ಕೊರೋನ ಎದುರಿಸಲು ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ಜಮಾಅತೆ ಇಸ್ಲಾಮೀ ಹಿಂದ್: ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಹಾಗೂ ಸ್ವಯಂಸೇವಕ ಗುಂಪುಗಳೊಂದಿಗೆ ಸಭೆ ನಡೆಸಲು ಒತ್ತಾಯ

0
385

ಸನ್ಮಾರ್ಗ ವಾರ್ತೆ

ನವದೆಹಲಿ: ಕೊರೋನ ಉಲ್ಬಣದ ಹಿನ್ನೆಲೆಯಲ್ಲಿ ದೇಶವು ಎದುರಿಸುತ್ತಿರುವ ಆರೋಗ್ಯ ಕ್ಷೇತ್ರದ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಮತ್ತು ಸ್ವಯಂಸೇವಕ ಗುಂಪುಗಳ ಸಭೆ ಕರೆಯುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದಾಗಿ ಜಮಾಅತೆ ಇಸ್ಲಾಮಿ ಹಿಂದ್ (ಜೆಐಹೆಚ್) ಸೋಮವಾರ ಹೇಳಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಐಹೆಚ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿಯವರು “ನಾವು ಗೌರವಾನ್ವಿತ ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ. ನಾವು ನಮ್ಮ ಪತ್ರದಲ್ಲಿ ಮೂರು ವಿಷಯಗಳನ್ನು ಹೇಳಿದ್ದೇವೆ. ಕೊರೋನ ಎರಡನೆಯ ಅಲೆಯಿಂದಾಗಿ ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳ ಕೊರತೆಗೆ ಕಾರಣವಾದ ವಿವಿಧ ಆಡಳಿತಾತ್ಮಕ ದುಃಸ್ಥಿತಿಗಳ ಬಗ್ಗೆ ನಾವು ಪ್ರಧಾನಿಯವರ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ.

“ಎರಡನೆಯದಾಗಿ, ಸಾಂಕ್ರಾಮಿಕ ರೋಗದ ಕುರಿತಾಗಿ ಆಧ್ಯಾತ್ಮಿಕ ಮತ್ತು ನೈತಿಕ ಆಯಾಮಗಳ ಕುರಿತು ಚಿಂತಿಸಲು ಹಾಗೂ ದೇಶದಲ್ಲಿ ಪ್ರಚಲಿತದಲ್ಲಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಎಲ್ಲಾ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳು ಮತ್ತು ಸ್ವಯಂಸೇವಕ ಗುಂಪುಗಳೊಂದಿಗೆ ಸಭೆ ನಡೆಸುವ ಮೂಲಕ ಜನರ ಸಂಕಷ್ಟಗಳನ್ನು ನಿವಾರಿಸಲು ಸರ್ಕಾರದೊಂದಿಗೆ ಸಹಕರಿಸುವ ವಿವಿಧ ವಿಧಾನಗಳು ಮತ್ತು ಮಾರ್ಗಗಳನ್ನು ಅನ್ವೇಷಿಸಲು ನಾವು ಪ್ರಧಾನಮಂತ್ರಿಯನ್ನು ಕೋರಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜೆಐಹೆಚ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಕೂಡ ಎರಡನೇ ಕೋವಿಡ್ ತರಂಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ಇದೀಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಭಾರತದ ಜನರು ದ್ವೇಷ ಮತ್ತು ಧಾರ್ಮಿಕ ಧ್ರುವೀಕೃತ ರಾಜಕೀಯವನ್ನು ಹೆಚ್ಚಾಗಿ ತಿರಸ್ಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಇದು ಪ್ರಜಾಪ್ರಭುತ್ವ ಮತ್ತು ಕೋಮು ಸೌಹಾರ್ದತೆಗೆ ಸಕಾರಾತ್ಮಕ ಬೆಳವಣಿಗೆಯಾಗಿದೆ ಮತ್ತು ಭವಿಷ್ಯದಲ್ಲಿ ಈ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಆಶಿಸಿದೆ. ಸರಕಾರಿ ಸಂಸ್ಥೆಗಳ ದುರುಪಯೋಗದೊಂದಿಗೆ ಮತದಾರರನ್ನು ಧ್ರುವೀಕರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರಿಂದ ಪಶ್ಚಿಮ ಬಂಗಾಳದ ಚುನಾವಣೆಗಳು ವಿಶೇಷವಾಗಿ ನಿರ್ಣಾಯಕವಾಗಿದೆ ಎಂದು ಅದು ಹೇಳಿದೆ.

ಭವಿಷ್ಯದ ಚುನಾವಣೆಗಳಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮತ್ತು “ದೇಶವನ್ನು ದ್ವೇಷ ಮತ್ತು ಅನ್ಯಾಯದಿಂದ ರಕ್ಷಿಸಲು” ಜಾತ್ಯತೀತ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ಆಶಿಸುವುದಾಗಿ ಜೆಐಹೆಚ್ ಹೇಳಿದೆ.

ಜಮಾಅತೆ ಇಸ್ಲಾಮೀ ಹಿಂದ್ ಸೇವೆಗಳು

ಈ ಕೊರೋನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮ ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಉಚಿತ ಸಮಾಲೋಚನೆ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ. ಆಮ್ಲಜನಕ ಸಿಲಿಂಡರ್‌ಗಳು, ಸಾರಿಗೆ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವ ಮೂಲಕ ಮಾರ್ಗದರ್ಶನ ಕೇಂದ್ರಗಳು, ಹೆಲ್ಪ್ ಡೆಸ್ಕ್, 24 × 7 ಸಹಾಯವಾಣಿಗಳ ಮೂಲಕ ಜೆಐಹೆಚ್ ಸ್ವಯಂ ಸೇವಕರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿಗಳೊಂದಿಗೆ ನಾವು ಸಹಾಯ ಮಾಡುತ್ತಿದ್ದೇವೆ. ಕೆಲವು ಸ್ಥಳಗಳಲ್ಲಿ, ನಾವು ಕೋವಿಡ್ ಕೇರ್ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ಅಂತಹ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.