ಸನ್ಮಾರ್ಗ ವಾರ್ತೆ
ಉಳ್ಳಾಲ,ಜೂ.27: ಉಳ್ಳಾಲದಲ್ಲಿ ಕೋವಿಡ್ 19 ಆತಂಕ ಮುಂದುವರಿದಿದ್ದು , ಆಝಾದ್‌ನಗರವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಉಳ್ಳಾಲ ಠಾಣಾ ಎಸ್‌ಐ ಸೇರಿದಂತೆ ಇಬ್ಬರು ಮಹಿಳೆಯರಿಗೆ ಸೋಂಕು ತಗಲಿ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಿಗೆ ಆಝಾದ್‌ನಗರದಲ್ಲಿ ಮಹಿಳೆಗೆ ಕೊರೋನ ದೃಢವಾದ ಹಿನ್ನೆಲೆಯಲ್ಲಿ ನಾಲ್ಕು ಮನೆಯ 26 ಸದಸ್ಯರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಅಲ್ಲದೇ, ಈ ಏರಿಯಾವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಯಾರೂ ಕೂಡ ಹೊರಗಡೆ ಬರುವಂತಿಲ್ಲ ಎಂದು ಸ್ಪೀಕರ್‌ಗಳ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ರಸ್ತೆಯನ್ನು ಬ್ಯಾರಿಯರ್‌ಗಳನ್ನಿರಿಸಿ ಬಂದ್ ಮಾಡಲಾಗಿದೆ.
ಇದಲ್ಲದೇ, ಎರಡು ಖಾಸಗಿ ಆಸ್ಪತ್ರೆಯ 30 ಸಿಬಂದಿಗಳನ್ನೂ ಕೂಡ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಪೊಲಿಸ್ ಠಾಣೆಯ ಸಿಬ್ಬಂದಿಗಳನ್ನು ಸ್ವಯಂ ಕ್ವಾರಂಟೈನ್‌ಗೊಳಪಡಿಸಲಾಗಿದೆ.
ಇಂದು ಬೆಳಿಗ್ಗೆ ಉಳ್ಳಾಲ ಕೋಡಿಯಿಂದ ಆರಂಭಗೊಂಡ ಸ್ಯಾನಿಟೈಸ್ ಕಾರ್ಯ ಕೋಟೆಪುರ, ಉಳ್ಳಾಲ ಜಂಕ್ಷನ್, ಮೊಗವೀರ ಪಟ್ಣ, ಸಮ್ಮರ್ ಸ್ಯಾಂಡ್, ಅಬ್ಬಕ್ಕ ಸರ್ಕಲ್, ಮುಕ್ಕಚೇರಿ, ಮಾಸ್ತಿಕಟ್ಟೆ, ಮೇಲಂಗಡಿ, ದರ್ಗಾ ರಸ್ತೆ, ಉಳ್ಳಾಲಬೈಲು ಮುಖ್ಯರಸ್ತೆ, ತೊಕ್ಕೊಟ್ಟು ಒಳಪೇಟೆ, ಮಂಚಿಲ,ಅಳೇಕಲ, ತೊಕ್ಕೊಟ್ಟು ಜಂಕ್ಷನ್, ತೊಕ್ಕೊಟ್ಟು ಬಸ್ಸು ನಿಲ್ದಾಣ, ಮಾರ್ಗತಲೆ ಕಲ್ಲಾಪು, ಶಿವಾಜಿನಗರ, ಪಂಡಿತ್‍ಹೌಸ್, ಕುತ್ತಾರು ಪ್ರದೇಶದಲ್ಲಿ ನಡೆಸಲಾಗಿದ್ದು, ಶಾಸಕ ಯು.ಟಿ.ಖಾದರ್ ಹಾಗೂ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












