✍️ ಮಲಿಕ್ ಮುತಸಿಮ್ ಖಾನ್
ರಾಷ್ಟ್ರೀಯ ಉಪಾಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್
ನಾವು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಯಾವ ದೃಷ್ಟಿಕೋನದಿಂದ ನೋಡಬೇಕು? ಇದನ್ನು ಸುಧಾರಣೆಯ ಸಂಕೇತವೆಂದು ಪರಿಗಣಿಸಬೇಕೆ ಅಥವಾ ಅವನತಿಯೇ? ಇದು ನಿರ್ಮಾಣದ ಸಮಯವೇ ಅಥವಾ ವಿನಾಶದ ಕಾಲವೇ? ಸಮಾಜದಲ್ಲಿ ನಿಜವಾಗಿಯೂ ರಚನಾತ್ಮಕ ಕಾರ್ಯ ನಡೆಯುತ್ತಿದ್ದರೆ ಅದು ಸಂತೋಷದ ವಿಷಯ. ಆದರೆ, ಎಲ್ಲೆಡೆ ವಿನಾಶ ಮತ್ತು ಅರಾಜಕತೆಯ ಲಕ್ಷಣಗಳಿದ್ದರೆ ಅದು ನಮಗೆ ಕಳವಳ ಮತ್ತು ಆತಂಕದ ವಿಷಯವಾಗಿದೆ. ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ, ಅಶಾಂತಿಯ ನೆರಳು ಎಲ್ಲೆಡೆ ಹರಡುತ್ತಿರುವಂತೆ ತೋರುತ್ತಿದೆ. ನಾವು ನ್ಯಾಯವನ್ನು ಬಯಸುತ್ತೇವೆ. ಆದರೆ, ದಬ್ಬಾಳಿಕೆ ಮತ್ತು ಅನ್ಯಾಯವು ಸಾಮಾನ್ಯವಾಗುತ್ತಿದೆ. ಪ್ರೀತಿ ಮತ್ತು ಸಹಾನುಭೂತಿಯ ವಾತಾವರಣ ಸ್ಥಾಪನೆಯಾಗಬೇಕೆಂದು ನಾವು ಬಯಸುತ್ತೇವೆ. ಆದರೆ, ದ್ವೇಷ, ಹಿಂಸೆ ಮತ್ತು ಕ್ರೌರ್ಯ ಹೆಚ್ಚುತ್ತಿದೆ. ಈ ಸತ್ಯಗಳ ಬೆಳಕಿನಲ್ಲಿ, ದೇಶದ ಪ್ರಸ್ತುತ ಪರಿಸ್ಥಿತಿ ತೃಪ್ತಿಕರವಾಗಿಲ್ಲ ಎಂದು ಹೇಳಲು ಯಾವುದೇ ಸಂಕೋಚವಿಲ್ಲ. ಪ್ರಶ್ನೆಯೆಂದರೆ, ಈ ಪರಿಸ್ಥಿತಿಗೆ ಮೂಲಭೂತ ಕಾರಣಗಳೇನು?
ನಮ್ಮ ಅಭಿಪ್ರಾಯದಲ್ಲಿ, ಪ್ರಸ್ತುತ ಪರಿಸ್ಥಿತಿಯ ಮೂರು ಪ್ರಮುಖ ಮತ್ತು ಮೂಲಭೂತ ಅಂಶಗಳಿವೆ:
1. ಬೌದ್ಧಿಕ ಬಿಕ್ಕಟ್ಟು (Intellectual Crisis):
ಬಿಕ್ಕಟ್ಟು ಎಂದರೆ ಇಂದು ನಮ್ಮ ಸಮಾಜವು ವದಂತಿಗಳು, ಸುಳ್ಳು ಸುದ್ದಿ (fake news) ಮತ್ತು ಸಂಘಟಿತ ಪ್ರಚಾರದಿಂದ (propaganda) ರೂಪಿಸಲ್ಪಡುತ್ತಿದೆ. ಜನರ ಆಲೋಚನೆಗಳು, ವರ್ತನೆಗಳು ಮತ್ತು ನಿರ್ಧಾರಗಳು ಸತ್ಯಗಳ ಮೇಲೆ ಆಧಾರಿತವಾಗಿಲ್ಲ, ಬದಲಾಗಿ ಕೇಳಿಬಂದ ಮಾತುಗಳು ಮತ್ತು ವ್ಯಾಪಕವಾದ ತಪ್ಪುಗ್ರಹಿಕೆಗಳ ಮೇಲೆ ನಿಂತಿವೆ. ಈ ಬೌದ್ಧಿಕ ಅಸ್ತವ್ಯಸ್ತತೆಯು ಸಮಾಜದ ಮಾನಸಿಕ ಸಮತೋಲನವನ್ನು ತೀವ್ರವಾಗಿ ಹಾನಿಗೊಳಿಸಿದೆ.
ಈ ಬೌದ್ಧಿಕ ಬಿಕ್ಕಟ್ಟಿನ ಗಂಭೀರ ಸ್ವರೂಪವೆಂದರೆ ನಮ್ಮ ದೇಶವು ತನ್ನದೇ ಆದ ಅಸ್ತಿತ್ವದ (identity) ಬಿಕ್ಕಟ್ಟಿನಿಂದ ಬಳಲುತ್ತಿದೆ. ಸ್ವಾತಂತ್ರ್ಯದ ಸಮಯದಲ್ಲಿ ಎಷ್ಟೋ ಶ್ರಮ ಮತ್ತು ಹೋರಾಟದ ನಂತರ ರೂಪುಗೊಂಡ ಹಾಗೂ ಭಾರತದ ಸಂವಿಧಾನದಲ್ಲಿ ಸಂರಕ್ಷಿಸಲ್ಪಟ್ಟ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಮಾನವ ಘನತೆಯಂತಹ ಉನ್ನತ ತತ್ವಗಳನ್ನೊಳಗೊಂಡ ರಾಷ್ಟ್ರೀಯ ಗುರುತು ಇಂದು ಗಂಭೀರ ಸವಾಲನ್ನು ಎದುರಿಸುತ್ತಿದೆ.
ಇದು ಯಾರ ದೇಶ? ಇದು ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವವರ ದೇಶವೇ ಅಥವಾ ಇಲ್ಲಿ ವಾಸಿಸುವ ಎಲ್ಲಾ ಜನರು – ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಎಲ್ಲಾ ಧರ್ಮ ಹಾಗೂ ವರ್ಗದ ಜನರಿಗೆ ಸೇರಿದ್ದೇ?
