರವಾದಿ ಮುಹಮ್ಮದ್(ಸ) ಈ ಒತ್ತಡಕ್ಕೆ ಮಣಿಯಲಿಲ್ಲ ಮಾತ್ರವಲ್ಲ, ಅವರು ಈ ಬಗೆಯಲ್ಲಿ ಒತ್ತಡ ಹೇರುವವರ ವಿರುದ್ಧ ತಮ್ಮ ಅಸಮಾಧಾನವನ್ನು ಪ್ರಕಟಿಸುತ್ತಾ, ಹೀಗೆ ಘೋಷಿಸಿದರು: “ಈ ಹಿಂದೆ ಹಲವು ಜನಾಂಗಗಳು ನಾಶವಾಗಿವೆ. ಏಕೆಂದರೆ ಅವರು ತಮ್ಮಲ್ಲಿನ ಬಡ ಅಪರಾಧಿಗಳನ್ನು ದಂಡಿಸುತ್ತಿದ್ದರು ಹಾಗೂ ಶ್ರೀಮಂತರ ಅಪರಾಧಗಳನ್ನು ಕಡೆಗಣಿಸುತ್ತಿದ್ದರು. ಅಲ್ಲಾಹನಾಣೆ, ಸ್ವತಃ ನನ್ನ ಮಗಳು ಫಾತಿಮಾ ಕಳವು ಮಾಡಿದರೆ ಶಿಕ್ಷೆ ಜಾರಿಗೊಳಿಸುತ್ತೇನೆ”.
ಮನುಷ್ಯನು ನಿಯಮಗಳನ್ನು ರೂಪಿಸಿದರೆ ತನ್ನ ಎಲ್ಲಾ ಸ್ವಾರ್ಥಕ್ಕಾಗಿ ಅದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕುಟುಂಬ, ಸಮುದಾಯ, ಕೋಮು, ಜಾತಿ ಮತ್ತು ದೇಶ ಇಂತಹ ಎಲ್ಲಾ ಸಂಕುಚಿತ ಮನೋಭಾವ ಅವನನ್ನು ಆವರಿಸುತ್ತದೆ. ಈ ಎಲ್ಲಾ ಸಂಕುಚಿತ ಮನೋಭಾವದಿಂದ ಪ್ರವಾದಿ ಮಹಮ್ಮದ್(ಸ) ಆ ಸಮಾಜವನ್ನು ಮೇಲೆ ಎತ್ತಿದರು. ಪ್ರಾಯೋಗಿಕವಾಗಿ ನ್ಯಾಯ ಸಂಸ್ಥಾಪನೆ ಹೇಗೆ ಸಾಧ್ಯವೆಂಬುದನ್ನು ತಮ್ಮ ಮಾತು ಮತ್ತು ಕೃತಿಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು.
ಕುರ್ಆನ್ ಹೇಳುತ್ತದೆ: “ಓ ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರೂ, ಅಲ್ಲಾಹನಿಗಾಗಿ ಸಾಕ್ಷ್ಯವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. ಕಕ್ಷಿಯು ಧನಿಕನಿರಲಿ ಅಥವಾ ಬಡವನಿರಲಿ ನಿಮಗಿಂತ ಹೆಚ್ಚಾಗಿ ಅಲ್ಲಾಹನು ಅವರ ಹಿತಚಿಂತಕನಾಗಿರುತ್ತಾನೆ. ಆದುದರಿಂದ ನಿಮ್ಮ ಚಿತ್ತಾಸಕ್ತಿಯ ಅನುಸರಣೆಯಲ್ಲಿ ನ್ಯಾಯ ಪರಿಪಾಲನೆಯಿಂದ ಸರಿಯಬೇಡಿರಿ”. (4:135)
ನ್ಯಾಯವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕೆಂದು ಸಾರಿದರು. ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲು ವಿಶೇಷ ಒತ್ತನ್ನು ನೀಡಿದರು. ಪೈಗಂಬರರು(ಸ) ಹೇಳುತ್ತಾರೆ: “ಯಾರಾದರೂ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಗೆ ತೊಂದರೆ ಕೊಟ್ಟರೆ, ಆತ ನನಗೆ ತೊಂದರೆ ಕೊಟ್ಟಂತೆ, ಯಾರು ನನಗೆ ಕೇಡುಂಟು ಮಾಡಲು ಬಯಸಿದರೆ ಆತ ದೇವನಿಗೆ ಕೇಡುಂಟು ಮಾಡಿದಂತೆ” (ತಬ್ರಾನಿ)
