✍️ ಇಷಲ್
ಇಂದು, ಅಂದರೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಲಿದ್ದು ಅದಕ್ಕಿಂತ ಒಂದು ದಿನ ಮೊದಲು ಅಕ್ಟೋಬರ್ 26ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿದ ವರದಿ ಆಘಾತಕಾರಿ ಸತ್ಯಗಳನ್ನು ಹೇಳುತ್ತದೆ. ರಿಷಿತ ಖನ್ನ ಮತ್ತು ಪಾನ್ ವಸಂತ್ ಎಂಬವರು ಈ ವರದಿಯನ್ನು ತಯಾರಿಸಿದ್ದು ರಾಜ್ಯದಲ್ಲಿ ಚುನಾವಣಾ ಅಧಿಕಾರಿಗಳೇ 61,000 ಕ್ಕಿಂತಲೂ ಆಧಿಕ ಫಾರಂ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಮತ್ತು ಈ ಅರ್ಜಿಗಳಿಗೆ ಯಾವುದೇ ಕಾರಣವನ್ನು ನಮೂದಿಸಿಲ್ಲ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.
ರಾಜ್ಯದ ಚುನಾವಣಾ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು 61, 059 ಫಾರ್ಮ್ ಸೆವೆನ್ ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳು ಸಲ್ಲಿಸಿದ್ದಾರೆ. ವಿಶೇಷ ಏನಂದರೆ ಈ ಅರ್ಜಿಗಳಲ್ಲಿ ಒಂದರಲ್ಲೂ ಅಳಿಸುವ ಕಾರಣವನ್ನು ಉಲ್ಲೇಖಿಸಿಲ್ಲ. 1960ರ ಮತದಾರರನ್ನು ನೋಂದಣಿ ನಿಯಮಗಳ ಪ್ರಕಾರ ಕಾರಣವನ್ನು ಹೇಳುವುದು ಕಡ್ಡಾಯವಾಗಿದೆ.
ಈ ಅರ್ಜಿಗಳಲ್ಲಿ ಆಕ್ಷೇಪಕರಾಗಿ ಚುನಾವಣಾ ನೋಂದಣಿ ಅಧಿಕಾರಿಗಳು ಅಥವಾ ಈ ಆರ್ ಓ ಗಳು ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಅಥವಾ ಎ ಇ ಆರ್ ಓ ಗಳನ್ನು ಹೆಸರಿಸಲಾಗಿದೆ. ಆದರೆ ಮತದಾರರ ನೋಂದಣಿ ನಿಯಮಗಳ ಪ್ರಕಾರ ನಿಗದಿತ ರೀತಿಯಲ್ಲಿ ಅಥವಾ ಕಾರಣವನ್ನು ನಮೂದಿಸದೆ ಸಲ್ಲಿಸುವ ಆಕ್ಷೇಪಣೆಗಳನ್ನು ತಿರಸ್ಕರಿಸಬೇಕಾಗಿದೆ. ಆದರೆ ಈ ಅರ್ಜಿಗಳಲ್ಲಿ ಕಾರಣಗಳನ್ನು ತಿಳಿಸಿಲ್ಲದಿದ್ದರೂ ಇದನ್ನು ಪುರಸ್ಕರಿಸಲಾಗಿದೆ ಎಂದು ವರದಿ ಹೇಳಿದೆ.
ಮತದಾರರು ಸ್ಥಳಾಂತರಗೊಂಡಿದ್ದರೆ ಅಥವಾ ಬೇರೆ ನಕಲಿ ನೋಂದಣಿ ಮಾಡಿದ್ದರೆ ಅಥವಾ ಅಪ್ರಾಪ್ತರಾಗಿದ್ದರೆ ಅಥವಾ ಮೃತ ರಾಗಿದ್ದರೆ ಅಥವಾ ಭಾರತೀಯ ನಾಗರಿಕರಲ್ಲದಿದ್ದರೆ ಫಾರಂ 7 ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಚುನಾವಣಾ ಅಧಿಕಾರಿಗಳು ಸಲ್ಲಿಸಿದ ಫಾರಂ 7 ಗಳ ಸಂಖ್ಯೆ ಸೆಪ್ಟೆಂಬರ್ 23ರ ಬಳಿಕ ತೀವ್ರವಾಗಿ ಏರಿತು. ಸೆಪ್ಟೆಂಬರ್ 23 ಎಂಬುದು ಫಾರಂ 7ಗಳನ್ನು ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿತ್ತು. ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಕೇವಲ 192 ಅರ್ಜಿಗಳು ಬಂದಿದ್ದು . ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 22 ರವರೆಗೆ 60,800ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇದೇ ವೇಳೆ ಚುನಾವಣಾ ಅಧಿಕಾರಿಗಳು ಫಾರಂ 7 ಸಲ್ಲಿಸಿದ ಹಲವು ಮತದಾರರ ಎಪಿಕ್ ಸಂಖ್ಯೆಯನ್ನು ಪಡೆದು ಭಾರತೀಯ ಚುನಾವಣಾ ಆಯೋಗದ ಪೋರ್ಟಲ್ ನಲ್ಲಿ ದಿ ಹಿಂದೂ ಪತ್ರಿಕೆ ಪರಿಶೀಲಿಸಿದೆ. ಪರಿಶೀಲಿಸಿದ ಎಲ್ಲಾ ಪ್ರಕರಣಗಳಲ್ಲಿ ಸೆಪ್ಟೆಂಬರ್ 23ರ ನಂತರ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗಿದ್ದವರದ್ದೂ ಸೇರಿದಂತೆ ಎಲ್ಲರ ಹೆಸರುಗಳನ್ನು ಈಗಾಗಲೇ ಚುನಾವಣಾ ಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಇದು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 17ಕ್ಕೆ ವಿರುದ್ಧವಾಗಿದೆ. ಈ ನಿಯಮದ ಪ್ರಕಾರ ನಿಗದಿತ ಅವಧಿಯಲ್ಲಿ ಅಥವಾ ನಿಗದಿತ ರೀತಿಯಲ್ಲಿ ಸಲ್ಲಿಸದ ಯಾವುದೇ ಕ್ಲೇಮ್ ಅಥವಾ ಆಕ್ಷೇಪಣೆಯನ್ನು ನೋಂದಣಿ ಅಧಿಕಾರಿ ತಿರಸ್ಕರಿಸಬೇಕು. ಆದರೆ ನಿಗದಿತ ಸಮಯ ಮುಗಿದ ಬಳಿಕ ಚುನಾವಣಾ ಅಧಿಕಾರಿಗಳು 60,000 ಕ್ಕಿಂತಲೂ ಅಧಿಕ ಆಕ್ಷೇಪಣೆಯ ಅರ್ಜಿ ಸಲ್ಲಿಸಿರುವುದನ್ನು ನೋಂದಣಿ ಅಧಿಕಾರಿ ಸ್ವೀಕರಿಸಿರುವುದು ಹೇಗೆ ಎಂಬ ಪ್ರಶ್ನೆಯನ್ನು ಹಿಂದೂ ವರದಿ ಹುಟ್ಟು ಹಾಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೌತ್ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ಅತಿ ಹೆಚ್ಚು ಫಾರಂ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸಲ್ಲಿಸಲಾದ ಒಟ್ಟು 17491 ಅರ್ಜಿಗಳ ಪೈಕಿ 10,374 ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳೆ ಸಲ್ಲಿಸಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ಸ್ವೀಕರಿಸಿದ 5757 ಅರ್ಜಿಗಳ ಪೈಕಿ 4,095 ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳೆ ಸಲ್ಲಿಸಿದ್ದಾರೆ. ಕನಿಷ್ಠ 26 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಅಥವಾ ಮೂರನೇ ವ್ಯಕ್ತಿಗಳು ಸಲ್ಲಿಸಿದ ಅರ್ಜಿ ಗಿಂತ ಹೆಚ್ಚು ಚುನಾವಣಾ ಅಧಿಕಾರಿಗಳೇ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕಾನೂನಿನ ಪ್ರಕಾರ ಆಕ್ಷೇಪಣೆಯ ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನಾಂಕವಾಗಿತ್ತು . ಇದಕ್ಕಿಂತ ಮೊದಲು ಸಲ್ಲಿಸಿದ ಆಕ್ಷೇಪಣೆಗಳನ್ನು ಮಾತ್ರ ಪರಿಗಣಿಸಬೇಕಾಗಿತ್ತು. ಅವಧಿ ಮುಗಿದ ನಂತರ ಸಲ್ಲಿಸಿದ ಅರ್ಜಿಗಳನ್ನು SIR ಪೂರಕಪಟ್ಟಿಗೆ ಮಾತ್ರ ಪರಿಗಣಿಸಬೇಕಾಗಿತ್ತು . ಆದರೆ ದಿ ಹಿಂದೂ ಪತ್ರಿಕೆಯ ಪರಿಶೀಲನೆಯಲ್ಲಿ ಅವಧಿ ಮುಗಿದ ನಂತರ ಸಲ್ಲಿಸಿದ ಅರ್ಜಿಗಳಲ್ಲಿನ ಮತದಾರರ ಹೆಸರುಗಳು ಈಗಾಗಲೇ ಪಟ್ಟಿಯಿಂದ ಅಳಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಸಲ್ಲಿಸಲಾದ ಫಾರಂ 7 ಅರ್ಜಿಗಳ ಪೈಕಿ ಮೂರರಲ್ಲಿ ಒಂದು ಭಾಗವನ್ನು ಚುನಾವಣಾ ಅಧಿಕಾರಿಗಳ ಹೆಸರಿನಲ್ಲಿಯೇ ಸಲ್ಲಿಸಲಾಗಿದೆ ಮತ್ತು ಈ ಯಾವುದರಲ್ಲೂ ಕಾರಣವನ್ನು ನಮೂದಿಸಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.












