ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಸ್ಥಾಪಿಸಿದ ಅಮೆರಿಕಾ

0
1120

ಸನ್ಮಾರ್ಗ ವಾರ್ತೆ

ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಅ.14ರಂದು ಅನಾವರಣಗೊಳ್ಳಲಿದೆ.

ಇದು ಹೊರ ರಾಷ್ಟ್ರಗಳಲ್ಲಿ ಸ್ಥಾಪಿಸಲ್ಪಟ್ಟ ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಅತಿ ದೊಡ್ಡ ಪ್ರತಿಮೆಯಾಗಿದೆ. ಮೇರಿಲ್ಯಾಂಡ್‌ನಲ್ಲಿ 19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ರವರ ಸಮಾನತೆಯ ಪ್ರತಿಮೆಯು ಸ್ಥಾಪಿಸಲಾಗಿದೆ.

13 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಪ್ರತಿಮೆಯನ್ನು ಅಮೆರಿಕಾದ ಮೇರಿಲ್ಯಾಂಡ್‌ನ ಅಕೋಕೀಕ್ ನಗರದಲ್ಲಿ ಸ್ಥಾಪಿಸಲಾಗಿದ್ದು, ಈ ಸ್ಥಳವು ಶ್ವೇತ ಭವನಕ್ಕೆ 21 ಕಿ.ಮೀ ಅಂತರದಲ್ಲಿದೆ.

ಈ ಮೊದಲು ಹೈದಾರಬಾದ್‌ನಲ್ಲಿ ಅನಾವರಣಗೊಂಡ 125 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆಯು ವಿಶ್ವದಲ್ಲಿಯೇ ಅತಿ ಎತ್ತರದ್ದಾಗಿದೆ. ಸಂವಿಧಾನ ಕರ್ತೃ ಅಂಬೇಡ್ಕರ್‌ ಅವರ ಜೀವನ ಸಂದೇಶವನ್ನು ಸಾರಲು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಘಟಕರು ಮಾದ್ಯಮಗಳಿಗೆ ತಿಳಿಸಿದ್ದಾರೆ.

1891ರ ಏ.14ರಂದು ಜನಿಸಿದ ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಬಾಬಾಸಾಹೇಬ್ ಎಂದು ಜನಪ್ರಿಯರಾಗಿದ್ದರು. ಸಂವಿಧಾನದ ಶಿಲ್ಪಿಯಾಗಿರುವ ಅವರು, ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಅವರ ಮೊದಲ ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವರಾಗಿದ್ದರು. ದಲಿತರು ಮತ್ತು ಅಸ್ಪೃಶ್ಯರ ಹಕ್ಕುಗಳಿಗಾಗಿ ಅವರು ನಿರಂತರವಾಗಿ ಹೋರಾಡಿದ್ದರು.

ಅನಾವರಣ ಕಾರ್ಯಕ್ರಮದಲ್ಲಿ ಅಮೆರಿಕ ಮತ್ತು ಪ್ರಪಂಚದ ಇತರ ಭಾಗಗಳಿಂದ ಅಂಬೇಡ್ಕರ್‌ ಅವರ ಅನುಯಾಯಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.