✒ ಅಮಾನ್
ಇರಾನ್ ಮತ್ತು ಅಮೆರಿಕಾದ ನಡುವಿನ ಶಸ್ತ್ರಾಸ್ತ್ರ ಯುದ್ಧ ಬಹುತೇಕ ಸ್ಥಗಿತಗೊಂಡಿರುವ ಸ್ಥಿತಿಯಲ್ಲಿ ಜಗತ್ತು ನಿಟ್ಟುಸಿರು ಬಿಡುತ್ತಿರುವಾಗಲೇ ಸೌದಿ ಅರೇಬಿಯಾ ಮತ್ತು ಯಮನಿನ ಹೂತಿಗಳ ನಡುವೆ ಘರ್ಷಣೆ ಸ್ಫೋಟಿಸಿ ಮತ್ತೆ ಆತಂಕ ಶುರುವಾಗಿದೆ.
ಹೂತಿಗಳು ಸೌದಿ ಅರೇಬಿಯಾದ ಮೇಲೆ ನಿರಂತರ ದಾಳಿ ಪ್ರಾರಂಭಿಸಿದ್ದಾರೆ. ಸೆಪ್ಟೆಂಬರ್ 6 ಮತ್ತು ಏಳರಂದು ಹೂತಿಗಳು ನಡೆಸಿದ ದಾಳಿಯಲ್ಲಿ ಸೌದಿಯಲ್ಲಿ ಮೂವರು ಮೃತಪಟ್ಟಿದ್ದಾರೆ. 36 ಮಂದಿಗೆ ಗಾಯಗಳಾಗಿವೆ . ಅಬಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಿಯಾದ್ ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೂತಿಗಳು ದಾಳಿ ನಡೆಸಿದ್ದಾರೆ. ಇದರಿಂದಾಗಿ ಸೌದಿಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ರಿಯಾದ್ ವಿಮಾನ ನಿಲ್ದಾಣದಲ್ಲಿ ಇದೀಗ ಆಂತರಿಕ ವಿಮಾನ ಸೇವೆಯನ್ನು ಪುನರಾರಂಭಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ಅಂತಾರಾಷ್ಟ್ರೀಯ ವಿಮಾನಸೇವೆಗೆ ಅದು ಇನ್ನು ತೆರೆದುಕೊಂಡಿಲ್ಲ ಎಂಬ ಅಭಿಪ್ರಾಯ ಇದೆ. ಭಾರತೀಯ ವಿಮಾನಗಳಿಗೆ ಸಂಬಂಧಿಸಿ ಅಕ್ಟೋಬರ್ ಒಂಬತ್ತರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇಂಡಿಗೋ ಏರ್ ಇಂಡಿಯಾ ಆಕಾಶ್ ಏರ್ ಮುಂತಾದ ಕಂಪನಿಗಳು ತಮ್ಮ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇಂಡಿಗೋ ಅಕ್ಟೋಬರ್ ಒಂಬತ್ತರ ಅರ್ದರಾತ್ರಿಯವರೆಗೆ ತನ್ನ ಹಾರಾಟವನ್ನು ನಿಲ್ಲಿಸಿದೆ.. ಏರ್ ಇಂಡಿಯಾ ಮತ್ತು ಆಕಾಶ್ ಅಕ್ಟೋಬರ್ ಹತ್ತರವರೆಗೆ ತಮ್ಮ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.
ರಿಯಾದ್ ಮೇಲೆ ನಡೆಸಿದ ದಾಳಿಯಲ್ಲಿ ಸೌದಿ ಅರೇಬಿಯಾದ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೂತಿಗಳು ಹೇಳಿದ್ದಾರೆ. ಇದರಿಂದಾಗಿ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಉಂಟಾಗಿದೆ. ಈ ನಡುವೆ ಸೌದಿ ಅರೇಬಿಯಾ ಪಾಕಿಸ್ತಾನ ಮತ್ತು ಟರ್ಕಿಗಳು ಜೊತೆ ಸೇರಿ ಮಕ್ಕ ಒಪ್ಪಂದವನ್ನು ಮಾಡಿಕೊಂಡಿದ್ದು ಇದೀಗ ಈ ಒಪ್ಪಂದ ದ ಪ್ರಕಾರ ಈ ಎರಡೂ ರಾಷ್ಟ್ರಗಳು ಸೌದಿ ಅರೇಬಿಯಾಕ್ಕೆ ಸೈನಿಕ ನೆರವು ನೀಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಈಗಾಗಲೇ ಪಾಕಿಸ್ತಾನದ 15000 ಯೋಧರು ಸೌದಿ ಅರೇಬಿಯಾದಲ್ಲಿದ್ದಾರೆ. ಇದರ ಹೊರತಾಗಿ ಇನ್ನಷ್ಟು ಯೋಧರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿ ಕೊಡುವ ಉದ್ದೇಶ ಪಾಕಿಸ್ತಾನಕ್ಕಿದೆ. ಇದೇ ವೇಳೆ ಟರ್ಕಿ ಕೂಡ ಸೌದಿ ಅರೇಬಿಯಕ್ಕೆ ಅಗತ್ಯ ಇರುವ ಸೇನಾ ನೆರವು ನೀಡುವುದಾಗಿ ಹೇಳಿದೆ.
