ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದು ನಿಷಿದ್ಧವೇ?

0
9440

ಮುಹಮ್ಮದ್ ನಿಝಾರ್, ಮಣಿಪಾಲ

ಪ್ರಶ್ನೆ: ನಾನೋರ್ವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದೇನೆ. ಹಲವು ಸಂದರ್ಭಗಳಲ್ಲಿ ರಾತ್ರಿ ಮಲಗುವುದು ಎರಡು ಗಂಟೆಯ ಸಮಯದಲ್ಲಾಗಿದೆ. ಆದ್ದರಿಂದ ಆಯಾಸದ ಕಾರಣ ಸುಬ್‍ಹಿ ನಮಾಝ್‍ನ ಬಳಿಕ ಪುನಃ ನಿದ್ರಿಸುತ್ತೇನೆ. ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದರ ಬಗ್ಗೆ ಇಸ್ಲಾಮಿನ ನಿಲುವೇನು? ಅದು ನಿಷಿದ್ಧ ಅಥವಾ ಅಪ್ರಿಯ ಆಗಿದೆಯೇ? ಮಾತ್ರವಲ್ಲ ಅಸರ್ ನಮಾಝ್‍ನ ಬಳಿಕದ ನಿದ್ರೆಯ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಉತ್ತರ: ರಾತ್ರಿಯ ಅಧ್ಯಯನದ ಬಳಿಕ ಆಯಾಸ ಉಂಟಾಗುವುದಾದರೆ ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸು ವುದರಲ್ಲಿ ತಪ್ಪಿಲ್ಲ. ಅದೇ ವೇಳೆ ಪ್ರವಾದಿ(ಸ) ಹಾಗೂ ಅನುಯಾಯಿ ಗಳು ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುತ್ತಿರಲಿಲ್ಲ. ಕಾರಣ ಆ ಸಮಯವು ಅನುಗ್ರಹದ ಸಮಯವಾಗಿದೆ. ತಡ ರಾತ್ರಿಯ ವರೆಗೆ ಕಲಿಯುವುದು ಹಾಗೂ ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿ ಸುವುದು ಅನುವದನೀಯವಾಗಿದ್ದರೂ ಬೇಗನೇ ಮಲಗಿ ಸುಬ್‍ಹಿ ನಮಾಝ್‍ನ ಬಳಿಕ ಕಲಿಯುವುದು ಹೆಚ್ಚು ಉತ್ತಮವಾಗಿದೆ. ಅಧ್ಯಯನಕ್ಕೆ ಹೆಚ್ಚು ಏಕಾಗ್ರತೆ ದೊರೆಯಲು ಅದು ಸಹಾಯಕವಾಗಿದೆ. ಅನುಗ್ರಹ ಎಂಬು ದರ ತಾತ್ಪರ್ಯವು ಹಣ ಎಂಬುದು ಮಾತ್ರವಲ್ಲವಷ್ಟೇ. ಜ್ಞಾನ ಹಾಗೂ ಆರೋಗ್ಯವೂ ಅದಕ್ಕೆ ಸೇರಿದ್ದಾಗಿದೆ. ರಾತ್ರಿ ತಡವಾಗಿ ನಿದ್ರಿಸಿ ಸುಬ್‍ಹಿ ನಮಾಝ್ ನಷ್ಟವಾಗುವುದನ್ನು ಅದರ ಮೂಲಕ ತಡೆಯಬಹುದು. ಅಸರ್ ನಮಾಝ್‍ನ ಬಳಿಕದ ನಿದ್ದೆಯನ್ನು ವಿರೋಧಿಸಿ ಬಂದ ಕುರ್‍ಆನ್ ಆಯತ್ ಅಥವಾ ಹದೀಸ್‍ಗಳು ಇಲ್ಲ. ಆದ್ದರಿಂದ ನಿದ್ರಿಸುವುದರಲ್ಲಿ ತೊಂದರೆಯಿಲ್ಲ.

ಪ್ರವಾದಿ(ಸ) ಹಾಗೂ ಅನುಯಾಯಿಗಳು ಸುಬ್‍ಹಿ ನಮಾಝ್‍ನ ಬಳಿಕ ಅಲ್ಲಿಯೇ ಕುಳಿತು ಸೂರ್ಯೋದಯದ ವರೆಗೆ ಕುಶಲೋಪರಿ ಮಾಡುತ್ತಿದ್ದರು. (ಮುಸ್ಲಿಮ್ 1/463) ಸಮ್ಮಾಕ್ ಬಿನ್ ಹರ್ಬ್‍ರ್ ಹದೀಸ್ ಈ ರೀತಿ ಇದೆ. ನಾನು ಜಾಬಿರ್ ಬಿನ್ ಸಮುರಾರೊಂದಿಗೆ ಕೇಳಿದೆನು, “ತಾವು ಪ್ರವಾದಿಯವರ(ಸ) ಜೊತೆ ಕುಳಿತುಕೊಳ್ಳುತ್ತೀರಾ?” ಅವರು ಹೇಳಿದರು, “ಹೌದು. ಕೆಲವೊಮ್ಮೆ ಸೂರ್ಯೋದಯದ ವರೆಗೆ ಅವರು ನಮಾಝ್ ನಿರ್ವಹಿಸಿದ ಸ್ಥಳದಿಂದ ಎಲ್ಲಿಗೂ ಹೋಗುತ್ತಿರಲಿಲ್ಲ. ಸೂರ್ಯೋದಯವಾದರೆ ಅವರು ಏಳುತ್ತಿದ್ದರು. ಅಜ್ಞಾನ ಕಾಲದಲ್ಲಿ ಸಂಭವಿಸಿದ ಘಟನೆಗಳ ಕುರಿತು ವಿವರಿಸುತ್ತಾ ಅವರು ಹಾಗೆಯೇ ಕುಳಿತುಕೊಳ್ಳುತ್ತಿದ್ದರು. ಅದನ್ನು ಕೇಳಿ ಹಸನ್ಮುಖಿಯಾಗಿ ನಗುತ್ತಿದ್ದರು.

