ಸ್ವಾಲಿಹಾ ಸಾದಿ
ಡಿಸೆಂಬರ್ 18 ನ್ನು ಅಂತರ್ರಾಷ್ಟ್ರೀಯ ಅರಬಿ ಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಸರಿಸುಮಾರು 422 ಮಿಲಿಯನ್ ಜನರು ಮಾತನಾಡುವ ಭಾಷೆ, ಸುಮಾರು 1.5 ಬಿಲಿಯನ್ ಮುಸ್ಲಿಮರು ಉಪಯೋಗಿಸುವ ಸುಂದರ ಭಾಷೆ, 28 ದೇಶಗಳ ಅಧಿಕೃತ ಭಾಷೆ, ದಿನದ ಐದು ಹೊತ್ತಿನ ನಮಾಜಿನಲ್ಲಿ ಮುಸ್ಲಿಮರು ಕೆಲ ನಿಮಿಷಗಳ ಕಾಲ ತನ್ನ ಜಗದೊಡೆಯನೊಂದಿಗೆ ಮಾತನಾಡುವ, ಅವನೊಂದಿಗೆ ಪ್ರಾರ್ಥಿಸುವ ಭಾಷೆ! 1400 ವರ್ಷಗಳಿಗಿಂತ ಮುನ್ನ ಅವತೀರ್ಣವಾದ ಪವಿತ್ರ ಕುರಾನಿನ ಭಾಷೆ. ಜಗತ್ತಿನಲ್ಲಿ ಅತಿ ಹೆಚ್ಚು ಉಪಯೋಗಿಸುವ ಪ್ರಮುಖ ಆರು ಭಾಷೆಗಳಲ್ಲಿ ಅರಬಿ ಭಾಷೆಯು ಒಂದು .2010ರಲ್ಲಿ ಯುನೆಸ್ಕೊ ಡಿಸೆಂಬರ್ 18 ನ್ನು ಅಂತರಾಷ್ಟ್ರೀಯ ಅರಬಿ ಭಾಷಾ ದಿನವನ್ನಾಗಿ ಘೋಷಿಸಿತು.
ಅರಬಿ ಭಾಷೆ ಕೇವಲ ಮುಸ್ಲಿಮರು ಕಲಿಯಬೇಕಾದ ಭಾಷೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಹೆಚ್ಚಾಗಿ ಭಾರತೀಯರಲ್ಲಿ, ಅದರಲ್ಲೂ ಕರ್ನಾಟಕದ ಜನರಂತೂ ಅರಬಿ ಭಾಷೆಯನ್ನು ಮುಸ್ಲಿಮರು ಮಾತ್ರ ಕಲಿಯಬೇಕಾದ ಭಾಷೆ ಎಂದೇ ನಂಬಿದ್ದಾರೆ. ಸಣ್ಣ ಮಕ್ಕಳಿರುವಾಗ ನಾವು ಕೂಡ ಅರಬಿ ಭಾಷೆಯಲ್ಲಿ ಬರೆದ ಯಾವುದೇ ಕಾಗದ ಸಿಕ್ಕರೂ ಕೂಡ ಅದು ಕುರಾನಿನ ಸೂಕ್ತಗಳೇನೋ ಎಂದು ಭಾವಿಸುತ್ತಿದ್ದೆವು. ಕೇರಳದ ಶಾಲಾ ಪಠ್ಯಪುಸ್ತಕ ಕ್ರಮದಲ್ಲಿ ಅರಬಿ ಭಾಷಾ ಕಲಿಕೆಯು ಇದೆ. ಅರಬಿ ಭಾಷೆಯ ಪ್ರಾಮುಖ್ಯತೆಯನ್ನು ಅರಿತು, ಆ ಭಾಷೆಯಲ್ಲೇ ಪದವಿಯನ್ನು, ಸ್ನಾತಕೋತ್ತರ ಪದವಿಯನ್ನು ಮಾಡಿದ ಅಮುಸ್ಲಿಂ ಅರಬಿ ಭಾಷಾ ಅಧ್ಯಾಪಕರನ್ನು ನಮಗೆ ಧಾರಾಳವಾಗಿ ಕಾಣಬಹುದು.
