ಸನ್ಮಾರ್ಗ ವೆಬ್ ಡೆಸ್ಕ್
ನಮ್ಮ ಜೀವನವು ಅಲ್ಲಾಹನ ಅನುಗ್ರಹಗಳ ಒಂದು ಸುಂದರ ಪಯಣ. ಈ ಪಯಣದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಮತ್ತು ನಮ್ಮ ಆತ್ಮವನ್ನು ಸಂಸ್ಕರಿಸಿಕೊಳ್ಳಲು ನಾವು ಎಂದಿಗೂ ಮರೆಯಬಾರದ ನಾಲ್ಕು ಅತಿ ಮುಖ್ಯವಾದ ವಿಷಯಗಳಿವೆ. ಇವು ನಮ್ಮನ್ನು ಅಲ್ಲಾಹನ ಸಾಮೀಪ್ಯಕ್ಕೆ ಕೊಂಡೊಯ್ಯುವ ದಾರಿದೀಪಗಳಾಗಿವೆ.
1. ಪ್ರಾರ್ಥನೆ (ದುವಾ):
ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯೂ ಅಲ್ಲಾಹನ ಕೃಪೆಯ ಮೇಲೆ ಅವಲಂಬಿತವಾಗಿದೆ. ಈ ಪ್ರಪಂಚದ ಎಲ್ಲಾ ಕಾರ್ಯಗಳನ್ನು ನಾವು ಪ್ರಾರ್ಥನೆಯಿಂದಲೇ ಆರಂಭಿಸಬೇಕು. ಪ್ರಾರ್ಥನೆ ಎಂಬುದು ಕೇವಲ ಬೇಡಿಕೆಯಲ್ಲ, ಅದು ನಮ್ಮ ಅಸ್ತಿತ್ವವನ್ನು ಸೃಷ್ಟಿಕರ್ತನಿಗೆ ಸಮರ್ಪಿಸುವ ಸುಂದರ ಸಂವಾದವಾಗಿದೆ. ಅಲ್ಲಾಹನು ನಮಗೆ ಅತ್ಯಂತ ಸಮೀಪದಲ್ಲಿದ್ದಾನೆ, ನಮ್ಮ ನರಗಳಿಗಿಂತಲೂ ಹತ್ತಿರದಲ್ಲಿರುವ ಆತ, ತನ್ನ ದಾಸರ ಬೇಡಿಕೆಗಳನ್ನು ಕೇಳಲು ಸದಾ ಸಿದ್ಧನಿರುತ್ತಾನೆ. ಅಲ್ಲಾಹನು ಕುರ್ಆನಿನಲ್ಲಿ ಹೀಗೆ ಅಭಯ ನೀಡುತ್ತಾನೆ: “ನಿಮ್ಮ ಪ್ರಭು ಹೀಗೆ ಹೇಳುತ್ತಾನೆ- ನನ್ನನ್ನು ಪ್ರಾರ್ಥಿಸಿರಿ. ನಾನು ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸುವೆನು. ಅಹಂಕಾರಪಟ್ಟು ನನ್ನ ದಾಸ್ಯ ಮತ್ತು ಆರಾಧನೆಯಿಂದ ವಿಮುಖರಾಗುವವರು ಖಂಡಿತವಾಗಿಯೂ ಅಪಮಾನಿತರಾಗಿ ನರಕದಲ್ಲಿ ಪ್ರವೇಶಿಸುವರು.”(40:60) ಇದು ಪ್ರಾರ್ಥನೆಯ ಅನಿವಾರ್ಯತೆಯನ್ನು ಸಾರುವ ದೇವನ ವಾಗ್ದಾನವಾಗಿದೆ.
