ಮಳೆ: ಅನುಗ್ರಹ, ಪರೀಕ್ಷೆ, ಶಿಕ್ಷೆ

0
7073

ಖದೀಜ ನುಸ್ರತ್ ಅಬು ಧಾಬಿ

ಮಳೆಯೆಂಬುದು ಸೃಷ್ಟಿಕರ್ತನ ಅತೀ ದೊಡ್ಡ ಅನುಗ್ರಹವೆಂಬುದರಲ್ಲಿ ಸಂಶಯವಿಲ್ಲ. ಮಾನವ ಕುಲದ ಸಮೃದ್ಧಿ ಮತ್ತು ಅಸ್ತಿತ್ವವು ಮಳೆಯ ಮೇಲೆ ಅವಲಂಭಿತವಾಗಿದೆ. ಒಂದು ಪ್ರದೇಶದಲ್ಲಿ ಜೀವನ ನಡೆಸಲು ಮಳೆಯು ಅತಿ ಪ್ರಮುಖವಾಗಿದೆ. ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರೂ ಕೃಷಿ ಜೀವನಾಂಶದ ಮೂಲಾಧಾರವಾಗಿದೆ. ಮಾನವನು ಭೂಮಿಯಲ್ಲಿ ಉತ್ಪಾದಿಸಿದಂತಹ ವಸ್ತುಗಳೇ ಆರೋಗ್ಯಕ್ಕೂ ಗುಣಕರವಾಗಿದೆ. ಯಾವುದೇ ದೇಶದ ಅಭಿವೃದ್ಧಿಯು ಮಳೆಯನ್ನೇ ಅವಲಂಭಿಸಿದೆ. ಮಳೆ, ಬೆಳೆಯಿಲ್ಲದೆ ಕ್ಷಾಮ, ಬರಗಾಲವನ್ನು ಅನುಭವಿಸಬೇಕಾಗಬಹುದು.

ಮಳೆಯು ಕೆಲವೊಮ್ಮೆ ಅನುಗ್ರಹ, ಪರೀಕ್ಷೆ ಅಥವಾ ಶಿಕ್ಷೆಯಾಗಿರಬಹುದು. ಬದ್ರ್ ಯುದ್ಧದ ಸಂದರ್ಭದಲ್ಲಿ ಮಳೆಯು ಸತ್ಯ ವಿಶ್ವಾಸಿಗಳಿಗೆ ಅನುಗ್ರಹವಾಗಿತ್ತು. ಅಹ್ ಝಾಬ್ ಯುದ್ದದ ವೇಳೆ ಬಿರುಗಾಳಿಯು ಸತ್ಯ ನಿಶೇಧಿಗಳ ಸೋಲಿಗೆ ಕಾರಣವಾಗಿತ್ತು. ಧಾರಾಕಾರ ಮಳೆ ಸುರಿದು ಕೃಷಿ ಉತ್ಪನ್ನಗಳ ನಾಶದಿಂದ ನಿಮ್ಮನ್ನು ಅವಶ್ಯವಾಗಿಯೂ ಪರೀಕ್ಷಿಸುವೆವು ಎಂದು ಅಲ್ಲಾಹನು ಪವಿತ್ರ ಕುರ್ ಆನ್ ನಲ್ಲಿ ಹೇಳಿರುವನು. ಹಿಂದಿನ ಜನಾಂಗಗಳನ್ನು ಚಂಡಮಾರುತ, ಸಿಡಿಲು, ಕಲ್ಲಿನ ಮಳೆ, ಭೂಕಂಪ ಹಾಗೂ ಪ್ರಳಯದಂತಹ ಪ್ರಕೃತಿ ವಿಕೋಪಗಳಿಂದ ಶಿಕ್ಷಿಸಿರುವೆನೆಂಬುದು ನಮಗೆಲ್ಲರಿಗೂ ತಿಳಿದಿರುವಂತಹ ಚರಿತ್ರೆಯಾಗಿದೆ.

