11ನೇ ತರಗತಿ ದಲಿತ ವಿದ್ಯಾರ್ಥಿಗೆ ಮಾರಕ ಹಲ್ಲೆ, ಕೈಬೆರಳು ತುಂಡು: ನಮ್ಮವರು ಮೇಲೆ ಬರುವುದು ಅವರು ಸಹಿಸಲ್ಲ ಎಂದ ಕುಟುಂಬ

0
559

ಸನ್ಮಾರ್ಗ ವಾರ್ತೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಲಿಯಲು ಹೋಗುತ್ತಿದ್ದ 11ನೇ ತರಗತಿಯ ದಲಿತ ವಿದ್ಯಾರ್ಥಿ ದೇವೇಂದ್ರನ್ ಮೇಲೆ ಕ್ರೂರ ಹಲ್ಲೆ ನಡೆದಿದ್ದು, ಇದು ಜಾತಿ ಆಧಾರಿತ ದಾಳಿ ಎಂದು ಅವರ ಕುಟುಂಬ ಆರೋಪಿಸಿದೆ. ಪಳಯಂಕೊಟ್ಟೈ ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು ದೇವೇಂದ್ರನ್ ಪ್ರಯಾಣಿಸುತ್ತಿದ್ದ ಬಸ್ಸನ್ನು ಅಡ್ಡಗಟ್ಟಿ, ಅವರನ್ನು ಹೊರಗೆಳೆದು ಎಡಗೈ ಬೆರಳುಗಳನ್ನು ಕತ್ತರಿಸಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಬಂದ ಅವರ ತಂದೆ ತಂಗಾ ಗಣೇಶ್ ಮೇಲೂ ಹಲ್ಲೆ ನಡೆಸಲಾಗಿದ್ದು, ತಲೆಗೆ ತೀವ್ರ ಗಾಯಗಳಾಗಿವೆ.

ಗಂಭೀರ ಗಾಯಗೊಂಡಿದ್ದ ದೇವೇಂದ್ರನ್ ಅವರನ್ನು ತಕ್ಷಣ ಶ್ರೀವೈಕುಂಡಂ ಸರ್ಕಾರಿ ಆಸ್ಪತ್ರೆ ಮತ್ತು ನಂತರ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಬೆರಳುಗಳನ್ನು ಮತ್ತೆ ಜೋಡಿಸಲು ಪ್ರಯತ್ನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕುಟುಂಬದವರ ಪ್ರಕಾರ, ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯವೊಂದು ಈ ದಾಳಿಗೆ ಕಾರಣವಾಗಿರಬಹುದು. ದೇವೇಂದ್ರನ್ ಅವರು ಮೇಲ್ಜಾತಿಯ ಹಿಂದೂಗಳ ವಿರುದ್ಧದ ತಂಡದಲ್ಲಿ ಪ್ರಮುಖ ಆಟಗಾರರಾಗಿ ಆಡಿದ್ದು, ಈ ಸ್ಪರ್ಧೆಯಿಂದಾಗಿ ಆಕ್ರಮಣ ನಡೆದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹಲ್ಲೆ ಮಾಡಿದವರು ಮುಂದಿನ ಹಳ್ಳಿಯ ತೇವರ್ ಸಮುದಾಯದವರಾಗಿದ್ದಾರೆ ಎಂದು ಅವರ ತಂದೆ ಹೇಳಿದ್ದಾರೆ.

ನ್ಯಾಯಕ್ಕಾಗಿ ಆಗ್ರಹಿಸಿದ ದೇವೇಂದ್ರನ್ ಅವರ ಚಿಕ್ಕಪ್ಪ ಸುರೇಶ್, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. “ನಾವು ಪರಿಶಿಷ್ಟ ಜಾತಿಯವರು. ನಮ್ಮ ಸಮಾಜದವರು ಮೇಲಕ್ಕೆ ಬರುತ್ತಿರುವುದನ್ನು ಕೆಲವರು ಸಹಿಸಿಕೊಳ್ಳಲು ಇಚ್ಛಿಸುವುದಿಲ್ಲ. ದೇವೇಂದ್ರನ್ ಓದುವ ವಿಚಾರವೂ ಅವರಿಗೆ ಸ್ವೀಕಾರ್ಹವಾಗಿಲ್ಲ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಈ ಘಟನೆ ತಮಿಳುನಾಡಿನಲ್ಲಿ ಜಾತಿ ಆಧಾರಿತ ಹಿಂಸಾಚಾರದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.