ಸೌದಿ ನೇತೃತ್ವದ ಒಕ್ಕೂಟಪಡೆ ಮತ್ತು ಹೂತಿಗಳ ನಡುವೆ ಘರ್ಷಣೆ ಜೋರಾಗಿದೆ. ನಿರಂತರವಾಗಿ ಸೌದಿಯ ಮೇಲೆ ಹೂತಿಗಳು ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಸೌದಿಯ ಅನೇಕ ಕಡೆ ಸ್ಫೋಟ ಶಬ್ದಗಳು ಕೇಳಿ ಬಂದಿದ್ದು ರಾಯಭಾರಿಗಳು ತಮ್ಮ ದೂತ ವಾಸಗಳಲ್ಲಿ ಆಶ್ರಯ ಪಡೆದಿದ್ದಾರೆ. ಶಾಲೆಗಳು ಅಂಡರ್ ಗ್ರೌಂಡ್ ಗೆ ಸ್ಥಳಾಂತರವಾಗಿವೆ. ಇದರಿಂದಾಗಿ ಅಂತರಾಷ್ಟ್ರೀಯ ವಿಮಾನಗಳು ಸೌದಿ ಅರೇಬಿಯಾ ಕ್ಕೆ ಇರುವ ಹಾರಾಟವನ್ನು ಸ್ಥಗಿತಗೊಳಿಸಿವೆ.
ಇರಾನ್ ಮತ್ತು ಅಮೆರಿಕ ಯುದ್ಧದ ಸಂದರ್ಭದಲ್ಲಿ ಇಲ್ಲದ ಆತಂಕದ ಸ್ಥಿತಿ ಹೂತಿಗಳ ಕಾರಣದಿಂದಾಗಿ ಸೌದಿ ಅರೇಬಿಯಾದಲ್ಲಿ ಉಂಟಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಹೂತಿಗಳು ಸೌದಿ ಅರೇಬಿಯಾದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡುವಷ್ಟು ಶಕ್ತರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಯಮನಿನ ಬಂಡಾಯ ಗುಂಪಾಗಿ ಗುರುತಿಸಿಕೊಂಡಿರುವ ಹೂತಿಗಳು ಯಮನಿನಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಸೌದಿ ಅರೇಬಿಯಾ ಕೆ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆ. ಇದರಿಂದ ಸೌದಿ ಅರೇಬಿಯಾದ ಆರ್ಥಿಕ ವ್ಯವಹಾರಕ್ಕೆ ಬಾರಿ ಪೆಟ್ಟು ಬಿದ್ದಿದೆ. ವಿಮಾನಗಳ ಹಾರಾಟ ಸ್ಥಗಿತಗೊಳ್ಳುವುದರಿಂದ ಅಂತಾರಾಷ್ಟ್ರೀಯ ವ್ಯವಹಾರಕ್ಕೂ ತೊಂದರೆಯಾಗಿದೆ. ವಿದೇಶಿ ವಿಮಾನಗಳು ಸೌದಿ ಅರೇಬಿಯಾಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಆದ್ದರಿಂದ ಇದೀಗ ಮಕ್ಕ ಒಪ್ಪಂದ ಜಾರಿಗೆ ಬರಲಿದೆಯೇ ಎಂಬ ಅನುಮಾನ ಉಂಟಾಗಿದೆ.
ಸೌದಿ ಅರೇಬಿಯಾದ ಜೊತೆ ತುರ್ಕಿ ಮತ್ತು ಪಾಕಿಸ್ತಾನ ನೇರವಾಗಿ ಸೇರಿಕೊಂಡು ತಮ್ಮ ಯುದ್ಧ ವಿಮಾನಗಳು ಮತ್ತು ಸೇನಾ ಪಡೆಯೊಂದಿಗೆ ಹೂತಿಗಳ ಮೇಲೆ ದಾಳಿ ಮಾಡಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.












