ಎಸ್ಐಆರ್ ವಿರುದ್ಧ ಧ್ವನಿಯೆತ್ತಿದ ಮಾಜಿ ನ್ಯಾಯಾಧೀಶ ಗೋಪಾಲ್ ಗೌಡ: ರದ್ದಾಗುತ್ತಾ ಎಸ್ಐಆರ್?

0
220

✍️ ಇಷಲ್

ಎಸ್ಐಆರ್ ವಿರುದ್ಧದ ಧ್ವನಿಗೆ ಶಕ್ತಿ ಹೆಚ್ಚಾಗುತ್ತಿದೆ. ಈ ಮೊದಲು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್ ಒಕಾ ಅವರು ವಿರೋಧದ ಮಾತನ್ನಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರು ಎಸ್ಐಆರ್ ಬಗ್ಗೆ ವಿರೋಧದ ಮಾತನಾಡಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ನ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಸುಳ್ಳು ಹೇಳಿದೆ. ಸತ್ಯವನ್ನು ಮರೆಮಾಚಿ ತಪ್ಪು ಮಾಹಿತಿಯನ್ನು ನೀಡಿದೆ. ಈ ಮೂಲಕ ಸುಪ್ರೀಂ ಕೋರ್ಟ್ ಅನ್ನು ದಾರಿ ತಪ್ಪಿಸಿ ಮೋಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಎಸ್ ಐ ಆರ್ ಪ್ರಕ್ರಿಯೆಯ ಕುರಿತಾದ ಸುಪ್ರೀಂ ಕೋರ್ಟ್ ನ ತೀರ್ಪು ಅಸಾಂವಿಧಾನಿಕ, ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಚಾಟಿ ಬೀಸಿದ್ದಾರೆ.

ಪರಿಷ್ಕೃತ ಫಾರ್ಮ್ 6ನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಬಿಂಬಿಸಲು ಚುನಾವಣಾ ಆಯೋಗ ಯತ್ನಿಸಿದೆ. ಆದರೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಇದನ್ನು ನಿರಾಕರಿಸಿತ್ತು. ಅಂತಹ ಯಾವುದೇ ಮಾರ್ಪಾಡಿಗೂ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಗೋಪಾಲಗೌಡ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ಮೊದಲು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರು ಹೈದರಾಬಾದ್ ನಲ್ಸರ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಎಸ್ಐಆರ್ ವಿರುದ್ಧ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು . ಲಕ್ಷಾಂತರ ನಾಗರಿಕರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಮತದಾರರ ಹೆಸರನ್ನು ಈ ರೀತಿ ಸಾಮೂಹಿಕವಾಗಿ ಕಿತ್ತು ಹಾಕುವುದನ್ನು ಸಮರ್ಥಿಸಲು ಸಾಧ್ಯವೇ ಇಲ್ಲ, ಇದು ಸಂವಿಧಾನದ ಮೂಲ ತತ್ವಕ್ಕೆ ಧಕ್ಕೆ ತರುತ್ತದೆ, ಯಾವುದೇ ಅಧಿಕಾರಿಯಾಗಲಿ ಅಥವಾ ನ್ಯಾಯಾಲಯವಾಗಲಿ ಇದನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಸೂಕ್ತ ನೋಟಿಸ್ ಮತ್ತು ವಿಚಾರಣೆ ಇಲ್ಲದೆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬಾರದು ಎಂದವರು ಪ್ರತಿಪಾದಿಸಿದ್ದರು.

ಇದೇ ವೇಳೆ ಉಜ್ವಲ್ ಭುಯಾನ್ ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕ ಅವರು ಸಮರ್ಥಿಸಿದ್ದರು ಸಾಮೂಹಿಕವಾಗಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕಿತ್ತು ಹಾಕುವುದರ ವಿರುದ್ಧ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಅನುಚಿತತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು . ಇದೀಗ ನ್ಯಾಯಮೂರ್ತಿ ಗೋಪಾಲಗೌಡ ಅವರು ಎಸ್ಐಆರ್ ಪ್ರಕ್ರಿಯೆಯ ವಿರುದ್ಧ ಮಾತಾಡಿದ್ದಾರೆ. ಚುನಾವಣಾ ಆಯೋಗವು ಸುಪ್ರೀಂಕೋರ್ಟಿಗೆ ಮೋಸ ಮಾಡಿದೆ ಮತ್ತು ತಪ್ಪು ಮಾಹಿತಿಯನ್ನು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಕಡೆ ಅಕ್ಟೋಬರ್ 10 ಶನಿವಾರದಂದು ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಮತ್ತು ಜ್ಞಾನೇಶ್ ಕುಮಾರ್ ಅವರ ಪಾತ್ರದ ವಿರುದ್ಧ ಸಂದೇಹ ವ್ಯಕ್ತವಾಗುತ್ತಿದೆ. ಇವರನ್ನು ಸಮರ್ಥಿಸುತ್ತಿರುವ ಪ್ರಭುತ್ವದ ಬಗ್ಗೆಯೂ ಇದೀಗ ದೇಶವ್ಯಾಪಿ ಅನುಮಾನಗಳು ಶುರುವಾಗಿದೆ.