ಹತ್ತು ರೂಪಾಯಿಯ ಮೌಲ್ಯವನ್ನೇ ಕಸಿದ ಪ್ರಧಾನಿಯ ಮಾಸ್ಟರ್ ಸ್ಟ್ರೋಕ್‌

0
337

ಸನ್ಮಾರ್ಗ ಸಂಪಾದಕೀಯ

ಪಶ್ಚಿಮ ಬಂಗಾಳದ ಜಾಗ್ರಮ್ ಎಂಬಲ್ಲಿ ವಿಕ್ರಮ್ ಸಾಹು ಎಂಬವರ ಅಂಗಡಿಗೆ ಹೋಗಿ 10 ರೂಪಾಯಿ ಕೊಟ್ಟು ಪ್ರಧಾನಿ ನರೇಂದ್ರ ಮೋದಿಯವರು ಜಾಲ್ಮುರಿ ಖರೀದಿಸಿದ್ದು ಎಪ್ರಿಲ್ 20ರಂದು. ಇದಾಗಿ ಕೇವಲ ಹತ್ತು ದಿನಗಳೊಳಗೆ ಈ ಹತ್ತು ರೂಪಾಯಿ ಮೌಲ್ಯವನ್ನೇ ಕಳಕೊಳ್ಳುವಂಥ ನಿರ್ಧಾರವನ್ನು ಪ್ರಧಾನಿ ಮಾಡಿದ್ದಾರೆ. ಹೊಟೇಲು, ಬೀದಿಬದಿ ವ್ಯಾಪಾರಿಗಳು ಸಹಿತ ವಾಣಿಜ್ಯ ಉದ್ದೇಶಕ್ಕಾಗಿ ಉಪಯೋಗಿಸುವ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಒಂದೇ ಏಟಿಗೆ 993 ರೂಪಾಯಿಗೆ ಏರಿಸಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಗ್ಯಾಸ್ ಸಿಲಿಂಡರ್‌ಗೆ ಒಮ್ಮೆಲೇ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆಯಾದದ್ದು ಇದೇ ಮೊದಲು. ಈ ಬೆಲೆ ಏರಿಕೆಯಿಂದ ಬೀದಿಗೆ ಬೀಳೋದು ರಾಜಕಾರಣಿಗಳಲ್ಲ. ಐಟಿ-ಬಿಟಿ ಕಂಪೆನಿಯ ಉದ್ಯೋಗಿಗಳೂ ಅಲ್ಲ. ಉತ್ತಮ ವೇತನ ಪಡೆಯುತ್ತಿರುವ ಸರಕಾರಿ ಅಧಿಕಾರಿಗಳೂ ಅಲ್ಲ. ಜನಸಾಮಾನ್ಯರು.

