ಬೋಟ್ ಅವಘಡ: ನೌಶಾದ್ ಸಾವಿನ ಸಮಗ್ರ ತನಿಖೆಯಾಗಲಿ; ದೋಣಿ ಮೀನುಗಾರರ ಸಂಘದಿಂದ ಒತ್ತಾಯ

0
679

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಬೆಂಗರೆ ಪ್ರದೇಶದ ನಿವಾಸಿಗಳಾದ ನೌಶಾದ್ ಮತ್ತು ಅಫ್ರೀದ್ ಫಲ್ಗುಣಿ ನದಿಯಲ್ಲಿ ದೋಣಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ, ಸುಮಾರು 9.30ರ ಹೊತ್ತಿಗೆ ಧಕ್ಕೆಯಿಂದ ಕಡಲಿಗೆ ತೆರಳುತ್ತಿದ್ದ ಮೀನಿನ ಬೋಟೊಂದು ಅತೀ ವೇಗದಿಂದ ವಿರುದ್ಧ ದಿಕ್ಕಿನಲ್ಲಿ ಬಂದು ದೋಣಿಗೆ ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ಇಬ್ಬರು ನದಿಗೆ ಎಸೆಯಲ್ಪಟ್ಟಿದ್ದು, ಅಫ್ರೀದ್ ಈಜಿ ದಡ ಪಾರಾದನಾದರೂ, ನೌಶಾದ್ ನೀರಿನಲ್ಲಿ ಮುಳುಗಿ ಮರಣ ಹೊಂದಿದ್ದಾನೆ. ದೋಣಿ ತೀವ್ರ ಹಾನಿಯಾಗಿದ್ದು, ಢಿಕ್ಕಿಯಾದ ಬೋಟ್ ನಿಲ್ಲದೆ ಸಮುದ್ರಕ್ಕೆ ಪರಾರಿಯಾಗಿದೆ ಎಂದು ವರದಿಯಾಗಿದೆ.

ನೌಶಾದ್ ತನ್ನ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದು, ಮಗನನ್ನು ಕಳೆದುಕೊಂಡ ಮನೆಯವರು ದಿಕ್ಕಿಲ್ಲದಂತಾಗಿದ್ದಾರೆ. ಮಾಧ್ಯಮದಲ್ಲೂ ಸಾವಿನ ಕುರಿತು ಸತ್ಯಕ್ಕೆ ವಿರುದ್ಧವಾದ ವರದಿ ಬಂದಿದೆ ಎಂದು ಆರೋಪಿಸಲಾಗಿದ್ದು, ಇದಕ್ಕಾಗಿ ಬೆಂಗರೆ ಪ್ರದೇಶದ `ದೋಣಿ ಮೀನುಗಾರರ ಸಂಘ’ವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್ ಮಾಧ್ಯಮದೊಂದಿಗೆ ಮಾತನಾಡುತ್ತಾ, “ಮರಣ ಹೊಂದಿದ ನೌಶಾದ್ ನಮ್ಮ ಸಂಘದಲ್ಲಿ ಪ್ರಾರಂಭದಿಂದಲೇ ಸದಸ್ಯನಾಗಿದ್ದು, ಸೌಮ್ಯ ಸ್ವಭಾವದ ಯುವಕನಾಗಿದ್ದ, ಮರಣದ ಬಗ್ಗೆ ಬಂದ ವರದಿಯಿಂದ ನಮಗೆ ತುಂಬಾ ಬೇಸರವಾಗಿದೆ. ನೀರಿನಿಂದ ಪಾರಾದ ಇನ್ನೊಬ್ಬ ಯುವಕ ಈ ದುರಂತಕ್ಕೆ ನೇರ ಸಾಕ್ಷಿಯಾಗಿದ್ದಾನೆ, ದೋಣಿ ಮೀನುಗಾರರ ಸಂಫವು, ಈ ಅಪಘಾತವನ್ನು ನಡೆಸಿದ ಬೋಟ್ ಚಾಲಕ ಮತ್ತು ಮಾಲಕರ ಮೇಲೆ ಹಿಟ್ ಆಂಡ್ ರನ್ ಕೇಸನ್ನು ಹಾಕಬೇಕೆಂದು ಹಾಗೂ ನೌಶಾದ್ ಸಾವಿನ ತನಿಖೆಯನ್ನು ಸಮಗ್ರವಾಗಿ ಮಾಡಿಸಬೇಕೆಂದು ಸಂಘವು ಆಗ್ರಹಿಸಿದೆ. .

ಅದೇ ರೀತಿ ನೌಶಾದ್‍ನ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ಧನವನ್ನು ನೀಡಬೇಕು, ದೋಣಿ ಮೀನುಗಾರಿಕೆಯನ್ನು ನಡೆಸುತ್ತಿರುವವರ ಪ್ರಾಣಕ್ಕೆ ಯಾವುದೇ ರಕ್ಷಣೆ ಇಲ್ಲದಂತಾಗಿದ್ದು, ದೋಣಿ ಮೀನುಗಾರಿಕೆಯ ಕಸುಬಿಗೆ ಮತ್ತು ಮೀನುಗಾರರಿಗೆ ಸರಕಾರ ಅಗತ್ಯ ಮೂಲಭೂತ ಸೌಕರ್ಯ-ಸೌಲಭ್ಯಗಳನ್ನು ನೀಡುವಂತೆ ಸರಕಾರವನ್ನು ಕೋರಿದೆ. ಇದಕ್ಕೂ ಮೊದಲು ಇಂತಹ ಘಟನೆಗಳು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಇನ್ನು ಮುಂದೆ ದೋಣಿ ಮೀನುಗಾರರ ಸಂಘವು ಇದರ ಬಗ್ಗೆ ಹೆಚ್ಚು ನಿಗಾ ವಹಿಸಲಿದೆ. ನೌಶಾದ್‍ನ ಸಾವಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಹೋರಾಟವನ್ನು ಮಾಡಲಿದೆ. ಇನ್ನು ಈ ರೀತಿಯ ಘಟನೆ ಆಗದಂತೆ ಸರಕಾರ ಕ್ರಮ ತೆಗೆದುಕೊಳ್ಳಲಿ” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಅಧ್ಯಕ್ಷ ಇಸ್ಮಾಈಲ್ ಯು.ಎ. ಉಪಸ್ಥಿತರಿದ್ದರು.