ಈ ದೇಶವು ತನ್ನೆಲ್ಲಾ ನಾಗರಿಕರಿಗೆ ಸಮಾನವಾದ ತಾಯ್ನಾಡು ಎಂದು ಸಂವಿಧಾನ ಹೇಳುತ್ತದೆ. ಆದರೆ, ದುರದೃಷ್ಟವಶಾತ್ ಇಂದು ಒಂದು ಪ್ರಭಾವಶಾಲಿ ವರ್ಗವು ಈ ದೇಶ ಕೇವಲ ಒಂದು ಧರ್ಮಕ್ಕೆ ಸೇರಿದ್ದು ಎಂಬ ಕಲ್ಪನೆಯನ್ನು ಹರಡುವಲ್ಲಿ ಮಗ್ನವಾಗಿದೆ. ಈ ಬೌದ್ಧಿಕ ವಿಚಲನೆಯು ಇಂದು ನಮ್ಮ ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತಿದೆ. ಸಂಸತ್ತು, ಚುನಾವಣಾ ಆಯೋಗ, ನ್ಯಾಯಾಂಗ ಅಥವಾ ತನಿಖಾ ಸಂಸ್ಥೆಗಳಿರಲಿ, ಎಲ್ಲಾ ಸಂಸ್ಥೆಗಳು ಈ ದ್ವೇಷಪೂರಿತ ಸಿದ್ಧಾಂತದ ಪ್ರಭಾವಕ್ಕೆ ಒಳಗಾದಂತೆ ತೋರುತ್ತಿವೆ. ಈ ಬೌದ್ಧಿಕ ಬಿಕ್ಕಟ್ಟು ಕೇವಲ ವೈಚಾರಿಕ ಸಮಸ್ಯೆಯಲ್ಲ, ಬದಲಾಗಿ ಇಡೀ ಸಮಾಜದ ಸ್ಥಿರತೆಗೆ ಇರುವ ಗಂಭೀರ ಬೆದರಿಕೆಯಾಗಿದೆ.
2. ನೈತಿಕ ಬಿಕ್ಕಟ್ಟು:
ನೈತಿಕತೆ ಮತ್ತು ಚಾರಿತ್ರ್ಯವು ಯಾವುದೇ ಸಮಾಜದ ನಿಜವಾದ ಅಡಿಪಾಯವಾಗಿದೆ ಮತ್ತು ಈ ಅಡಿಪಾಯದ ಮೊದಲ ಕೇಂದ್ರವೆಂದರೆ ವ್ಯಕ್ತಿಯ ಸ್ವಂತ ಕುಟುಂಬ. ಪ್ರಶ್ನೆಯೆಂದರೆ, ಇಂದು ನಮ್ಮ ಮನೆಗಳಲ್ಲಿ ಹೊಸ ಪೀಳಿಗೆಗೆ ಎಷ್ಟರ ಮಟ್ಟಿಗೆ ತರಬೇತಿ ನೀಡಲಾಗುತ್ತಿದೆ? ನಮ್ಮ ಮಕ್ಕಳಲ್ಲಿ ಪ್ರಾಮಾಣಿಕತೆ, ನಮ್ರತೆ, ಸತ್ಯಸಂಧತೆ ಮತ್ತು ಚಾರಿತ್ರ್ಯ ನಿರ್ಮಾಣದ ಪ್ರಜ್ಞೆಯನ್ನು ತುಂಬಲು ನಮಗೆ ಸಾಧ್ಯವಾಗುತ್ತಿದೆಯೇ? ವಾಸ್ತವವೆಂದರೆ ಈ ರಂಗದಲ್ಲಿ ನಮ್ಮ ಕುಟುಂಬ ಮತ್ತು ಸಮಾಜ ಎರಡೂ ದುರ್ಬಲವಾಗುತ್ತಿವೆ.
ಎರಡನೇ ದೊಡ್ಡ ಕೇಂದ್ರವೆಂದರೆ ನಮ್ಮ ಶಿಕ್ಷಣ ಸಂಸ್ಥೆಗಳು: ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಶೈಕ್ಷಣಿಕ ಕೇಂದ್ರಗಳು. ಈ ಸಂಸ್ಥೆಗಳು ರಾಷ್ಟ್ರದ ಶಿಲ್ಪಿಗಳನ್ನು ರೂಪಿಸುತ್ತವೆ. ಇಲ್ಲಿಯೇ ವೈದ್ಯರು, ಎಂಜಿನಿಯರ್ಗಳು, ವಕೀಲರು, ನ್ಯಾಯಾಧೀಶರು, IAS ಮತ್ತು IPS ಅಧಿಕಾರಿಗಳು ತಯಾರಾಗುತ್ತಾರೆ. ಆದರೆ, ಈ ಸಂಸ್ಥೆಗಳಿಂದ ಹೊರಬರುವ ಜನರ ಸಾಮಾನ್ಯ ನೈತಿಕ ಮಟ್ಟ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕೆಲವು ವೈದ್ಯರು ರೋಗಿಗಳ ಬಗ್ಗೆ ಹೇಗೆ ನಡೆದುಕೊಳ್ಳುತ್ತಾರೆ? ಸಾರ್ವಜನಿಕರ ಬಗ್ಗೆ ಕೆಲವು ಅಧಿಕಾರಿಗಳ ನಡವಳಿಕೆ ಹೇಗಿದೆ? ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಹೇಗೆ ಧಕ್ಕೆಯಾಗುತ್ತಿದೆ ಮತ್ತು ಮಾರುಕಟ್ಟೆ ಹಾಗೂ ವ್ಯಾಪಾರದಲ್ಲಿ ನೈತಿಕ ಮೌಲ್ಯಗಳನ್ನು ಎಷ್ಟು ವೇಗವಾಗಿ ತುಳಿಯಲಾಗುತ್ತಿದೆ? ಜನರಿಗಾಗಿ ಕಾನೂನು ಮಾಡುವ ರಾಜಕಾರಣಿಗಳ ನೈತಿಕ ಸ್ಥಾನಮಾನ ಇಂದಿನ ಸಮಾಜದಲ್ಲಿ ಹೇಗಿದೆ? ಅವರ ಬೆಂಬಲಿಗರು ಮತ್ತು ವಿರೋಧಿಗಳು ಇಬ್ಬರಿಗೂ ಇದು ತಿಳಿದಿದೆ.