ಹೊಟೇಲು ಮತ್ತು ಬೀದಿಬದಿ ಆಹಾರವನ್ನು ನಂಬಿ ಬದುಕುತ್ತಿರುವ ಕೋಟ್ಯಂತರ ಜನರು ಈ ದೇಶದಲ್ಲಿದ್ದಾರೆ. ಒಂದು ಬಾರಿ ರಸ್ತೆಗಿಳಿದು ನೋಡಿದರೆ, ಬೀದಿಬದಿ ವ್ಯಾಪಾರಿಗಳ ಗ್ರಾಹಕರು ಯಾರು ಅನ್ನುವುದು ಗೊತ್ತಾಗುತ್ತದೆ. ಬಹಳ ದೊಡ್ಡ ಆಸೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಬದುಕುತ್ತಿರುವ ಈ ಎಲ್ಲರ ಬದುಕಿಗೂ ಕೇಂದ್ರ ಸರಕಾರ ಬರೆ ಎಳೆದಿದೆ. ಇನ್ನು ಮುಂದೆ ಇಲ್ಲಿ 10 ರೂಪಾಯಿ ಕೊಟ್ಟರೆ ಚಹಾ ಬಿಡಿ, ಯಾವ ತಿಂಡಿಯೂ ಸಿಗುವ ಸಾಧ್ಯತೆ ಇಲ್ಲ. ಒಂದೇ ಏಟಿಗೆ ಸಾವಿರ ರೂಪಾಯಿಯನ್ನು ಏರಿಸುವುದೆಂದರೆ, ಚಹಾದ ಗ್ಲಾಸನ್ನು ಜನಸಾಮಾನ್ಯರಿಂದ ಕಿತ್ತುಕೊಂಡಂತೆ. ದೊಡ್ಡ ಮಟ್ಟದಲ್ಲಿಯೇ ಹೊಟೇಲುಗಳು ಮತ್ತು ಬೀದಿಬದಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳಿಗೆ ಬೆಲೆ ಏರಿಸಬೇಕಾಗುತ್ತದೆ. ಹೀಗೆ ಏರಿಸುವುದರಿಂದ ಇವರಿಗೆ ಗ್ರಾಹಕರೂ ಕಡಿಮೆಯಾಗಲಿದ್ದಾರೆ. ಈ ಮೂಲಕ ಅಸಂಖ್ಯ ವ್ಯಾಪಾರಿಗಳು ಅತಂತ್ರರಾಗುವ ಸಾಧ್ಯತೆಯೂ ಇದೆ.

ಎಪ್ರಿಲ್ 13ರಂದು ಉತ್ತರ ಪ್ರದೇಶದ ನೊಯಿಡಾದಲ್ಲಿ ಕಾರ್ಖಾನೆ ಕಾರ್ಮಿಕರು ವೇತನ ಹೆಚ್ಚಳವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇವರೇನೂ ಲಕ್ಷ ಲಕ್ಷ ರೂಪಾಯಿ ವೇತನವನ್ನು ಬಯಸಿರಲಿಲ್ಲ. ಈಗ ತಿಂಗಳಿಗೆ ಕೊಡುತ್ತಿರುವ 10ರಿಂದ 15 ಸಾವಿರ ವೇತನವನ್ನು 18ರಿಂದ 20 ಸಾವಿರಕ್ಕೆ ಏರಿಸಬೇಕು ಎಂಬುದಷ್ಟೇ ಅವರ ಒತ್ತಾಯವಾಗಿತ್ತು. ಸರಕಾರ ಒಪ್ಪಲಿಲ್ಲ. ಪ್ರತಿಭಟನೆಯ 4ನೇ ದಿನದಂದು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅಶ್ರುವಾಯು ಪ್ರಯೋಗಿಸಿದರು. ಪ್ರತಿಭಟನೆ ಹಿಂಸೆಗೆ ತಿರುಗಿತು. ಸುಮಾರು 400 ಮಂದಿ ಕಾರ್ಮಿಕರನ್ನು ಬಂಧಿಸಲಾಯಿತು. ಮಾತ್ರವಲ್ಲ, ಈ ಪ್ರತಿಭಟನೆಗೆ ಪಾಕಿಸ್ತಾನ ಲಿಂಕ್ ಇದೆ ಎಂಬ ಶಂಕೆಯನ್ನು ನೊಯಿಡಾ ಪೊಲೀಸ್ ಕಮೀಶನರ್ ಲಕ್ಷ್ಮೀ ಸಿಂಗ್ ವ್ಯಕ್ತಪಡಿಸಿದರು.