ನಿರ್ಜೀವ ಭೂಮಿಯನ್ನು ಸಜೀವಗೊಳಿಸುವುದು ಮಳೆಯ ಮುಖ್ಯ ಉದ್ದೇಶವಾಗಿದೆ. ಪರಲೋಕದಂತೆಯೇ ಇಹಲೋಕದಲ್ಲಿಯೂ ಜನಾಂಗಗಳ ಏರುಪೇರುಗಳು ನೈತಿಕ ತಳಹದಿಯನ್ನು ಅವಲಂಭಿಸಿದೆ. ಅಲ್ಲಾಹನ ಆಜ್ಞಾಪಾಲನೆ ಮಾಡುವವರ ಮೇಲೆ ಇಹಲೋಕದಲ್ಲೂ ಅನುಗ್ರಹಗಳ ಮಳೆಗರೆಯಲಾಗುತ್ತದೆ. ಜನರು ಸತ್ಯವಿಶ್ವಾಸವಿರಿಸಿ ದೇವನನ್ನು ಭಯಪಡುತ್ತಾ ಜೀವನ ನಡೆಸಿದರು ಅವರಿಗೆ ಸಮೃದ್ಧಿಯ ದ್ವಾರಗಳು ತೆರೆಯಲ್ಪಡುವುದು. ನೀರಿನ ಆಧಿಕ್ಯವು ಅನುಗ್ರಹಗಳ ಆಧಿಕ್ಯವಾಗಿದೆ. ಏಕೆಂದರೆ ಜನವಾಸವು ನೀರನ್ನೇ ಅವಲಂಭಿಸಿದೆ. ನೀರಿಲ್ಲದಿದ್ದರೆ ಯಾವುದೇ ಊರು ಅಸ್ತಿತ್ವಕ್ಕೆ ಬರಲಾರದು. ಮಾನವನ ಮೂಲಭೂತ ಅಗತ್ಯಗಳೂ ಪೂರ್ತಿಯಾಗದು ಮತ್ತು ಮಾನವನ ಯಾವುದೇ ಕೈಗಾರಿಕೆಗಳು ಕೂಡಾ ನಡೆಯದು.

“ಜನರು ಸನ್ಮಾರ್ಗದಲ್ಲಿ ಸ್ಥಿರಚಿತ್ತರಾಗಿ ನಡೆಯುತ್ತಿದ್ದರೆ, ನಾವು ಅವರನ್ನು ಜಲಸಮೃದ್ಧರನ್ನಾಗಿ ಮಾಡಿ ಬಿಡುತ್ತಿದ್ದೆವು.” (ಅಲ್ ಜಿನ್ನ್ : 16)

ಪ್ರವಾದಿ ಮುಹಮ್ಮದ್(ಸ)ರೊಂದಿಗೆ ಕೆಲವು ಜನರು ಮಳೆಗಾಗಿ ಪ್ರಾರ್ಥಿಸಲು ಹೇಳಿದಾಗ ಅವರು ಜನರೊಂದಿಗೆ ಇಸ್ತಿಗ್ ಫಾರ್ (ಕ್ಷಮಾಯಾಚನೆ) ಮಾಡಲು ಉಪದೇಶಿಸಿರುವರು. ಅದೇ ರೀತಿ ಪವಿತ್ರ ಕುರ್ ಆನ್ ನಲ್ಲಿ ಹೂದ್ (ಅ) ಮತ್ತು ನೂಹ್ (ಅ) ತಮ್ಮ ಜನಾಂಗದವರೊಂದಿಗೆ ಕ್ಷಮಾಯಾಚನೆ ಮಾಡಿರಿ. ಅಲ್ಲಾಹನು ಆಕಾಶದಿಂದ ಮಳೆ ಸುರಿಸುವನು ಎಂದು ಹೇಳುವ ಸೂಕ್ತಗಳನ್ನು ಕಾಣಬಹುದಾಗಿದೆ. ನೂಹ್(ಅ) ತಮ್ಮ ಜನಾಂಗದೊಡನೆ ಈ ರೀತಿ ಹೇಳಿದರು:

“ನಿಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ-
ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳವಾಗಿ ಮಳೆ ಸುರಿಸುವನು,

ನಿಮಗೆ ಸೊತ್ತು ಸಂತಾನಗಳನ್ನು ದಯಪಾಲಿಸುವನು, ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು.” (ಸೂರ ನೂಹ್ :10 – 12)

