ಅರಬ್ ಕ್ರಾಂತಿ ಮತ್ತು ಸಂಘಟನೆಗಳ ಆತ್ಮಾವಲೋಕನ

0
198

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಅರಬ್ ಕ್ರಾಂತಿಯ ಬಳಿಕ ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಯುಂಟಾಗಿದೆ. ಅದು ಇಸ್ಲಾಮೀ ಸಂಘಟನೆಯಲ್ಲಿ ಮಹತ್ತರವಾದ ಬದಲಾವಣೆಯುಂಟು ಮಾಡಿದೆ. ಈ ಕ್ರಾಂತಿಯ ಕಾರಣಕರ್ತರೂ ನಾಯಕರಾಗಿದ್ದರು. ಅದರಲ್ಲಿ ಅವರು ಒಂದೇ ವೇಳೆ ವಿಜಯಿಗಳೂ ಪರಾಜಿತರೂ ಆಗಿ ಬಲಿಯಾದರು. ಅರಬ್ ಕ್ರಾಂತಿಯ ಬಳಿಕ ಉಂಟಾದ ಪ್ರತಿ ಕ್ರಾಂತಿಯನ್ನು ಇಸ್ಲಾಮಿಸ್ಟರು ಹೆಚ್ಚು ಅಧ್ಯಯನ ನಡೆಸಬೇಕು.

ಅರಬ್ ಕ್ರಾಂತಿಯ ಬಳಿಕ ಟ್ಯುನೀಶಿಯಾದಲ್ಲಿ 2011ರ ಅಕ್ಟೋಬರ್ 23ರಲ್ಲಿ ನಡೆದ ಚುನಾವಣೆಯಲ್ಲಿ ಇಸ್ಲಾಮೀ ಸಂಘಟನೆಯಾದ ಅನ್ನಹ್ದ ಅತೀ ಹೆಚ್ಚು ಸ್ಥಾನ ಪಡೆದು ಯಶಸ್ವಿಯಾಯಿತು. 2011ರ ನವೆಂಬರ್ 25ರಂದು ಮೊರೊಕ್ಕೋದಲ್ಲಿ ಇಸ್ಲಾಮಿಸ್ಟರ ಜಸ್ಟಿಸ್ ಆಂಡ್ ಡೆವಲಪ್‌ಮೆಂಟ್ ಪಾರ್ಟಿ ಗೆಲುವು ಕಂಡಿತು. 2011ರ ನವೆಂಬರ್ 28ರಲ್ಲಿ ಈಜಿಪ್ಟ್ನಲ್ಲಿ ಇಖ್ವಾನ್‌ನ ಫ್ರೀಡಮ್ ಆಂಡ್ ಜಸ್ಟಿಸ್ ಪಾರ್ಟಿ ಗೆಲುವು ಕಂಡಿತು. ಲಿಬಿಯ, ಯಮನ್‌ನಲ್ಲಿ ನಡೆದ ಅರಬ್ ಕ್ರಾಂತಿಯಲ್ಲಿ ಇಸ್ಲಾಮಿಸ್ಟರೇ ಯಶಸ್ಸು ಕಂಡರು.

ಆದರೆ ಈಜಿಪ್ಟ್, ಲಿಬಿಯಾ ಯಮನ್‌ನಲ್ಲಿ ಪ್ರತಿಕ್ರಾಂತಿ ನಡೆಯಿತು. ಇಸ್ಲಾಮಿಸ್ಟರಿಗೆ ದೊರೆತ ಅಧಿಕಾರ ಬುಡಮೇಲುಗೊಳಿಸಲಾಯಿತು. ಈಗ ಟ್ಯುನೀಶಿಯಾದಲ್ಲೂ ಪ್ರತಿಕ್ರಾಂತಿ ನಡೆಯುತ್ತಿದೆ. ಮತ್ತಿತರ ರಾಷ್ಟ್ರಗಳಲ್ಲಿಯೂ ಆಂತರಿಕ ಕಲಹಗಳು ಮುಂದುವರಿಯುತ್ತಿದೆ.

