ಬ್ರಾಹ್ಮಣರೆಲ್ಲ ಬಿಜೆಪಿ, ಕೋಮುವಾದಿಗಳಲ್ಲ; ಮಂಗಳೂರಿನಲ್ಲಿ ಸಮಾನ‌ ಮನಸ್ಕ‌ ಬ್ರಾಹ್ಮಣರ ಸಭೆ

0
381

ಸನ್ಮಾರ್ಗ ವಾರ್ತೆ

ಬ್ರಾಹ್ಮಣ ಸಮುದಾಯವು ಕೋಮುವಾದಿ ಸಂಘಪರಿವಾರದ ಜೊತೆ ನಿಲ್ಲುತ್ತದೆ ಎಂಬ ಅಪವಾದವನ್ನು ಕಳೆದುಕೊಳ್ಳಲು ಯತ್ನಿಸುತ್ತಿರುವ ಕರಾವಳಿಯ ಪ್ರಜ್ಞಾವಂತ ಬ್ರಾಹ್ಮಣ ಮುಖಂಡರು ಹೊಸ ಹಾದಿಗೆ ನಾಂದಿ ಹಾಡಿದ್ದಾರೆ.

ಕರಾವಳಿಯಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾದರೂ ಅವರ ರಾಜಕೀಯ ಪ್ರಭಾವ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಬ್ರಾಹ್ಮಣರೆಲ್ಲರೂ ಬಿಜೆಪಿಗರು ಮತ್ತು ಕೋಮುವಾದಿಗಳು ಎಂಬ ಹಣೆಪಟ್ಟಿಯ ವಿರುದ್ದ ಸಂದೇಶ ರವಾನಿಸಿದ್ದಾರೆ.

ಜೊತೆಗೆ ಬಿಜೆಪಿಯನ್ನು ಬೆಂಬಲಿಸದವರು ಬ್ರಾಹ್ಮಣರೇ ಅಲ್ಲ, ಹಿಂದೂಗಳೇ ಅಲ್ಲ ಎಂಬುವ ಕೀಳುಮಟ್ಟದ ಬೆದರಿಕೆಯ ವಿರುದ್ದ ಸಮರ ಸಾರುವ ನಿರ್ಣಯಕ್ಕೆ ಬಂದಿದ್ದಾರೆ.

ಇದು ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಹೊಸರೂಪ ನೀಡಲಿದೆ ಎಂದೇ ಹೇಳಲಾಗುತ್ತಿದೆ. ಅದೇ ರೀತಿ ಬಡತನದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸುವ ಯೋಜನೆ ರೂಪಿಸಲೂ ನಿರ್ಧರಿಸಲಾಗಿದೆ.

ಸಮಾನ ಮನಸ್ಕ ಬ್ರಾಹ್ಮಣರ ಸಭೆಯ ಕುರಿತು ಮಾತನಾಡಿದ ಚಿಂತಕ ಎಂ.ಜಿ. ಹೆಗ್ಡೆ, ಬ್ರಾಹ್ಮಣರನ್ನು ಕೇವಲ ಬಿಜೆಪಿಗೆ ಸೀಮಿತ ಗೊಳಿಸಲಾಗುತ್ತಿದೆ. ಅಲ್ಲದೇ ಅವರನ್ನು ಕೋಮುವಾದಿಗಳೆಂದು ಚಿತ್ರಿಸಲಾಗುತ್ತಿದೆ. ಆದರೆ ಬ್ರಾಹ್ಮಣರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದು, ಕೇವಲ ಬಿಜೆಪಿಯಲ್ಲಷ್ಟೇ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಬ್ರಾಹ್ಮಣರ ಮೇಲಾಗುತ್ತಿರುವ ಕಿರುಕುಳವನ್ನು ಖಂಡಿಸಿದ ಅವರು, ಕಾಂಗ್ರೆಸ್ ಪರ, ಕೋಮುವಾದದ ವಿರುದ್ಧ ಇರುವ ಬ್ರಾಹ್ಮಣರನ್ನು ಹಿಯಾಳಿಸಲಾಗುತ್ತಿದೆ. ಅವರನ್ನು ಬ್ರಾಹ್ಮಣರೇ ಅಲ್ಲ ಎಂದು ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ ಕೋಮುವಾದದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಬ್ರಾಹ್ಮಣರಿಗೆ ಕೆಟ್ಟ ಪದ ಬಳಸಿ ನಿಂದಿಸುವುದು, ವೈವಾಹಿಕ ಸಂಬಂಧಗಳನ್ನು ತಪ್ಪಿಸುವಂತಹ ಕೆಲಸಗಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಮನಸ್ಕ ಬ್ರಾಹ್ಮಣರ ವೇದಿಕೆಗೆ ಸಂಘಟನೆಯ ರೂಪುರೇಷೆ ತಂದು ಮುಂದಿನ ದಿನಗಳಲ್ಲಿ ಕೋಮುವಾದದ ವಿರುದ್ಧ ಸಮಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಂ.ಜಿ. ಹೆಗ್ಡೆ ಹೇಳಿದರು.

LEAVE A REPLY

Please enter your comment!
Please enter your name here