ಆರೋಗ್ಯವಿದ್ದಾಗ ಮನೆಯವರತ್ತ ಕಣ್ಣೆತ್ತಿಯೂ ನೋಡದಿದ್ದ ಸುರೇಂದ್ರನ್ ಆಚಾರಿಯನ್ನು ಈಗ ಮನೆಯವರು ಕಣ್ಣೆತ್ತಿ ನೋಡಲೂ ಸಿದ್ಧರಿಲ್ಲ: ಒಂದು ಕರುಣಾಜನಕ ಸತ್ಯ ಘಟನೆ

0
2699

ದಮ್ಮಾಂ, ಜೂ.11: ಆರೋಗ್ಯವಿದ್ದು ದುಡಿದು ಸಂಪಾದಿಸುತ್ತಿದ್ದ ಸಮಯದಲ್ಲಿ ಕುಟುಂಬದತ್ತ ತಿರುಗಿ ನೋಡದೆ ಕೇವಲ ತಾನೊಬ್ಬನೇ ಸುಖವಾಗಿದ್ದ ಅನಿವಾಸಿ ಭಾರತೀಯ ಸುರೇಂದ್ರನ್ ಆಚಾರಿಯತ್ತ ಪತ್ನಿ ಮಕ್ಕಳು ಈಗ ಅನಾರೋಗ್ಯದಿಂದ ವಿವಶವಾಗಿರುವ ವೇಳೆ ಕಣ್ಣೆತ್ತಿ ನೋಡಲೂ ಇಷ್ಟಪಡುತ್ತಿಲ್ಲ. ಸಾಮಾಜಿಕ ಕಾರ್ಯಕರ್ತರ ರಾಜಿ ಪಂಚಾಯಿತಿಕೆಯಿಂದಾಗಿ ಕೇರಳದ ಈ ವ್ಯಕ್ತಿಯತ್ತ ಕುಟುಂಬ ಒಲ್ಲದ ಮನಸ್ಸಿನಿಂದ ತಮ್ಮ ಬಿಗುಪಟ್ಟು ಸಡಿಲಿಸಲು, ಸಿದ್ಧವಾಗಿದ್ದು ಇದು ಅವರ ಪಾಲಿಗೆ ಅದೃಷ್ಟವೂ ಆಗಿದೆ.

ದಮ್ಮಾಂನ ಸೈಹಾದಲ್ಲಿ ಆಚಾರಿ ಕೆಲಸ ಮತ್ತು ಜೊತೆಗೆ ಮಕ್ಕಳಿಗೆ ಸಂಗೀತ ಕಲಿಸುವ ಕೆಲಸ ಮಾಡಿದ ಪತ್ತನಂತಿಟ್ಟದ ಸುರೇಂದ್ರನ್ ಆಚಾರಿ (60) ಕುಟುಂಬದ ಕರುಣೆಗಾಗಿ ಕಾಯುತ್ತಿದ್ದಾರೆ. ಕೆಲವು ದಿವಸದ ಮೊದಲು ಸಾಮಾಜಿಕ ಕಾರ್ಯಕರ್ತರು ಇವರನ್ನು ದಮ್ಮಾಂನಿಂದ ಊರಿಗೆ ಕರೆತಂದಿದ್ದಾರೆ. ಈಗ ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲವೂ ಇದ್ದ ಕಾಲದಲ್ಲಿ ಕುಟುಂಬಕ್ಕೆ ಪರಿಗಣನೆ ನೀಡಲಿಲ್ಲ. ಇಂತಹ ವ್ಯಕ್ತಿಯನ್ನು ತಂದು ಏನು ಮಾಡುವುದು ಎಂದು ಅವರು ಹೇಳುತ್ತಿದ್ದಾರೆ. ಆದರೆ,ಈತ ಈಗ ರೋಗಿಯಾದ್ದರಿಂದ ಕ್ಷಮಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ವಿನಂತಿಸಿದ್ದಾರೆ. ಸುರೇಂದ್ರನ್‍ರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಊರಿಗೆ ಬಂದು ಹದಿನೆಂಟು ವರ್ಷಗಳಾಗಿತ್ತು. ಹದಿನೆಂಟು ವರ್ಷದ ಹಿಂದೆ ಸಾಮಾಜಿಕ ಕಾರ್ಯಕರ್ತರ ನಿರಂತರ ಒತ್ತಾಯದಿಂದಾಗಿ ಊರಿಗೆ ಹೋಗಿದ್ದರು. ಅವರು ಕುಟುಂಬಕ್ಕೆ ಸರಿಯಾದ ನೆರವನ್ನೂ ನೀಡುತ್ತಿರಲಿಲ್ಲ. ಇದರ ನಡುವೆ ಹಿರಿಯ ಮಗಳು ಊರವರ ನೆರವಿನಲ್ಲಿ ನರ್ಸಿಂಗ್ ಕಲಿತಿದ್ದಳು. ಮಗಳನ್ನು ದಮ್ಮಾಂಗೆ ಕರೆಯಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ್ದ ಸುರೇಂದ್ರನ್ ಆಚಾರಿ ಮಗಳ ಸಂಬಳವನ್ನು ಕೂಡ ಪಡೆದು ಖರ್ಚು ಮಾಡುತ್ತಿದ್ದರು. ನಂತರ ಮಗಳು ಅಲ್ಲಿಂದ ಊರಿಗೆ ಬಂದು ಈಗ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ದುಡಿದ ಹಣವೆಲ್ಲ ಎಲ್ಲಿ ಹೋಗಿದೆ ಎಂದು ಕೇಳಿದಾಗ ಸುರೇಂದ್ರನ್ ಆಚಾರಿ ಮೌನವಾಗುತ್ತಾರೆ. ಮೂರು ತಿಂಗಳ ಹಿಂದೆ ಕೆಲಸದ ಸ್ಥಳದಲ್ಲಿ ಬಿದ್ದು ತೊಡೆ ಎಲುಬು ಮುರಿದಿತ್ತು. ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ಮಾಡಿ ಪುನಃ ತನ್ನ ರೂಮ್‍ಗೆ ಮರಳಿದರು. ಆದರೆ ಆಚಾರಿಯ ಗಾಯ ಒಣಗದೆ ಪುನಃ ಆರೋಗ್ಯ ಚಿಂತಾಜನಕ ಸ್ಥಿತಿಗೆ ತಲುಪಿತ್ತು.

