✍️ ಶೇಖ್ ಮುಜೀಬುರ್ ರೆಹಮಾನ್
ಉಪನ್ಯಾಸಕರು, JMI ದೆಹಲಿ ಮತ್ತು ಗ್ರಂಥಕರ್ತರು
2026ರ ಜೂನ್ನಲ್ಲಿ ಸುಮಾರು 10-15 ಜನರ ಗುಂಪೊಂದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಆರ್ಮೂರ್ನಲ್ಲಿರುವ ಭಾರತ್ ಚಂದ್ರ ಪ್ರೌಢಶಾಲೆಗೆ ನುಗ್ಗಿ, ಅಲ್ಲಿನ 37 ವರ್ಷ ವಯಸ್ಸಿನ ಪ್ರಾಂಶುಪಾಲರಾದ ಆಮಿರ್ ಖಾನ್ ಅವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಶಾಲೆಯಲ್ಲಿ ಉರ್ದು ಭೋದಿಸಲಾಗುತ್ತಿದೆ ಎಂಬ ಶಂಕೆಯಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಇಂಗ್ಲಿಷ್ ಶಿಕ್ಷಕರಾಗಿರುವ ಅಮೀರ್ ಖಾನ್ ಅವರಿಗೆ ಉರ್ದು ಬೋಧಿಸುವ ಜವಾಬ್ದಾರಿ ಇರಲಿಲ್ಲ; ಉರ್ದುವನ್ನು ಮತ್ತೊಬ್ಬ ಶಿಕ್ಷಕರು ಸ್ವಲ್ಪ ಕಾಲ ಬೋಧಿಸಿದ್ದರು. ಶಾಲೆಯ ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು 25% ದಷ್ಟಿರುವ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರ ಮನವಿಯ ಮೇರೆಗೆ, ಹಿಂದೂ ಹಿನ್ನೆಲೆಯ ವ್ಯಕ್ತಿಯೊಬ್ಬರ ನೇತೃತ್ವದ ಶಾಲೆಯ ಮ್ಯಾನೇಜ್ಮೆಂಟ್ ಬೋರ್ಡ್ ಎರಡನೇ ಭಾಷೆಯಾಗಿ ಉರ್ದುವನ್ನು ಪರಿಚಯಿಸಲು ನಿರ್ಧರಿಸಿತ್ತು.
2025 ಏಪ್ರಿಲ್ ತಿಂಗಳ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉರ್ದುವನ್ನು ಗಂಗಾ-ಜಮುನಿ ತಹೆಝೀಬ್(ಹಿಂದೂ-ಮುಸ್ಲಿಮ್ ಸಾಮರಸ್ಯ)ನ ಅತ್ಯುತ್ತಮ ಅಭಿವ್ಯಕ್ತಿ ಎಂದು ಬಣ್ಣಿಸಿರುವ ಬೆಳಕಿನಲ್ಲಿ ಈ ಘಟನೆಯು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ನ್ಯಾಯಮೂರ್ತಿಗಳಾದ ಸುಧಾಂಶು ಧುಳಿಯಾ ಮತ್ತು ವಿನೋದ್ ಚಂದ್ರನ್ ಅವರಿದ್ದ ಪೀಠವು, “ಭಾಷೆಯು ಒಂದು ಸಮುದಾಯಕ್ಕೆ, ಒಂದು ಪ್ರದೇಶಕ್ಕೆ, ಜನತೆಗೆ ಸೇರಿದೆ ವಿನಃ ಯಾವುದೇ ಧರ್ಮಕ್ಕಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ಪುರಸಭೆಯೊಂದರ ನಾಮಫಲಕದಲ್ಲಿ ಉರ್ದುವಿನ ಬಳಕೆಯನ್ನು ಕೋರ್ಟ್ ಎತ್ತಿಹಿಡಿದಿದ್ದು, ಉರ್ದುವಿನ ಬಳಕೆಗೆ ಮಹಾರಾಷ್ಟ್ರ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷೆಗಳು) ಕಾಯ್ದೆ, 2022ರ ಅಡಿಯಲ್ಲಿ ಯಾವುದೇ ಕಾನೂನುಬಾಹಿರ ತಡೆಯಿಲ್ಲ ಎಂದು ಕಂಡುಕೊಂಡಿದ್ದ ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಉರ್ದುವಿನ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಸಾಂವಿಧಾನಿಕ-ಕಾನೂನು ಮಾನ್ಯತೆ ಹಾಗೂ ಅದರ ವಿರುದ್ಧದ ಶತ್ರುತ್ವದ ನಡುವಿನ ವ್ಯತಿರಿಕ್ತತೆಯು, ಇಂದಿನ ಭಾರತದಲ್ಲಿ ಆ ಭಾಷೆಯು ವಿವಾದಾತ್ಮಕ ಮತ್ತು ಕೋಮುವಾದಿ ಸ್ವಭಾವವನ್ನು ಪಡೆದುಕೊಂಡಿರುವುದನ್ನು ಎತ್ತಿ ತೋರಿಸುತ್ತದೆ.