ಪ್ರವಾದಿಯ(ಸ) ಈ ಶಿಕ್ಷಣವನ್ನು ಅವರ ಅನುಯಾಯಿಗಳು ತಮ್ಮ ಆಡಳಿತಾವಧಿಯಲ್ಲಿ ಎತ್ತಿ ಹಿಡಿದರು. ಖ್ಯಾತ ಸೇನಾ ನಾಯಕ ಮತ್ತು ಈಜಿಪ್ಟ್ನ ಗವರ್ನರ್ ಅಮ್ರ್ ಬಿನ್ ಆಸ್ ರವರ ಪುತ್ರ ಒಬ್ಬ ವ್ಯಕ್ತಿಯನ್ನು ವಿನಾಕಾರಣ ಹೊಡೆದಿದ್ದ. ಆ ವ್ಯಕ್ತಿ ಖಲೀಫ ಉಮರ್(ರ) ಅವರಿಗೆ ದೂರು ಸಲ್ಲಿಸಿದನು. ಖಲೀಫ ಉಮರ್ ತಂದೆ, ಮಗ ಇಬ್ಬರನ್ನೂ ಮದೀನಾಕ್ಕೆ ಕರೆಸಿಕೊಂಡರು. ವಿಚಾರಣೆಯ ನಂತರ ವ್ಯಕ್ತಿಗೆ ವಿನಾಕಾರಣ ಹೊಡೆಯಲಾಯಿತೆಂದು ದೃಢಪಟ್ಟಿತು. ಹ. ಉಮರ್ ಗವರ್ನರ್ನ ಪುತ್ರನ ವಿರುದ್ಧ ತೀರ್ಪು ಕೊಡುತ್ತಾರೆ. ಈ ಘಟನೆಯ ಸಂದರ್ಭದಲ್ಲಿ ಹ. ಉಮರ್(ರ) ರವರು ಹೇಳಿದ ಮಾತುಗಳು ಸ್ವರ್ಣಾಕ್ಷರಗಳಲ್ಲಿ ಬರೆದಿಡಲು ಯೋಗ್ಯವಾಗಿವೆ, “ಅಮ್ರ್ ಬಿನ್ ಆಸ್, ನೀವು ಎಂದಿನಿಂದ ಜನರನ್ನು ಗುಲಾಮರನ್ನಾಗಿಸ ತೊಡಗಿದಿರಿ. ವಸ್ತುತಃ ಅವರ ತಾಯಂದಿರು ಅವರನ್ನು ಸ್ವತಂತ್ರರಾಗಿರುವ ಸ್ಥಿತಿಯಲ್ಲಿ ಹಡೆದಿದ್ದಾರೆ”.
ಮಾನವ ಹಕ್ಕುಗಳ ಸಂರಕ್ಷಣೆ
ಕಾರ್ಮಿಕರಿಗೆ ರಕ್ಷಣೆ, ಖಾಸಗಿ ಜೀವನದ ಹಕ್ಕು, ಕುಟುಂಬ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಆಹ್ವಾನ ಹೀಗೆ ಕೆಡುಕುಮುಕ್ತ ಸಮಾಜದ ಮಾದರಿಯನ್ನು ಪ್ರವಾದಿವರ್ಯರು(ಸ) ಮದೀನಾದಲ್ಲಿ ಕಟ್ಟಿದರು. ಕಾರ್ಮಿಕರ ಬೆವರ ಹನಿ ಆರುವುದಕ್ಕಿಂತ ಮುಂಚಿತವಾಗಿ ಅವನ ವೇತನವನ್ನು ಕೊಡಲು ಆದೇಶಿಸಿದರು. ಓರ್ವ ವ್ಯಕ್ತಿಯನ್ನು ವಿನಾಕಾರಣ ಕೊಂದರೆ ಇಡೀ ಜನಾಂಗವನ್ನು ಕೊಂದಂತೆಯೂ ಓರ್ವನ ಪ್ರಾಣವನ್ನು ಉಳಿಸಿದರೆ ಇಡೀ ಜನಾಂಗವನ್ನೇ ಉಳಿಸಿದಂತೆ ಎಂಬ ಕುರ್ಆನಿನ ಸೂಕ್ತ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಇಸ್ಲಾಮಿನ ಮೊದಲ ಪಾಠ.
