ಬೆಂಗಳೂರು: ಮಕ್ಕಳನ್ನು ಹೊಂದುವ ಹಂಬಲದಿಂದ ದಂಪತಿಯೊಂದು ಮಾತ್ರೆ ತೆಗೆದುಕೊಂಡದ ಪರಿಣಾಮ ಪತಿ ಸಾವನ್ನಪ್ಪಿ, ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಈ ದಂಪತಿಗಳು ಮದುವೆಯಾಗಿ 11 ವರ್ಷವಾಗಿದೆ.
ನೆಲಮಂಗಲ ಸಮೀಪದ ಅರಿಶಿನಕುಂಟೆ ಗ್ರಾಮದ ನಿವಾಸಿಗಳಾದ ಶಶಿಧರ್ ಹಾಗೂ ಪತ್ನಿ ಗಂಗಾಬಿಂಕಾ ಮಾತ್ರೆ ಕುಡಿದವರಾಗಿದ್ದು, ಶಶಿಧರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಗಂಗಾಂಬಿಕ ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ಭೇದಿಯಿಂದ ಬಳಲುತ್ತಿದ್ದ ಇವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇವರು 2008ರಲ್ಲಿ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಹೀಗಾಗಿ ಗ್ರಾಹಕರೊಬ್ಬರು ಆಯುರ್ವೇದಿಕ್ ವೈದ್ಯರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಗ್ರಾಹಕ ತಿಳಿಸಿದ ವೈದ್ಯರಿಗೆ ಕರೆ ಮಾಡಿದ್ದರು. ಆ ಬಳಿಕ ವೈದ್ಯರ ಜೊತೆ ಮೂವರು ಅಪರಿಚಿತರು ಕಾರಿನಲ್ಲಿ ಶಶಿಧರ್ ಅಂಗಡಿ ಬಳಿ ಭಾನುವಾರ ರಾತ್ರಿ ಬಂದಿದ್ದಾರೆ.
ಹೀಗೆ ಬಂದವರು ಮಾತ್ರೆಗಳನ್ನು ಕೊಟ್ಟು ಹೋಗಿದ್ದಾರೆ. ಅಲ್ಲದೆ ಚಿಕಿತ್ಸೆಯ ವೆಚ್ಚ 25,000 ಎಂದು ಬೇಡಿಕೆ ಇಟ್ಟಿದ್ದಾರೆ. ಶಶಿಧರ್ 2 ಮಾತ್ರೆ ತೆಗೆದುಕೊಂಡು ಅವರಿಗೆ 2 ಸಾವಿರ ಹಣವನ್ನು ನೀಡಿದ್ದಾರೆ. ಹಣ ಕಡಿಮೆ ನೀಡಿದ್ದರಿಂದ, ನಾಳೆ ಮತ್ತೆ ಹಣ ಕೊಡಬೇಕು, ನಾವು ಬರುತ್ತೇವೆ ಎಂದು ಹೇಳಿ ತೆರಳಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಅಲ್ಲದೆ, ಯಾವುದೇ ಪೂರ್ವಾಪರ ಯೋಚಿಸದೆ ದಂಪತಿ ಭಾನುವಾರವೇ ರಾತ್ರಿ ಮಾತ್ರೆ ಸೇವಿಸಿದ್ದಾರೆ. ತಕ್ಷಣವೇ ಇಬ್ಬರಿಗೂ ಭೇದಿ ಕಾಣಿಸಿಕೊಂಡಿದೆ. ಘಟನೆ ಸಂಬಂಧ ಗಂಗಾಂಬಿಕ ಅವರ ಹೇಳಿಕೆಯಂತೆ ಐಪಿಸಿ ಸೆಕ್ಷನ್ 304 (ಕೊಲೆ ಯತ್ನ) ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ ತನಿಖೆ ತಂಡ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