ನನ್ನ ಸಮುದಾಯವನ್ನು ಪ್ರಭಾತಗಳಲ್ಲಿ ಅನುಗ್ರಹಿಸಬೇಕು ಎಂದು ಆಗ್ರಹಿಸಿ ಅಲ್ಲಾಹನ ಸಂದೇಶವಾಹಕರು ಪ್ರಾರ್ಥಿಸುತ್ತಿದ್ದರು. ಸಕ್‍ರ್ ಅಲ್ ಗಾಮಿದಿಯ ಹದೀಸ್‍ನಲ್ಲಿ ಈ ರೀತಿ ಇದೆ- ಅಲ್ಲಾಹನ ಸಂದೇಶವಾಹಕರು ಪ್ರಾರ್ಥಿಸಿದರು, “ಓ ಅಲ್ಲಾಹ್, ನನ್ನ ಸಮುದಾಯವನ್ನು ನೀನು ಪ್ರಭಾತಗಳಲ್ಲಿ ಅನುಗ್ರಹಿಸು.” ಪ್ರವಾದಿ(ಸ) ಯಾತ್ರಾ ತಂಡವನ್ನೂ ಸೇವೆಯನ್ನೂ ಹೊಣೆ ನಿರ್ವಹಣೆಗಾಗಿ ಕಳುಹಿಸಿದ್ದು ಪ್ರಭಾತದ ಸಮಯದಲ್ಲಾಗಿತ್ತು. ಸಕ್‍ರ್ ಓರ್ವ ವ್ಯಾಪಾರಿಯಾಗಿದ್ದರು. ಅವರು ತನ್ನ ವ್ಯಾಪಾರಿ ತಂಡವನ್ನು ಬೀಳ್ಕೊಡುತ್ತಿ ದ್ದುದು ಪ್ರಭಾತದ ಸಮಯದಲ್ಲಾಗಿತ್ತು. ಹಾಗೆ ಮಾಡಿದ್ದರಿಂದ ಅವರಿಗೆ ಧಾರಾಳ ಸಂಪತ್ತು ದೊರೆತಿದ್ದವು.

(ಅಬೂದಾವೂದ್, ತಿರ್ಮಿದಿ, ಇಬ್ನುಮಾಜಃ)

ಈ ವಾಸ್ತವಿಕತೆಯನ್ನು ಮುಂದಿರಿಸಿ ಪೂರ್ವಿಕ ವಿದ್ವಾಂಸರ ಪೈಕಿ ಒಂದು ವಿಭಾಗವು ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದನ್ನು ಇಷ್ಟಪಟ್ಟಿರಲಿಲ್ಲ. ಇಬ್ನು ಅಬೀ ಶೈಬ ತನ್ನ `ಮುಸನ್ನಫ್’ ಎಂಬ ಗ್ರಂಥದಲ್ಲಿ ಹೀಗೆ ಪ್ರಸ್ತಾಪಿಸಿದ್ದಾರೆ, ಉರ್ವಾ ಇಬ್ನು ಝುಬೈರ್ ಈ ರೀತಿ ಹೇಳಿದರು, ಝುಬೈರ್ ತನ್ನ ಮಕ್ಕಳನ್ನು ಪ್ರಭಾತದ ವೇಳೆ ಮಲಗುವುದರಿಂದ ತಡೆದಿದ್ದರು. ಉರ್ವಾ ಹೇಳುತ್ತಾರೆ, “ಪ್ರಭಾತದ ವೇಳೆ ಮಲಗುತ್ತೇನೆ” ಎಂದು ಹೇಳುವ ವ್ಯಕ್ತಿಯೊಂದಿಗೆ ನನಗೆ ಆಸಕ್ತಿ ಇರಲಿಲ್ಲ.”

“ಅಸರ್ ನ ಬಳಿಕ ನಿದ್ರಿಸಿ ಎದ್ದ ಬಳಿಕ ಮನಸ್ಸಿಗೆ ನೆಮ್ಮದಿ ಇಲ್ಲ ಎಂದು ಹೇಳುವವನು ಸ್ವಂತವನ್ನೇ ಜರೆದುಕೊಳ್ಳಲಿ” ಎಂಬ ಪ್ರವಾದಿ ವಚನವಿದೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಆ ಹದೀಸ್ ದುರ್ಬಲವಾಗಿದೆ. ಆದ್ದರಿಂದ ಅಸರ್ ನ ಬಳಿಕದ ನಿದ್ರೆಗೆ ಇಸ್ಲಾಮಿನಲ್ಲಿ ವಿರೋಧವಿಲ್ಲ.

ಆದರೆ ಅರಬರ ಮಧ್ಯೆ ನುಡಿಗಟ್ಟೊಂದು ಪ್ರಚಲಿತದಲ್ಲಿತ್ತು- “ಸುಬ್ ಹಿಯ ಬಳಿಕದ ನಿದ್ದೆಯು ದಾರಿದ್ರ್ಯವಾಗಿದೆ. ಝುಹರ್ ನಂತರದ ನಿದ್ದೆಯು (ಕೈಲೂಲತ್) ಸುನ್ನತ್ ಆಗಿದೆ. ಅಸರ್ ನ ನಂತರದ ನಿದ್ದೆಯು ಹುಚ್ಚು ಆಗಿದೆ.”