3. ಆರ್ಥಿಕ ಬಿಕ್ಕಟ್ಟು:
ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಆರ್ಥಿಕತೆ ಬಲಗೊಳ್ಳುತ್ತಿದೆ ಮತ್ತು ಸಮೃದ್ಧಿ ಹೆಚ್ಚುತ್ತಿದೆ ಎಂದು ತೋರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಪ್ರಗತಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಅಸಲಿ ಪ್ರಶ್ನೆಯೆಂದರೆ ಈ ಪ್ರಗತಿಯಿಂದ ಯಾರಿಗೆ ಪ್ರಯೋಜನವಾಗುತ್ತಿದೆ? ಇಂದು ಪರಿಸ್ಥಿತಿ ಏನೆಂದರೆ, ದೇಶದ ಕೇವಲ ಶೇಕಡಾ ಒಂದರಷ್ಟು (1%) ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಸುಮಾರು ಶೇಕಡಾ ನಲವತ್ತರಷ್ಟು (40%) ಸಂಪತ್ತನ್ನು ಕ್ರೋಢೀಕರಿಸಿದೆ. ಶೇಕಡಾ ಹತ್ತರಷ್ಟು ಜನಸಂಖ್ಯೆಯು ಶೇಕಡಾ ಅರವತ್ತಾರರಷ್ಟು (66%) ಸಂಪತ್ತನ್ನು ಹೊಂದಿದೆ. ಆದರೆ, ಶೇಕಡಾ ಐವತ್ತರಷ್ಟು ಜನಸಂಖ್ಯೆಯು ಕೇವಲ ಶೇಕಡಾ ಆರರಷ್ಟು (6%) ಸಂಪತ್ತನ್ನು ಹೊಂದಿದೆ. ಇದರ ಫಲಿತಾಂಶವೆಂದರೆ, ಒಂದು ಕಡೆ ನಿರಾಶ್ರಿತತೆ, ನಿರುದ್ಯೋಗ, ಶಿಕ್ಷಣದ ಸಮಸ್ಯೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಸಮಸ್ಯೆಗಳಿವೆ, ಇನ್ನೊಂದು ಕಡೆ ಕೆಲವು ವರ್ಗಗಳ ವಶದಲ್ಲಿ ಸಂಪತ್ತಿನ ರಾಶಿ ಇದೆ. ಈ ಸಂಪತ್ತು ನಿಜವಾಗಿಯೂ ದೇಶದ ಜನರಿಗೆ ಸೇರಿದ್ದೇ ಅಥವಾ ಇದು ಕೆಲವು ಶಕ್ತಿಶಾಲಿ ವ್ಯಕ್ತಿಗಳ ಸೊತ್ತೇ? ಈ ಆರ್ಥಿಕ ಅನ್ಯಾಯವು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ದೇಶದ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಇತರ ದುರ್ಬಲ ವರ್ಗಗಳೂ ಈ ದಬ್ಬಾಳಿಕೆಗೆ ಬಲಿಯಾಗುತ್ತಿದ್ದಾರೆ. ಇದು ದೇಶದ ಎಲ್ಲಾ ನಾಗರಿಕರ ಸಾಮಾನ್ಯ ಸಮಸ್ಯೆಯಾಗಿದೆ.
ಸಂಘಟಿತ ಕೋಮುವಾದಿ ಒತ್ತಡ:
ದೇಶದಲ್ಲಿ ಕೋಮುವಾದವನ್ನು ವ್ಯವಸ್ಥಿತವಾಗಿ ಉತ್ತೇಜಿಸಲಾಗುತ್ತಿದೆ ಮತ್ತು ಮುಸ್ಲಿಮರನ್ನು ವಿಶೇಷವಾಗಿ ಗುರಿಪಡಿಸಲಾಗುತ್ತಿದೆ ಎಂಬುದು ಕೂಡ ಒಂದು ಕಹಿ ವಾಸ್ತವ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದು ಮುಖ್ಯ, ಅದೇನೆಂದರೆ ಭಾರತದ ಇಡೀ ಹಿಂದೂ ಸಮಾಜವು ಕೆಟ್ಟದ್ದಲ್ಲ. ಆದರೆ, ಅದರಲ್ಲಿ ಒಂದು ಪ್ರಭಾವಶಾಲಿ ವರ್ಗವಿದೆ, ಅದು ಈ ದೇಶದಲ್ಲಿ ಮುಸ್ಲಿಮರನ್ನು ಹತ್ತಿಕ್ಕಬೇಕು, ಅವರ ಸ್ಥಾನಮಾನವನ್ನು ದುರ್ಬಲಗೊಳಿಸಬೇಕು ಮತ್ತು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಬೇಕು ಎಂಬ ಸಿದ್ಧಾಂತವನ್ನು ಹರಡಲು ಬಯಸುತ್ತಿದೆ.
ಇದರ ಒಂದು ಮುಖವೆಂದರೆ ಮುಸ್ಲಿಮರ ಭೌತಿಕ ಅಸ್ತಿತ್ವಕ್ಕೆ ಹಾನಿ ಮಾಡುವುದು: ಶಿಕ್ಷಣಕ್ಕೆ ಅಡೆತಡೆಗಳು, ವಿಶ್ವವಿದ್ಯಾಲಯಗಳ ಮೇಲೆ ಒತ್ತಡ – ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಜಾಮಿಯಾ ಹಮ್ದರ್ದ್, ಜೌಹರ್ ವಿಶ್ವವಿದ್ಯಾಲಯ, ಅಲ್-ಫಲಾಹ್ ವಿಶ್ವವಿದ್ಯಾಲಯದಂತಹ ಸಂಸ್ಥೆಗಳಿಗೆ ಏನಾಗುತ್ತಿದೆ ಎಂಬುದು ನಮ್ಮ ಮುಂದಿದೆ. ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ಅವಕಾಶಗಳಿಗೆ ಅಡೆತಡೆಗಳು, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಗೂ ಲಿಂಚಿಂಗ್ (ಗುಂಪು ಹಲ್ಲೆ) ಅಂತಹ ಘಟನೆಗಳು ಈ ಮನಸ್ಥಿತಿಯ ಫಲಿತಾಂಶವಾಗಿದೆ. ಈ ಮಾರಕ ನಡವಳಿಕೆಯ ಮೂಲವು ವಾಸ್ತವವಾಗಿ “ಈ ದೇಶ ನಮ್ಮದು ಮತ್ತು ಅವರು ನಮ್ಮವರಲ್ಲ” ಎಂಬ ಆಲೋಚನೆಯಲ್ಲಿದೆ. ಒಂದು ಗುಂಪು ಈ ದೇಶಕ್ಕೆ ಅರ್ಹವಲ್ಲ ಎಂದು ನಂಬಿಸಿದಾಗ, ಅವರ ಮೇಲೆ ದೌರ್ಜನ್ಯ ಎಸಗುವುದು ಅಪರಾಧವೆಂದು ಪರಿಗಣಿಸಲ್ಪಡುವುದಿಲ್ಲ, ಬದಲಾಗಿ ಅದೊಂದು ಪ್ರತಿಫಲದಂತೆ ಕಾಣುತ್ತದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಿನ ಮೇಲಿನ ದಾಳಿಗಳು:
ಮುಸ್ಲಿಮರ ಮೇಲಿನ ಒತ್ತಡದ ಎರಡನೇ ಮತ್ತು ಅತ್ಯಂತ ಅಪಾಯಕಾರಿ ಅಂಶವೆಂದರೆ ಅವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಅಳಿಸಲು ನಡೆಯುತ್ತಿರುವ ಪ್ರಯತ್ನ. ಈ ಧೋರಣೆಯು ಕೇವಲ ಆರ್ಥಿಕ ಅಥವಾ ಶೈಕ್ಷಣಿಕ ಕ್ಷೇತ್ರಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ನೇರವಾಗಿ ಅವರ ಧರ್ಮ, ಪ್ರಾರ್ಥನಾ ಮಂದಿರಗಳು, ಸಂಸ್ಕೃತಿ, ಭಾಷೆ ಮತ್ತು ಧಾರ್ಮಿಕ ಚಿಹ್ನೆಗಳನ್ನು ಗುರಿಪಡಿಸುತ್ತದೆ. ಎಲ್ಲೋ ಮಸೀದಿಗಳ ಮೇಲೆ ದಾಳಿ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಎಲ್ಲೋ ದರ್ಗಾಗಳನ್ನು ಗುರಿಪಡಿಸಲಾಗುತ್ತಿದೆ. ಎಲ್ಲೋ ಕಬರಸ್ತಾನಗಳ ಮೇಲೆ ಹಕ್ಕು ಸಾಧಿಸಲಾಗುತ್ತಿದೆ. ಎಲ್ಲೋ ಮದ್ರಸಾಗಳ ಅಸ್ತಿತ್ವದ ಬಗ್ಗೆ ಸಂಶಯ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರ ಸಾಂಸ್ಕೃತಿಕ ಗುರುತಿನ ಸಂಕೇತಗಳಾಗಿರುವ ಉರ್ದು ಮತ್ತು ಅರೇಬಿಕ್ ಅಂತಹ ಭಾಷೆಗಳ ಪ್ರಭಾವವನ್ನು ಕಡಿಮೆ ಮಾಡಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಪರಿಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂದರೆ ಗಡ್ಡ, ಟೋಪಿ, ಹಿಜಾಬ್ ಮತ್ತು ಇತರ ಧಾರ್ಮಿಕ ಗುರುತಿನ ಚಿಹ್ನೆಗಳನ್ನೂ ಗುರಿಪಡಿಸಲಾಗುತ್ತಿದೆ. ಸಾಮಾನ್ಯ ಮನುಷ್ಯನ ವಿರುದ್ಧ ಇಂತಹ ದೌರ್ಜನ್ಯ ನಡೆದರೆ ಅದು ಖಂಡನೀಯ. ಆದರೆ, ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೇ ಹಿಜಾಬ್ ಕಿತ್ತುಹಾಕುವಂತಹ ಕೃತ್ಯ ನಡೆಸಿದಾಗ, ಅದು ಕೇವಲ ನಾಚಿಕೆಗೇಡಿನ ವಿಷಯವಲ್ಲದೆ ಇಡೀ ವ್ಯವಸ್ಥೆಯ ನೈತಿಕ ಅವನತಿಯ ಸಂಕೇತವಾಗುತ್ತದೆ. ಅದೇ ಸಮಯದಲ್ಲಿ, ಮುಸ್ಲಿಮರು ಹೊಂದಿರುವ ಕಾನೂನು ರಕ್ಷಣೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಅಪಾಯಕಾರಿ ಅಂಶವಾಗಿದೆ. ಪೌರತ್ವ ಕಾನೂನುಗಳು, ಏಕರೂಪ ನಾಗರಿಕ ಸಂಹಿತೆ, ವಕ್ಫ್ ಕಾನೂನುಗಳು ಮತ್ತು ಇತರ ಕಾನೂನು ನಿಬಂಧನೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಮುಸ್ಲಿಮ್ ಸಂಸ್ಥೆಗಳು, ಅವರ ನಾಗರಿಕತೆ ಮತ್ತು ಅವರ ಧಾರ್ಮಿಕ ಸ್ವಾಯತ್ತತೆ ಕ್ರಮೇಣ ದುರ್ಬಲಗೊಳ್ಳುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ತಾಳ್ಮೆ ಮತ್ತು ಧರ್ಮನಿಷ್ಠೆಯ (Piety) ಪ್ರಾಮುಖ್ಯತೆ:
