ಸೂಚನೆಗಳನ್ನು ಒಪ್ಪಿಕೊಂಡರೆ ಮಾತ್ರ ಇನ್ನು ಚರ್ಚೆ: ರೈತ ಹೋರಾಟವನ್ನು ತೆರವುಗೊಳಿಸಲು ಮುಂದಾದ ಕೇಂದ್ರ ಸರಕಾರ

0
454

ಸನ್ಮಾರ್ಗ ವಾರ್ತೆ

ನವದೆಹಲಿ: ದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಸದ್ಯ ಚರ್ಚೆಯಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿಂದೆ ತಿಳಿಸಿದ ಸೂಚನೆಗಳನ್ನು ಒಪ್ಪಿಕೊಂಡರೇ ಮಾತ್ರ ಇನ್ನು ಚರ್ಚೆ ನಡೆಯಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಕಾನೂನನ್ನು ಸದ್ಯ ಜಾರಿಗೊಳಿಸುವುದಿಲ್ಲ ಎಂಬ ಕೇಂದ್ರ ಸರಕಾರದ ಮಾತನ್ನು ಒಪ್ಪಿಕೊಂಡರೆ ಮಾತ್ರ ರೈತರೊಂದಿಗೆ ಚರ್ಚೆ ನಡೆಸುವುದೆಂದು ಕೇಂದ್ರ ಸರಕಾರ ನಿರ್ಧರಿಸಿದೆ.

ಇದೇ ವೇಳೆ ರೈತರನ್ನು ಹೋರಾಟ ಸ್ಥಳದಿಂದ ತೆರವುಗೊಳಿಸಲು ಪೊಲೀಸರು ಕ್ರಮ ಜರಗಿಸಿದ್ದಾರೆ. ಗಾಝಿಪುರದ ಹೋರಾಟದ ವೇದಿಕೆಯನ್ನು ತೆರವುಗೊಳಿಸಬೇಕೆಂದು ಸಂಘಟನೆಗಳಿಗೆ ಪೊಲೀಸರು ಸೂಚನೆ ನೀಡಿದರು. ವಾಟರ್ ಕ್ಯಾನನ್‌ಗಳೊಂದಿಗೆ ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ಇಲ್ಲಿ ಜಮಾವಣೆಗೊಳಿಸಲಾಗಿದೆ.

37 ರೈತ ಸಂಘಟನೆಗಳ ವಿರುದ್ಧ ಕೇಂದ್ರ ಇದುವರೆಗೆ ಕೇಸು ದಾಖಲಿಸಿದೆ. ದೇಶದ್ರೋಹ ಆರೋಪ ಜಡಿದು ಇನ್ನಷ್ಟು ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಸೂಚನೆಯೂ ಲಭಿಸಿದೆ. ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಡೆದ ಅಕ್ರಮ ಘಟನೆಯ ಮರೆಯಲ್ಲಿ ಅದನ್ನು ರೈತರ ವಿರುದ್ಧ ಬಳಸಲು ಕೇಂದ್ರ ಸಜ್ಜಾಗಿದೆ. ಇದೇವೇಳೆ ವಿವಾದಾತ್ಮಕ ಕಾನೂನು ಹಿಂತೆಗೆಯದೆ ಹೋರಾಟ ಕೊನೆಗೊಳಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.