ನಮಗೆ ಧರ್ಮ-ಕರ್ಮಗಳಲ್ಲಿ ಜಿಗುಪ್ಸೆ ಮೂಡಿದೆ ಎಂದ ಮಕ್ಕಳು

0
259

✍️ ಜಾಸಿಮುಲ್ ಮುತವ್ವ

“ನನಗೆ ಧರ್ಮ ಮತ್ತು ಧಾರ್ಮಿಕ ವಿಶ್ವಾಸಿಗಳ ಬಗ್ಗೆ ಜಿಗುಪ್ಸೆಯಾಗಿದೆ. ಧರ್ಮದ ಬಗ್ಗೆ ಇರುವ ಬೋಧನೆಗಳ ಬಗ್ಗೆ ಅಲರ್ಜಿ” ಎಂದು ಆತ ಒಂದೇ ಉಸಿರಿಗೆ ಹೇಳತೊಡಗಿದ. “ನಿನಗೆ ಧರ್ಮದ ಬಗ್ಗೆ ಜಿಗುಪ್ಸೆ ಹುಟ್ಟಲು ಕಾರಣವೇನು?” ಎಂದು ಕೇಳಿದೆ. ಆತ ತನ್ನೊಂದಿಗೆ ಬಂದಿರುವ ಸಹೋದರಿಯ ಕಡೆ ನೋಡಿ, “ಕಾರಣ ಏನೆಂದು ನೀನೇ ತಿಳಿಸು” ಎಂದು ಆಕೆಯಲ್ಲಿ ಹೇಳಿದ.

ಸಹೋದರಿ ಮಾತು ಶುರು ಮಾಡಿ, “ನೋಡಿ ನನಗೀಗ 15 ವರ್ಷ. ನನ್ನ ಈ ಸಹೋದರ ನನಗಿಂತ ಎರಡು ವರ್ಷ ಹಿರಿಯವನು. ನಮ್ಮ ಮಾತಾಪಿತರ ಕುರಿತು ನೋವುಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ನಾವು ಬಂದಿದ್ದೇವೆ. ನಿಜವಾಗಿ ಅವರ ಕಾರಣದಿಂದಾಗಿ ನಮಗೆ ಧರ್ಮದ ಮೇಲೆ ಅಸಹ್ಯ ಹುಟ್ಟಿದೆ. ನನ್ನ ತಾಯಿ ಹಿಜಾಬ್‌ಧಾರಿಣಿಯಾಗಿ ಬಹಳ ಧರ್ಮನಿಷ್ಠೆ ಇರುವಂತೆ ಹೊರಗಡೆ ಇರುತ್ತಾರೆ. ಆದರೆ,

ಅವರ ಗುಣಸ್ವಭಾವಕ್ಕೂ ಧರ್ಮಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನಾವು ಸಣ್ಣ ಮಕ್ಕಳಾಗಿರುವಾಗ ಅವರ ಬಾಯಿಯಿಂದ ಬಂದಿರುವ ಮಾತುಗಳು ನಮಗರಿವಿಲ್ಲದೇ ಧರ್ಮದಿಂದ ದೂರ ಉಳಿಯುವಂತೆ ಮಾಡಿದೆ. ನಮ್ಮೊಂದಿಗೆ ಸುಳ್ಳು ಹೇಳಬಾರದು, ಸುಳ್ಳಾಡುವವರನ್ನು ಅಲ್ಲಾಹನು ನರಕಕ್ಕೆ ಎಸೆಯುವನು' ಎಂದು ಎಚ್ಚರಿಸುತ್ತಿದ್ದರು. ಅದೇ ವೇಳೆ ಅವರು ನಮ್ಮ ಮುಂದೆ ದಿನನಿತ್ಯ ಹಲವಾರು ಸುಳ್ಳು ಹೇಳುತ್ತಿದ್ದರು. ನಮ್ಮ ಮನದಲ್ಲಿಅಲ್ಲಾಹನು ಯಾಕೆ ಸುಳ್ಳು ಹೇಳುವ ಮಕ್ಕಳನ್ನು ಮಾತ್ರ ನರಕದಲ್ಲಿ ಸುಡುತ್ತಾನೆ, ದೊಡ್ಡವರನ್ನು ಯಾಕೆ ಶಿಕ್ಷಿಸದೆ ಹಾಗೆ ಬಿಡುತ್ತಾನೆ?’ ಎಂಬ ಚಿಂತೆ ಕಾಡುತ್ತಿತ್ತು. ನಾನು ಮತ್ತು ಸಹೋದರ ಜಗಳ ಮಾಡುವುದು ಕಂಡರೆ ತಾಯಿ ಕೂಡಲೇ ಓಡಿ ಬಂದು `ಹೀಗೆಲ್ಲಾ ಮಾಡುವುದನ್ನು ಅಲ್ಲಾಹನು ಇಷ್ಟಪಡಲಾರನು’ ಎನ್ನುತ್ತಿದ್ದರು. ಅಲ್ಲಾಹನು ನಮ್ಮನ್ನು ಇಷ್ಟಪಡುವುದಿಲ್ಲವೇ ಎಂದು ನಮಗೆ ಅನ್ನಿಸುವುದಿದೆ. ಮಕ್ಕಳನ್ನು ಬೆಂಕಿಯಲ್ಲಿ ಹಾಕಿ ಸುಡುವ ಆತನಿಗೆ ಕರುಣೆ ಇಲ್ಲವೇ? ನಾವು ಯಾಕೆ ನಮಾಝ್ ಮಾಡಬೇಕು? ನಾವು ಯಾಕೆ ಆತನನ್ನು ಆರಾಧಿಸಬೇಕು? ಎಂದೆಲ್ಲಾ ಚಿಂತನೆ ಮೂಡುತ್ತದೆ.”