ಒಮ್ಮೆ ಬರಗಾಲದ ಸಂದರ್ಭದಲ್ಲಿ ಉಮರ್(ರ) ಮಳೆಗಾಗಿ ಪ್ರಾರ್ಥಿಸಲು ಹೊರಟು ಕೇವಲ ಕ್ಷಮೆ ಯಾಚನೆ ಮಾಡಿದರು. ಜನರು ಕೇಳಿದರು – ಅಮೀರುಲ್ ಮೂಮಿನೀನ್! ತಾವು ಮಳೆಗಾಗಿ ಪ್ರಾರ್ಥಿಸಲೇ ಇಲ್ಲ. ಉಮರ್(ರ) ಹೇಳಿದರು – ನಾನು ಮಳೆ ಬರುವಂತಹ ಆಕಾಶದ ದ್ವಾರಗಳನ್ನೇ ತಟ್ಟಿದ್ದೇನೆ. ಅನಂತರ ನೂಹ್ ಅಧ್ಯಾಯದ ಈ ಸೂಕ್ತಗಳನ್ನು ಓದಿ ಕೇಳಿಸಿದರು. (ಇಬ್ನು ಜರೇರ್, ಇಬ್ನು ಕಸೀರ್)
ಅದೇ ರೀತಿ ಒಮ್ಮೆ ಹಸನ್ ಬಸರಿಯವರ ಸಭೆಯಲ್ಲಿ ಒಬ್ಬರು ಕ್ಷಾಮದ ಬಗ್ಗೆ ತೋಡಿಕೊಂಡರು. ಅದಕ್ಕೆ ಅವರು- ನೀವು ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಿರಿ ಎಂದುತ್ತರಿಸಿದರು. ಇನ್ನೊಬ್ಬರು ದಾರಿದ್ರ್ಯದ ಬಗ್ಗೆ, ಮತ್ತೊಬ್ಬರು ಮಕ್ಕಳಿಲ್ಲದ ಬಗ್ಗೆ ಮಗದೊಬ್ಬರು ತನ್ನ ಹೊಲದಲ್ಲಿ ಬೆಳೆ ಕಡಿಮೆಯಾಗಿರುವುದರ ಬಗ್ಗೆ ಹೇಳಿಕೊಂಡರು. ಅವರು ಪ್ರತಿಯೊಬ್ಬರಿಗೂ ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಿರಿ ಎಂದೇ ಉತ್ತರಿಸಿದರು. ಜನರು ಕೇಳಿದರು. ತಾವು ಜನರ ಬೇರೆ ಬೇರೆ ದೂರುಗಳಿಗೆ ಒಂದೇ ಉತ್ತರ ನೀಡುತ್ತೀರಲ್ಲ. ಯಾಕೆ? ಆಗ ಅದಕ್ಕೆ ಉತ್ತರವಾಗಿ ಅವರು ನೂಹ್ ಅಧ್ಯಾಯದ ಇದೇ ಸೂಕ್ತಗಳನ್ನು ಓದಿ ಕೇಳಿಸಿದರು.