ಈ ಎಲ್ಲಾ ಘಟನೆಗಳು ಇಸ್ಲಾಮಿಸ್ಟರನ್ನು ಮರು ಚಿಂತನೆಗೆ, ತಿದ್ದುವಿಕೆಗೆ ಪ್ರೇರೇಪಿಸುವುದು ಸಹಜ. ಈ ಪ್ರಕ್ರಿಯೆ ಹೆಚ್ಚಿನ ಎಲ್ಲಾ ಸಂಘಟನೆಗಳಲ್ಲೂ ಈಗ ನಡೆಯುತ್ತಿದೆ. ಆಂತರಿಕವಾದ ತೀಕ್ಷ್ಣ ಚರ್ಚೆಗಳು, ಅಭಿಪ್ರಾಯ ಭಿನ್ನತೆಗಳು ಸಂಘಟನೆಯೊಳಗೆ ನಡೆಯುತ್ತಿದೆ.
ಕೆಲವು ಸಂಘಟನೆಗಳು ತಮ್ಮ ಚಿಂತನೆಗಳಲ್ಲಿ ಮಹತ್ತರವಾದ ಬದಲಾವಣೆ ಹಾದಿ ಕಂಡುಕೊಂಡಿದೆ. ಈ ಹಿಂದೆ ತಿಳಿಸಿದಂತೆ ಅನ್ನಹ್ದ ಸಂಘಟನೆಯು ರಾಜಕೀಯ ಮತ್ತು ಸಂದೇಶಪ್ರಚಾರದ ಕಾರ್ಯವನ್ನು ಪ್ರತ್ಯೇಕಿಸಿತು. ಅನ್ನಹ್ದ ಒಂದು ರಾಜಕೀಯ ಪಕ್ಷವಾಗಿದೆ, ಸಂದೇಶ ಪ್ರಚಾರದ ಚಟುವಟಿಕೆಗಳು ಅದರ ಗುರಿಯಲ್ಲ ಎಂದು ಘೋಷಿಸಿತು. ಮೊರೊಕ್ಕೋದ ಇಸ್ಲಾಮೀ ಸಂಘಟನೆ ಖಿಲಾಫತ್ ಸಂಸ್ಥಾಪನೆ ಧ್ಯೇಯವಲ್ಲ ಎಂದು ಸ್ಪಷ್ಟಪಡಿಸಿತು. ರಾಜಾಡಳಿತವಿರುವಂತೆ ಪ್ರಜಾಪ್ರಭುತ್ವ ಪ್ರಕ್ರಿಯೆ ತನ್ನ ಗುರಿಯೆಂದು ವಿವರಿಸಿತು.

ಅಲ್ ಜಝೀರಾ ಸೆಂಟರ್ ಫಾರ್ ಸ್ಟಡೀಸ್ 2016 ಸೆಪ್ಟೆಂಬರ್‌ನಲ್ಲಿ ದೋಹಾದಲ್ಲಿ ಅತ್ತಹೂಲತಿ ಫೀ ಹರ್ಕತಿಲ್ ಇಸ್ಲಾಮ್(ಇಸ್ಲಾಮೀ ಸಂಘಟನೆಗಳ ಬದಲಾವಣೆಗಳು) ಎಂಬ ಶೀರ್ಷಿಕೆಯಲ್ಲಿ ಒಂದು ಸಮ್ಮೇಳನ ಆಯೋಜಿಸಿತ್ತು. ಜಗತ್ತಿನ ಇಸ್ಲಾಮೀ ಸಂಘಟನೆಗಳ ನಾಯಕರ ಭಾಗವಹಿಸುವಿಕೆಯು ಆ ಸಮ್ಮೇಳನದ ವಿಶೇಷತೆಯಾಗಿತ್ತು. ಅಲ್ ಜಝೀರಾ ಚಾನೆಲ್ ಅದನ್ನು ನೇರ ಪ್ರಸಾರ ಮಾಡಿ ಚರ್ಚೆಯನ್ನು ಸಾರ್ವಜನಿಕರೆಡೆಗೆ ತಲುಪಿಸಿತು. ಸಂಘಟನೆಯನ್ನು ವಿಮರ್ಶಾತ್ಮಕವಾಗಿ ಚಿಂತಿಸುವ ಕೆಲವು ನಾಯಕರು ಚರ್ಚೆಯ ಬಹಿರಂಗತ್ವವನ್ನು ಅರಿತು ಅದರಲ್ಲಿ ಭಾಗಿಯಾದರು. ಆ ಸಮ್ಮೇಳನದಲ್ಲಿ ಹಮಾಸ್‌ನ ನಾಯಕ ಖಾಲಿದ್ ಮಿಶಲ್ ಮಂಡಿಸಿದ ಅಭಿಪ್ರಾಯ ಗಮನಾರ್ಹವಾಗಿತ್ತು. ಅದರ ಸಂಕ್ಷಿಪ್ತ ರೂಪ ಹೀಗಿದೆ:
ಅರಬ್ ಕ್ರಾಂತಿಯಲ್ಲಿ ಇಸ್ಲಾಮೀ ಸಂಘಟನೆಗಳು ಸ್ವಯಂ ತಮ್ಮ ಕುರಿತು ಹಾಗೂ ಮತ್ತಿತರರ ಕುರಿತು ಮಾಡಿದ ಲೆಕ್ಕಾಚಾರವು ಅತಿಶಯೋಕ್ತಿಯಿಂದ ಕೂಡಿತ್ತು. ಮತ್ತಿತರ ಸಂಘಟನೆಗಳನ್ನು ಅವರು ತಮ್ಮಲ್ಲಿ ಸೇರಿಸುವಲ್ಲಿ ಯಶಸ್ಸು ಕಂಡಿಲ್ಲ. ಇತರ ಎಲ್ಲರಿಗೆ ಬದಲು ನಾವು ಎಂಬ ಇಸ್ಲಾಮಿಸ್ಟರ ಯೋಚನೆ ತಪ್ಪಾಗಿತ್ತು. ಇತರರನ್ನು ಜೊತೆಯಲ್ಲಿ ಸೇರಿಸದೆ ನಮಗೆ ಮುಂದೆ ಸಾಗಲು ಸಾಧ್ಯವಿಲ್ಲ. ಹಮಾಸ್ ಕೂಡಾ ಮೊದಲು ಇಂತಹದ್ದೇ ತಪ್ಪೆಸಗಿರುವುದಾಗಿ ಖಾಲಿದ್ ಮಿಶಲ್ ತಪ್ಪೊಪ್ಪಿಕೊಂಡರು. ಪಿ.ಎಲ್.ಓ.ಗೆ ಬದಲಾಗಿ ನಾವು ಎಂಬ ನಮ್ಮ ಸ್ವಯಂ ನಿರ್ಧಾರವನ್ನು ಪ್ರೊಜೆಕ್ಟ್ ಮಾಡಿದರು. ಆದರೆ ಅದು ಸಾಮಾಜಿಕ ರಂಗದಲ್ಲಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ ಹಮಾಸ್ ಆತ್ಮವಿಮರ್ಶೆ ನಡೆಸಿ ತಪ್ಪುಗಳನ್ನು ತಿದ್ದಿಕೊಂಡಿತು.