ನಮ್ಮ ಸಹಾಯಕ್ಕೆ ಎಷ್ಟು ಮಂದಿ ಮಹಾಪುರುಷರಿದ್ದಾರೆ, ಎಷ್ಟು ಜನರಿದ್ದಾರೆ ಎಂದು ಯೋಚಿಸುವುದಕ್ಕಿಂತ, “ನನ್ನನ್ನು ಬಿಟ್ಟು ಬೇರೆ ಯಾರನ್ನೂ ಕರೆಯಬೇಡಿರಿ” ಎಂಬ ಅಲ್ಲಾಹನ ಕರೆಗೆ ನಾವು ಓಗೊಡಬೇಕು. ಸೂರಃ ಅಲ್-ಬಕರದಲ್ಲಿ ಅಲ್ಲಾಹನು ಪ್ರೀತಿಯಿಂದ ಹೀಗೆ ಹೇಳುತ್ತಾನೆ: “ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ, ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ.”(2:186)
ಪ್ರಾರ್ಥನೆಯ ವಿಷಯದಲ್ಲಿ ನಾವು ಎಂದೂ ನಿರಾಶರಾಗಬಾರದು. ಅದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಪ್ರವಾದಿ ಝಕರಿಯ್ಯ(ಅ) ಅವರ ಜೀವನ. ಅವರಿಗೆ ವಯಸ್ಸಾಗಿತ್ತು, ತಲೆ ನರೆದಿತ್ತು ಮತ್ತು ಅವರ ಪತ್ನಿ ಬಂಜೆ ಆಗಿದ್ದರು. ಪ್ರಕೃತಿಯ ನಿಯಮದಂತೆ ಅವರಿಗೆ ಸಂತಾನ ಭಾಗ್ಯ ಅಸಾಧ್ಯವಾಗಿತ್ತು. ಆದರೆ, ಅವರು ಅಲ್ಲಾಹನ ಅನುಗ್ರಹದ ಬಗ್ಗೆ ಒಂದಿಷ್ಟೂ ಸಂಶಯಪಡದೆ, ಅತ್ಯಂತ ವಿನಮ್ರವಾಗಿ ಪ್ರಾರ್ಥಿಸಿದರು. ಅವರ ಆ ದೃಢ ವಿಶ್ವಾಸಕ್ಕೆ ಪ್ರತಿಫಲವಾಗಿ, ಅಲ್ಲಾಹನು ವೃದ್ಧಾಪ್ಯದಲ್ಲೇ `ಯಹ್ಯಾ'(ಅ) ಎಂಬ ಪುತ್ರನನ್ನು ಅನುಗ್ರಹಿಸಿ, ಅಸಾಧ್ಯವಾದುದನ್ನು ಸಾಧ್ಯವಾಗಿಸಿದನು. ಆದ್ದರಿಂದ ಅಸಾಧ್ಯವಾದುದನ್ನು ಕೂಡ ಪ್ರಾರ್ಥಿಸುವ ಬಗ್ಗೆ ನಾವು ಮುಜುಗರ ಪಡಬಾರದು ಎಂದು ಇದರಿಂದ ಸ್ಪಷ್ಟವಾಗುತ್ತದೆ.
ಪ್ರವಾದಿ ಮುಹಮ್ಮದ್(ಸ) ರವರು ಹೇಳುತ್ತಾರೆ: “ಒಬ್ಬ ಮುಸ್ಲಿಮನು ಪಾಪವಲ್ಲದ ಅಥವಾ ಸಂಬಂಧಗಳನ್ನು ಕಡಿದುಕೊಳ್ಳದ ವಿಷಯಕ್ಕಾಗಿ ಪ್ರಾರ್ಥಿಸಿದರೆ, ಅಲ್ಲಾಹನು ಅವನಿಗೆ ಮೂರು ವಿಷಯಗಳಲ್ಲಿ ಒಂದನ್ನು ಖಂಡಿತವಾಗಿ ನೀಡುತ್ತಾನೆ: