ಬೇರೆ ದೇಶದಿಂದ ಬಂದ ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಸ್ಟಿಕ್ಕರ್‌ ಅಂಟಿಸಿದ ವಿಚಾರವನ್ನು ಫಾರ್ವರ್ಡ್‌ ಮಾಡುವ ಮುನ್ನ…

0
1950

ಬರಹ: ಮುಹಮ್ಮದ್ ಬಿನ್ ಇರ್ಷಾದ್‌

ಈ ಬಾರಿ ಭಾರತಕ್ಕೆ ಜಗತ್ತಿನ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಕೊರೋನಾ ಎರಡನೇ ಅಲೆಯ ಹೊಡೆತ ಬಿದ್ದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮುನ್ನಚ್ಚರಿಕೆ ಇದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಚುನಾವಣೆ ಡೊಂಬರಾಟ ನಡೆಸಿದ್ದು ಭಾರತದಲ್ಲಿ ಸಾವಿನ ಮೆರವಣಿಗೆಗೆ ಕಾರಣವಾಗುತ್ತಿದೆ. ಸಂಖ್ಯೆ ಏರುತ್ತಲೇ ಇದೆ, ಆಮ್ಲಜನಕದ ಕೊರತೆ ಒಂದೆಡೆಯಾದರೆ, ವೆಂಟಿಲೇಟರ್‌ ಇರುವ ಬೆಡ್‌ಗಳ ಸಂಖ್ಯೆ ಬಹಳ ಕಡಿಮೆ ಇದೆ. ಇದನ್ನೆಲ್ಲ ಗಮನಿಸಿ ವಿದೇಶಗಳಿಂದ ಭಾರತದೆಡೆಗೆ ನೆರವಿನ ಸುರಿಮಳೆಯೇ ಬರುತ್ತಿದೆ. ಗಲ್ಫ್‌ ರಾಷ್ಟ್ರಗಳ ನೆರವೂ ಭಾರತಕ್ಕೆ ಬಂದಿದೆ. ಆ ದೇಶಗಳ ಆರ್ಥಿಕ ಅಭಿವೃದ್ದಿಯಲ್ಲಿ ಭಾರತದ ಮಾನವ ಸಂಪನ್ಮೂಲ ವಲಸೆ ಕಾರ್ಮಿಕರ ಮೂಲಕ ಹೆಚ್ಚಿರುವುದರಿಂದ ಆ ದೇಶಗಳು ಸಹಜವಾಗಿಯೇ ಕೊಡುವುದರಲ್ಲಿ ಒಂದು ಕೈ ಮುಂದಿದೆ.

ಸೌದಿ ಅರೇಬಿಯಾ, ಬಹ್ರೇನ್‌ ಸೇರಿದಂತೆ ಗಲ್ಫ್‌ ರಾಷ್ಟ್ರಗಳಿಂದ ಆಮ್ಲಜನಕ ಹೊತ್ತ ವಿಮಾನಗಳು ಭಾರತದ ನೆಲ ಸ್ಪರ್ಷಿಸಿದೆ. ಅಲ್ಲಿಂದ ಲೋಡಿಂಗ್‌ ಆಗುವ ಸಂದರ್ಭದಲ್ಲಿನ ವಿಡಿಯೋಗಳ ನಮ್ಮ ವಾಟ್ಸ್‌ಆಪ್‌ ಸ್ಟೇಟಸ್‌ಗಳಲ್ಲಿ ’ಮೊಹಮ್ಮದರ ನಾಡಿನಿಂದ ಆಮ್ಲಜನಕ ಬರುತ್ತಿದೆ, ಶಿಫಾ ಬರುತ್ತಿದೆ’ ಎಂದು ರಾರಾಜಿಸಿದ್ದು ಎಲ್ಲರಿಗೂ ನೆನಪಿರಬಹುದು. ಅಷ್ಟೇ ಅಲ್ಲ, ವೈದ್ಯಕೀಯ ಸಲಕರಣೆಗಳು, ವೆಂಟಿಲೇಟರ್‌ಗಳು ಭಾರತಕ್ಕೆ ನೆರವಿನ ರೂಪದಲ್ಲಿ ಬಂದಿರುವುದು, ಕೊರೋನಾ ವಿರುದ್ಧದ ಹೋರಾಟಕ್ಕೆ ದೊಡ್ಡ ಬಲ ನೀಡಿದೆ. ದಿನಂಪ್ರತೀ 3.5 ಲಕ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿರುವುದರಿಂದ ಅಷ್ಟು ಮಂದಿಗೆ ಬೆಡ್‌ ಹೊಂದಿಸುವುದು ಸುಲಭದ ಕೆಲಸವಲ್ಲ. ಅದು ಎಲ್ಲರಿಗೂ ಗೊತ್ತಿರುವಂತಹದ್ದೇ!