“ತಪ್ಪೊಪ್ಪಿಕೊಂಡು ತಿದ್ದಿಕೊಳ್ಳಿ” ಎಂಬುದು ಕುರ್‌ಆನಿನ ನಿಲುವಾಗಿದೆ. ಉಹುದ್‌ನಲ್ಲಿ ಪರಾಜಿತರಾದಾಗ ಅದು ನಿಮ್ಮ ಲೋಪದಿಂದಲೇ ಆಗಿದೆ ಎಂದು ಕುರ್‌ಅನ್ ಹೇಳಿತ್ತಲ್ಲವೇ ಎಂದೂ ಅವರು ಹೇಳಿದರು.

ಅದೇ ಸಮ್ಮೇಳನದಲ್ಲಿ ಭಾಗವಹಿಸಿದ ಮರ‍್ತನಿಯಾದ ಇಸ್ಲಾಮೀ ಸಂಘ ಟನೆಯ ನಾಯಕ, ಪ್ರಸಿದ್ದ ವಿದ್ವಾಂಸ ಶೈಖ್ ದುದು ಹೀಗೆ ಹೇಳಿದರು:
ಅರಬ್ ಕ್ರಾಂತಿಯ ಬಳಿಕ ಇಸ್ಲಾಮೀ ಸಂಘಟನೆಯಲ್ಲುಂಟಾದ ಮಹತ್ತರವಾದ ಬದಲಾವಣೆಯೆಂದರೆ ಅದು ಇತರ ಪಕ್ಷಗಳ ಜೊತೆ ಸಹಕರಿಸಿ ಕಾರ್ಯ ಪ್ರವೃತ್ತರಾಗಲು ಸಿದ್ಧವಾಯಿತು ಎಂದಾಗಿದೆ. ನಾವು ಮಾತ್ರವಲ್ಲ ಸಾಮಾಜಿಕ ಬದಲಾವಣೆಯೂ ಆಗಬೇಕೆಂದು ಅವರು ಬಯಸಿದರು. ಸಂದೇಶ ಪ್ರಚಾರ ಮತ್ತು ರಾಜಕೀಯ ಎರಡನ್ನೂ ಪ್ರತ್ಯೇಕಿಸಿ ಎರಡೂ ಕಡೆಗೂ ಸಮರ್ಥ ನಾಯಕತ್ವ ನೀಡಿ ಬೆಳೆಸಿ ತರಲು ಸಂಘಟನೆಗೆ ಸಾಧ್ಯವಾಗಬೇಕೆಂದು ಅವರು ಹೇಳಿದರು.

