ಎಲ್ಲ ಧರ್ಮೀಯರನ್ನು ಗೌರವಿಸುವ ವಾತಾವರಣ ಅನುಪಮದಿಂದ ಸಾಧ್ಯ: ರವೀಂದ್ರ ಶೆಟ್ಟಿ

0
769

ಸನ್ಮಾರ್ಗ ವಾರ್ತೆ

ದೇರಳಕಟ್ಟೆ: ದೇಶದ ಸಂಸ್ಕೃತಿ ಮತ್ತು ಸಭ್ಯ ಆಚರಣೆಗಳನ್ನು ಜೀವಂತವಾಗಿಡುವ ಕೆಲಸ ಮಹಿಳೆಯರಿಂದಲೇ ಸಾಧ್ಯ. ಇದಕ್ಕಾಗಿ ಅನುಪಮ ಮಹಿಳಾ ಮಾಸಿಕ ಎಲ್ಲರಿಗೂ ಉಪಯುಕ್ತವಾಗಿದೆ. ನಮ್ಮ ಮಧ್ಯೆ ಇರುವ ಸೌಹಾರ್ದತೆಯನ್ನು ಉಳಿಸಿ ಬೆಳೆಸಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಮಕ್ಕಳಿಗೆ ನೈತಿಕ ಶಿಕ್ಷಣ ಸಿಗುವಂತಾಗಬೇಕು.ಎಲ್ಲ ಧರ್ಮಿಯರು ಪರಸ್ಪರರನ್ನು ಗೌರವಿಸುವ ವಾತಾವರಣ ಬೆಳೆಯಲು ಪೂರಕವಾದ ಕೆಲಸ ಅನುಪಮ ಮಾಡುತ್ತಿದೆ” ಎಂದು ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಇವರು ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅನುಪಮ ಮಹಿಳಾ ಮಾಸಿಕ 20ನೇ ವರ್ಷದ ವಿಶೇಷಾಂಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಆರ್.ಶೆಟ್ಟಿಯವರು, ಅನುಪಮ ಮಾಸಿಕದ ಕೆಲಸಗಳಿಗೆ ಶುಭಹಾರೈಸಿ ಬೆಂಬಲ ಸೂಚಿಸಿದರು. ಇನ್ನೋರ್ವ ಮುಖ್ಯಅತಿಥಿ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ನಯೀಮ ಹಮೀದ್ “ಅನುಪಮದ ಪ್ರತಿ ಸಂಚಿಕೆಯು ಕಾದು ಕುಳಿತು ಓದುವಂತೆ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಜಾತಿ ಮತ ಭೇದವಿಲ್ಲದೆ ಎಲ್ಲ ಹೆಣ್ಣುಮಕ್ಕಳಿಗೂ ಸ್ಥಾನಮಾನ ದೊರಕಿಸಿಕೊಡಲು ಶ್ರಮಿಸುತ್ತಿದೆ” ಎಂದರು.

ಸಮಾಜ ಸೇವಕಿ ಶ್ರೀಮತಿ ಸುಹಾಸಿನಿ ಅವರು “ನಾನು ಆರಂಭದಿಂದಲೂ ಅನುಪಮದ ಓದುಗಳು. ಅನುಪಮ ನನಗೆ ಬಹಳ ಪ್ರೀತಿಪಾತ್ರ ಪತ್ರಿಕೆ” ಎಂದರು. ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಂಸ್ಥೆಗಳ ಕನ್ನಡ ಅಧ್ಯಾಪಕ ರವಿಕುಮಾರ್ ಮಾತನಾಡಿ “ಸ್ತ್ರೀ ಸಂವೇದನೆಯನ್ನು ಸಶಕ್ತವಾಗಿ ವ್ಯಕ್ತಪಡಿಸುವ ಪತ್ರಿಕೆ ಅನುಪಮ. ಅನುಪಮದ ಸಾಹಿತ್ಯದಲ್ಲಿ ಸತ್ವವಿದೆ. ಇದು ಹೆಣ್ಣಿಗೆ ವಿಶಿಷ್ಟ ಶಕ್ತಿಯನ್ನು ನೀಡುತ್ತದೆ” ಎಂದರು.

ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಅನುಪಮದ ಪ್ರಧಾನ ಸಂಪಾದಕಿ ಶ್ರೀಮತಿ ಶಹನಾಝ್‍ಎಂ.ರವರು ಅನುಪಮಕ್ಕೆ ಸರ್ವಧರ್ಮಿಯರು ನೀಡುತ್ತಿರುವ ಸಹಕಾರಕ್ಕೆಕೃತಜ್ಞತೆಯನ್ನು ಸಲ್ಲಿಸಿ ಸಂದರ್ಭೋಚಿತವಾಗಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.ಆರಂಭದಲ್ಲಿ ಸುಹೈಲ ಕಿರಾಅತ್ ಪಠಿಸಿದರು. ಅನುಪಮ ಸಹ ಸಂಪಾದಕಿ ಸಬೀಹಾ ಫಾತಿಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಾಜಿದಾ ಮುಬೀನ್‍ ನಿರೂಪಿಸಿದರು.ಝರೀನಾ ಧನ್ಯವಾದವಿತ್ತರು.