ಪರಿಸ್ಥಿತಿಯ ಈ ಗಂಭೀರತೆ, ಒತ್ತಡ ಮತ್ತು ಪರೀಕ್ಷೆಯ ನಡುವೆ ಮುಸ್ಲಿಮರು ಏನು ಮಾಡಬೇಕು? ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕೇ? ತಮಗೆ ಹಾನಿಕಾರಕವಾಗುವಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ? ಅಥವಾ ಕುರ್ಆನ್ ಮತ್ತು ಪ್ರವಾದಿ ಚರ್ಯೆಯ ಬೆಳಕಿನಲ್ಲಿ ತಮಗೆ ಆಸರೆಯಾಗುವ ಮತ್ತು ತಮ್ಮ ಚಾರಿತ್ರ್ಯವನ್ನು ಎತ್ತಿಹಿಡಿಯುವ ಹಾದಿಯನ್ನು ಅಳವಡಿಸಿಕೊಳ್ಳಬೇಕೇ? ಇಂತಹ ಸಂದರ್ಭಗಳನ್ನು ಎದುರಿಸಲು ಪವಿತ್ರ ಕುರ್ಆನ್ ತನ್ನ ಅನುಯಾಯಿಗಳಿಗೆ ಮಾರ್ಗದರ್ಶನ ನೀಡಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ, ನೀವು ದೇವನಿಷ್ಠೆ(ತಕ್ವಾ)ಯನ್ನಿರಿಸಿಕೊಂಡರೆ ಅಲ್ಲಾಹ್ ನಿಮಗೊಂದು ವಿವೇಚನೆಯನ್ನು (ಫುರ್ಕಾನ್) ಒದಗಿಸುವನು.(ಅಲ್-ಅನ್ಫಾಲ್: 29)
‘ಫುರ್ಕಾನ್’ ಎಂದರೆ ಒಳನೋಟದ ಬೆಳಕು, ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಗುರುತಿಸುವ ಶಕ್ತಿ, ಸರಿ ಮತ್ತು ತಪ್ಪನ್ನು ಗುರುತಿಸುವ ಸಾಮರ್ಥ್ಯ ಮತ್ತು ವಿಶ್ವಾಸಿಯ ವಿವೇಚನೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮಗೆ ಮೊದಲು ಫುರ್ಕಾನ್ ಅಗತ್ಯವಿದೆ, ಅಂದರೆ ಸರಿಯಾದ ವಿಶ್ಲೇಷಣೆ, ಸರಿಯಾದ ಆಲೋಚನೆ ಮತ್ತು ಸಮತೋಲಿತ ನಿರ್ಧಾರ. ಅಲ್ಲಾಹನಿಗೆ ಹೆದರಿ ಪರಿಸ್ಥಿತಿಯನ್ನು ಸರಿಯಾಗಿ ಮತ್ತು ನಿಖರವಾಗಿ ವಿವರಿಸುವುದು ಕೂಡ ಧರ್ಮನಿಷ್ಠೆಯ ಅವಶ್ಯಕತೆಯಾಗಿದೆ. ನಾವು ಪರಿಸ್ಥಿತಿಯನ್ನು ಅನಗತ್ಯವಾಗಿ ಭಯಾನಕವಾಗಿಯೂ ಬಿಂಬಿಸಬಾರದು ಅಥವಾ ಅದರ ಗಂಭೀರತೆಯನ್ನು ಕಡಿಮೆ ಮಾಡಬಾರದು. ಚಳಿ ಹತ್ತು ಡಿಗ್ರಿಯಷ್ಟಿದ್ದರೆ, ಅದನ್ನು ಇಪ್ಪತ್ತು ಡಿಗ್ರಿ ಎಂದು ಹೇಳಬಾರದು, ಮತ್ತು ಇಪ್ಪತ್ತು ಡಿಗ್ರಿ ಇದ್ದರೆ ಅದನ್ನು ಹತ್ತು ಡಿಗ್ರಿ ಎಂದು ಕರೆಯಬಾರದು. ಸತ್ಯವನ್ನು ಅತಿಶಯೋಕ್ತಿಯಿಲ್ಲದೆ ಅಥವಾ ಕಡಿಮೆ ಮಾಡದೆ ಹೇಳುವುದು ಧರ್ಮನಿಷ್ಠೆಯ ಅವಶ್ಯಕತೆಯಾಗಿದೆ.
ಕಷ್ಟಗಳಿಂದ ಪರಿಹಾರದ ಕುರಿತು ಕುರ್ಆನಿನ ಭರವಸೆ:
ಪವಿತ್ರ ಕುರ್ಆನ್ನಲ್ಲಿ ಇನ್ನೊಂದೆಡೆ ಅಲ್ಲಾಹನು ಹೀಗೆ ಹೇಳುತ್ತಾನೆ:
ಅಲ್ಲಾಹನಿಗೆ ನಿಷ್ಠನಾಗಿ ಕಾರ್ಯವೆಸಗುವವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ತೆರೆಯುವನು. ಮತ್ತು ಅವನು ಊಹಿಸಿಯೂ ಇರದಂತಹ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. (ಅತ್ತಲಾಕ್: 2-3)
ಈ ಧರ್ಮನಿಷ್ಠೆ (ತಕ್ವಾ) ಎಂದರೆ ಕೇವಲ ಆರಾಧನೆಯಲ್ಲ, ಬದಲಾಗಿ ಇದು ಸರಿಯಾದ ಆಲೋಚನೆ, ಸರಿಯಾದ ವಿಶ್ಲೇಷಣೆ, ಸರಿಯಾದ ಪ್ರತಿಕ್ರಿಯೆ ಮತ್ತು ಸರಿಯಾದ ಚಾರಿತ್ರ್ಯದ ಹೆಸರಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಮುಸ್ಲಿಮರಿಗೆ ಈ ತಕ್ವಾ ಅತಿ ಹೆಚ್ಚು ಅಗತ್ಯವಿದೆ. ಏಕೆಂದರೆ, ನಾವು ತಕ್ವಾವನ್ನು ಕಳೆದುಕೊಂಡರೆ ನಮ್ಮ ನಿರ್ಧಾರಗಳೂ ತಪ್ಪಾಗುತ್ತವೆ ಮತ್ತು ನಮ್ಮ ಪ್ರತಿಕ್ರಿಯೆಗಳೂ ನಮಗೆ ಹಾನಿ ಮಾಡಬಹುದು.