ಪುನಃ ಆಸ್ಪತ್ರೆಗೆ ಸೇರಿಸಿದರೂ ತೀವ್ರ ಮಧುಮೇಹ ರೋಗಿಯಾದ್ದರಿಂದ ಬಹಳ ಸಮಯ ರೋಗ ವಾಸಿಯಾಗಲು ಬೇಕು. ಆದ್ದರಿಂದ ಅವರನ್ನು ಊರಿಗೆ ಕರೆದು ಕೊಂಡು ಹೋಗಲು ಸಾಮಾಜಿಕ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದರು. ನಂತರ ಬಹ್ರೈನ್ ಮೂಲಕ ಕರೆದು ಕೊಂಡು ಹೋಗುವಾಗ ಬಹ್ರೈನ್‍ನಲ್ಲಿ ಮಧುಮೇಹ ಹೆಚ್ಚಾಗಿ ಪುನಃ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿವಸದ ಚಿಕಿತ್ಸೆಯನ್ನು ನೀಡಿ ಪುನಃ ಊರಿಗೆ ಕರೆದುಕೊಂಡು ಬರಲಾಗಿತ್ತು. ಇಂತಹ ಚಿಂತಾಜನಕ ಸ್ಥಿತಿಯಲ್ಲಿರುವ ಆಚಾರಿಯನ್ನು ಕುಟುಂಬ ಹತ್ತಿರ ಸೇರಿಸಿಕೊಳ್ಳಲು ಸಿದ್ಧವಿಲ್ಲ. ನಾವೇ ಬಾಡಿಗೆ ಮನೆಯಲ್ಲಿದ್ದು ಯಾರ್ಯಾರ ಸಹಾಯದಲ್ಲಿ ಬದುಕುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ಆಚಾರಿಯನ್ನು ಮನೆಯೊಳಗಿಟ್ಟು ಚಿಕಿತ್ಸೆ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಪತ್ನಿ ಮಕ್ಕಳು ಹೇಳುತ್ತಿದ್ದಾರೆ. ಆಚಾರಿಗೆ ಸಹಾಯ ಮಾಡದಿದ್ದರೂ ಆಸ್ಪತ್ರೆಗೆ ಬಂದು ಒಮ್ಮೆ ನೋಡಿ ಹೋಗಿ ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದರಿಂದ ಕೊನೆಗೂ ಇಷ್ಟು ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಎಲ್ ಲಸಮಯವೂ ಒಂದೇ ರೀತಿ ಇರುತ್ತದೆಂದು ಭಾವಿಸಿದವರಿಗೆ ಆಚಾರಿಯ ಇಂದಿನ ಸ್ಥಿತಿ ಪಾಠದಾಯಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಿದ್ದಾರೆ.