ಶ್ರೀಮಂತರು ನಮ್ಮಲ್ಲಿ ಬೇಕಾದಷ್ಟು ಸಂಪತ್ತಿದೆ, ನಮ್ಮ ಮನೆಯಲ್ಲಿ ನೀರಿನ ಭಾವವಿಲ್ಲ, ತಮಗೆ ಮಳೆಯ ಅವಶ್ಯಕತೆಯಿಲ್ಲವೆಂದು ಭಾವಿಸಬೇಡಿರಿ. ಇನ್ನೊಬ್ಬರು ತಪ್ಪು ಮಾಡುತ್ತಿರುವುದರಿಂದ ಮಳೆಯಾಗುತ್ತಿಲ್ಲವೆಂದು ಭಾವಿಸಬೇಡಿರಿ. ತಪ್ಪು ಮಾಡದ ಮನುಷ್ಯರಿಲ್ಲ. ಪ್ರತಿಯೊಬ್ಬನೂ ತನ್ನ ತಪ್ಪನ್ನು ಮನಗಂಡು ಆಜ್ಞೋಲ್ಲಂಘನೆಯನ್ನು ತೊರೆದು ದೇವದಾಸ್ಯ-ಆರಾಧನೆಯೆಡೆಗೆ ಮರಳುತ್ತಾ ಹೃದಯಗಳನ್ನು ಮೃದುಗೊಳಿಸಿ, ಕೃತಜ್ಞರಾಗುತ್ತಾ, ಜನರನ್ನು ಗೌರವಿಸುತ್ತಾ, ಜನರ ಹಕ್ಕು ಬಾಧ್ಯತೆಗಳನ್ನು ಪೂರೈಸುತ್ತಾ, ಜನರ ಮಧ್ಯೆ ನ್ಯಾಯ ಪಾಲಿಸುತ್ತಾ, ವಿನಮ್ರರಾಗುತ್ತಾ, ನಮ್ಮೆಲ್ಲಾ ಪಾಪಗಳಿಗೆ ಕ್ಷಮಾಯಾಚನೆ ಮಾಡುತ್ತಾ, ಪಶ್ಚಾತ್ತಾಪಪಡುತ್ತಾ, ಅಲ್ಲಾಹನೊಂದಿಗೆ ಮಳೆಗಾಗಿ ಪ್ರಾರ್ಥಿಸಬೇಕು. ಪ್ರಳಯ, ಬರಗಾಲ, ಕ್ಷಾಮದಿಂದ ನಮ್ಮನ್ನೂ, ನಮ್ಮ ಸಂತತಿಗಳನ್ನು ಪರೀಕ್ಷಿಸಬೇಡ ಎಂದು ಯಾವಾಗಲು ಪ್ರಾರ್ಥಿಸಬೇಕು.

“ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿದನು ಮತ್ತು ನಾವು ಅದರ ಮೂಲಕ ಮೃತ ಭೂಮಿಯನ್ನು ಜೀವಂತಗೊಳಿಸಿದೆವು. ಇದೇ ರೀತಿಯಲ್ಲಿ ಒಂದು ದಿನ ನೀವು ಭೂಮಿಯಿಂದ ಹೊರತರಲ್ಪಡುವಿರಿ.” (ಅಝ್ಝುಖ್‍ರುಫ್ :11)

ನಿರ್ಜೀವ ಭೂಮಿಯನ್ನು ಸಜೀವಗೊಳಿಸುವುದು ಮಳೆಯ ಮುಖ್ಯ ಉದ್ದೇಶವಾಗಿದೆ. ನಿರ್ದಿಷ್ಟ ಪ್ರಮಾಣದಲ್ಲಿ ಮಳೆ ಸುರಿಯುವುದು ಮಳೆಯ ಒಂದು ಗುಣವೈಶಿಷ್ಟ್ಯತೆಯಾಗಿದೆ. ಭೂಮಿಯ ಮೇಲೆ ಬೀಳುವ ಮಳೆ ಪ್ರಮಾಣವು ಒಂದೇ ಆಗಿರುತ್ತದೆ. ಭೂಮಿಯ ಫಲವತ್ತತೆಗೆ ಯೋಗ್ಯವಾದ ರೀತಿಯಲ್ಲಿ ಮಳೆ ಸುರಿಸಲಾಗುತ್ತದೆ. ಇದು ಏಕ ದೇವನ ಮಹಿಮೆ ಮತ್ತು ಯುಕ್ತಿಯಿಂದಾಗಿರುತ್ತದೆ. ಮಳೆಯು ಬೀಳುವ ಎತ್ತರ ಹಾಗೂ ವೇಗದಲ್ಲಿ ಇತರ ಯಾವುದೇ ವಸ್ತು ಆಕಾಶದಿಂದ ಬೀಳುತ್ತಿದ್ದರೆ ಅದು ಭೂಮಿಯ ಮೇಲೆ ಬೆಳೆ, ಜನವಸತಿಯನ್ನು ನಾಶ ಮಾಡುತ್ತಿತ್ತು.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಕಾರ ದುಬಾರಿ ಖರ್ಚು ಮಾಡಿ ಮೋಡ ಬಿತ್ತನೆ (cloud seeding )ಯೆಂಬ ಹೊಸ ಆವಿಷ್ಕಾರದಿಂದ ಉಂಟಾಗುವ ಮಳೆಯಿಂದ ಪ್ರಕೃತಿ ವಿಕೋಪಗಳು ನಡೆಯುವ ಸಾದ್ಯತೆಗಳಿರುತ್ತದೆ. ಆದರೆ ನಮಗೆ ದೇವನು ಯಾವುದೇ ಖರ್ಚು, ಪರಿಶ್ರಮವಿಲ್ಲದೆ ಸುರಿಸುವಂತಹ ಮಳೆಯು ಎಷ್ಟೊಂದು ದೊಡ್ಡ ಅನುಗ್ರಹವೆಂಬುದನ್ನು ಮನವರಿಕೆಮಾಡುತ್ತದೆ.