ಅಲ್ಲಾಹನು ಹೇಳುತ್ತಾನೆ: ಅಲ್ಲಾಹನು, ತನಗೆ ನಿಷ್ಠನಾದವನ ವ್ಯವಹಾರದಲ್ಲಿ ಅನುಕೂಲತೆಯನ್ನು ಒದಗಿಸುತ್ತಾನೆ. (ಅತ್ತಲಾಕ್: 4)
ನಮಗೆ ಸುಲಭವಾಗುವುದು ಬೇಡವೇ? ಕಷ್ಟಗಳಿಂದ ಪರಿಹಾರ ಬೇಡವೇ? ಇದರ ಹಾದಿಯು ತಕ್ವಾದಲ್ಲಿದೆ ಎಂದು ಕುರ್ಆನ್ ಸ್ಪಷ್ಟವಾಗಿ ಹೇಳುತ್ತಿದೆ. ತಾಳ್ಮೆ (ಸಬ್ರ್) ಎಂದರೆ ದೌರ್ಬಲ್ಯ, ಅಸಹಾಯಕತೆ ಎಂದು ಕೆಲವು ಜನರು ಭಾವಿಸುತ್ತಾರೆ. ಆದಾಗ್ಯೂ, ಕುರ್ಆನ್ ತಾಳ್ಮೆಯನ್ನು ವಿಶ್ವಾಸಿಯ ಅತಿದೊಡ್ಡ ಶಕ್ತಿ ಎಂದು ಪರಿಗಣಿಸುತ್ತದೆ. ಪವಿತ್ರ ಕುರ್ಆನಿನಲ್ಲಿ ತಾಳ್ಮೆಯ ಬೋಧನೆಯನ್ನು ಪದೇ ಪದೇ ನೀಡಲಾಗಿದೆ:
ಓ ಸತ್ಯವಿಶ್ವಾಸಿಗಳೇ, ಸಹನೆ ಮತ್ತು ನಮಾಝಿನಿಂದ ಸಹಾಯ ಪಡೆಯಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ.(ಅಲ್-ಬಕರಃ: 153)
ಸಹನೆ ಎಂದರೆ ಕೈಕಟ್ಟಿ ಕುಳಿತುಕೊಳ್ಳುವುದಲ್ಲ, ಬದಲಾಗಿ ಪರಿಸ್ಥಿತಿಯ ಒತ್ತಡದ ನಡುವೆಯೂ ಅಚಲವಾಗಿರುವುದು, ಭಾವನೆಗಳನ್ನು ನಿಯಂತ್ರಿಸುವುದು, ತನ್ನ ಉದ್ದೇಶದಲ್ಲಿ ದೃಢವಾಗಿರುವುದು ಮತ್ತು ಸರಿಯಾದ ಹಾದಿಯಿಂದ ಅಡ್ಡದಾರಿ ಹಿಡಿಯದಿರುವುದು. ತಾಳ್ಮೆಯು ವಿಶ್ವಾಸಿಯನ್ನು ಕುಸಿದುಹೋಗಲು ಬಿಡುವುದಿಲ್ಲ, ಚದುರಿಹೋಗಲು ಬಿಡುವುದಿಲ್ಲ ಮತ್ತು ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ತಾಳ್ಮೆಯಿಂದಿರುವವರ ಗುಣಗಳನ್ನು ವಿವರಿಸುತ್ತಾ ಕುರ್ಆನ್ ಹೀಗೆ ಹೇಳುತ್ತದೆ:
ಕಷ್ಟಕಾರ್ಪಣ್ಯಗಳಲ್ಲಿಯೂ ಸತ್ಯಾಸತ್ಯಗಳ ಸಮರವಾಗುತ್ತಿರುವಾಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. (ಅಲ್-ಬಕರಃ: 177)
ಪರೀಕ್ಷೆಯ ನಿಯಮ ಮತ್ತು ಕುರ್ಆನಿನ ಮಾರ್ಗದರ್ಶನ:
ವಿಶ್ವಾಸಿಗಳನ್ನು ಖಂಡಿತವಾಗಿಯೂ ಪರೀಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಪವಿತ್ರ ಕುರ್ಆನ್ ಸ್ಪಷ್ಟವಾಗಿ ಹೇಳುತ್ತದೆ. ಅಲ್ಲಾಹನು ಹೇಳುತ್ತಾನೆ:
ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ.(ಅಲ್-ಬಕರಃ: 155)
ನಾವು ಕುರ್ಆನ್ನ ಈ ವಾಕ್ಯವನ್ನು ಓದಿದಾಗ ಮತ್ತು ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ, ಈ ವಾಕ್ಯವು ನಮ್ಮ ಸ್ವಂತ ಪರಿಸ್ಥಿತಿಯನ್ನು ವಿವರಿಸುತ್ತಿರುವಂತೆ ತೋರುತ್ತದೆ. ಭಯ, ಆರ್ಥಿಕ ಒತ್ತಡ, ಉದ್ಯೋಗದ ಚಿಂತೆ, ಮನೆಗಳು ನಾಶವಾಗುವ ಭೀತಿ ಮತ್ತು ಜೀವ ಹಾಗೂ ಆಸ್ತಿಗೆ ಅಭದ್ರತೆಯ ಪ್ರಜ್ಞೆ ಇದೆ. ಆದರೆ, ಇದೆಲ್ಲದರ ನಂತರ; ಅಲ್ಲಾಹನು ಗಾಬರಿಯಾಗಬೇಡಿ ಅಥವಾ ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳಿಲ್ಲ, ಬದಲಾಗಿ ತಾಳ್ಮೆ ಹೊಂದಿದವರಿಗೆ ಶುಭ ಸುದ್ದಿಯನ್ನು ನೀಡಲು ಹೇಳಿದ್ದಾನೆ. ಇನ್ನೊಂದು ಸ್ಥಳದಲ್ಲಿ ಅಲ್ಲಾಹನು ಹೇಳುತ್ತಾನೆ:
ನೀವು ಗ್ರಂಥದವರಿಂದಲೂ ಬಹುದೇವ ವಿಶ್ವಾಸಿಗಳಿಂದಲೂ ಹಲವು ನೋಯುವ ಮಾತುಗಳನ್ನು ಕೇಳುವಿರಿ. ಈ ಸಂದರ್ಭಗಳಲ್ಲೆಲ್ಲ ನೀವು ಸಹನೆ ಮತ್ತು ಧರ್ಮನಿಷ್ಠೆಯ ಮಾರ್ಗದಲ್ಲಿ ಸ್ಥಿರವಾಗಿ ನಿಂತರೆ ಇದೊಂದು ಮಹಾ ಸಾಹಸ ಕಾರ್ಯವಾಗುವುದು. (ಅಲ್-ಇಮ್ರಾನ್: 186)