ಒಂದು, ಅವನು ಕೇಳಿದುದನ್ನು ತಕ್ಷಣವೇ ನೀಡುತ್ತಾನೆ; ಎರಡು, ಆ ಪ್ರಾರ್ಥನೆಗೆ ಬದಲಾಗಿ ಮುಂದಿನ ದಿನಗಳಲ್ಲಿ ಬರಲಿರುವ ಯಾವುದೋ ದೊಡ್ಡ ವಿಪತ್ತನ್ನು ತಡೆಯುತ್ತಾನೆ; ಅಥವಾ ಮೂರು, ಅದಕ್ಕಾಗಿ ಪರಲೋಕದಲ್ಲಿ ಪ್ರತಿಫಲವನ್ನು ಸಂಗ್ರಹಿಸಿಡುತ್ತಾನೆ.” (ಮುಸ್ನದ್ ಅಹ್ಮದ್). ಆದ್ದರಿಂದ ಪ್ರಾರ್ಥನೆ ಎಂಬುದು ನಮ್ಮ ಆತ್ಮದ ಜೀವನಾಡಿ. ಅದು ಕೇವಲ ನಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳುವ ಸಾಧನವಲ್ಲ. ಅದು ನಮ್ಮ ದೌರ್ಬಲ್ಯವನ್ನು ಒಪ್ಪಿಕೊಂಡು, ಸಕಲ ಶಕ್ತಿಗಳ ಒಡೆಯನಾದ ಅಲ್ಲಾಹನ ಬಾಗಿಲಲ್ಲಿ ಶರಣಾಗುವ ಪರಮ ಸೌಭಾಗ್ಯವಾಗಿದೆ. ಪ್ರಾರ್ಥನೆಗೆ ಅಡೆತಡೆಗಳನ್ನು ಹಾಕದೆ, ನಮ್ಮ ಮನದ ನೋವು, ಹಂಬಲ ಮತ್ತು ಆಸೆಗಳನ್ನು ಸದಾ ಅವನ ಮುಂದಿಡಲು ನಾವು ಮರೆಯಬಾರದು.
2. ಪಾಪ ವಿಮೋಚನೆ (ಇಸ್ತಿಗ್ಫಾರ್):
ಮಾನವನ ಜೀವನವು ತಪ್ಪು ಮತ್ತು ಸರಿಗಳ ನಡುವಿನ ಒಂದು ಪಯಣ. ನಾವು ಅರಿತೋ ಅಥವಾ ಅರಿವಿಲ್ಲದೆಯೋ ತಪ್ಪುಗಳನ್ನು ಮಾಡುವುದು ಸಹಜ. ಆದರೆ, ತಪ್ಪು ಮಾಡಿದಾಗ ಅದಕ್ಕಾಗಿ ಕರಗುವುದು, ಪಶ್ಚಾತ್ತಾಪ ಪಡುವುದು ಮತ್ತು ಅಲ್ಲಾಹನ ಬಳಿ ಮರಳಿ ಬರುವುದು ಒಬ್ಬ ಸತ್ಯ ವಿಶ್ವಾಸಿಯ ದೊಡ್ಡ ಗುಣವಾಗಿದೆ. ಇಸ್ತಿಗ್ಫಾರ್ ಎಂದರೆ ಕೇವಲ ಕ್ಷಮೆ ಬೇಡುವುದಲ್ಲ, ಅದು ನಮ್ಮ ಆತ್ಮವನ್ನು ಪಾಪದ ಕಲೆಗಳಿಂದ ತೊಳೆಯುವ ಪರಮ ಪವಿತ್ರ ಪ್ರಕ್ರಿಯೆಯಾಗಿದೆ. ಸೃಷ್ಟಿಕರ್ತನಾದ ಅಲ್ಲಾಹನು ಎಷ್ಟು ಕರುಣಾಮಯಿ ಎಂದರೆ, ನಮ್ಮ ಪಾಪಗಳು ಆಕಾಶವನ್ನು ಮುಟ್ಟುವಷ್ಟೇ ದೊಡ್ಡದಾಗಿದ್ದರೂ, ನಾವು ಪಶ್ಚಾತ್ತಾಪದಿಂದ ಅವನ ಬಳಿ ಬಂದರೆ ಅವನು ಕ್ಷಮಿಸಲು ಸಿದ್ಧನಿರುತ್ತಾನೆ. ಪವಿತ್ರ ಕುರ್ಆನ್ ಹೀಗೆ ಹೇಳುತ್ತದೆ: “ಯಾವನಾದರೂ ದುಷ್ಕರ್ಮವೆಸಗಿಬಿಟ್ಟರೆ ಅಥವಾ ತನ್ನ ಮೇಲೆ ತಾನೇ ಅನ್ಯಾಯವೆಸಗಿದರೆ ಮತ್ತು ಆ ಬಳಿಕ ಅಲ್ಲಾಹನೊಡನೆ ಕ್ಷಮಾಯಾಚನೆ ಮಾಡಿದರೆ, ಅಲ್ಲಾಹ್ ಕ್ಷಮಾದಾನಿಯೂ, ಕರುಣಾನಿಧಿಯೂ ಆಗಿರುವುದನ್ನು ಅವನು ಕಾಣುವನು.”(4:110)
ಇಸ್ತಿಗ್ಫಾರ್ ಕೇವಲ ಪರಲೋಕದ ವಿಮೋಚನೆಗಾಗಿ ಮಾತ್ರವಲ್ಲ, ಇದು ಇಹಲೋಕದ ಸಮೃದ್ಧಿಗೂ ದಾರಿ. ಪಾಪ ವಿಮೋಚನೆಯ ಲಾಭಗಳನ್ನು ಕುರ್ಆನಿನಲ್ಲಿ ಎಳೆಎಳೆಯಾಗಿ ವಿವರಿಸುತ್ತಾ ಹೀಗೆ ಹೇಳಲಾಗಿದೆ: “ನಾನು (ಹೀಗೆ) ಹೇಳಿದೆನು: ನಿಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ- ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳವಾಗಿ ಮಳೆ ಸುರಿಸುವನು, ನಿಮಗೆ ಸೊತ್ತು ಸಂತಾನಗಳನ್ನು ದಯಪಾಲಿಸುವನು, ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು.”(71: 10-12) ಇದು ಅಲ್ಲಾಹನ ಭರವಸೆಯಾಗಿದೆ; ಪಾಪ ವಿಮೋಚನೆಯು ನಮ್ಮ ಜೀವನದ ಬರವನ್ನು ಹೋಗಲಾಡಿಸಿ, ಸಮೃದ್ಧಿಯ ಮಳೆಯನ್ನು ಸುರಿಸುತ್ತದೆ. ಪ್ರವಾದಿ ಮುಹಮ್ಮದ್(ಸ)ರವರು ಪಾಪಮುಕ್ತರಾಗಿದ್ದರೂ, ಪ್ರತಿದಿನ ಎಪ್ಪತ್ತಕ್ಕಿಂತ ಹೆಚ್ಚು ಬಾರಿ (ಬೇರೆ ವರದಿಯಂತೆ ನೂರಕ್ಕಿಂತ ಹೆಚ್ಚು ಬಾರಿ) ಇಸ್ತಿಗ್ಫಾರ್ ಮಾಡುತ್ತಿದ್ದರು. ಪ್ರವಾದಿಯವರ ಈ ನಡೆ ನಮಗೆ ಒಂದು ದೊಡ್ಡ ಪಾಠ. ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟ, ಪಾಪಗಳೇ ಇಲ್ಲದ ಪ್ರವಾದಿಯವರೇ ಅಷ್ಟು ಬಾರಿ ಕ್ಷಮೆ ಕೇಳುವಾಗ, ನಿರಂತರ ತಪ್ಪುಗಳನ್ನು ಮಾಡುವ ನಾವು ಎಷ್ಟು ಬಾರಿ ಇಸ್ತಿಗ್ಫಾರ್ ಮಾಡಬೇಕು?