ಉರ್ದುವಿನ ಮೇಲಿನ ವಿರೋಧವು ಅದು ಕೇವಲ ಮುಸ್ಲಿಮರ ಭಾಷೆ ಎಂಬ ಗ್ರಹಿಕೆಯಲ್ಲಿ ಬೇರೂರಿದೆ. ಬಂಗಾಳಿ ಭಾಷೆಯನ್ನು ಆಧರಿಸಿ 1971ರಲ್ಲಿ ಬಾಂಗ್ಲಾದೇಶದ ಸ್ಥಾಪನೆಯು, ಉರ್ದು ಎಂಬುದು ಒಟ್ಟಾಗಿ ಸಕಲ ಮುಸ್ಲಿಮರ ಭಾಷೆಯಲ್ಲ ಎಂಬುದನ್ನು ತೋರಿಸಿಕೊಟ್ಟಿತು. ಮೇಲಾಗಿ, ಉರ್ದುವನ್ನು ಐತಿಹಾಸಿಕವಾಗಿ ಹಿಂದೂಗಳು, ಸಿಖ್ಖರು ಮತ್ತು ಇತರರೂ ಮಾತನಾಡಿದ್ದಾರೆ ಹಾಗೂ ಪೋಷಿಸಿದ್ದಾರೆ. ರಕ್ಷಂದಾ ಜಲೀಲ್ ಅವರ ಸಂಪಾದನೆಯ ‘ಹೂಸ್ ಉರ್ದು ಈಸ್ ಇಟ್ ಎನಿವೇ?'(Whose Urdu is it anyway?) ಕೃತಿಯು, ಗುಲ್ಝಾರ್, ರಾಮಾನಂದ ಸಾಗರ್, ರಾಜೇಂದರ್ ಸಿಂಗ್ ಬೇಡಿ ಮತ್ತು ಕಿಶನ್ ಚಂದರ್ ಸೇರಿದಂತೆ ಹಲವಾರು ಪ್ರಮುಖ ಮುಸ್ಲಿಮೇತರ ಸಾಹಿತ್ಯ ದಿಗ್ಗಜರ ಬರಹಗಳನ್ನು ಒಟ್ಟುಗೂಡಿಸಿದೆ. ಉರ್ದುವು ಐತಿಹಾಸಿಕವಾಗಿ ವೈವಿಧ್ಯಮಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಹೇಗೆ ಹಾಸುಹೊಕ್ಕಿದೆ ಎಂಬುದನ್ನು ಅವರ ಕೊಡುಗೆಗಳು ತೋರಿಸುತ್ತವೆ. ‘ಮಹಾಭಾರತ’ ಟಿವಿ ಸರಣಿಯೊಂದಿಗೆ ಗುರುತಿಸಿಕೊಂಡಿರುವ ಲೇಖಕ ರಾಹಿ ಮಾಸೂಮ್ ರಾಝಾ ಅವರದು ಅರಿಯಲೇಬೇಕಾದ ಒಂದು ವಿಶೇಷ ನಿದರ್ಶನವಾಗಿದೆ. ಆಧುನಿಕ ಹಿಂದಿ ಸಾಹಿತ್ಯದ ಶ್ರೇಷ್ಠ ಕೃತಿಯಾದ ಅವರ ‘ಆಧಾ ಗಾಂವ್’ (ಅರ್ಧ ಗ್ರಾಮ) ಕಾದಂಬರಿಯನ್ನು ಮೂಲತಃ ಉರ್ದುವಿನಲ್ಲೇ ಬರೆಯಲಾಗಿತ್ತು ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಬಹಳಷ್ಟು ಭಿನ್ನವೇನಲ್ಲ
ಸಾಮಾನ್ಯ ಸಂಭಾಷಣೆಯಲ್ಲಿ, ಹಿಂದಿ ಮತ್ತು ಉರ್ದು ನಡುವಿನ ವ್ಯತ್ಯಾಸವು ಸುಲಭವಾಗಿ ಗೋಚರಿಸುವುದಿಲ್ಲ.
