ತನ್ನನ್ನು ಉಪಚರಿಸಿದ ವೈದ್ಯರು, ದಾದಿಯರನ್ನು ಸ್ಮರಿಸಿ ಭಾವುಕರಾದ ತೊಕ್ಕೊಟ್ಟು ನಿವಾಸಿ: ಕೊರೋನಾ ಮುಕ್ತರಾಗಿ ಬಿಡುಗಡೆಗೊಂಡ ಅವರಿಗೆ ಚಪ್ಪಾಳೆಯ ಸ್ವಾಗತ- ವೀಡಿಯೊ ಹಂಚಿಕೊಂಡ ಪೊಲೀಸ್ ಕಮಿಷನರ್

0
855

ಸನ್ಮಾರ್ಗ ವಾರ್ತೆ

ತೊಕ್ಕೊಟ್ಟು ಎಪ್ರಿಲ್ 22- ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಇಲ್ಲಿನ ನಿವಾಸಿಯೊಬ್ಬರು ಆಸ್ಪತ್ರೆಯಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ಪುಟ್ಟ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ/ ಪಿ ಎಸ್ ಹರ್ಷ ಅವರು ಈ ವೀಡಿಯೋ ತುಣುಕನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಆ ವೀಡಿಯೋಕ್ಕೆ Just reproducing the experiences of a cured COVID19 patient.. please listen to the first hand account about the care entire team of police officers, doctors, nurses and paramedics have given to bring any victim out of it..Joinhands with government ಎಂದು ಟಿಪ್ಪಣಿಯನ್ನೂ ಹಾಕಿದ್ದಾರೆ.

ದೆಹಲಿಯ ತಬ್ಲೀಗ್ ಸಭೆಗೆ ಹೋಗಿ ಬಂದ ಬಳಿಕ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕಳೆದ ಶುಕ್ರವಾರ (ಏಪ್ರಿಲ್ 17) ದಂದು ಆಸ್ಪತ್ರೆಯಿಂದ ಬಿಡುಗಡಗೊಂಡು ಅವರು ತೊಕ್ಕೊಟ್ಟಿಗೆ ತಲುಪಿದಾಗ ಸ್ಥಳೀಯ ನಾಗರಿಕರು ಚಪ್ಪಾಳೆತಟ್ಟಿ ಅವರನ್ನು ಸ್ವಾಗತಿಸಿದ್ದರು. ಅದೇವೇಳೆ, ಅವರು ತನಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ಭಾವುಕರಾಗಿ ಪ್ರತಿಕ್ರಿಯಿಸಿದ್ದು ವಿಡಿಯೋದಲ್ಲಿದೆ.

ನನ್ನನ್ನು ಉಳಿಸಿಕೊಳ್ಳುವುದಕ್ಕಾಗಿ ವೈದ್ಯರು ಮತ್ತು ದಾದಿಯರು ಅವಿರತ ಶ್ರಮ ನಡೆಸಿದ್ದಾರೆ. ಪೊಲೀಸರು ತನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನನಗೆ ಬಿಸಿನೀರು ಒದಗಿಸಿದ್ದಾರೆ. ಆಹಾರವನ್ನು ತಾನು ಕೇಳಿದಾಗಲೆಲ್ಲ ಪೂರೈಸಿದ್ದಾರೆ. ಅವರ ಸೇವೆಯನ್ನು ಸ್ಮರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. ಇಡೀ ದೇಹಕ್ಕೆ ರಕ್ಷಣಾ ಕವಚವನ್ನು ಧರಿಸಿಕೊಂಡು ಈ ಬಿರು ಬಿಸಿಲು ಕಾಲದಲ್ಲೂ ಅವರು ಪಡುತ್ತಿರುವ ಪಾಡನ್ನು ನೋಡುವಾಗ ಅವರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ಅನಿಸುತ್ತದೆ. ನಮ್ಮನ್ನು ಉಳಿಸುವುದಕ್ಕಾಗಿ ಶ್ರಮಿಸುತ್ತಿರುವ ಅವರಿಗಾಗಿ ನಾವು ಪ್ರಾರ್ಥಿಸಬೇಕು ಮತ್ತು ಈ ಜಗತ್ತಿನ ಎಲ್ಲರಿಗೂ ನರಕದಂಥ ಬದುಕಿನಿಂದ ಸ್ವರ್ಗದಂತಹ ಬದುಕು ಲಭಿಸುವುದಕ್ಕಾಗಿ ನಾವು ಶ್ರಮಿಸಬೇಕು ಎಂದು ಅವರು ಭಾವುಕರಾಗಿ ಹೇಳಿಕೊಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.