ಈಗ ಸಮಸ್ಯೆ ಉದ್ಭವವಾಗಿರುವುದು ಸಾಬರ ನಾಡಿನ ಆಮ್ಲಜನಕಕ್ಕೆ, ರಿಲಾಯನ್ಸ್‌ ಹೆಸರು ಎಂಬ ಪ್ರಶ್ನೆ.ಇದಕ್ಕೆ ಪೂರಕವೆಂಬಂತೆ ಒಂದಿಷ್ಟು ವಿಡೀಯೋ ಸ್ಟಾರ್‌ಗಳ ವಿಡೀಯೋ ಶೂಟ್‌ಗಳು. ಅದನ್ನು ಫಾರ್ವರ್ಡ್‌ ಮಾಡುವ ನಮ್ಮ ನಿಮ್ಮಂಥ ಮನಸ್ಸುಗಳು. ಇಲ್ಲಿ ಇರುವ ವಾಸ್ತವವೇ ಬೇರೆ. ಒಂದು ದೇಶದಿಂದ ಆಮ್ಲಜನಕ ಬಂದ ಮಾತ್ರಕ್ಕೆ ಅದು ಹಾಗೆಯೇ ಬಳಸಲು ಯೋಗ್ಯವಾಗಿ ಇರುವುದಿಲ್ಲ. ಅಲ್ಲಿನ ವಾತಾರವರಣಕ್ಕೆ ತಕ್ಕಂತೆ ವೈಜ್ಞಾನಿಕ ಚೌಕಟ್ಟಿನೊಳಗೆ ತುಂಬಿಸಿ ಕಳುಹಿಸಿದ ಟ್ಯಾಂಕ್‌ಗಳು ಇಲ್ಲಿನ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಸ್ವಲ್ಪ ಕೆಲಸ ಇದೆ. ಅದನ್ನು ಸಂಸ್ಕರಿಸಿದ ಬಳಿಕವಷ್ಟೇ ಅದು ಬಳಸಲು ಯೋಗ್ಯವಾಗುತ್ತದೆ. ಈ ಪ್ರಕ್ರಿಯೆಗಳನ್ನು ಮಾಡಲು ಒಂದಿಷ್ಟು ಕೈಗಾರಿಕೆಗಳು ಮುಂದೆ ಬಂದಿದೆ. ಅದರಲ್ಲಿ ರಿಲಾಯನ್ಸ್‌, ಇಂಡಿಯನ್‌ ಆಯಿಲ್‌ಗಳು ಸೇರಿದೆ. ಹಾಗಾಗಿ ಬಂದರು, ವಿಮಾನ ನಿಲ್ದಾಣಗಳಿಗೆ ಬಂದ ಟ್ಯಾಂಕರುಗಳನ್ನು ಆಯಾ ಕಂಪೆನಿಯ ಸ್ಟಿಕ್ಕರ್‌ ಹಚ್ಚಿ ವರ್ಗೀಕರಣ ಮಾಡಿಯೇ ಅದನ್ನು ಆಯಾ ಕಂಪೆನಿಗಳ ಘಟಕ್ಕೆ ಸಂಸ್ಕರಣೆಗೆ ಕಳುಹಿಸಲಾಗುತ್ತದೆ. ಬಳಿಕವಷ್ಟೇ ಅದು ಬಳಸಲು ಯೋಗ್ಯವಾಗಿ, ನಮ್ಮ ಆಸ್ಪತ್ರೆಗಳಿಗೆ ತಲುಪಿ ಜೀವರಕ್ಷಕವಾಗುತ್ತದೆ. ವಿಮಾನ ನಿಲ್ದಾಣದಿಂದ, ಬಂದರುಗಳಿಂದ ಈ ಘಟಕಗಳಿಗೆ ಕಳುಹಿಸಲು ಗುರುತು ಮಾಡುವ ಭಾಗವಾಗಿ ಮಾತ್ರ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ.

