ಬಜೆಟ್ ಅಧಿವೇಶನ । ಸದನದಲ್ಲಿ ಸದ್ದು ಮಾಡಿದ ‘ಸಿದ್ದರಾಮಯ್ಯ‌ರನ್ನು ಹೊಡೆದು ಹಾಕಿ’ ಹೇಳಿಕೆ

0
177

ಸರಕಾರದ ಮಂತ್ರಿಗಳಲ್ಲಿ ಮೀರ್ ಸಾದಿಕ್ ವಂಶಸ್ಥರಿದ್ದಾರೆ: ಯು ಟಿ ಖಾದರ್

ಸನ್ಮಾರ್ಗ ವಾರ್ತೆ

ಬೆಂಗಳೂರು : ‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು’ ಎಂದು ಸಚಿವ ಅಶ್ವಥ್‌ ನಾರಾಯಣ್‌ ಮಂಡ್ಯದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯು ಸದನದಲ್ಲಿ ಕೂಡ ಗುರುವಾರ ಸದ್ದು ಮಾಡಿದೆ.

ಸದನದ ಶೂನ್ಯ ವೇಳೆಯಲ್ಲಿ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಹೆಚ್ಚುತ್ತಿರುವ ದ್ವೇಷ ಭಾಷಣ ಮತ್ತು ಕೋಮು ಸೌಹಾರ್ದ ಕದಡುವ ಕೃತ್ಯಗಳ ಬಗ್ಗೆ ಉಲ್ಲೇಖಿಸಿದ ವಿಧಾನಸಭಾ ಪ್ರತಿಪಕ್ಷದ ಉಪ ನಾಯಕ ಯು ಟಿ ಖಾದರ್ , ಸಂವಿಧಾನ ಬದ್ದವಾಗಿ ಪ್ರಮಾಣ ವಚನ ಸ್ವೀಕರಿಸಿದ ಜನಪ್ರತಿನಿಧಿಗಳೇ ಇಂದು ದ್ವೇಷ ಭಾಷಣ ಮತ್ತು ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಉಳ್ಳಾಲ, ತುಮಕೂರು ಕಡೆಗಳಲ್ಲಿ ಕೂಡ ಬಂದು ಮಾತನಾಡಿದ್ದಾರೆ. ಅವರಿಗೆ ನಾವು ಪ್ರತಿಕ್ರಿಯಿಸಿ, ಅವರ ಬಲೆಗೆ ನಾವು ಬೀಳುವುದು ಬೇಡ ಎಂದು ನಾವು ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ತಿಳಿಸಿದರು.

“ನಿನ್ನೆ ಮಧ್ನಾನ್ಹ ನಿಮಗೆ(ಸಭಾಧ್ಯಕ್ಷ ಕಾಗೇರಿ) ಮನವಿ ಕೊಟ್ಟಿದ್ದೆ. ಇವತ್ತು ಜನ ಸಾಮಾನ್ಯರು ಬಿಟ್ಟು, ಸರ್ಕಾರದ ಓರ್ವ ಮಂತ್ರಿಯೇ ದ್ವೇಷ ಭಾಷಣ ಮಾಡುತ್ತಿದ್ದಾರೆ. ಸಣ್ಣ ಶಿಕ್ಷಣ ಸಚಿವರಾದರೆ ಬೇರೆ ವಿಷಯ. ಅವರು ಬೇರೆ ಉನ್ನತ ಶಿಕ್ಷಣ ಸಚಿವರು. ವೈದ್ಯರೂ ಬೇರೆ. ಈ ರೀತಿ ಕಲಿತವರಿಂದಲೇ ಸಮಸ್ಯೆಯೇ ಜಾಸ್ತಿ, ಕಲಿಯದಿದ್ದವರಿಂದಲ್ಲ. ನಿನ್ನೆ ಸಚಿವ ಅಶ್ವಥ್‌ ನಾರಾಯಣ್‌ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರನ್ನು ಉಲ್ಲೇಖಿಸಿ, ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಮಂತ್ರಿಯ ಈ ಹೇಳಿಕೆಯ ಅರ್ಥ ಏನು ಎಂದು ಯು ಟಿ ಖಾದರ್ ಪ್ರಶ್ನಿಸಿದರು.

 

ಕಾಂಗ್ರೆಸ್ ನಾಯಕರಿಗೆ ಸಿಗುವ ಅಪಾರವಾದ ಜನ ಬೆಂಬಲ ಸಹಿಸಲಾರದೆ ಬಾಯಿಗೆ ಬಂದ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ಮಂತ್ರಿಗಳಲ್ಲಿ ಮೀರ್ ಸಾದಿಕ್ ವಂಶಸ್ಥರಿದ್ದಾರೆ. ನೇರವಾಗಿ ಮಾತುಕತೆ ನಡೆಸಲು ಆಗದ್ದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ದ್ವೇಷ ಭಾಷಣ ಮಾಡಿದವರ ಮೇಲೆ ಸುಮೋಟೋ ಕೇಸು ದಾಖಲು ಮಾಡಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಇದೆ. ಆದ್ದರಿಂದ ಸುಮೋಟೋ ಕೇಸು ದಾಖಲು ಮಾಡಬೇಕು ಎಂಬುದು ನಮ್ಮ ಬೇಡಿಕೆ. ಮಂತ್ರಿಗಳ ಮೇಲೆ ಕ್ರಮ ಕೈಗೊಂಡು ಸಮಾಜದ ಎಲ್ಲರಿಗೂ ಸ್ಪಷ್ಟವಾದ ಎಚ್ಚರಿಕೆ ಸಂದೇಶ ಕೊಡಬೇಕು ಎಂದು ಆಗ್ರಹಿಸಿದರು.

ತಮ್ಮ ಹೇಳಿಕೆ ಬಗ್ಗೆ ಸಚಿವ ಅಶ್ವಥ್‌ ನಾರಾಯಣ್‌ ಸಮಜಾಯಿಷಿ ನೀಡಲು ಹೊರಟಾಗ, ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಮಧ್ಯೆ ಎದ್ದು ನಿಂತು ಖಂಡಿಸಿದರು. ಈ ನಡುವೆ ಸಭಾಧ್ಯಕ್ಷ ಕಾಗೇರಿ ಮತ್ತು ಈಶ್ವರ್ ಖಂಡ್ರೆ ಮಧ್ಯೆ ಮಾತಿಗೆ ಮಾತು ಬೆಳೆದ ಪರಿಣಾಮ ಸದನವನ್ನು ಹದಿನೈದು ನಿಮಿಷ ಮುಂದೂಡಬೇಕಾಯಿತು.