ಕಾಸರಗೋಡಿನ ಆಲಿಯ ಅರೇಬಿಕ್ ಕಾಲೇಜಿನಲ್ಲಿ ಕಲಿಯುತ್ತಿದ್ದಂತಹ ಸಮಯ, ನಮಗೆ ಅರೇಬಿಕ್ ಕಲಿಸುತ್ತಿದ್ದುದು ಅರೇಬಿಕ್ ನಲ್ಲಿ ಪಾಂಡಿತ್ಯವನ್ನು ಹೊಂದಿದಂತಹ ಅಧ್ಯಾಪಕರುಗಳಾಗಿದ್ದರು.
ಕುರಾನ್ ಓದಲೇ ಬಾರದ, ಅರಬಿ ಅಕ್ಷರಗಳನ್ನು ಬರೆಯಲು ತಿಳಿಯದ ಮೊದಲ ವರ್ಷದ ಕೆಲವು ವಿದ್ಯಾರ್ಥಿನಿಯರಿಗೆ ಅರಬಿ ಬರೆಯಲು ಕೆ ಜಿ ಮಕ್ಕಳಿಗೆ ಕಲಿಸುವಂತೆ ಕಲಿಸುತ್ತಿದ್ದ ಮರ್ಹೂಮ್ ಯು. ಕೆ. ಅಬ್ದುಲ್ಲ ಮೌಲವಿ ಅವರು ಕಲಿಸುತ್ತಿದ್ದ ಶೈಲಿ ನಿಜಕ್ಕೂ ಮರೆಯಲಾಗದು. ವಿವಿಧ ಅರಬ್ ದೇಶಗಳಲ್ಲಿನ ಅಪಾರ ಸ್ನೇಹಿತ ಬಳಗವನ್ನು ಪೆನ್ ಫ್ರೆಂಡ್ ಮೂಲಕ ಹೊಂದಿದ್ದ ಅವರು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚುತ್ತಿದ್ದರು. ಅಲ್ಲಾಹನು ಅವರ ಕಬರನ್ನು ವಿಶಾಲಗೊಳಿಸಲಿ ಆಮೀನ್. ನಾವು ಕಲಿಯುತ್ತಿದ್ದಂತಹ ಸಮಯ ವಿದ್ಯಾರ್ಥಿನಿಯರಿಗೆ ಮೂರು ವರ್ಷಗಳ ಅಧ್ಯಯನ ಕಾಲವಿತ್ತು .ಮೂರನೇ ವರ್ಷ ತಲುಪುವಾಗ, ಇಸ್ಲಾಮೀ ಕರ್ಮಶಾಸ್ತ್ರ, ಅರಬಿ ಸಾಹಿತ್ಯ, ಅರಬಿ ವ್ಯಾಕರಣ, ಪವಿತ್ರ ಕುರಾನಿನ ವಿವರಣೆಯನ್ನು ಅರಬಿಯಲ್ಲಿ ಕಲಿಯಬೇಕಾಗಿತ್ತು. ಇಸ್ಲಾಮೀ ಕರ್ಮಶಾಸ್ತ್ರವನ್ನು ಕಲಿಸುತ್ತಿದ್ದ ಹೈದರ್ ಮೌಲವಿಯವರು ಭಾರವಾದ ಅರಬಿ ಗ್ರಂಥ ಒಂದನ್ನು ತಂದು ಪರಿಶೀಲಿಸುತ್ತಿದ್ದ ಒಂದು ದಿನ, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಆ ಗ್ರಂಥದ ಕರ್ತೃ ಮುಸ್ಲಿಂ ಅಲ್ಲ ಎಂದಾಗ ನಾವು ಅಚ್ಚರಿಪಟ್ಟಿದ್ದೆವು. ಅರಬಿ ಸಾರ್ವತ್ರಿಕ ಭಾಷೆ ಎಂಬುದನ್ನು ಅವರು ಮನದಟ್ಟು ಮಾಡಿದ್ದರು. ಹೌದು! ಅರಬಿ ನಿಘಂಟುಗಳಲ್ಲಿ ಪ್ರಖ್ಯಾತವಾದ “ ಅಲ್ ಮುನ್ ಜಿದ್ “ ಎಂಬ ಅರಬಿ ನಿಘಂಟನ್ನು ರಚಿಸಿದ್ದು ಇಬ್ಬರು ಕ್ಯಾಥೋಲಿಕ್ ಪುರೋಹಿತರು ಎಂಬುದು ಇಲ್ಲಿ ಗಮನಾರ್ಹ.