ನಿಂದನೆಗಳು, ಆರೋಪಗಳು, ಹೀಯಾಳಿಕೆ, ವ್ಯಂಗ್ಯ, ಕುಹಕ, ಅಪಹಾಸ್ಯ, ಇದೆಲ್ಲವೂ ನಡೆಯುತ್ತದೆ ಎಂದು ಕುರ್ಆನ್ ನಮಗೆ ಹೇಳುತ್ತಿದೆ. ಆದರೆ, ಇಂತಹ ಪರಿಸ್ಥಿತಿಗಳಲ್ಲಿ ತಾಳ್ಮೆ ಮತ್ತು ಧರ್ಮನಿಷ್ಠೆಯನ್ನು ಹೊಂದಿರುವುದು ದೌರ್ಬಲ್ಯದ ಸಂಕೇತವಲ್ಲ. ಬದಲಾಗಿ ಮಹಾನ್ ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿದೆ. ವಿರೋಧಿಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನೂ ಕುರ್ಆನ್ ನಮಗೆ ತಿಳಿಸುತ್ತದೆ:
ನಿಮಗೆ ಹಿತವಾದರೆ ಅವರಿಗೆ ಅಹಿತವೆನಿಸುತ್ತದೆ ಮತ್ತು ನಿಮ್ಮ ಮೇಲೇನಾದರೂ ವಿಪತ್ತು ಬಂದರೆ ಅವರು ಸಂತೋಷಪಡುತ್ತಾರೆ. ಆದರೆ ನೀವು ಸಹನೆಯಿಂದ ವರ್ತಿಸಿದರೆ ಮತ್ತು ಅಲ್ಲಾಹನಿಗೆ ನಿಷ್ಠರಾಗಿ ಕಾರ್ಯವೆಸಗುತ್ತಿದ್ದರೆ ಅವರ ಯಾವ ಹಂಚಿಕೆಯೂ ನಿಮ್ಮ ವಿರುದ್ಧ ಪರಿಣಾಮವನ್ನುಂಟು ಮಾಡಲಾರದು. ಅವರು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಆವರಿಸಿದ್ದಾನೆ. (ಅಲ್-ಇಮ್ರಾನ್: 120)
ಈ ವಾಕ್ಯವು ಶತ್ರುವು ಕೇವಲ ಕೃತ್ಯಗಳನ್ನು ಮಾತ್ರವಲ್ಲದೆ ಮಾನಸಿಕ ಯುದ್ಧವನ್ನೂ ಬಳಸುತ್ತಾನೆ ಎಂದು ತಿಳಿಸುತ್ತದೆ. ಅವನು ನಮ್ಮ ವೈಫಲ್ಯದಲ್ಲಿ ಸಂತೋಷಪಡುತ್ತಾನೆ ಮತ್ತು ನಮ್ಮ ಯಶಸ್ಸಿನ ಬಗ್ಗೆ ಅಸೂಯೆಪಡುತ್ತಾನೆ. ಇಂತಹ ವಾತಾವರಣದಲ್ಲಿ ತಾಳ್ಮೆ ಮತ್ತು ತಕ್ವಾ ಅತ್ಯಂತ ದೊಡ್ಡ ರಕ್ಷಣೆಯಾಗಿದೆ. ತಾಳ್ಮೆ ಮತ್ತು ತಕ್ವಾ ಕೇವಲ ತಾತ್ಕಾಲಿಕ ಪ್ರತಿಕ್ರಿಯೆಗಳಲ್ಲ, ಅವು ಇಡೀ ವ್ಯಕ್ತಿತ್ವ ಮತ್ತು ಇಡೀ ರಾಷ್ಟ್ರವನ್ನು ನಿರ್ಮಿಸುವ ಮೂಲಭೂತ ಸಾಧನಗಳಾಗಿವೆ.
ಧರ್ಮನಿಷ್ಠೆ ಮತ್ತು ತಾಳ್ಮೆಯ ಅರ್ಥ
ತಕ್ವಾ ಎಂದರೆ ಅಲ್ಲಾಹನ ಮೇಲಿನ ಪ್ರೀತಿ, ಅವನ ನಿಷ್ಠೆ, ಅವನ ಘನತೆ ಮತ್ತು ಅಲ್ಲಾಹನ ಮಿತಿಗಳಿಗೆ ನೀಡುವ ಗೌರವ. ತಕ್ವಾ ಕೇವಲ ಪ್ರಾರ್ಥನೆ, ಉಪವಾಸ ಮತ್ತು ಆರಾಧನೆಗೆ ಮಾತ್ರ ಸಂಬಂಧಿಸಿದ್ದಲ್ಲ, ಅದು ನೈತಿಕತೆ, ವ್ಯವಹಾರಗಳು, ಪ್ರತಿಕ್ರಿಯೆಗಳು ಮತ್ತು ನಿರ್ಧಾರಗಳಿಗೂ ಸಂಬಂಧಿಸಿದೆ. ಒಬ್ಬ ಮುಸ್ಲಿಮನಿಗೆ ಅನ್ಯಾಯವಾದರೆ, ಅದಕ್ಕೆ ಪ್ರತಿಯಾಗಿ ಒಬ್ಬ ನಿರಪರಾಧಿಗೆ ಹಾನಿ ಮಾಡುವ ಹಕ್ಕು ಅವನಿಗೆ ಇದೆಯೇ? ಖಂಡಿತ ಇಲ್ಲ. ಎಲ್ಲೋ ಲಿಂಚಿಂಗ್ ನಡೆದರೆ, ಅದಕ್ಕೆ ಉತ್ತರ ಇನ್ನೊಂದು ಲಿಂಚಿಂಗ್ ಆಗಬಹುದೇ? ಇಲ್ಲ. ಅಲ್ಲಾಹನ ಮಿತಿಗಳಿಗೆ ಗೌರವ ನೀಡುವುದೆಂದರೆ ನಾವು ಅನ್ಯಾಯಕ್ಕೆ ಇನ್ನೊಂದು ಅನ್ಯಾಯದ ಮೂಲಕ ಪ್ರತಿಕ್ರಿಯಿಸದಿರುವುದು.
ಅದೇ ರೀತಿ, ತಾಳ್ಮೆಯು ದೃಢ ನಿರ್ಧಾರ, ಧೈರ್ಯ, ಆತ್ಮಸಂಯಮ, ಆತುರವನ್ನು ತಪ್ಪಿಸುವುದು ಮತ್ತು ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹೆಸರಾಗಿದೆ. ತಾಳ್ಮೆ ಎಂದರೆ ಸುಮ್ಮನೆ ಕುಳಿತುಕೊಳ್ಳುವುದಲ್ಲ, ಬದಲಾಗಿ ತನ್ನ ಗುರಿಯ ಮೇಲೆ ಅಚಲವಾಗಿ ನಿಂತು ನಿರಂತರವಾಗಿ ಶ್ರಮಿಸುವುದು. ಒಂದು ಪ್ರಮುಖ ವಿಷಯವೆಂದರೆ ಮುಸ್ಲಿಮನಾಗಿರುವುದು ತನ್ನಲ್ಲೇ ಒಂದು ದೊಡ್ಡ ಜವಾಬ್ದಾರಿಯಾಗಿದೆ ಮತ್ತು ತಾಳ್ಮೆ ಹಾಗೂ ತಕ್ವಾ ಇಲ್ಲದೆ ಈ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಿಲ್ಲ.