ಮಳೆ ಬರುವ ಸಮಯವು ಅಲ್ಲಾಹನು ತನ್ನ ಸೃಷ್ಟಿಯೊಂದಿಗೆ ಕರುಣೆ ತೋರುವ ಮತ್ತು ಅನುಗ್ರಹ ಸುರಿಯುವ ಸಮಯವಾಗಿರುತ್ತದೆ. ಅದು ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯವಾಗಿರುತ್ತದೆ.

ಮಳೆಯ ಆಧಿಕ್ಯದಿಂದ ತೊಂದರೆಯಾಗುವ ಸಂಭವವಿದ್ದಾಗ ಈ ರೀತಿ ಪ್ರಾರ್ಥಿಸಿರಿ:

“ಓ ಅಲ್ಲಾಹ್! ನಮ್ಮ ಪರಿಸರಗಳಲ್ಲಿ ಸುರಿಯಲಿ, ನಮ್ಮ ಮೇಲೆ ಸುರಿಯದಿರಲಿ. ಓ ಅಲ್ಲಾಹ್! ಪರ್ವತಗಳ ಮೇಲೆ, ಬೆಟ್ಟಗಳ ಮೇಲೆ, ನದಿಗಳ ಮೇಲೆ, ಗದ್ದೆಗಳ ಮೇಲೆ ಹಾಗೂ ವೃಕ್ಷಗಳು ಮೊಳೆಯುವ ಸ್ಥಳಗಳ ಮೇಲೆ ವರ್ಷಿಸಲಿ!.”

ಇಂದು ಭಾರತ ದೇಶದ ಹೆಚ್ಚಿನ ಭಾಗಗಳಲ್ಲಿ ಜಲಕ್ಷಾಮದಿಂದಾಗಿ ಜನರು ಕುಡಿಯುವ ನೀರಿಗಾಗಿ ತತ್ತರಿಸುತ್ತಿದ್ದಾರೆ. ಮಳೆಗಾಗಿ ಪ್ರಾರ್ಥಿಸಲು ಜನರು ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಮರ ಹಾಗು ಕಾಡುಗಳನ್ನು ಕಡಿದು , ಕೆರೆ, ನದಿ ಹಾಗು ಕಣಿವೆಗಳನ್ನು ಮುಚ್ಚಿ ಹಾಕಿ ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿರುವುದೇ ಈ ಸಮಸ್ಯಗಳೀಗೆ ಮೂಲ ಕಾರಣ ಎಂದು ತಜ್ಞರು ಹೇಳುತ್ತಾರೆ. ನಮ್ಮ ನಾಡಿಗೆ ಮಳೆಯ ಅಗತ್ಯ ಎಷ್ಟು ಇದೆಯೆಂದರೆ ಕಳೆದ ತಿಂಗಳುಗಳಲ್ಲಿ ಕರಾವಳಿಯಲ್ಲಿ ಜನರು ಬಿಸಿಲಿನ ದಗೆಯಲ್ಲಿ ಬೆಂದು ಅದರ ಸರಿಯಾದ ರುಚಿ ಅನುಭವಿಸಿದ್ದಾರೆ. ಪ್ರಕೃತಿಯನ್ನು ಅಲ್ಲಾಹನ ಅನುಗ್ರಹ ಮತ್ತು ವಿಶ್ವಸ್ಥ ಸೊತ್ತು ಎಂದು ಭಾವಿಸಿ ಸಮತೋಲನದಿಂದ ಬಳಸಿದರೆ ಮಾತ್ರ ಭವಿಷ್ಯದಲ್ಲಿ ನಮ್ಮ ಪೀಳಿಗೆಯು ಶಾಂತಿಯುತವಾಗಿ ಬದುಕಲು ಸಾಧ್ಯ ಎಂಬ ಸತ್ಯ ನಾವೆಲ್ಲರು ಅರಿತಿರಬೇಕು.