ಕೊಚ್ಚಿ, ಜು.1: ಬಿಜೆಪಿಯ ತೀವ್ರ ಹಿಂದುತ್ವ ಆಧಾರಿತ ರಾಷ್ಟ್ರೀಯತೆಯನ್ನು ಎದುರಿಸಲು ಕಾಂಗ್ರೆಸ್ ಸಹಿತ ಎಡಪಕ್ಷ ಮತ್ತು ಇತರ ರಾಜಕೀಯ ಪಕ್ಷಳು ವಿಫಲವಾಗಿದೆ ಎಂದು ಸಿಪಿಎಂ ಪೊಲಿಟ್ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಹೇಳಿದ್ದಾರೆ. ಕೊಚ್ಚಿ ಸಿಪಿಎಂ ಜಿಲ್ಲಾ ಸಮಿತಿ ಮತ್ತು ಇಂಎಂಎಸ್ ಅಧ್ಯಯನ ಕೇಂದ್ರ ಜಂಟಿಯಾಗಿ ಆಯೋಜಿಸಿದ ಚುನಾವಣಾ ಫಲಿತಾಂಶ ಮತ್ತು ಎಡಪಕ್ಷಗಳ ಮುಂದಿನ ಕಾರ್ಯಕ್ರಮಗಳೂ ಎಂಬ ವಿಷಯದ ಮೇಲೆ ಅವರು ಉಪನ್ಯಾಸ ನೀಡುತ್ತಿದ್ದರು.
ತೀವ್ರ ಹಿಂದುತ್ವ ರಾಷ್ಟ್ರೀಯತೆ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಮೋದಿ ಮಾಡಿದ ಪ್ರಚಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ವಿಜಯವನ್ನು ತಂದುಕೊಟ್ಟಿದೆ. ಎಡಪಕ್ಷಗಳ ರಾಜಕೀಯ ಮತ್ತು ಸಿದ್ಧಾಂತ ಎತ್ತಿಹಿಡಿದು ಹೋರಾಡುವ ಮೂಲಕ ಮಾತ್ರ ಬಿಜೆಪಿಯ ತೀವ್ರ ಹಿಂದುತ್ವ ನಿಲುವನ್ನು ಪರಾಜಯಗೊಳಿಸಲು ಸಾಧ್ಯವಿದೆ ಎಂದು ಕಾರಟ್ ಹೇಳಿದರು. ದೇಶದಲ್ಲಿ ರೈತರು ಎದುರಿಸುತ್ತಿರುವ ಕಷ್ಟ, ನಿರುದ್ಯೋಗ, ಆರ್ಥಿಕ ಮಾಂದ್ಯ ಚುನಾವಣೆಗಿಂತ ಆರು ತಿಂಗಳ ಮೊದಲಿನವರೆಗೂ ಸಕ್ರಿಯವಾಗಿತ್ತು. ಆದರೆ ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಪರಿಸ್ಥಿತಿ ಬದಲಾಯಿತು. ಬಾಲಕೋಟ್ಗೆ ವಾಯುದಾಳಿಯ ಮರೆಯಲ್ಲಿ ಮುಸ್ಲಿಂ ವಿರೋಧಿ ರಾಷ್ಟ್ರೀಯತೆಯನ್ನು ಪ್ರಚೋದಿಸಿ ಯಶಸ್ವಿಯಾಗಲು ಬಿಜೆಪಿಗೆ ಸಾಧ್ಯವಾಗಿದೆ.
ಸಮಾಜವಾದಿ, ಬಿಎಸ್ಪಿ, ಆರ್ಜೆಡಿ ಮುಂತಾದ ಪ್ರತಿಪಕ್ಷ ಪಾರ್ಟಿಗಳು ವಿವಿಧ ಜಾತಿ ಸಮುದಾಯಗಳನ್ನು ತಮ್ಮ ಜೊತೆ ನಿಲ್ಲಿಸಲು ಯತ್ನಿಸಿದವು. ಈ ಸಮುದಾಯಗಳಿಂದ ಇವರಿಗೆ ಸಿಕ್ಕಿದ್ದಕ್ಕಿಂತ ಹೆಚ್ಚು ಮತಗಳು ಬಿಜೆಪಿಯ ತೀವ್ರ ಹಿಂದುತ್ವಕ್ಕೆ ಸಿಕ್ಕಿತು. ಬಿಜೆಪಿ ಮತ್ತು ಆರೆಸ್ಸೆಸ್ ಮುಂದಿಟ್ಟ ಅಪಾಯಕಾರಿ ಹಿಂದುತ್ವ ಘೋಷಣೆ, ಆಶಯಗಳನ್ನು ರಾಜಕೀಯವಾಗಿ ಎದುರಿಸಲು ಈ ಪಾರ್ಟಿಗಳಿಂದಾಗಿಲ್ಲ ಎಂದು ಅವರು ಹೇಳಿದರು.