ಕುರ್ಆನ್ ಹೀಗೆ ಹೇಳುತ್ತದೆ: “ನೀವು ಅವರೊಂದಿಗೆ ಇರುವಾಗ ಅಲ್ಲಾಹನು ಅವರ ಮೇಲೆ ಯಾತನೆ ಇಳಿಸುವವನಿರಲಿಲ್ಲ. ಜನರು ಕ್ಷಮಾಯಾಚನೆ ಮಾಡುತ್ತಿರುವಾಗ ಅವರನ್ನು ಶಿಕ್ಷಿಸುವುದೂ ಅಲ್ಲಾಹನ ರೂಢಿಯಲ್ಲ.”(8:33) ಇಸ್ತಿಗ್ಫಾರ್ ಎನ್ನುವುದು ನಮ್ಮ ಜೀವನದ ನಿರಂತರ ರಕ್ಷಾಕವಚ. ಇದು ನಮ್ಮ ಮನಸ್ಸಿನ ಭಾರವನ್ನು ಇಳಿಸುತ್ತದೆ, ನೆಮ್ಮದಿಯನ್ನು ನೀಡುತ್ತದೆ ಮತ್ತು ಅಲ್ಲಾಹನ ಪ್ರೀತಿಗೆ ನಮ್ಮನ್ನು ಹತ್ತಿರವಾಗಿಸುತ್ತದೆ. ಆದ್ದರಿಂದ, ನಮ್ಮ ನಾಲಿಗೆಯ ಮೇಲೆ ಸದಾ ‘ಅಸ್ತಗ್ಫಿರುಲ್ಲಾಹ್’ ಎಂಬ ಪದವು ನಲಿದಾಡುತ್ತಿರಬೇಕು. ಇದು ನಮ್ಮ ಕಷ್ಟಗಳನ್ನು ದೂರಮಾಡಿ, ಜೀವನದಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ತಂದುಕೊಡುವ ಸೌಭಾಗ್ಯದ ಕೀಲಿಕೈಯಾಗಿದೆ.
3. ದಿಕ್ರ್ (ಅಲ್ಲಾಹನ ಸ್ಮರಣೆ):
ನಮ್ಮ ನಾಲಿಗೆಯೂ ಅಲ್ಲಾಹನ ಸ್ಮರಣೆಯಿಂದ ಎಷ್ಟು ಆರ್ದ್ರವಾಗಿರುತ್ತದೆವೋ, ಅಷ್ಟೇ ನಮ್ಮ ಜೀವನವು ಸುಂದರವಾಗಿರುತ್ತದೆ. ದಿಕ್ರ್ ಎಂದರೆ ಕೇವಲ ಪದಗಳ ಉಚ್ಚಾರಣೆಯಲ್ಲ, ಅದು ಅಲ್ಲಾಹನ ಅಸ್ತಿತ್ವವನ್ನು ನಮ್ಮ ಪ್ರತಿಯೊಂದು ಉಸಿರಿನಲ್ಲೂ ಅನುಭವಿಸುವ ಪ್ರಕ್ರಿಯೆ. ಮನುಷ್ಯನ ಮನಸ್ಸು ಅಶಾಂತಿಯ ಕಡಲು. ಆದರೆ, ಅಲ್ಲಾಹನ ಸ್ಮರಣೆ ಅದನ್ನು ಶಾಂತಗೊಳಿಸುವ ದಿವ್ಯ ಔಷಧವಾಗಿದೆ. ಕುರ್ಆನ್ ಹೀಗೆ ಹೇಳುತ್ತದೆ: “ಅಲ್ಲಾಹನನ್ನು ಸ್ಮರಿಸುವುದರಿಂದಲೇ ಮನಸ್ಸುಗಳಿಗೆ ಶಾಂತಿ ಲಭಿಸುತ್ತದೆ.” (13: 28)
ದಿಕ್ರ್ ಎಂದರೆ ನಾಲ್ಕು ಮಹತ್ತರವಾದ ಕಲ್ಪನೆಗಳ ಸಮಾಗಮ:
ತಕ್ಬೀರ್ (ಅಲ್ಲಾಹು ಅಕ್ಬರ್): ಅಲ್ಲಾಹನು ಅತ್ಯಂತ ಮಹಾನನು. ಈ ಪದವನ್ನು ನಾವು ಉಚ್ಚರಿಸಿದಾಗ, ನಮ್ಮ ಎದುರಿಗಿರುವ ಕಷ್ಟಗಳು, ಅಹಂಕಾರ ಮತ್ತು ಸಮಸ್ಯೆಗಳು ಚಿಕ್ಕದಾಗಿ ಕಾಣಲು ಪ್ರಾರಂಭಿಸುತ್ತವೆ.
ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್): ಅಲ್ಲಾಹನ ಹೊರತು ಆರಾಧನೆಗೆ ಯೋಗ್ಯನಾದ ಬೇರೆ ಯಾರೂ ಇಲ್ಲ. ಇದು ನಮ್ಮ ಏಕದೇವ ವಿಶ್ವಾಸವನ್ನು ಅಚಲಗೊಳಿಸುತ್ತದೆ.
