ಸನ್ಮಾರ್ಗ ವಾರ್ತೆ-
ಕೃಷ್ಣದಾಸ್ ರಾಜ್ ಗೋಪಾಲ್
ಅಯೋಧ್ಯೆಯ ತೀರ್ಪು ನ್ಯಾಯವಾದಿಗಳಿಗೆ ಉತ್ತರಿಸಲು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿವಾದಾತ್ಮಕ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಲು ಅನುಕೂಲವಾಗುವಂತೆ ಒಂದು ಯೋಜನೆಯನ್ನು ರೂಪಿಸಲು ಮತ್ತು ಟ್ರಸ್ಟ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂಬುದು ಇವುಗಳಲ್ಲಿ ಪ್ರಮುಖವಾದುದು.
ಹಿಂದೂ ನಂಬಿಕೆಯ ಮೂಲ ಭಾಗವಾಗಿರುವ ದೇವಾಲಯ ನಿರ್ಮಾಣಕ್ಕೆ ಅನುಕೂಲವಾಗುವಂತೆ ಜಾತ್ಯತೀತ ರಾಷ್ಟ್ರವೊಂದು ಆದೇಶಿಸಬಹುದೇ? ಇದು ಒಂದು ನಿರ್ದಿಷ್ಟ ಧರ್ಮವನ್ನು ಜಾತ್ಯತೀತ ರಾಷ್ಟ್ರವು ಬೆಳೆಸುವುದಕ್ಕೆ ಸಮನಾಗಿಲ್ಲವೇ?
ಮದ್ರಾಸ್ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಚಂದ್ರು ಅವರು 1994 ರ ಎಸ್ ಆರ್ ಬೊಮ್ಮಾಯಿ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ನ್ಯಾಯಾಧೀಶರ ನ್ಯಾಯಪೀಠದ ತೀರ್ಪನ್ನು ಎತ್ತಿ ಹೇಳಿದ್ದಾರೆ: “ಬೊಮ್ಮಾಯಿ ಅವರ ನಿರ್ಧಾರವು ದೇಶವು ಧರ್ಮದಿಂದ ಪ್ರತ್ಯೇಕವಾಗಿ ನಿಲ್ಲಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದೆ” ಎಂದು ಚಂದ್ರು ಹೇಳಿದ್ದಾರೆ.
ಬೊಮ್ಮಾಯಿ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಪ್ರಜಾಪ್ರಭುತ್ವದಲ್ಲಿ ಜಾತ್ಯತೀತ ದೇಶದ ಪರಿಕಲ್ಪನೆ ಅತ್ಯಗತ್ಯ ಎಂದು ಹೇಳಿದೆ. “ದೇಶವು ನಿರ್ದಿಷ್ಟ ಧರ್ಮದ ಪರವಾದ ಅಥವಾ ನಿರ್ದಿಷ್ಟ ಧರ್ಮದ ವಿರೋಧಿಯಲ್ಲ ಅಥವಾ ಈ ಎರಡರಿಂದಲೂ ದೂರವಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಧರ್ಮದ ವಿಷಯಗಳಲ್ಲಿ ತಟಸ್ಥ ನಿಲುವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಎಲ್ಲಾ ಧರ್ಮಗಳಿಗೆ ಸಮಾನ ರಕ್ಷಣೆ ನೀಡುತ್ತದೆ” ಎಂದು ಅದು ಹೇಳಿದೆ.
ಆದರೆ, ದೇವಾಲಯ ನಿರ್ಮಾಣದ ಜವಾಬ್ದಾರಿಯನ್ನು ಕೇಂದ್ರಕ್ಕೆ ನೀಡುವುದರಲ್ಲಿ ಯಾವುದೇ ಸಾಂವಿಧಾನಿಕ ಜಾತ್ಯತೀತತೆಯ ಉಲ್ಲಂಘನೆಯಾಗಿಲ್ಲ ಎಂದು ಖ್ಯಾತ ನ್ಯಾಯವಾದಿ ಉಪೇಂದ್ರ ಬಾಕ್ಸಿ ಎಂದು ಹೇಳಿದ್ದಾರೆ. ಅದೇವೇಳೆ, ಬೆಂಗಳೂರಿನ National Law School India University (NLSIU) ಯ ಮಾಜಿ ಉಪಕುಲಪತಿ ಮತ್ತು ಖ್ಯಾತ ಸಾಂವಿಧಾನಿಕ ತಜ್ಞ ಆರ್.ವೆಂಕಟ ರಾವ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಅಯೋಧ್ಯೆ ಕಾಯ್ದೆ 1993 ರ ಪ್ರಕಾರ ಅಯೋಧ್ಯೆಯ ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಸೆಕ್ಷನ್ 6 ರ ಅಡಿಯಲ್ಲಿ ಕೇಂದ್ರಕ್ಕೆ ಈಗಾಗಲೇ ಅಧಿಕಾರ ನೀಡಲಾಗಿದೆ ಎಂದು ಶ್ರೀ ಬಾಕ್ಸಿ ಹೇಳಿದರು. 1993 ರ ಕಾಯಿದೆಯ ಸೆಕ್ಷನ್ 7 (1)- ರ ಪ್ರಕಾರ ವಿವಾದಿತ ಪ್ರದೇಶವು “ಸರ್ಕಾರದಿಂದ ಅಥವಾ ಯಾವುದೇ ವ್ಯಕ್ತಿ ಅಥವಾ ಯಾವುದೇ ಟ್ರಸ್ಟ್, ಅಧಿಕಾರಿಗಳಿಂದ ನಿರ್ವಹಿಸಲು” ಅವಕಾಶವಿದೆ. 1993 ರ ಈ ಕಾಯಿದೆಯ ಸಿಂಧುತ್ವವನ್ನು ಸಹ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಆದರೆ ನ್ಯಾಯಮೂರ್ತಿ ಚಂದ್ರು ಅವರು ಅಯೋಧ್ಯೆ ಕಾಯ್ದೆಯನ್ನು “ಮಧ್ಯಂತರ ಕ್ರಮ” ಎಂದು ಹೇಳಿದ್ದಾರೆ.
ಆದರೆ, ಅಯೋಧ್ಯ ವಿವಾದಕ್ಕೆ ಸಂಬಂಧಿಸಿ ಕಕ್ಷಿಯೂ ಅಲ್ಲದ ಮತ್ತು ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಿಲ್ಲದ ಕೇಂದ್ರ ಸರಕಾರದೊಂದಿಗೆ ಯಾಕೆ ಅಯೋಧ್ಯೆ ನಿರ್ವಹಣೆಯ ಯೋಜನೆಯನ್ನು ರೂಪಿಸುವಂತೆ ಸು. ಕೋರ್ಟು ಆದೇಶಿಸಿತು ಎಂದು ಚಂದ್ರು ಪ್ರಶ್ನಿಸಿದ್ದಾರೆ. ಈ ವಿವಾದಿತ ಭೂಮಿಗೆ ಒಂದು ಯೋಜನೆಯನ್ನು ಸಿದ್ಧಪಡಿಸುವಂತೆ ಸಿವಿಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 92 (ಜಿ) ಅಡಿಯಲ್ಲಿ ಸ್ಥಳೀಯ ಸಿವಿಲ್ ನ್ಯಾಯಾಲಯದೊಂದಿಗೆ ಸು. ಕೋರ್ಟು ಕೇಳಬಹುದಿತ್ತು ಎಂದವರು ಹೇಳಿದ್ದಾರೆ.
ಸೌಜನ್ಯ: ದ ಹಿಂದೂ












