ಶಂಬುಲಾಲ್ ರೈಗರ್ ಜೈಲಲ್ಲಿರುವಾಗಲೇ ವಿಡಿಯೋ ಹೇಗೆ ಬಂತು?: ಸುಪ್ರೀಂ ಅಚ್ಚರಿ

0
1320

ರಾಜಸ್ತಾನದ ರಾಜಸಮುಂದ್ ಜಿಲ್ಲೆಯಲ್ಲಿ 2017 ದಶಂಬರ್ 6 ರಂದು ನಡೆದ ಬೀಭತ್ಸ ಕ್ರೌರ್ಯದ ವಿಷಯದಲ್ಲಿ ರಾಜಸ್ತಾನ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸನ್ನು ಜಾರಿಗೊಳಿಸಿದೆ. ಪಶ್ಚಿಮ ಬಂಗಾಳದ ಕೂಲಿಕಾರ್ಮಿಕ ಆಫ್ರಾಜುಲ್ ಖಾನ್ ಎಂಬವರನ್ನು ಶಂಬುಲಾಲ್ ರೈಗರ್ ಎಂಬವ ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಬಳಿಕ ಬರ್ಬರವಾಗಿ ಹತ್ಯೆಗೈದು ಬಳಿಕ ಸುಟ್ಟು ಹಾಕಿದ್ದನು. ಮಾತ್ರವಲ್ಲ ಆ ಇಡೀ ಕ್ರೌರ್ಯವನ್ನು ಚಿಕ್ಕಪ್ಪನ ಮಗನ ಮೂಲಕ ವಿಡಿಯೋ ಮಾಡಿಸಿದ್ದನು.

ಆ ಬಳಿಕ ಆತನನ್ನು ಬಂಧಿಸಿ ಜೋದ್ಪುರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, 2018 ಫೆಬ್ರವರಿಯಲ್ಲಿ ಇನ್ನೂ ಜೈಲಿನಲ್ಲಿರುವಾಗಲೇ ಆತನ ಇನ್ನೊಂದು ವಿಡಿಯೋ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅದರಲ್ಲಿ ಆತ ತನ್ನ ಕ್ರೌರ್ಯವನ್ನು ಸಮರ್ಥಿಸಿಕೊಂಡಿದ್ದನಲ್ಲದೆ, ಹಿಂದೂ ಧರ್ಮದ ಹಿತಚಿಂತಕನಂತೆ ಫೋಸು ಕೊಟ್ಟಿದ್ದನು. ಇದನ್ನು ಆಫ್ರಾಜುಲ್ ಖಾನ್ ಅವರ ಪತ್ನಿ ಗುಲ್ಬಹಾರ್ ಬೀಬಿ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು ಮತ್ತು ಆತನನ್ನು ತಿಹಾರ್ ಜೈಲಿಗೆ ವರ್ಗಾಯಿಸುವಂತೆ ಆದೇಶಿಸಬೇಕೆಂದು ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಎಂ ಆರ್ ಷಾ ಅವರ ಪೀಠವು ಈ ಬಗ್ಗೆ ರಾಜಸ್ತಾನ್ ಸರಕಾರಕ್ಕೆ ನೋಟೀಸ್ ಜಾರಿಗೊಳಿಸಿದ್ದು, ಆ ವಿಡಿಯೋವನ್ನು ಆರೋಪಿ ಜೈಲಿನಿಂದಲೇ ಅಪ್ಲೋಡ್ ಮಾಡಿದ್ದೇ ಎಂದು ಪ್ರಶ್ನಿಸಿದ್ದು, ಮತ್ತು ಹೌದು ಎಂದಾದರೆ, ಅದು ಹೇಗೆ ಸಾಧ್ಯವಾಯಿತು ಎಂದು ವಿವರವನ್ನು ಕೋರಿದೆ.

ಕೋರ್ಟು ಮುಂದಿನ ವಿಚಾರಣೆಯನ್ನು ಜನವರಿ 21, 2019ಕ್ಕೆ ಮುಂದೂಡಿದೆ.