ಸನ್ಮಾರ್ಗ ವಾರ್ತೆ
ಲಿಂಗಸುಗೂರು: ಪ್ರತಿಯೊಬ್ಬರಿಗೂ ಭಗವಂತನ ಭಯ ಇದ್ದಾಗ ಮಾತ್ರ ಸರಿ ದಾರಿಗೆ ನಡೆಯಲು ಸಾಧ್ಯ ಎಂದು ಇಳಕಲ್ನ ಪ್ರವಚನಕಾರ ಮತ್ತು ಶಿಕ್ಷಕ ಲಾಲ್ ಹುಸೇನ್ಸಾಬ ಕಂದಗಲ್ ಹೇಳಿದರು.
ಪಟ್ಟಣದ ಮೊಹಮ್ಮದೀಯಾ ಮಸೀದಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲ್ಪಟ್ಟಿದ್ದ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ದೇವರು ನಿರಾಕಾರ. ಪ್ರತಿಯೊಂದು ಧರ್ಮದಲ್ಲಿ ಉಪವಾಸ ಮತ್ತು ವ್ರತ ಆಚರಣೆಗಳಿವೆ. ಆದರೆ ಅವರವರ ಧರ್ಮಗಳ ಆಚರಣೆಗಳಂತೆ ಉಪವಾಸ ಮತ್ತು ವ್ರತ ಮಾಡಲಾಗುತ್ತದೆ. ಉಪವಾಸ ಮಾಡುವುದರಿಂದ ನಮ್ಮ ದೇಹ ಮತ್ತು ದೇಶಕ್ಕೂ ಒಳ್ಳೆಯದಾಗುತ್ತದೆ. ಹಸಿವುಮುಕ್ತ ಭಾರತದ ಕನಸಿಗೆ ಉಪವಾಸ ಮತ್ತು ವ್ರತವೂ ಸಹಕಾರಿಯಾಗಲಿದೆ,” ಎಂದರು.

ಸಂಗಮೇಶ ಕಾಲೇಜಿನ ಉಪನ್ಯಾಸಕ ಡಾ. ಶಶಿಕಾಂತ ಕಾಡ್ಲೂರು ಮಾತನಾಡಿ, “ಪ್ರಕೃತಿ ಎಲ್ಲರಿಗೂ ನೀರು ಮತ್ತು ನೆರಳನ್ನು ಸಮಾನವಾಗಿ ನೀಡುತ್ತದೆ. ಪರಿಸರ ಮತ್ತು ಪ್ರಕೃತಿಗೆ ಇರುವ ಸಮಾನತೆ ಮನುಷ್ಯರಲ್ಲಿಲ್ಲ. ಭೇದಭಾವ ಬಿಡಬೇಕು. ಮನುಷ್ಯರು ಎಲ್ಲರೂ ಸಮಾನರು ಎಂಬ ಮನೋಭಾವ ಮೂಡಬೇಕು,” ಎಂದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಅಬು ಸೈಯದ್ ಖಾಸ್ಮಿ, ಮೊಹಮ್ಮದೀಯಾ ಮಸೀದಿ ಅಧ್ಯಕ್ಷ ಸತ್ತರಸಾಬ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಅಗಸಿಮಂದಿನ, ಅಲ್ಪಸಂಖ್ಯಾತರ ಇಲಾಖೆ ತಾಲೂಕು ಅಧಿಕಾರಿ ಷಡಕ್ಷರಿ ಆದಿಮನಿ, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಜಹಿರುದ್ದೀನ್ ಗೌಸ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.












