ಸನ್ಮಾರ್ಗ ವಾರ್ತೆ
ಮುರ್ಶಿದಾಬಾದ್, ಮಾ. 5: ಪಶ್ಚಿಮ ಬಂಗಾಳದ ಮತದಾರರ ಗುರುತು ಚೀಟಿಯಲ್ಲಿ ನಾಯಿಯ ಫೋಟೊ ಹಾಕಿ ಕೊಟ್ಟ ಅಧಿಕಾರಿಗಳ ವಿರುದ್ಧ ವ್ಯಕ್ತಿಯೊಬ್ಬರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮುರ್ಶಿದಾಬದಿನ ರಾಮನಗರದ ಸುನಿಲ್ ಕರ್ಮೇಕರ್ ರಿಗೆ ನಾಯಿ ಫೋಟೊ ಹಾಕಿ ಮತದಾರ ಗುರುತು ಚೀಟಿ ಕಳುಹಿಸಿಕೊಡಲಾಗಿದೆ. ಐಡಿ ಕಾರ್ಡಿನ ತಪ್ಪು ತಿದ್ದುಪಡಿಗೆ ಕಳುಹಿಸಿದ್ದ ಸುನಿಲ್ಗೆ ತನ್ನ ಫೋಟೊದ ಬದಲು ನಾಯಿಯ ಫೋಟೊ ನೋಡಬೇಕಾಗಿ ಬಂತು. ದುಲಲ್ ಸ್ಮೃತಿ ಸ್ಕೂಲ್ಗೆ ನಿನ್ನೆ ನನ್ನನ್ನು ಕರೆಯಲಾಯಿತು. ಅಲ್ಲಿ ಐಡಿ ಕಾರ್ಡನ್ನು ಸಹಿ ಹಾಕಿ ಕೊಟ್ಟರು. ಅದರಲ್ಲಿನ ಫೋಟೊ ಅವರು ನೋಡಲಿಲ್ಲ. ಇದು ತನ್ನ ಆತ್ಮಗೌರವಕ್ಕೆ ಧಕ್ಕೆ ತಂದಿದೆ. ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿಗೆ ದೂರು ನೀಡುವೆ. ಇನ್ನು ಇಂತಹ ಘಟನೆಗಳು ನಡೆಯಬಾರದು ಎಂದು ಸುನಿಲ್ ಹೆಳಿದರು.
ಇದೇ ವೇಳೆ ಸುನಿಲ್ ಕರ್ಮೇಕರ್ ರ ಐಡಿ ಕಾರ್ಡಿನ ಚಿತ್ರ ತಿದ್ದಲಾಗಿದೆ. ಹೊಸ ಕಾರ್ಡು ಅವರಿಗೆ ಶೀಘ್ರ ವಿತರಿಸಲಿದ್ದೇವೆ ಎಂದು ಬಿಡಿಒ ತಿಳಿಸಿದ್ದಾರೆ.