ನಾವು ಇಂದಿನ ಪರಿಸ್ಥಿತಿಯನ್ನು ನೋಡಿದಾಗ ಮತ್ತು ಪವಿತ್ರ ಕುರ್ಆನಿನ ವಾಕ್ಯಗಳನ್ನು ಅಧ್ಯಯನ ಮಾಡಿದಾಗ, ಕುರ್ಆನ್ ನೇರವಾಗಿ ಇಂದಿನ ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ. ಅಲ್ಲಾಹನು ಹೇಳುತ್ತಾನೆ:
ನೀವೂ ಅವರೂ ಸಮಾನರಾಗಲೆಂದು ಅವರು ಸತ್ಯನಿಷೇಧಿಗಳಾದಂತೆಯೇ ನೀವೂ ಸತ್ಯನಿಷೇಧಿಗಳಾಗಬೇಕೆಂದು ಅವರಿಚ್ಛಿಸುತ್ತಾರೆ. (ಅನ್ನಿಸಾ: 89)
ನೀವು ನಿಮ್ಮ ಧರ್ಮವನ್ನು ತ್ಯಜಿಸಬೇಕು, ನಿಮ್ಮ ಗುರುತನ್ನು ಬಿಡಬೇಕು, ನಿಮ್ಮ ನಾಗರಿಕತೆಯಿಂದ ನಿಮ್ಮನ್ನು ಕಡಿದುಕೊಳ್ಳಬೇಕು ಮತ್ತು ಕೇವಲ ಆರ್ಥಿಕ ಹಿತಾಸಕ್ತಿಗಳನ್ನು ಬೆನ್ನಟ್ಟುವ ಮೂಲಕ ನಿಮ್ಮ ಆಧ್ಯಾತ್ಮಿಕ ಅಡಿಪಾಯವನ್ನು ಕಳೆದುಕೊಳ್ಳಬೇಕೆಂದು ಅವರು ಬಯಸುತ್ತಾರೆ. ಇದೇ ನಿಜವಾದ ಯೋಜನೆ. ಇಂತಹ ಪರಿಸ್ಥಿತಿಗಳಲ್ಲಿ, ತಾಳ್ಮೆಯ ಹಾದಿಯನ್ನು ಅಳವಡಿಸಿಕೊಳ್ಳಲು ಕುರ್ಆನ್ ನಮಗೆ ಆಜ್ಞಾಪಿಸುತ್ತದೆ. ಅಲ್ಲಾಹನು ಹೇಳುತ್ತಾನೆ:
ಓ ಸತ್ಯವಿಶ್ವಾಸಿಗಳೇ, ಸಹನೆಯಿಂದ ವರ್ತಿಸಿರಿ. ಮಿಥ್ಯಾರಾಧಕರ ಎದುರು ಸ್ಥೈರ್ಯ ತೋರಿಸಿರಿ. ಸತ್ಯದ ಸೇವೆಗಾಗಿ ಟೊಂಕ ಕಟ್ಟಿಕೊಂಡಿರಿ ಮತ್ತು ಅಲ್ಲಾಹನಿಗೆ ನಿಷ್ಠರಾಗಿರಿ. ನೀವು ವಿಜಯಿಗಳಾಗುವಿರೆಂದು ನಿರೀಕ್ಷಿಸಬಹುದು. (ಅಲ್-ಇಮ್ರಾನ್: 200)
ಕೊನೆಯ ಮಾತು:
ನಾವು ಯಾವುದೇ ರಾಷ್ಟ್ರವಾದವನ್ನು ನಂಬುವುದಿಲ್ಲ. ನಾವು ಹಿಂದೂ ರಾಷ್ಟ್ರವಾದವನ್ನೂ ಸರಿಯೆಂದು ಪರಿಗಣಿಸುವುದಿಲ್ಲ ಅಥವಾ ಮುಸ್ಲಿಮ್ ರಾಷ್ಟ್ರವಾದವನ್ನೂ ಅಲ್ಲ. ಯಾವುದೇ ರಾಷ್ಟ್ರದ ಶ್ರೇಷ್ಠತೆಯು ನಮ್ಮ ಉದ್ದೇಶವಲ್ಲ. ನಾವು ಕೇವಲ ಅಲ್ಲಾಹನ ಶ್ರೇಷ್ಠತೆಯನ್ನು ಬಯಸುತ್ತೇವೆ. ನಾವು ಈ ದೇಶದಲ್ಲಿ ಸತ್ಯದ ಶ್ರೇಷ್ಠತೆ, ನ್ಯಾಯದ ಶ್ರೇಷ್ಠತೆ, ನೈತಿಕತೆಯ ಶ್ರೇಷ್ಠತೆ ಮತ್ತು ಮಾನವೀಯತೆಯ ಶ್ರೇಷ್ಠತೆಯನ್ನು ಬಯಸುತ್ತೇವೆ.
ತಾಳ್ಮೆ ಮತ್ತು ತಕ್ವಾ ಕೇವಲ ಕಷ್ಟಗಳನ್ನು ಸಹಿಸಿಕೊಳ್ಳುವ ಹೆಸರಲ್ಲ. ಬದಲಾಗಿ, ಅವು ಶೈಕ್ಷಣಿಕ ಹೋರಾಟ, ಸಮಾಜ ಸೇವೆ, ಕಾನೂನು ಪ್ರಯತ್ನ, ರಾಜಕೀಯ ಜಾಗೃತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಾವಾ (ಸಂದೇಶ ಪ್ರಚಾರ) ಪರಿಶ್ರಮದ ಅಡಿಪಾಯಗಳಾಗಿವೆ. ಕುರ್ಆನ್ ನಮಗೆ ಒಂದು ದೊಡ್ಡ ತತ್ವವನ್ನು ನೀಡುತ್ತದೆ:
ಕೆಡುಕನ್ನು ಒಳಿತಿನಿಂದ ದೂರೀಕರಿಸಿರಿ. ಆಗ ಯಾರ ನಡುವೆ ವೈರತ್ವವಿತ್ತೋ ಅವನು ನಿಮ್ಮ ಆಪ್ತ ಮಿತ್ರನಂತಾಗುತ್ತಾನೆ. ಮತ್ತು ತಾಳ್ಮೆ ಹೊಂದಿರುವವರಿಗೆ ಮಾತ್ರ ಇದು ದೊರೆಯುತ್ತದೆ, ಮತ್ತು ಇದು ಅದೃಷ್ಟವಂತರಿಗೆ ಹೊರತು ಬೇರೆಯವರಿಗೆ ದೊರೆಯುವುದಿಲ್ಲ.
ಈ ದೇಶದಲ್ಲಿ ನಮಗೆ ತಾಳ್ಮೆಯನ್ನು ನೀಡುವಂತೆ, ತಕ್ವಾ ಎಂಬ ಸಂಪತ್ತನ್ನು ನೀಡುವಂತೆ, ಮುಂಬರುವ ಪರೀಕ್ಷೆಗಳಲ್ಲಿ ನಮ್ಮನ್ನು ಅಚಲವಾಗಿ ಇರಿಸುವಂತೆ ಮತ್ತು ಈ ದೇಶದ ಜನರಿಗೆ ನಮ್ಮನ್ನು ಕರುಣೆ ಹಾಗೂ ಒಳಿತಿನ ಮೂಲವನ್ನಾಗಿ ಮಾಡುವಂತೆ ನಾನು ಸರ್ವಶಕ್ತನಾದ ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ.












