ಸನ್ಮಾರ್ಗ ವಾರ್ತೆ
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬೆಲೆಗಳಲ್ಲಿ ಉಂಟಾದ ಏರಿಕೆಯ ಹಿನ್ನೆಲೆಯಲ್ಲಿ, ಬುಧವಾರ ವಾಣಿಜ್ಯ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್ಪಿಜಿ) ಬೆಲೆಯನ್ನು 195.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 2,078.5 ರೂ. ಆಗಿದೆ.
ಕಳೆದ ಬಾರಿ ಮಾರ್ಚ್ 1 ರಂದು ಪ್ರತಿ 19 ಕೆಜಿ ಸಿಲಿಂಡರ್ ಬೆಲೆಯನ್ನು 114.5 ರೂ. ಹೆಚ್ಚಿಸಲಾಗಿತ್ತು ಎಂದು ಸುದ್ಧಿ ಸಂಸ್ಥೆ ವರದಿ ಮಾಡಿದೆ. ಮಾರ್ಚ್ 7 ರಂದು ಪ್ರತಿ 14.2 ಕೆಜಿ ಸಿಲಿಂಡರ್ಗೆ 60 ರೂ. ಹೆಚ್ಚಳವಾಗಿದ್ದ ಗೃಹಬಳಕೆಯ ಎಲ್ಪಿಜಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 913 ರೂ. ಆಗಿದೆ ಎಂದು ಪಿಟಿಐ ವರದಿ ಮಾಡಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ದಿನದಂದು ಅಂತರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರದ ಆಧಾರದ ಮೇಲೆ ವಿಮಾನ ಇಂಧನ (ATF) ಮತ್ತು ಎಲ್ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಾಗತಿಕ ಪೆಟ್ರೋಲಿಯಂ ದ್ರವ ಪೂರೈಕೆಯ ಸುಮಾರು 20% ರಷ್ಟು ಹಾದುಹೋಗುವ ಹಾರ್ಮುಝ್ ಜಲಸಂಧಿಯನ್ನು ಹೆಚ್ಚಿನ ವಾಣಿಜ್ಯ ಹಡಗುಗಳಿಗೆ ಇರಾನ್ ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ. ಇದು ಭಾರತದಲ್ಲಿ ಎಲ್ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ದೇಶವು ತನ್ನ ಎಲ್ಪಿಜಿ ಬೇಡಿಕೆಯ ಸುಮಾರು 60% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಹೆಚ್ಚಿನವು ಕೊಲ್ಲಿ ರಾಷ್ಟ್ರಗಳಿಂದ ಬರುತ್ತದೆ.