ಸಂಕ್ಷಿಪ್ತವಾಗಿ ಹೇಳಬೇಕಾದರೆ ಅರಬ್ ಕ್ರಾಂತಿಯ ನಂತರ ಉಂಟಾದ ಕೆಲವು ಪರಿಸ್ಥಿತಿಯು ಇಸ್ಲಾಮೀ
ಸಂಘಟನೆಗಳಲ್ಲಿ ಮರು ಚಿಂತನೆ ನಡೆಸಲು ಪ್ರೇರೇಪಿಸಿತು. ಅರಬ್ ಕ್ರಾಂತಿಯಲ್ಲಿನ ಭಾಗೀದಾರಿಕೆ, ಅರಬ್ ಕ್ರಾಂತಿಯ ನಂತರ ಬಂದ ಇಸ್ಲಾಮಿಸ್ಟರ ಆಡಳಿತ, ಅದರ ಲೋಪಗಳು, ಶತ್ರುಗಳು ನಡೆಸಿದ ಪ್ರತಿಕ್ರಾಂತಿ ಅಷ್ಟು ಬೇಗ ಯಶಸ್ವಿಯಾಗಲು ಕಾರಣ ಇತ್ಯಾದಿ ವಿಚಾರಗಳ ಬಗ್ಗೆ ಇಸ್ಲಾಮಿಸ್ಟರು ವಿಮರ್ಶೆ ಚಿಂತನೆ ನಡೆಸುತ್ತಲೇ ಇದ್ದಾರೆ. ನಾವು ಮಿಥ್ಯಧಾರಣೆಯಲ್ಲಿ ಅಭಿಮುಖೀಕರಿಸುತ್ತಿದ್ದೆವು ಎಂಬ ಪ್ರಜ್ಞೆ ಹಲವು ಸಂಘಟನೆಗಳಿಗೆ ಮೂಡಿದೆ.

ಕಾಲಾನುಕ್ರಮವಾಗಿ ಆತ್ಮವಿಮರ್ಶೆಗೆ ಧೈರ್ಯ ತೋರಿ ಸಂದರ್ಭಾನುಸಾರ ಪ್ರತಿದಿನ ಅಪ್ಡೇಟ್ ಮಾಡದಿದ್ದರೆ ಅರಬ್ ಕ್ರಾಂತಿಯ ಬಳಿಕ ಎದುರಿಸಿದ ಹಲವು ಸೋಲುಗಳನ್ನು ತಪ್ಪಿಸಬಹುದಾಗಿತ್ತು. ಇಂದು ಹಲವು ಸಂಘಟನೆಗಳಲ್ಲಿ ಆಂತರಿಕ ಭಿನ್ನತೆಗಳು ಕಾಡುತ್ತಿವೆ. ಸ್ವಯಂ ವಿಮರ್ಶೆಗೆ ಒಳಗಾಗದಿದ್ದರೆ ಸಂಘಟನೆಗಳು ಆಂತರಿಕ ಭಿನ್ನತೆ ಎದುರಿಸಬೇಕಾಗುವುದು ಸಹಜವಾಗಿದೆ. ಜಗತ್ತಿನ ಅತೀ ದೊಡ್ಡ ಇಸ್ಲಾಮೀ ಸಂಘಟನೆಯಾದ ಅಲ್ ಇಖ್ವಾನುಲ್ ಮುಸ್ಲಿಮೂನ್‌ನಲ್ಲಿ ಬಿರುಕು ಮೂಡಿ ಇಬ್ಭಾಗದತ್ತ ಸಾಗಿರುವುದು ಇದಕ್ಕೆ ಉದಾಹರಣೆಯಾಗಿದೆ.

ಇಷ್ಟೆಲ್ಲಾ ಹೇಳಿರುವುದರ ಕಾರಣ ವಿಶ್ವದ ಎಲ್ಲಾ ಇಸ್ಲಾಮೀ ಸಂಘಟನೆಗಳು, ಅದರ ಸಿದ್ದಾಂತಗಳು ಚಟುವಟಿಕೆಗಳಿಗೆ ನೂರು ವರ್ಷ ಪೂರ್ತಿಯಾಗುವ ಈ ಸಂದರ್ಭದಲ್ಲಿ ಸಂಪೂರ್ಣವಾದ ಪರಿಶೀಲನೆ ಮತ್ತು ತಿದ್ದುವಿಕೆ ನಡೆಯಬೇಕು. ಅದರ ಆಧಾರದಲ್ಲಿ ಅದರ ಭವಿಷ್ಯ, ನಿಲುವು, ಧ್ಯೇಯಗಳನ್ನು ನಿರ್ಧರಿಸಬೇಕು.
[ಸಶೇಷ]