ಕೇಜ್ರಿವಾಲ್ ಬಂಧನ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

0
235

ಸನ್ಮಾರ್ಗ ವಾರ್ತೆ

ಅಬಕಾರಿ ನೀತಿ ಯೋಜನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಮಾ.22) ಜಾರಿ ನಿರ್ದೇಶನಾಲಯದಿಂದ ಬಂಧನವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಒಪ್ಪಿಗೆ ಸೂಚಿಸಿದೆ.

ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಕೇಜ್ರಿವಾಲ್ ಪರವಾಗಿ ಹಾಜರಾಗಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದಲ್ಲಿ ತುರ್ತಾಗಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು ಕೇಜ್ರಿವಾಲ್‌ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.

ನಂತರ ಸಿಂಘ್ವಿ ಅವರು ವಿಚಾರಣೆಯನ್ನು ಪರಿಗಣಿಸುವಂತೆ ನ್ಯಾಯಮೂರ್ತಿ ಖನ್ನಾ ಅವರ ಕೋರ್ಟ್‌ಗೆ ಧಾವಿಸಿದರು.

ಕೇಜ್ರಿವಾಲ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಖನ್ನಾ ಅವರು ತ್ರಿಸದಸ್ಯ ಪೀಠವು ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.

ಸಂಜೀವ್‌ ಖನ್ನಾ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿ ಎಂಎಂ ಸುಂದರೇಶ್ ಹಾಗೂ ನ್ಯಾಯಮೂರ್ತಿ ಬೇಲಾ ದ್ವಿವೇದಿ ಒಳಗೊಂಡ ಪೀಠ ಕೇಜ್ರಿವಾಲ್‌ ಬಂಧನದ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸಲಿದೆ.

ಮೂಲಗಳ ಪ್ರಕಾರ ಸ್ವಾತಂತ್ರ್ಯ ನಂತರದಲ್ಲಿ ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿದ್ದಾಗಲೇ ಬಂಧನಕ್ಕೊಳಗಾಗಿರುವುದು ಇದೇ ಮೊದಲ ಪ್ರಕರಣವಾಗಿದೆ.