ಅರಬಿ ಸಾಹಿತ್ಯವನ್ನು, ಭಾರತದ ಪಂಚತಂತ್ರ ಕಥೆಗಳನ್ನು ಹೋಲುವ, ಪರ್ಷಿಯನ್ನರು ಮತ್ತು ಅರಬರು ರೆಚಿಸಿದ ‘”ಕಲೀಲ ಮತ್ತು ದಿಮ್ನ” ಎಂಬ ಎರಡು ನರಿಗಳಿಂದ ಹೆಣೆದು ಹೋಗುವ ಕಥಾ ಸಂಗ್ರಹವನ್ನು, ಹತ್ತು ವರ್ಷ ಕಳೆದರೂ ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಪಾಠ ಮಾಡಿದ ಅಧ್ಯಾಪಕರಾದ ಖಲೀಲ್ ರಹ್ಮಾನ್ ನದ್ವಿಯವರು, ಕಠಿಣ ಅರಬಿ ವ್ಯಾಕರಣವನ್ನು ಸುಲಭ ರೂಪದಲ್ಲಿ ಕಲಿಸುತ್ತಿದ್ದ ಎಂ.ಪಿ ಉಸ್ತಾದರು, ಮೂರನೇ ಮಹಡಿಯಲ್ಲಿದ್ದ ನಮ್ಮ ತರಗತಿಗೆ ತಮ್ಮ ವಯಸ್ಸನ್ನು, ಕಾಲು ನೋವನ್ನು ವಾರ್ಧಕ್ಯದ ಸಾಮಾನ್ಯ ಅಸೌಖ್ಯಗಳನ್ನೆಲ್ಲಾ ಬದಿಗಿಟ್ಟು ನಮಗೆ ಕಲಿಸಲು ಬರುತ್ತಿದ್ದ ಅನೇಕ ಉಸ್ತಾದರನ್ನು, ಇವರೆಲ್ಲ ನೀಡಿದ ಉತ್ತಮ ತರಬೇತಿಯನ್ನು ನೀಡಿದ ಖಂಡಿತ ಮರೆಯಲು ಸಾಧ್ಯವಿಲ್ಲ. ಇವರೆಲ್ಲರ ಅರಬಿ ಭಾಷಾ ಪಾಂಡಿತ್ಯವು ಅಪಾರವಾದುದು. ಅಲ್ಲಾಹನು ಇವರೆಲ್ಲರಿಗೂ ಆರೋಗ್ಯವನ್ನು ದೀರ್ಘಾಯುಷ್ಯವನ್ನು ನೀಡಲಿ ಆಮೀನ್.
ತಮ್ಮ ಆಡುಭಾಷೆಯಾಗಿಯೂ ವ್ಯಾವಹಾರಿಕ ಭಾಷೆಯಾಗಿಯೂ ಅರಬಿ ಭಾಷೆಯನ್ನು ಬಳಸುವ ಅರಬ್ ಜಗತ್ತು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ಮುಂಪಂಕ್ತಿಯಲ್ಲಿದೆ. ಖಗೋಳಶಾಸ್ತ್ರದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ, ಇತಿಹಾಸ ಚರಿತ್ರೆಗಳ ಸಂಶೋಧನೆಗಳಿಗಾಗಿ ಉಪಯೋಗಿಸುವ ಬಹುತೇಕ ಗ್ರಂಥಗಳು, ಕೃತಿಗಳು ಅರಬಿ ಭಾಷೆಯದ್ದಾ ಗಿವೆ. ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಪಾಂಡಿತ್ಯವನ್ನು ಹೊಂದಿದ ತತ್ವಜ್ಞಾನಿಗಳನ್ನು, ಇತಿಹಾಸ ತಜ್ಞರನ್ನು, ಇಸ್ಲಾಮೀ ಕರ್ಮಶಾಸ್ತ್ರ ಪಂಡಿತರನ್ನು, ಖಗೋಳಶಾಸ್ತ್ರಜ್ಞರನ್ನು ಅರಬ್ ಭಾಷಾ ಜಗತ್ತು ಹೊಂದಿದೆ. ಇಬ್ನು ಸೀನಾ, ಇಬ್ನುರುಶ್ಡ, ಅಲ್ ಗಸಾಲಿ, ಇಬ್ನು ಕಲ್ದೂಸ್ ರಂತಹ ಮಹಾನ್ ವ್ಯಕ್ತಿಗಳನ್ನು ಪಡೆದ ಹೆಮ್ಮೆಯೂ ಅರಬ್ ಭಾಷೆಗೆ ಇದೆ. ಆದರೆ ಅನೇಕ ಮಹಾನ್ ವ್ಯಕ್ತಿತ್ವಗಳನ್ನು,ಅವರ ಗ್ರಂಥಗಳನ್ನು ತಿರುಚಿ ತಮ್ಮದೆಂದು, ನಮ್ಮ ಸಂಶೋಧನೆಗಳು ಎಂದು ಹೇಳಿಕೊಳ್ಳುವ ಐರೋಪ್ಯ ರಾಷ್ಟ್ರಗಳಲ್ಲಿ ಖಂಡಿತವಾಗಿಯೂ ಬೇಸರವಿದೆ.