ಈ ಮೂಲಕ ಈ ಪ್ರತಿಭಟನೆಯನ್ನು ದೇಶದ್ರೋಹಿಯಂತೆ ಬಿಂಬಿಸಿ ಜುಜುಬಿ ವೇತನ ಹೆಚ್ಚಳಕ್ಕೆ ಆಗ್ರಹಿಸಿದ ಕಾರ್ಮಿಕರನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಬಡಿಯುವುದು, ದೇಶದ್ರೋಹಿಯಾಗಿಸುವುದು ಮತ್ತು ಪ್ರಕರಣ ದಾಖಲಿಸಿ ಜೈಲಿಗಟ್ಟುವುದು ಬಹಳ ಸುಲಭ. ಗ್ಯಾಸ್ ಬೆಲೆ ಏರಿಕೆಯಿಂದ ಬದುಕು ದುರ್ಬರವಾಗುವುದು ಇಂಥ ಕಾರ್ಮಿಕರು ಮತ್ತು ಇವರಂಥ ಕೋಟ್ಯಂತರ ಜನರದ್ದು. ಕೆಲಸ ಮುಗಿಸಿ ಇನ್ನು ಮುಂದೆ ಇಂಥ ಕಾರ್ಮಿಕರು ಬೀದಿಬದಿಯಲ್ಲಿ ಚಹಾ ಕುಡಿಯುವಂತಿಲ್ಲ. ಕುಡಿದರೆ ಮನೆ ನಿರ್ವಹಣೆಗೆ ವೇತನ ಸಾಲುವುದಿಲ್ಲ. ವೇತನ ಹೆಚ್ಚಳಕ್ಕೆ ಆಗ್ರಹಿಸಿದರೆ ಪಾಕಿಸ್ತಾನದ ಸಂಬಂಧ ಕಲ್ಪಿಸಿ ಸರಕಾರ ನಿರ್ದಯವಾಗಿ ದಮನಿಸುತ್ತದೆ. ಪ್ರಭುತ್ವ ಹೇಗೆ ಬಡವರು ಮತ್ತು ದುರ್ಬಲರನ್ನು ನಿರ್ಲಕ್ಷಿಸುತ್ತದೆ ಎಂಬುದಕ್ಕೆ ಈ ಗ್ಯಾಸ್ ಬೆಲೆ ಏರಿಕೆ ಮತ್ತು ಕಾರ್ಮಿಕ ಪ್ರತಿಭಟನೆಯನ್ನು ದಮನಿಸಿದ ರೀತಿಯಿಂದ ಅಂದಾಜಿಸಬಹುದು. ನಿಜವಾಗಿ,

2024-25ರ ಒಂದೇ ವರ್ಷದಲ್ಲಿ ಬಿಜೆಪಿ 6,769 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ಸ್ವೀಕರಿಸಿತ್ತು. ಇದೇ ಅವಧಿಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 918 ಕೋಟಿ ರೂಪಾಯಿ ಮಾತ್ರ. 2021ರ ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡಿದ ಮೊತ್ತ ಕೂಡಾ ಸಣ್ಣದಲ್ಲ. 1,778 ಕೋಟಿ ರೂಪಾಯಿ. ಇದು ಐದು ವರ್ಷಗಳ ಹಿಂದಿನ ಲೆಕ್ಕಾಚಾರ. ಈ ಬಾರಿ ನಡೆದ ಚುನಾವಣೆಗೆ ಏನಿಲ್ಲವೆಂದರೂ ಖರ್ಚು ಇದರ ಹಲವು ಪಟ್ಟು ಹೆಚ್ಚಿರುವುದಂತೂ ಸ್ಪಷ್ಟ. ಕೇವಲ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಚುನಾವಣಾ ಜಾಹೀರಾತು ನೀಡುವುದಕ್ಕಾಗಿಯೇ ಸುಮಾರು 4 ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡಿದೆ ಎಂದು ವರದಿಯಿದೆ. ಒಂದುಕಡೆ,

ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿ ನೀರಿನಂತೆ ಹಣ ಖರ್ಚು ಮಾಡುತ್ತಿದೆ. ಇನ್ನೊಂದು ಕಡೆ, ಅಧಿಕಾರ ಸಿಕ್ಕಿದ ಬಳಿಕ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. 2014ರಿಂದ 2025ರ ವರೆಗೆ ಬೃಹತ್ ಕಂಪೆನಿಗಳ ಒಟ್ಟು 9 ಲಕ್ಷದ 87 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲಾಗಿದೆ. ಕೇವಲ 2025ರಲ್ಲಿ 39,675 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲಾಗಿದೆ. ಇದು ಮನ್ನಾ ಅಲ್ಲ, ವಸೂಲು ಮಾಡಲಾಗುತ್ತದೆ ಎಂದು ಸರಕಾರ ಸಮರ್ಥಿಸಿಕೊಳ್ಳುತ್ತಿದ್ದರೂ ಹೀಗೆ ವಸೂಲಾಗುತ್ತಿರುವ ಪ್ರಮಾಣ ಶೂನ್ಯದಷ್ಟು ಕಡಿಮೆ ಎಂಬುದಾಗಿ ಅಂಕಿ-ಸಂಖ್ಯೆಗಳು ತಿಳಿಸುತ್ತಿವೆ. ನಿಜವಾಗಿ,

ಬಿಜೆಪಿ ಸಹಿತ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವುದೇ ಬೃಹತ್ ಕಾರ್ಪೊರೇಟ್ ಕಂಪೆನಿಗಳು. ಬ್ಯಾಂಕ್‌ನಿಂದ ಸಾಲ ಪಡೆಯುತ್ತಿರುವುದೂ ಇವೇ ಕಂಪೆನಿಗಳು. 4000 ಕೋಟಿ ರೂಪಾಯಿಯನ್ನು ಬ್ಯಾಂಕ್‌ಗೆ ವಂಚಿಸಿದ ಆರೋಪವನ್ನು ಅನಿಲ್ ಅಂಬಾನಿ ಎದುರಿಸುತ್ತಿದ್ದರೂ ಅವರನ್ನು ಈವರೆಗೂ ಬಂಧಿಸಲಾಗಿಲ್ಲ. ಇದೇವೇಳೆ, ಅವರ ಕಂಪೆನಿಯ ಉದ್ಯೋಗಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಸುಪ್ರೀಮ್ ಕೋರ್ಟ್‌ನಲ್ಲಿ ಈ ಬಗ್ಗೆ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ನೇರವಾಗಿ ಪ್ರಶ್ನಿಸಿದರೂ ಕೇಂದ್ರ ಸರಕಾರ ಸಮರ್ಪಕ ಉತ್ತರ ನೀಡಿಲ್ಲ. ಯಾಕೆಂದರೆ,

ಅನಿಲ್ ಅಂಬಾನಿಯಾಗಲಿ ಅಥವಾ ಪ್ರತಿವರ್ಷ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡಿಸಿಕೊಳ್ಳುತ್ತಿರುವ ಬೃಹತ್ ಕಂಪೆನಿಗಳಾಗಲಿ ಎಲ್ಲವೂ ರಾಜಕೀಯ ಪಕ್ಷಗಳಿಗೆ ಬೇಕಾದವುಗಳಾಗಿವೆ. ಮುಖ್ಯವಾಗಿ, ಬಿಜೆಪಿಗೆ ದೇಣಿಗೆ ನೀಡಿದ ಕಂಪೆನಿಗಳ ಹೆಸರುಗಳನ್ನು ನೋಡಿದರೆ ಜನಸಾಮಾನ್ಯರ ಬಗ್ಗೆ ಆಳುವವರಿಗೆ ಯಾಕೆ ಕಾಳಜಿ ಇಲ್ಲ ಅನ್ನುವುದಕ್ಕೆ ಉತ್ತರ ಸಿಗುತ್ತದೆ. ಜನಸಾಮಾನ್ಯರ ಓಟು ಖರೀದಿಸುವ ಸಾಮರ್ಥ್ಯ ಇರುವುದು ಈ ಕಂಪೆನಿಗಳು ನೀಡುವ ಹಣಕ್ಕೆ. ಜನರು ತಮ್ಮ ಮೂಲಭೂತ ಸಮಸ್ಯೆಗಳನ್ನು ಮರೆತು ಹಿಂದೂ-ಮುಸ್ಲಿಮ್ ಎಂಬ ಭ್ರಾಮಕ ವಿಷಯಗಳ ಮೇಲೆ ತೇಲಾಡುವಂತೆ ಮಾಡಬೇಕಾದರೆ ಯಥೇಚ್ಛ ಹಣ ಖರ್ಚು ಮಾಡಬೇಕು. ಜಾಹೀರಾತುಗಳು, ಸಭೆಗಳು, ರ‍್ಯಾಲಿಗಳನ್ನು ಏರ್ಪಡಿಸಿ ಪ್ರಚಾರ ಮಾಡಬೇಕು. ಅದಕ್ಕೆ ದಾರಾಳ ಹಣ ಬೇಕು. ಈ ಹಣವನ್ನು ಒದಗಿಸುವುದು ಕಾರ್ಪೊರೇಟ್ ಕಂಪೆನಿಗಳು.

