✍️ ಅಮಾನ್
ಅನಿರೀಕ್ಷಿತ ಘಟನೆಗಳಿಗೆ ಮಧ್ಯ ಪ್ರಾಚ್ಯ ಸಾಕ್ಷಿಯಾಗುತ್ತಿದೆ. ಮಕ್ಕ ರಕ್ಷಣಾ ಒಪ್ಪಂದ ಎಂಬುದು ಈವರೆಗೆ ಟರ್ಕಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದವಾಗಿತ್ತು. ಈ ಮೂರು ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರದ ಮೇಲೆ ಯಾರೇ ಆಕ್ರಮಣ ನಡೆಸಿದರೂ ಅದು ಈ ಮೂರು ರಾಷ್ಟ್ರಗಳ ಮೇಲಿನ ಆಕ್ರಮಣ ಎಂದು ಈ ಒಪ್ಪಂದ ಸಾರುತಿತ್ತು. ಮುಖ್ಯವಾಗಿ ಇರಾನಿನ ದಾಳಿಯನ್ನು ಎದುರಿಸುವುದಕ್ಕೆ ಈ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು . ಆದರೆ ಇದೀಗ ಈ ಅಭಿಪ್ರಾಯವನ್ನು ಬುಡಮೇಲು ಮಾಡುವ ಬೆಳವಣಿಗೆ ನಡೆದಿದೆ.
ಸೌದಿ ಅರೇಬಿಯಾ ಟರ್ಕಿ ಮತ್ತು ಪಾಕಿಸ್ತಾನದ ಉನ್ನತ ಅಧಿಕಾರಿಗಳು ಇರಾನಿಗೆ ಭೇಟಿ ನೀಡಿದ್ದಾರೆ. ಸೌದಿ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನಿಗೆ ತಲುಪಿದ್ದಾರೆ. ಟರ್ಕಿಯ ಗುಪ್ತಚರ ಮುಖ್ಯಸ್ಥ ಇಬ್ರಾಹಿಂ ಕಲಿನ್ ಅವರು ಇರಾನಿಗೆ ತಲುಪಿದ್ದಾರೆ. ಈ ಮೂರು ದೇಶಗಳ ಪ್ರತಿನಿಧಿಗಳು ಇರಾನ್ ನ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ. ಅಕ್ಟೋಬರ್ 26ರಂದು ಇರಾನಿನಲ್ಲಿ ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ. , ಇರಾನಿನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ನೊಂದಿಗೆ ಈ ಪ್ರತಿನಿಧಿಗಳು ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಇರಾನಿನ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ . ಅಲಿ ಬಘೇರಿ ಮಾಹಿತಿ ನೀಡಿದ್ದಾರೆ.
ಒಂದು ಕಡೆ ಯಮನಿನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಇದು ಸೌದಿ ಅರೇಬಿಯಾದಲ್ಲಿ ಯುದ್ಧದ ಆತಂಕವನ್ನು ಮೂಡಿಸಿದೆ. ಸೌದಿ ಅರ್ಥ ವ್ಯವಸ್ಥೆಯ ಮೇಲೆ ತೀವ್ರ ಹಾನಿಯನ್ನು ಮಾಡಿದೆ. ಅಕ್ಟೋಬರ್ 25ರಂದೂ ಸೌದಿ ಅರೇಬಿಯಾದ ಮೇಲೆ ಹೌತಿಗಳು ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿಯನ್ನು ನಡೆಸಿದ್ದಾರೆ. ಇಂಥ ಸ್ಥಿತಿಯ ನಡುವೆ ಇರಾನಿನಲ್ಲಿ ಮೂರು ದೇಶಗಳ ಪ್ರತಿನಿಧಿಗಳು ಸೇರಿದ್ದಾರೆ ಮತ್ತು ಮಾತುಕತೆ ನಡೆಸಿದ್ದಾರೆ.
ಕಳೆದ ವಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ ಅವರು ಇರಾನಿಗೆ ಭೇಟಿ ನೀಡಿದ್ದರು. ಅಧ್ಯಕ್ಷ ಮಸೂದ್ ಪೆಜಶ್ಕಿಯಾನ್ ಅವರನ್ನು ಭೇಟಿಯಾಗಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಸ್ಥಿಕೆಯ ಮಾತುಕತೆಗಳಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿರುವುದರ ನಡುವೆಯೇ ಈ ಭೇಟಿ ನಡೆದಿತ್ತು.
ಕಳೆದ ಆಗಸ್ಟ್ ತಿಂಗಳಲ್ಲಿ ಟರ್ಕಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಮಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದೀಗ ಈ ಮೂರು ದೇಶಗಳ ಪ್ರತಿನಿಧಿಗಳು ಇರಾನಿಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಮಕ್ಕ ರಕ್ಷಣಾ ಒಪ್ಪಂದಕ್ಕೆ ಇರಾನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಇದೆ. ಹೀಗಾದರೆ ಮಧ್ಯ ಪ್ರಾಚ್ಯದ ಪರಿಸ್ಥಿತಿಯೇ ಬದಲಾಗಲಿದೆ. ಇರಾನ್ ಮೇಲೆ ಅಮೆರಿಕವಾಗಲಿ ಇಸ್ರೇಲ್ ಆಗಲಿ ದಾಳಿ ನಡೆಸುವುದಕ್ಕೂ ಕಷ್ಟವಾಗಲಿದೆ. ಹಾಗೆಯೇ ಮಧ್ಯಪ್ರಾಚ್ಯ ರಾಷ್ಟ್ರಗಳು ಜೊತೆ ಸೇರಿ ನ್ಯಾಟೋದಂತೆ ಅರಬ್ ನ್ಯಾಟೊವನ್ನು ತಯಾರು ಮಾಡುವ ಸಾಧ್ಯತೆಯ ಕಡೆಗೂ ಈ ಮಾತುಕತೆ ಬೆಳಕು ಚೆಲ್ಲಿದೆ.
ಹೀಗಾದರೆ ನಿಧಾನಕ್ಕೆ ಮಧ್ಯಪ್ರಾಚ್ಯ ದಿಂದ ಅಥವಾ ಗಲ್ಫ್ ರಾಷ್ಟ್ರಗಳಿಂದ ಅಮೆರಿಕದ ಸೇನೆ ಹಿಂದಕ್ಕೆ ಹೋಗಬಹುದು. ಇಸ್ರೇಲ್ ಮತ್ತು ಅಮೆರಿಕನ್ ಹಿತಾಸಕ್ತಿಗಳಿಗೆ ಬಾಗಿಲು ಮುಚ್ಚಬಹುದು ಮತ್ತು ಮಧ್ಯಪ್ರಾಚ್ಯದ ರಾಷ್ಟ್ರಗಳೇ ಜೊತೆ ಸೇರಿಕೊಂಡು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವ ಮತ್ತು ಅದಕ್ಕಾಗಿ ಸೇನೆಯನ್ನು ರಚಿಸಿಕೊಳ್ಳುವ ಸಾಧ್ಯತೆಯೂ ಬರಬಹುದು. ಈ ಹಿನ್ನೆಲೆಯಲ್ಲಿ ಈ ಮಾತುಕತೆ ಬಗ್ಗೆ ಕುತೂಹಲ ಉಂಟಾಗಿದೆ.