ಪಾಲ್ ಬ್ರಾಸ್ ಅವರ ಪ್ರಕಾರ, “ಉರ್ದು ಭಾಷೆಯು ತನ್ನ ಮೂಲ ವ್ಯಾಕರಣಿಕ ರಚನೆಯಲ್ಲಿ ಉತ್ತರ ಭಾರತದ ಸ್ಥಳೀಯ ಹಿಂದೂಸ್ತಾನಿ ಭಾಷೆಯನ್ನೇ; ವಿಶೇಷವಾಗಿ ದೆಹಲಿ ವಲಯದ ‘ಖಾರಿ ಬೋಲಿ’ ಭಾಷೆಯನ್ನು ಆಧರಿಸಿದೆ. ಇದಕ್ಕೆ ಪರ್ಷಿಯನ್, ಅರೇಬಿಕ್ ಮತ್ತು ಟರ್ಕಿಶ್ ಶಬ್ದಗಳು ಸೇರಿಕೊಂಡಿದೆ.” ಈ ಹಂಚಿಕೊಂಡಿರುವ ಭಾಷಾ ಪರಂಪರೆಯು ಹಿಂದಿ ಮತ್ತು ಉರ್ದು ಹೇಗೆ ಸಾಮಾನ್ಯ ಭಾಷಾ ಮೂಲದಿಂದ ವಿಕಸನಗೊಂಡವು ಎಂಬುದನ್ನು ಎತ್ತಿ ತೋರಿಸುತ್ತದೆ. 1837ರಲ್ಲಿ ಬ್ರಿಟಿಷ್ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಆಡಳಿತ ಮತ್ತು ನ್ಯಾಯಾಂಗದ ಉದ್ದೇಶಗಳಿಗಾಗಿ ಪರ್ಷಿಯನ್ ಭಾಷೆಯ ಬದಲಿಗೆ ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ತರಲಾಯಿತು. ಆದಾಗ್ಯೂ, ಉತ್ತರ ಭಾರತದಲ್ಲಿ ಅಧಿಕೃತ ಬಳಕೆಗಾಗಿ ಆಯ್ಕೆ ಮಾಡಲಾದ ಸ್ಥಳೀಯ ಭಾಷೆಯು ಹಿಂದಿ ಆಗಿರಲಿಲ್ಲ, ಬದಲಿಗೆ ಪರ್ಸೊ-ಅರೇಬಿಕ್ ಲಿಪಿಯಲ್ಲಿ ಬರೆಯಲಾದ ಉರ್ದು ಆಗಿತ್ತು. ಈ ಭಾಷಾ ನೀತಿಯು ತದನಂತರ ವಿವಾದದ ಮೂಲವಾಯಿತು ಮತ್ತು ಹಿಂದಿ ಚಳುವಳಿಯ ಉದಯಕ್ಕೆ ಕಾರಣವಾಯಿತು.