ಆಗ ಮಧ್ಯ ಪ್ರವೇಶಿಸಿದ ಸಹೋದರ, “ಅದಕ್ಕಾಗಿ ಅವರು ನಮಗೆ ಹೊಡೆಯುವರು, ಗದರಿಸುವರು, ಜೋರಾಗಿ ಬೈಗುಳ ನಡೆಸುವರು. ಹೊರಗಡೆ ಹೋಗಿ ಇತರರಿಗೆ ಧರ್ಮದ ವಿಚಾರದಲ್ಲಿ ಹೇಳಿ ಉಪದೇಶಿ ಸುವರು. ಯಾವ ಧರ್ಮದ ಕುರಿತು ಅವರು ಬೋಧಿಸುತ್ತಿದ್ದಾರೆ ಎಂದು ನಮಗೆ ಆಶ್ಚರ್ಯವಾಗುವುದು. ಇದು ತಾಯಿಯ ಕತೆ. ತಂದೆ ಸಮರ್ಥ ವ್ಯಾಪಾರಿ. ಊರಿಗೆ ಹೆಸರುವಾಸಿ. ಉತ್ತಮ ನಮಾಝಿಗರು, ಧರ್ಮ ನಿಷ್ಠೆಯಿರುವವರು. ಆದರೆ ಅವರು… ಅಶ್ಲೀಲ ಚಿತ್ರ ನೋಡುತ್ತಿರುವುದನ್ನು ನಾವು ಎಷ್ಟೋ ಬಾರಿ ಗಮನಿಸಿದ್ದೇವೆ. ಅವರಿಗೆ ಅನ್ಯ ಸ್ತ್ರೀಯರೊಂದಿಗಿರುವ ಅನೈತಿಕ ಸಂಬಂಧದ ಬಗೆಗಿನ ಹಲವು ಚಿತ್ರಗಳು ಅವರ ಮೊಬೈಲ್‌ನಲ್ಲಿದೆ. ತನ್ನ ವ್ಯಾಪಾರದ ಪಾಲುದಾರ ಅರಿಯದಂತೆ ತನ್ನ ಅಗತ್ಯಕ್ಕಾಗಿ ಹಣ ವ್ಯಯಿಸುವುದನ್ನು ಕೂಡಾ ನಾನು ಗಮನಿಸಿದ್ದೇನೆ. ನಾನು ಮತ್ತು ನನ್ನ ಸಹೋದರಿ ಒಂದು ಹೊತ್ತಿನ ನಮಾಝ್ ಮಾಡದೇ ಇದ್ದರೆ ಹೊಡೆತಗಳ ಸುರಿಮಳೆ ಬೀಳುತ್ತಿತ್ತು. ಹೀಗೆ ನಮಾಝ್ ಬಗ್ಗೆ ನಮಗೆ ವಿರಕ್ತಿ ಮೂಡಿತು. ಮನೆಯಲ್ಲಿ ನಿತ್ಯವೂ ಕಂಡು ಬರುವಂತಹ ಈ ಕಾಪಟ್ಯವು ನಿಜಕ್ಕೂ ನಮ್ಮನ್ನು ಧರ್ಮ ವಿರೋಧಿಗಳನ್ನಾಗಿ ಮಾಡಿತು” ಎಂದರು.