ತಸ್ಬೀಹ್ (ಸುಬ್ಹಾನಲ್ಲಾಹ್): ಅಲ್ಲಾಹನು ಪರಮ ಪವಿತ್ರನು. ಇದು ನಮ್ಮ ಪ್ರತಿಯೊಂದು ತಪ್ಪು ಆಲೋಚನೆಗಳನ್ನು ಶುದ್ಧೀಕರಿಸುತ್ತದೆ.
ತಹ್ಮೀದ್ (ಅಲ್ ಹಮ್ದುಲಿಲ್ಲಾಹ್): ಸರ್ವ ಸ್ತುತಿಗಳೂ ಅಲ್ಲಾಹನಿಗೆ ಮಾತ್ರ ಮೀಸಲು. ಇದು ನಮ್ಮಲ್ಲಿ ಕೃತಜ್ಞತೆಯ ಭಾವವನ್ನು ತುಂಬುತ್ತದೆ.
ಪ್ರವಾದಿ ಮುಹಮ್ಮದ್(ಸ) ರವರು ಒಂದು ಸುಂದರವಾದ ಹದೀಸ್ನಲ್ಲಿ ಹೇಳುತ್ತಾರೆ: “ಎರಡು ವಾಕ್ಯಗಳು ನಾಲಿಗೆಗೆ ಬಹಳ ಹಗುರವಾಗಿವೆ, ಆದರೆ ಪರಲೋಕದ ತಕ್ಕಡಿಯಲ್ಲಿ ಅವು ಅತ್ಯಂತ ಭಾರವಾದವು ಮತ್ತು ಅಲ್ಲಾಹನಿಗೆ ಅತ್ಯಂತ ಪ್ರಿಯವಾದವು: `ಸುಬ್ಹಾನಲ್ಲಾಹಿ ವ ಬಿಹಂದಿಹೀ, ಸುಬ್ಹಾನಲ್ಲಾಹಿಲ್ ಅಝೀಮ್’.” (ಸಹೀಹ್ ಬುಖಾರಿ). ಈ ವಾಕ್ಯಗಳನ್ನು ಉಚ್ಚರಿಸಲು ನಮಗೆ ಎಷ್ಟು ಸಮಯ ಬೇಕು? ಕೆಲವೇ ಸೆಕೆಂಡುಗಳು! ಆದರೆ, ಈ ಪುಟ್ಟ ಪ್ರಯತ್ನವು ನಮ್ಮ ಪರಲೋಕದ ಬದುಕನ್ನು ಸಮೃದ್ಧಗೊಳಿಸುತ್ತದೆ. ದಿಕ್ರ್ ಮಾಡುವವನನ್ನು ಅಲ್ಲಾಹನು ಮರೆಯುವುದಿಲ್ಲ. ಅಲ್ಲಾಹನು ಹೇಳುತ್ತಾನೆ: “ನೀವು ನನ್ನನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸ್ಮರಿಸುತ್ತೇನೆ.” (2: 152) ಯೋಚಿಸಿ ನೋಡಿರಿ, ಅಖಿಲ ಪ್ರಪಂಚದ ಒಡೆಯನಾದ ಆ ಮಹಾನ್ ಶಕ್ತಿಯು ನಮ್ಮನ್ನು ಸ್ಮರಿಸುತ್ತಾನೆ ಎಂದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಏನಿದೆ. ಒಬ್ಬ ವ್ಯಕ್ತಿಯು ತನ್ನನ್ನು ತಾನು ಸಂಸ್ಕರಿಸಿಕೊಳ್ಳಲು ದಿಕ್ರ್ ಒಂದು ಕನ್ನಡಿಯಿದ್ದಂತೆ. ನಾವು ದಿನವಿಡೀ ಅಲ್ಲಾಹನನ್ನು ಸ್ಮರಿಸುತ್ತಿದ್ದರೆ, ನಮ್ಮ ನಾಲಿಗೆ ಕೆಟ್ಟ ಮಾತುಗಳನ್ನು ಆಡುವುದಿಲ್ಲ, ನಮ್ಮ ಮನಸ್ಸು ಕೆಟ್ಟ ಆಲೋಚನೆಗಳಿಗೆ ಜಾಗ ಕೊಡುವುದಿಲ್ಲ. ದಿಕ್ರ್ ನಮ್ಮನ್ನು ಅಹಂಕಾರದಿಂದಲೂ ದೂರವಿರಿಸಿ, ವಿನಯಶೀಲರನ್ನಾಗಿ ಮಾಡುತ್ತದೆ. ಆದ್ದರಿಂದ, ಕೆಲಸ ಮಾಡುವಾಗ, ನಡೆದಾಡುವಾಗ ಅಥವಾ ವಿರಾಮದ ಸಮಯದಲ್ಲಿ ಸದಾ ನಾಲಿಗೆಯ ಮೇಲೆ ಅಲ್ಲಾಹನ ಸ್ಮರಣೆ ಇರಲಿ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ, ಅಲ್ಲಾಹನ ಸಾಮೀಪ್ಯದ ಮಧುರ ಅನುಭವವನ್ನೂ ನೀಡುತ್ತದೆ.
