ಪ್ರಯಾಗ್‌ರಾಜ್‌ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ: ನೆಲಕ್ಕುರುಳಿಸಿ ನಾಲೆಗೆ ಎಸೆದ ದುಷ್ಕರ್ಮಿಗಳು

0
334

ಸನ್ಮಾರ್ಗ ವಾರ್ತೆ

ಪ್ರಯಾಗ್ ರಾಜ್: ಗಂಗಾನಗರದ ಕೊಡಾಪುರ್ ಗ್ರಾಮದಲ್ಲಿ ದುಷ್ಕರ್ಮಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ನೆಲಕ್ಕುರುಳಿಸಿ, ಅದನ್ನು ನಾಲೆಗೆ ಎಸೆದಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಪ್ರತಿಮೆಯನ್ನು ವಿವಾದಿತ ಜಮೀನಿನ ರಸ್ತೆಯೊಂದರಲ್ಲಿ ಸ್ಥಾಪಿಸಲಾಗಿತ್ತು ಎನ್ನಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಪ್ರತಿಮೆಯನ್ನು ಧ್ವಂಸಗೊಳಿಸಿ, ಸಮೀಪದ ನಾಲೆಯೊಂದಕ್ಕೆ ಎಸೆದಿದ್ದಾರೆ. ಈ ಪ್ರತಿಮೆಯ ವಿಚಾರದಲ್ಲಿ ಸ್ಥಳೀಯರ ನಡುವೆ ವೈಮನಸ್ಸು ಇತ್ತು ಎಂದು ಗಂಗಾನಗರ ಉಪ ಪೊಲೀಸ್ ಆಯುಕ್ತ ಕುಲದೀಪ್ ಗುಣಾವತ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಸಂಬಂಧ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಮತ್ತು ಶೀಘ್ರದಲ್ಲೇ ಅಂಬೇಡ್ಕರ್ ಅವರ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸದ್ಯ ಸ್ಥಳದಲ್ಲಿ ಶಾಂತ ವಾತಾವರಣವಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.