ಪ್ರಜಾತಂತ್ರದಲ್ಲಿ ಜನರ ಮತವೇ ನಿರ್ಣಾಯಕ ಎಂದು ಹೇಳಬಹುದಾದರೂ ದ್ವೇಷ ಪ್ರಚಾರಕ್ಕೆ ಮರುಳುಗೊಂಡು ಜನರು ಮತ ಚಲಾಯಿಸಬಲ್ಲರು ಎಂಬುದೂ ಅಷ್ಟೇ ಸತ್ಯ. ಆದ್ದರಿಂದ ಇಲ್ಲಿ ಓಟಿಗಿಂತ ಹಣವೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹಣ ಕೊಡುವವರ ಹಿತಕ್ಕನುಸಾರವಾಗಿ ನಡೆಯುವುದೇ ಪ್ರಭುತ್ವದ ಮುಖ್ಯ ಗುರಿಯಾಗಿ ಬಿಡುತ್ತದೆ. ಈ ಧೈರ್ಯವೇ 993 ರೂಪಾಯಿಯಷ್ಟು ಬೃಹತ್ ಹೊರೆಯನ್ನು ಜನಸಾಮಾನ್ಯರ ಮೇಲೆ ಒಂದೇ ಏಟಿಗೆ ಹೊರಿಸುವ ಧೈರ್ಯವನ್ನು ಕೇಂದ್ರ ಸರಕಾರ ತೋರಿಸಿದೆ. ಸದ್ಯ ಯಾವ ಚುನಾವಣೆಯೂ ಇಲ್ಲ. ಚುನಾವಣೆ ಮುಗಿಯುವವರೆಗೆ ಕಾದು, ಆ ಬಳಿಕ ದಿಢೀರ್ ಆಗಿ ಬೆಲೆ ಏರಿಸಿರುವುದರಲ್ಲಿಯೇ ಕೇಂದ್ರ ಸರಕಾರದ ವಂಚನೆ ಬಯಲಾಗುತ್ತದೆ. ಚುನಾವಣೆಗಿಂತ ಮೊದಲು ಬೆಲೆ ಏರಿಸಿದರೆ ಎಲ್ಲಿ ಜನರು ತಿರುಗಿ ಬೀಳುತ್ತಾರೋ ಎಂಬ ಭಯ ಕೇಂದ್ರ ಸರಕಾರಕ್ಕೆ ಇತ್ತೇ ಹೊರತು ಬೆಲೆ ಏರಿಕೆಯಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾಳಜಿ ಇರಲಿಲ್ಲ. ಇದ್ದಿದ್ದರೆ ಅದು ಈ ಬೆಲೆ ಏರಿಕೆಗೆ ಚುನಾವಣೆ ಮುಗಿಯುವವರೆಗೆ ಕಾಯಬೇಕಿರಲಿಲ್ಲ.