ಈ ಎಲ್ಲಾ ಪ್ರಕ್ರಿಯೆಗಳ ಕುರಿತು ಮಾಹಿತಿ ಇಲ್ಲದ ದಿನಕ್ಕೆ ಸಿಗುವ ಕನಿಷ್ಟ ಒಂದೂವರೆ ಜಿಬಿ ಇಂಟರ್‌ನೆಟ್‌ ಹೇಗೆ ಖಾಲಿ ಮಾಡಬೇಕೆಂದು ಗೊತ್ತಿಲ್ಲದ ಕೆಲಸವಿಲ್ಲದ ಮಂದಿ ಅದನ್ನು ಸ್ಟಿಕ್ಕರ್‌ ಹಚ್ಚಿ ತಮ್ಮ ಹೆಸರು ಹಾಕಿಕೊಂಡು ಭಾರತದ ಕಂಪೆನಿಗಳು, ತಮ್ಮ ಉತ್ಪನ್ನವಾಗಿಸುತ್ತಿದ್ದಾರೆ ಎಂದು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ದಯವಿಟ್ಟು ಅದನ್ನು ನಿಲ್ಲಿಸೋಣ. ಇದು ತಮಾಷೆ ಮಾಡಲು ಇರುವ ಸಮಯ ಅಲ್ಲ. ಒಂದು ವೇಳೆ ನಮ್ಮ ಈ ತಮಾಷೆಗಳು ವಿದೇಶಗಳ ಕದ ತಟ್ಟಿ ಆಮ್ಲಜನಕದ ಸರಬರಾಜು ನಿಂತರೆ, ವೆಂಟಿಲೇಟರ್‌ನಲ್ಲಿರುವ ಅದೆಷ್ಟೋ ಜೀವಗಳನ್ನು ಉಳಿಸಿಕೊಳ್ಳಲು ನಾವು ಕಷ್ಟಪಡಬೇಕಾದೀತು. ವಿಡೀಯೋ ಮಾಡಿ ಹೀರೋ ಆಗುವ ಮುನ್ನ ಇದನ್ನು ಯೋಚಿಸಿದರೆ ಉತ್ತಮ. ನಾನು ಮಾಡುವ ಕೆಲಸ ಅಲ್ಲಾಹನಿಗೆ, ಅವನ ಪ್ರವಾದಿಗೆ ಸರಿ ಎಂದು ಕಾಣಬಹುದೇ ಎಂದು ಯೋಚಿಸಿ ಪ್ರತೀ ಹೆಜ್ಜೆ ಇಡೋಣ. ಗೆಲುವು ನಮ್ಮದಾಗುತ್ತದೆ. ಈ ಲೇಖನ ಬರೆಯುವ ಮುನ್ನ ಇದರ ಬಗ್ಗೆ ಒಂದಿಷ್ಟು ಅಧ್ಯಯನ ಮಾಡಿಯೇ ಬರಿದಿದ್ದೇನೆ, ಪ್ರತಿಕ್ರಿಯೆಗಳಿಗೆ ಸ್ವಾಗತ. ಆರೋಗ್ಯಕರ ಚರ್ಚೆ ಇರಲಿ.

ಕೊನೆಯದಾಗಿ,
ಕಷ್ಟಬಂದಾಗ ಮುಂದೆ ನಿಂತು ಸಹಾಯ ಮಾಡುವುದರಲ್ಲಿ ಮುಸ್ಲಿಂ ಸಮುದಾಯ ಯಾವಾಗಲೂ ಮುಂದೆ ಇದೆ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಕುಟುಂಬದರಿವದ್ದರೂ ಅನಾಥವಾಗಿ ಬೀಳಬೇಕಾದ ಅದೆಷ್ಟೋ ಶವಗಳಿಗೆ ಮುಸ್ಲಿಂ ಸಹೋದರರು ಹೆಗಲು ನೀಡಿದ್ದರಿಂದ, ಅವುಗಳ ಅಂತಿಮ ಯಾತ್ರೆ ಗೌರವಯುತವಾಗಿ ನಡೆದಿದೆ. ಬೇರೆ ಸಮಾಜದ ಜನರಿಗೆ ನಮ್ಮ ಈ ಕೆಲಸಗಳು ನಮ್ಮ ಬಗೆಗಿನ ಗೌರವ ಹೆಚ್ಚಿಸಿದೆ. ನಮ್ಮ ಈ ರೀತಿಯ ಕೆಲಸಗಳಿಗೆ ಇನ್ನೂ ನಾವು ಹೆಚ್ಚಾಗಿ ತೊಡಗಿಸಿಕೊಳ್ಳೋಣ. ಪ್ರತೀ ನಿಮಿಷವೂ ಇತರರ ಏಳಿಗೆ ಬಗ್ಗೆ ಯೋಚಿಸೋಣ. ಪವಿತ್ರ ರಂಜಾನ್‌ ಮಾಸದಲ್ಲಿ ಸೇವೆಯೇ ನಮ್ಮ ಸ್ವದಕಾ ಆಗಲಿ….