ಆದರೆ ಇಂದು ಅತಿ ಹೆಚ್ಚು ಚರ್ಚೆಗೊಳಗಾಗುವ ಇಸ್ಲಾಂ ಧರ್ಮದ ಬಗ್ಗೆ, ಅಂತ್ಯ ಪ್ರವಾದಿ ಮುಹಮ್ಮದ್ (ಸ) ರ ಬಗ್ಗೆ, ಪವಿತ್ರ ಕುರಾನಿನಲ್ಲಿ ಏನನ್ನು ಹೇಳಲಾಗಿದೆ ಎಂಬುದರ ಬಗೆಗಿನ ಆಳವಾದ ಅಧ್ಯಯನವನ್ನು, ಸಂಶೋಧನೆಯನ್ನು ನಡೆಸುತ್ತಿರುವ ಯುವ ಜನಾಂಗವು ಅಧಿಕವಾಗಿ ಇಂದು ಕಂಡುಬರುತ್ತಿರುವುದು ಯುರೋಪ್ ರಾಷ್ಟ್ರಗಳಲ್ಲಿ ಎಂದು ಹೇಳಬಹುದು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಭಾಷೆಗಳಲ್ಲಿ ಅರಬಿ ಭಾಷೆ ಇಂದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಅರಬಿ ಭಾಷೆಯನ್ನು ಪ್ರತಿಯೊಬ್ಬ ಮುಸ್ಲಿಮನು ನಿರ್ಬಂಧವಾಗಿಯೂ ಕಲಿಯಬೇಕು. ಅಲ್ಲಾಹನು ಮನುಷ್ಯನಿಗೆ ತನ್ನ ಜೀವನದುದ್ದಕ್ಕೂ ಅನುಸರಿಸಲು ಮಾರ್ಗದರ್ಶಿಯಾಗಿ ನೀಡಿದ ಪವಿತ್ರ ಗ್ರಂಥವನ್ನು ಪಠಿಸಲು ಅರಬಿ ಖಂಡಿತವಾಗಿಯೂ ತಿಳಿದಿರಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಓದಲ್ಪಡುತ್ತಿರುವ ಪವಿತ್ರ ಗ್ರಂಥ ಕುರ್ ಆನ್ ಆಗಿದೆ. ಉಮರ್ (ರ)ಹೇಳಿದರು: ನೀವು ಅರಬಿ ಭಾಷೆಯನ್ನು ಕಲಿಯಿರಿ. ಅದು ಧರ್ಮದ ಭಾಗವಾಗಿದೆ.
ಪ್ರವಾದಿ ಮುಹಮ್ಮದ್ (ಸ) ತನ್ನ ಬಾಲ್ಯದಲ್ಲಿ ಬಹಳ ಸುಂದರವಾದ ಅರಬಿ ಭಾಷೆಯನ್ನು ಮಾತನಾಡುತ್ತಿದ್ದರು. ತನಗೆ ಸ್ತನಪಾನವನ್ನು ನೀಡಿದ ಮಾತೆ ಹಲೀಮಾರ ಬಳಿಯಲ್ಲಿ ಸ್ತನಪಾನದ ಕಾಲ ಮುಗಿದ ಬಳಿಕವೂ ಕೆಲ ಸಮಯಗಳ ಕಾಲ ಪ್ರವಾದಿ ಮಹಮ್ಮದ್ ವಾಸಿಸಿದರು. ಹಲೀಮಾ ಸಅದ್ ಗೋತ್ರದವರು ಆಗಿದ್ದರು. ಸಅದ್ ಗೋತ್ರದವರು ಅರಬಿ ಭಾಷೆಯನ್ನು ಬಹಳ ಸುಂದರ ಶೈಲಿಯಲ್ಲಿ ಮಾತನಾಡುತ್ತಿದ್ದರು.