ನಂತರ ನನ್ನ ಮಾತು ಪ್ರಾರಂಭಿಸಿದೆ. ಧರ್ಮ ಮತ್ತು ಧರ್ಮದ ವಿಶ್ವಾಸಿಗಳ ನಡುವಿನ ವ್ಯತ್ಯಾಸದ ಕುರಿತು ಹೇಳ ತೊಡಗಿದೆ. “ಧಾರ್ಮಿಕ ನಿಷ್ಠೆಯಿರುವ ವ್ಯಕ್ತಿಯೆಂದರೆ ಉತ್ತಮ ಮಾದರಿ ವ್ಯಕ್ತಿ. ಧರ್ಮದ ಕುರಿತು ಅವರು ಒಳ್ಳೆಯ ಚಿತ್ರಣ ನೀಡುತ್ತಾರೆ. ಇನ್ನು ನಿಮ್ಮಿಬ್ಬರ ತಂದೆ-ತಾಯಂದಿರಂತೆ ಧರ್ಮದ ಬಗ್ಗೆ ಕೆಟ್ಟ ಚಿತ್ರಣ ಮೂಡಿಸಿದರೆ ಕೆಟ್ಟ ಮಾದರಿ ಆಗಿದ್ದಾರೆ. ಅಂದರೆ ಸಮಸ್ಯೆಯು ಧರ್ಮದ್ದಲ್ಲ, ಧರ್ಮದ ವಿಶ್ವಾಸಿಯದ್ದಾಗಿದೆ. ಈ ಎರಡೂ ವಿಚಾರಗಳ ನಡುವೆ ದೊಡ್ಡ ಅಂತರವಿದೆ ಎಂಬುದು ನಿಮಗೀಗ ಅರ್ಥವಾಗಿರಬಹುದು. ಮಾತಪಿತರನ್ನು ಧರ್ಮ ನಿಷ್ಠೆಯಿರುವವರನ್ನಾಗಿ ಮಾಡಲು ನಿಮ್ಮಿಂದ ಸಾಧ್ಯ ಎಂಬ ಭಾವನೆ ಅವರಲ್ಲಿ ಮೂಡಿಸಲು ಪ್ರಯತ್ನಿಸಿದೆ.

ನಾವು ಮಕ್ಕಳನ್ನು ಬೆಳೆಸುವುದು ಧರ್ಮದೊಂದಿಗೆ ಅಸಹ್ಯ ಮೂಡುವಂತಾಗಲಿ ಎಂದೋ? ಅಥವಾ ಧರ್ಮದ ಜೊತೆ ಅವರಿಗೆ ಪ್ರೀತಿ ಉಂಟಾಗಲಿ ಎಂದೋ? ಓರ್ವ ಮಗಳ ಬಗ್ಗೆ ಹೇಳುವೆನು, “ಮಗಳೇ ನೀನು ನಮಾಝ್ ಮಾಡಿದೆಯಾ?” “ಹೌದು ಅಮ್ಮಾ ನಮಾಝ್ ನಿರ್ವಹಿಸಿದೆ” ಎನ್ನುವಳು. ಆಗ ತಾಯಿ “ಇಲ್ಲ ನೀನು ನಮಾಝ್ ನಿರ್ವಹಿಸಿಲ್ಲ, ನೀನು ನನ್ನೊಂದಿಗೆ ಸುಳ್ಳಾಡಿರುವೆ” ಎನ್ನುವಳು. ಕೊನೆಗೆ ಆ ಮಗಳು ನಮಾಝ್ ಮಾಡುವುದನ್ನೇ ಬಿಟ್ಟು ಬಿಟ್ಟಳು. ತಾಯಿಗೆ ತನ್ನೊಂದಿಗಿರುವ ಪೂರ್ವಾಗ್ರಹ ತಪ್ಪು ಕಲ್ಪನೆಗಳಿಂದ ಅವಳು ಯಾವಾಗಲೂ ಸುಳ್ಳನ್ನೇ ಹೇಳುವವಳಂತಾಗಿದೆ.