4. ಶುಕ್ರ್ (ಕೃತಜ್ಞತೆ):
ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಉಸಿರಾಡುವ ಗಾಳಿಯಿಂದ ಹಿಡಿದು, ಜೀವನಾಡಿಯಾಗಿರುವ ದೇಹದ ಅಂಗಾಂಗಗಳವರೆಗೆ, ನಮಗೆ ಲಭಿಸಿರುವ ಪ್ರತಿಯೊಂದು ಸುಖ-ಸೌಕರ್ಯವೂ ಅಲ್ಲಾಹನ ಅಗಣಿತ ಅನುಗ್ರಹಗಳೇ. ಈ ಅಗಣಿತ ಕೊಡುಗೆಗಳಿಗೆ ಪ್ರತಿಯಾಗಿ ನಾವು ಸಲ್ಲಿಸಬೇಕಾದ ಕನಿಷ್ಠ ಕಾಣಿಕೆ ಎಂದರೆ ಅದು `ಕೃತಜ್ಞತೆ’ (ಶುಕ್ರ್). ಕೃತಜ್ಞತೆ ಎಂಬುದು ಕೇವಲ ಬಾಯಿಂದ ಹೇಳುವ ಧನ್ಯವಾದವಲ್ಲ, ಅದು ಮನಸ್ಸಿನಲ್ಲಿ ಮೂಡುವ ದೈವಿಕ ಭಾವನೆ. ಅಲ್ಲಾಹನು ಕುರ್ ಆನ್ನಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳುತ್ತಾನೆ: “ನೀವು ನನಗೆ ಕೃತಜ್ಞರಾಗಿರಿ, ಕೃತಜ್ಞರಾಗದೆ ಇರಬೇಡಿರಿ.”(2:152) ನಾವು ಅಲ್ಲಾಹನಿಗೆ ಕೃತಜ್ಞರಾಗುವುದರಿಂದ ಸೃಷ್ಟಿಕರ್ತನಿಗೆ ಯಾವುದೇ ಲಾಭವಿಲ್ಲ, ಬದಲಾಗಿ ಅದು ನಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತದೆ ಮತ್ತು ನಮ್ಮನ್ನು ದೇವನ ಅನುಗ್ರಹಗಳಿಗೆ ಪಾತ್ರರನ್ನಾಗಿಸುತ್ತದೆ.