ಪ್ರವಾದಿ ಮುಹಮ್ಮದ್ (ಸ) ರಿಗೆ ಸಿಕ್ಕ ನಿದರ್ಶನ ಕುರ್ ಆನ್ ಆಗಿತ್ತು. ಕುರಾನಿನ ಶೈಲಿಯು ಸರಳ ಸುಂದರ ಮತ್ತು ಅದ್ಭುತವಾದುದು. ಕುರ್ ಆನ್ ಅವತೀರ್ಣವಾದ ನಂತರದ ಕಾಲದಲ್ಲಿ, ಅರಬ್ ಸಾಹಿತ್ಯ ಲೋಕದಲ್ಲಿ ಗದ್ಯಸಾಹಿತ್ಯ ಆರಂಭಗೊಂಡಿತು. ಅರಬರು ಪರಸ್ಪರ ಭೇಟಿಯಾಗುವ ಶೈಲಿ ಬಹಳ ಸುಂದರ. ಪರಸ್ಪರ ಕೈಹಿಡಿದು ಸಲಾಂ ಹೇಳುತ್ತಾ, ಮೂಗನ್ನು ಪರಸ್ಪರ ತಾಗಿಸುತ್ತಾ, ತಬ್ಬಿಕೊಳ್ಳುತ್ತ ಪರಸ್ಪರ ಕುಶಲವನ್ನು ಕೆಲ ನಿಮಿಷಗಳ ಕಾಲ ವಿಚಾರಿಸಿ ನಂತರ ವಿಷಯಕ್ಕೆ ಬರುವ ಅವರ ಭೇಟಿಯ ರೀತಿ ಅನುಪಮವಾದುದು.
ಪ್ರಾಚೀನ ಕಾಲದಿಂದಲೂ ಬಂದ ಸುಂದರ ಸಂಪ್ರದಾಯವನ್ನು ಇಂದಿಗೂ ಬಿಡದ, ಮಾತುಮಾತಿಗೂ ಅಲ್ಲಾಹನನ್ನು ಸ್ಮರಿಸುತ್ತಾ , ಸ್ತುತಿಸುತ್ತಾ, ಅಲ್ಲಾಹನು ದೊಡ್ಡವನು ಎಂದು ಹೇಳುತ್ತಾ ಮಾತನಾಡುವ ವ್ಯಕ್ತಿಯ ಜೊತೆ, ಅದು ಯಾರೇ ಆಗಿರಲಿ, ಮಾತಿನೆಡೆಯಲ್ಲಿ ಅಲ್ಲಾಹನು ನಿಮಗೆ ಶಾಂತಿ ಸಮಾಧಾನ ನೀಡಲಿ, ನಿಮ್ಮ ಆಯುಷ್ಯವನ್ನು ವೃದ್ಧಿಸಲಿ, ನಿಮಗೆ ಆರೋಗ್ಯ ನೀಡಲಿ, ನಿಮ್ಮನ್ನು ಅನುಗ್ರಹಿಸಲಿ ಎನ್ನುತ್ತಾ ಮಾತನಾಡುವುದು ಅರಬಿ ಭಾಷೆಯ ಒಂದು ಶೈಲಿ ಎಂದು ಹೇಳಬಹುದು. ನಾವು ಇಂತಹ ಮಾತುಗಳನ್ನು ಒಬ್ಬ ರೋಗಿಯನ್ನು ಕಾಣುವಾಗ ಹೇಳುತ್ತೇವೆ ಅಷ್ಟೇ.
ಮನುಷ್ಯನ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಕುರಾನಿನಲ್ಲಿ, ಪ್ರವಾದಿ ಚರ್ಯೆಯಲ್ಲಿದೆ. ಕುರಾನನ್ನು ಬರೆ ಓದದೇ, ಅದರ ಅರ್ಥವನ್ನು ಕಲಿತು ಓದಬೇಕು. ಕುರಾನಿನಲ್ಲಿರುವ ಪ್ರಾರ್ಥನೆಯನ್ನು ಅರ್ಥೈಸಿಕೊಂಡು ಅಲ್ಲಾಹನ ಜೊತೆ ಪ್ರಾರ್ಥಿಸಬೇಕು. ಆದುದರಿಂದ ಅರಬಿ ಭಾಷೆಯನ್ನು ಇನ್ನಷ್ಟು ಕಲಿಯುವ ಪ್ರಯತ್ನವನ್ನು ನಡೆಸಬೇಕು.