ಸರಿಸುಮಾರು ಇದೇ ಅವಧಿಯಲ್ಲಿ ಎರಡು ಪ್ರಕಾಶನಗಳು; ಒಂದು ಬಾಬು ಶಿವ ಪ್ರಸಾದ್ ರವರದ್ದು ಮತ್ತು ಇನ್ನೊಂದು ಮದನ್ ಮೋಹನ್ ಮಾಳವೀಯ ಅವರ ರಚನೆಯು ಹಿಂದಿ ಚಳುವಳಿಯನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದವು. 1868ರಲ್ಲಿ ಬಾಬು ಶಿವ ಪ್ರಸಾದ್ ಅವರು ಕೋರ್ಟ್ ಲಿಪಿಗಳ ಕುರಿತು ಜ್ಞಾಪಕ ಪತ್ರವೊಂದನ್ನು ಪ್ರಕಟಿಸಿದರು. ವಾಯುವ್ಯ ಪ್ರಾಂತ್ಯಗಳು ಮತ್ತು ಔಧ್ನಲ್ಲಿ (ಬ್ರಿಟಿಷ್ ಭಾರತದಲ್ಲಿನ ಆಡಳಿತಾತ್ಮಕ ಪ್ರಾಂತ್ಯ) ಉರ್ದುವಿನ ಬಳಕೆಯಿಂದ ಉಂಟಾದ ಪ್ರತಿಕೂಲ ಪರಿಣಾಮಗಳನ್ನು ಅದರಲ್ಲಿ ಅವರು ಬೆಟ್ಟು ಮಾಡಿದರು. ಅದೇ ರೀತಿ, ಮದನ್ ಮೋಹನ್ ಮಾಳವೀಯ ಅವರ ‘ಕೋರ್ಟ್ ಕ್ಯಾರೆಕ್ಟರ್ ಅಂಡ್ ಪ್ರೈಮರಿ ಎಜ್ಯುಕೇಶನ್ ಇನ್ ದಿ ನಾರ್ತ್-ವೆಸ್ಟರ್ನ್ ಪ್ರಾವಿನ್ಸಸ್ ಅಂಡ್ ಔಧ್’ ಕೃತಿಯು ಹಿಂದೂ ಜನತೆಯ ನಡುವೆ ಉರ್ದುವನ್ನು ಅಧಿಕೃತವಾಗಿ ಪ್ರೋತ್ಸಾಹಿಸುವುದರಿಂದ ಉಂಟಾಗುವ ಹಾನಿಕಾರಕ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಅದೇ ಸಮಯದಲ್ಲಿ, ಉರ್ದು ಪರವಾದ ಅಭಿಯಾನಗಳೂ ಗರಿಗೆದರಿದ್ದವು. ಹೀಗಾಗಿ, ವಿವಾದವು ಕರಪತ್ರಗಳು ಹಂಚುವುದು ಮತ್ತು ಮನವಿಗಳನ್ನು ಮೀರಿ ಬೆಳೆದು, ವಿವಿಧ ಸಂಘಟಿತ ಪ್ರಯತ್ನಗಳಿಗೆ ದಾರಿ ಮಾಡಿಕೊಟ್ಟಿತು.
ಸ್ವತಂತ್ರ ಭಾರತದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಹಿಂದಿ-ಉರ್ದು ವಿವಾದವು ವಿಭಜಕ ರಾಜಕೀಯ ಸಮಸ್ಯೆಯಾಗಿ ಮುಂದುವರಿಯಿತು. ವಿದೇಶಿ ಮೂಲದ ಭಾಷೆಯಾದ ಇಂಗ್ಲಿಷ್ ಅನ್ನು ದೇಶಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿರುವ ಮತ್ತು ಸಾಂಸ್ಥಿಕಗೊಳಿಸಲಾಗುತ್ತಿರುವ ಈ ದೇಶದಲ್ಲಿ, ಉರ್ದುವಿನ ಮೇಲಿನ ನಿರಂತರ ವಿರೋಧವು ವಿಶೇಷವಾಗಿ ಗಮನಾರ್ಹವಾಗಿದೆ. ಇಂಗ್ಲಿಷಿಗಿಂತ ವ್ಯತಿರಿಕ್ತವಾಗಿ, ಭಾರತೀಯ ಉಪಖಂಡದಲ್ಲಿ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ ಉರ್ದುವು ನಿರಂತರವಾಗಿ ಶತ್ರುತ್ವವನ್ನು ಎದುರಿಸುತ್ತಲೇ ಇದೆ.
ಕೃಪೆ: ದಿ ಹಿಂದೂ