ಅಲ್ಲಾಹನು ಹೇಳುತ್ತಾನೆ: “ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ “(5:32)
ಪ್ರವಾದಿವರ್ಯ(ಸ) ರವರು “ನೀವೆಲ್ಲರೂ ಒಂದು ಬಾಚಣಿಗೆಯ ಹಲ್ಲಿನಂತೆ ಸಮಾನರು” ಎಂದು ಹೇಳಿ ಸಮಾನತೆಯ ಸಮಾಜಕ್ಕೆ ಭದ್ರಬುನಾದಿಯನ್ನು ಹಾಕಿದರು.
ಜನಸೇವಕನಾದ ಪ್ರವಾದಿ
ಪ್ರವಾದಿ(ಸ) ಎಂದೂ ತಮಗಾಗಿ ವಿಶೇಷ ಸ್ಥಾನಮಾನವನ್ನಾಗಲೀ ವಿಶೇಷ ಸೌಲಭ್ಯವನ್ನಾಗಲೀ ಬಯಸಲಿಲ್ಲ. ತನಗೆ ಅಧಿಕಾರ ಸಿಕ್ಕಾಗ ಅಧಿಕಾರಿ ಎಂಬ ನೆಲೆಯಲ್ಲಿ ತನಗೆ ಶ್ರೇಷ್ಠತೆ ಸಿಗಬೇಕೆಂದು ಬಯಸುವವರು ಈಗ ನಮ್ಮ ಸುತ್ತಲೂ ಇದ್ದಾರೆ. ಪ್ರವಾದಿ(ಸ)ರು ದೇವನು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಅಧಿಕಾರವನ್ನು ಜನರೊಡನೆ ತೋರಲಿಲ್ಲ. ತಮಗೆ ಸಲಹೆ ನೀಡಲು, ಟೀಕಿಸಲು, ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಲು ಜನರಿಗೆ ಮುಕ್ತ ಅವಕಾಶ ನೀಡುತ್ತಿದ್ದರು. ತಮ್ಮ ವೈಯಕ್ತಿಕ ಸಲಹೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕನ್ನು ಜನರಿಗೆ ನೀಡಿದ್ದರು. ಯಾರಿಗಾದರೂ ಅವರು ವಿನಾಯಿತಿ ತೋರಬಯಸಿದಲ್ಲಿ, ತಮ್ಮ ಅನುಯಾಯಿಗಳಿಂದ ಪೂರ್ವಾನುಮತಿಯನ್ನು ಪಡೆಯುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ವಿಶಿಷ್ಟ ಸ್ಥಳವನ್ನು ಅವರು ಮೆಚ್ಚುತ್ತಿರಲಿಲ್ಲ. ತಾವು ಆಗಮಿಸಿದಾಗ ಜನರು ಎದ್ದು ನಿಲ್ಲುವುದನ್ನೂ ಅವರು ವಿರೋಧಿಸುತ್ತಿದ್ದರು. ರಣರಂಗದಲ್ಲಿ, ಪ್ರಯಾಣದ ಸಮಯದಲ್ಲಿ, ಕಂದಕವನ್ನು ತೋಡುವಾಗ, ಮಸೀದಿ ನಿರ್ಮಾಣದ ಕೆಲಸದಲ್ಲಿ ಕಟ್ಟಡ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ, ಕಲ್ಲು ಒಡೆಯಿಸುತ್ತಿರುವಾಗ, ಕಾಡಿನಲ್ಲಿ ಸೌದೆ ಸಂಗ್ರಹಿಸುತ್ತಿರುವಾಗ ತಮ್ಮ ಸಹಚರರ ಜೊತೆಗೆ ಸೇರಿ ಶ್ರಮಿಸುತ್ತಿದ್ದರು. ಹೀಗೆ ಪ್ರವಾದಿ ಮುಹಮ್ಮದ್(ಸ) ರವರು ಮಾದರಿ ಸಮಾಜವನ್ನು ಕಟ್ಟಿ ತೋರಿಸಿದರು.