ಸೂರಃ ಇಬ್ರಾಹೀಮ್ನಲ್ಲಿ ಅಲ್ಲಾಹನು ನೀಡುವ ಭರವಸೆ ಅತ್ಯಂತ ಮಹತ್ವದ್ದು: “ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ ಇನ್ನೂ ಹೆಚ್ಚು ಪ್ರದಾನ ಮಾಡುವೆನೆಂದೂ ನೀವು ಕೃತಘ್ನತೆ ತೋರಿದರೆ ನನ್ನ ಶಿಕ್ಷೆಯು ಅತ್ಯಂತ ಕಠಿಣವಾಗಿದೆಯೆಂದೂ ನಿಮ್ಮ ಪ್ರಭು ಎಚ್ಚರಿಕೆ ಕೊಟ್ಟಿದ್ದುದನ್ನೂ ಸ್ಮರಿಸಿರಿ.”(14:7). ಇದು ಅಲ್ಲಾಹನ ನಿಯಮ. ಕೃತಜ್ಞತೆ ಸಲ್ಲಿಸುವವರನ್ನು ಅವನು ಎಂದಿಗೂ ಬರಿಗೈಯಲ್ಲಿ ಕಳುಹಿಸುವುದಿಲ್ಲ. ಅಷ್ಟೇ ಅಲ್ಲ, ನೀಡಿದ ಅನುಗ್ರಹವನ್ನು ಇನ್ನಷ್ಟು ಹೆಚ್ಚಿಸುತ್ತಾನೆ.
ಒಮ್ಮೆ ನಮ್ಮ ಜೀವನವನ್ನು ಅವಲೋಕಿಸಿ ನೋಡಿರಿ: ನಮಗೆ ಲಭಿಸಿರುವ ಉದ್ಯೋಗ, ಆರೋಗ್ಯವಂತ ದೇಹ, ಚಿಂತಿಸುವ ಶಕ್ತಿ, ನೆಮ್ಮದಿಯ ಮನೆ, ಪ್ರಯಾಣಕ್ಕೆ ವಾಹನ… ಹೀಗೆ ಪ್ರತಿಯೊಂದೂ ಅಲ್ಲಾಹನ ದಯೆಯಿಂದ ದೊರೆತವು. ಇವನ್ನೆಲ್ಲಾ ಕೇವಲ ನಮ್ಮ ಪ್ರಯತ್ನವೆಂದು ಭಾವಿಸದೆ, ಅಲ್ಲಾಹನ ಕರುಣೆ ಎಂದು ಅರಿತು ಕೃತಜ್ಞತೆ ಸಲ್ಲಿಸುವುದು ಒಬ್ಬ ವಿವೇಕಿಯ ಲಕ್ಷಣ. ಕೃತಜ್ಞತೆಯನ್ನು ತೋರುವುದು ನಮ್ಮ ಕರ್ತವ್ಯ ಮಾತ್ರವಲ್ಲ, ಅದು ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮಾಧಾನವನ್ನು ವೃದ್ಧಿಸುವ ಮಾರ್ಗವಾಗಿದೆ. ಯಾರು ಅನುಗ್ರಹಗಳನ್ನು ಮರೆಯದೆ, ಸದಾ ಅಲ್ಲಾಹನಿಗೆ ಕೃತಜ್ಞರಾಗಿರುತ್ತಾರೋ, ಅವರ ಜೀವನದಲ್ಲಿ ಸಮೃದ್ಧಿ ಮತ್ತು ನೆಮ್ಮದಿಯು ವೃದ್ಧಿಯಾಗುತ್ತಲೇ ಇರುತ್ತದೆ. ಆದ್ದರಿಂದ, ಯಾವುದೇ ಸ್ಥಿತಿಯಲ್ಲಿದ್ದರೂ ಅಲ್ಲಾಹನಿಗೆ ಕೃತಜ್ಞರಾಗಿರಿ. ಕೃತಜ್ಞತೆ ತೋರಿಸುವವರಿಗೆ ನಾವು ಇನ್ನೂ ಹೆಚ್ಚು ದಯಪಾಲಿಸುತ್ತೇವೆ ಎಂಬುದು ದೈವಿಕ ವಾಗ್ದಾನ. ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸುತ್ತಾ, ಅವನಿಗೆ ಶರಣಾಗುವುದೇ ಕೃತಜ್ಞತೆಯ ಪರಮಾವಧಿ. ಅದರಿಂದ ನಮ್ಮ ಜೀವನದ ಸಾರ್ಥಕತೆಗೆ ನಾವು ಈ ನಾಲ್ಕು ಮೌಲ್ಯಗಳನ್ನು ಮರೆಯದೆ ಪ್ರತಿಕ್ಷಣದಲ್ಲೂ ಅಳವಡಿಸಿಕೊಳ್ಳಬೇಕು