ಇನ್ನೋರ್ವ ತಾಯಿಯ ಬಗ್ಗೆ ಹೇಳುವೆನು. “ಮಗಳೇ ನಮಾಝ್ ಮಾಡಿದೆಯಾ?” ಎಂದು ಕೇಳಿದಾಗ ಮಗಳು “ಇಲ್ಲಮ್ಮಾ ನಮಾಝ್ ನಿರ್ವಹಿಸಿಲ್ಲ” ಎಂದು ಹೇಳುವೆ. ಆಗ ತಾಯಿ ಮುಗುಳ್ನಗುತ್ತಾ “ಸತ್ಯವನ್ನು ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್. ನಮಾಝ್‌ನ ಕುರಿತು ಮಗಳು ಇನ್ನೂ ಹೆಚ್ಚಿನ ಗಮನಹರಿಸುತ್ತಾಳೆ ಎಂಬುದು ಈ ಅಮ್ಮನ ಬಯಕೆ” ಎಂದು ಹೇಳುವಳು. ಈ ತಾಯಿ ಮಾಡಿದ್ದೇನು? ಆಕ್ಷೇಪಿಸುವುದಕ್ಕಿಂತ ಪ್ರಶಂಸೆಗೆ ಹೆಚ್ಚು ಮಹತ್ವ ನೀಡಿದರು. ವಿಮರ್ಶೆಗಿಂತ ಪ್ರೋತ್ಸಾಹ ಮುಖ್ಯ. ಈ ಮಗಳಿಗೆ ಧರ್ಮದೊಂದಿಗೆ ಹೆಚ್ಚು ಒಲವು ತೋರಲು ಈ ಶೈಲಿಯು ಸಹಾಯವಾಯಿತು.

ಪ್ರವಾದಿಯವರು(ಸ) ಹೇಳಿದರು, “ಸತ್ಯವಿಶ್ವಾಸಿಗಳಲ್ಲಿ ವಿಶ್ವಾಸದ ಪರಿಪೂರ್ಣತೆಯಲ್ಲಿ, ಉನ್ನತ ಮಟ್ಟ ತಲುಪಿದವರು ಯಾರೆಂದರೆ, ಅವರಲ್ಲಿ ಸದ್ಗುಣ ಸಂಪನ್ನರು, ವಿನಯವಂತರಾಗಿದ್ದಾರೆ. ಜನ ರೊಂದಿಗೆ ಹೊಂದಿ, ಬೆರೆತು ಕೊಂಡಿರುವವರಾಗಿದ್ದಾರೆ. ಜನರೊಂದಿಗೆ ಹೊಂದಿಕೊಳ್ಳದೆ ಇರುವವರಲ್ಲಿ ಯಾವುದೇ ಒಳಿತಿರದು.”

ಧರ್ಮವೆಂದರೆ ವ್ಯಾಪಾರವಲ್ಲ. ಜನರನ್ನು ಮಂಕು ಮರಳು ಗೊಳಿಸುವ ರೂಪ ಭಾವವಲ್ಲ. ವೇಷ-ಭೂಷಣವೂ ಅಲ್ಲ. ಆಂತರಿಕ ಪ್ರಜ್ಞೆಯಿಂದ ವಿಶ್ವಾಸದಲ್ಲಿ ದೃಢವಾಗಿರುವ ಜೀವನ ಶೈಲಿಯಾಗಿದೆ. ಪ್ರಾಮಾಣಿಕವಾದ ಒಡನಾಟ, ಉತ್ತಮ ರೀತಿಯ ವ್ಯವಹಾರ, ವರ್ತನೆ, ಬೆರೆಯುವಿಕೆ- ಇದು ಧರ್ಮದ ಮಾನದಂಡವಾಗಿದೆ. ನಮ್ಮ ಗುಣಸ್ವಭಾವ ಅತ್ಯುನ್ನತ ಮಟ್ಟದಲ್ಲಿದ್ದು, ಮಾದರಿಯಾಗಿದ್ದರೆ ನಮ್ಮ ಪರಿಸರದಲ್ಲಿರುವವರು ಅದರ ಪ್ರಯೋಜನ ಪಡೆಯುವರು. ಅದರ ಪ್ರಭೆಯು ಸುತ್ತಲೂ ಪಸರಿಸುವುದು. ಧರ್ಮದ ಜ್ಯೋತಿಯು ಆ ಮೂಲಕ ಹರಡುವುದು. ಅವರ ಮುಂದೆ ಧರ್ಮದ ಬಗ್ಗೆ ತಿಳಿಸಲು ಸಹಾಯಕವಾಗುವುದು. ದೌರ್ಭಾಗ್ಯವಶಾತ್ ಈ ಉನ್ನತ ಮಟ್ಟದ ಮೌಲ್ಯಗಳು ನಮ್ಮ ಸಮಾಜದಲ್ಲಿ, ನಮ್ಮ ಮನೆಗಳಲ್ಲಿ ಮಾಯವಾಗಿದೆ.