ಸಾಮೂಹಿಕ ಈದ್ ನಮಾಝ್ ಗೆ ಬಾಗಿಲು ತೆರೆದ ಸಿಎಸ್‌ಐ ಚರ್ಚ್ ; ಇದು ಸಹಬಾಳ್ವೆಯ “ನೈಜ ಕೇರಳ ಸ್ಟೋರಿ”

0
2130

ಸನ್ಮಾರ್ಗ ವಾರ್ತೆ

ಕೇರಳದ ಕೋಮು ಸಾಮರಸ್ಯದ ಪರಂಪರೆಯಲ್ಲಿ ಹೊಸ ಅಧ್ಯಾಯವೊಂದು ಮೂಡಿ ಬಂದಿದೆ. ಬುಧವಾರ ನಡೆದ ಸಾಮೂಹಿಕ ಈದ್-ಉಲ್-ಫಿತ್ರ್ ಪ್ರಾರ್ಥನೆಯು “ನೈಜ ಕೇರಳದ ಸ್ಟೋರಿ” ಹೇಳಿದೆ.

ಹೌದು, ಚರ್ಚ್‌ ನಲ್ಲಿ ನಮಾಝ್ ನಡೆಸಲಾದ ವರದಿ ಇದು.
ಕೇರಳದ ಮಲಪ್ಪುರಂ ಜಿಲ್ಲೆ ಮಂಜೇರಿಯ ಸಿಎಸ್‌ಐ ನಿಕೋಲಸ್ ಮೆಮೋರಿಯಲ್ ಚರ್ಚ್ ಅಂಗಳದಲ್ಲಿ ಸಾಮೂಹಿಕ ಈದ್ ನಮಾಝ್ ಮಾಡಲು ಅವಕಾಶ ಮಾಡಿ ಕೊಡಲಾಗಿದೆ.

ಪ್ರತಿ ವರ್ಷ ಮಂಜೇರಿಯ ಚುಳ್ಳಕ್ಕಾಡ್‌ ನಲ್ಲಿರುವ ಸರ್ಕಾರಿ ಯುಪಿ ಶಾಲಾ ಮೈದಾನದಲ್ಲಿ ಈದ್ ನಮಾಝ್ ನಡೆಯುತ್ತಿತ್ತು. ಅದರೆ ಲೋಕಸಭಾ ಚುನಾವಣೆ ಸಿದ್ದತೆಯ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ನಮಾಝ್ ಗೆ ಅವಕಾಶ ಇರಲಿಲ್ಲ. ಮಸೀದಿಯಲ್ಲಿ ನಮಾಝ್ ಮಾಡೋನಾ ಅಂದ್ರೆ ಸ್ಥಳದ ಕೊರತೆ ಇತ್ತು. ಏನು ಮಾಡುವುದು ಎಂದು ಮಸೀದಿ ಕಮಿಟಿಯವರು ಯೋಚಿಸುತ್ತಿದ್ದಾಗ ಅವರ ನೆರವಿಗೆ ಬಂದಿದ್ದು ಸ್ಥಳೀಯ ಕ್ರೈಸ್ತರು.

ಸಿಎಸ್‌ಐ ಮಲಬಾರ್ ಡಯಾಸಿಸ್ ಅಡಿಯಲ್ಲಿ 140 ವರ್ಷಗಳಷ್ಟು ಹಳೆಯದಾದ ಈ ಚರ್ಚ್. ಮುಸ್ಲಿಮರಿಗೆ ಇದೇ ಮೊದಲು ಬಾರಿಗೆ ತನ್ನ ಅಂಗಳದಲ್ಲಿ ಈದ್ ನಮಾಝ್ ಮಾಡಲು ಅವಕಾಶ ಮಾಡಿಕೊಟ್ಟಿತು.

ಈದ್ ನಮಾಝ್ ಗೆ ಚರ್ಚ್ ಅವರಣದಲ್ಲಿ ನೆೆರೆದಿದ್ದ 2000ಕ್ಕೂ ಹೆಚ್ಚು ಮುಸ್ಲಿಂ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಚರ್ಚ್ ಧರ್ಮಗುರು ಫಾ. ಜಾಯ್ ಮಾಸಿಲಮಣಿ, ನಂಬಿಕೆಯ ಆಧಾರದ ಮೇಲೆ ಅವುಗಳನ್ನು ವಿಭಜಿಸುವ ಬದಲು ಮನಸ್ಸು ಮತ್ತು ಹೃದಯಗಳು ಒಂದು ಗೂಡುವ ಮಹತ್ವವನ್ನು ಒತ್ತಿ ಹೇಳಿದರು.

“ಮನುಷ್ಯರ ಮೇಲಿನ ಪ್ರೀತಿ ಆಧ್ಯಾತ್ಮಿಕತೆಯಲ್ಲಿ ಅಂತಿಮವಾಗಿದೆ. ನಾವು ದ್ವೇಷದಿಂದ ದೂರವಿರಬೇಕು. ಇಂತಹ ಸಾಮರಸ್ಯದ ಏಕತೆ ಈಗಿನ ಅಗತ್ಯವಾಗಿದೆ,” ಎಂದು ಫಾ.ಮಾಸಿಲಾಮಣಿ ಹೇಳಿದರು.

ಇದು ವಿಶೇಷ ಸಂದರ್ಭ, ಈ ಘಟನೆಯನ್ನು ಅಲ್ಲಿಯ ಮುಸ್ಲಿಮರೂ ಕೂಡ ಉಲ್ಲಾಸದಾಯಕವಾಗಿಯೇ ನೆನೆಯುತ್ತಿದ್ದಾರೆ. ಈ ಬಾರಿ ನಾವು ಈದ್ ಪ್ರಾರ್ಥನೆಗಳನ್ನು ಸಲ್ಲಿಸಿದಾಗ ನಮಗೆ ಉಂಟಾದ ಭಾವನೆಯು ಭಿನ್ನವಾವಾಗಿತ್ತು. ಚರ್ಚ್ ಕಾಂಪೌಂಡ್‌ನಲ್ಲಿ ನಡೆದ ಈ ಈದ್ ನಮಾಝ್ ಪ್ರಸ್ತುತ ಆವಶ್ಯಕತೆಯನ್ನು ಹೇಳುತ್ತಿತ್ತು. ಜನರನ್ನು ವಿಭಜಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿರುವ ಸಮಯದಲ್ಲಿ ಇದು ಸರ್ವಧರ್ಮ ಸಾಮರಸ್ಯದ ದೊಡ್ಡ ಸಂದೇಶವನ್ನು ಕಳುಹಿಸಿದೆ.

ಒಳ್ಳೆಯ ಮನುಷ್ಯರಾದ ನಾವು ವಿಭಜನೆಗಿಂತ ಒಗ್ಗೂಡಲು ಕಾರಣಗಳನ್ನು ಹುಡುಕಬೇಕು ಎಂದು ಕೊಟ್ಟಕ್ಕಲ್‌ನ ಪೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಜೌಹರ್ ಎಂ. ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೇರಳ ನದ್ವತುಲ್ ಮುಜಾಹಿದ್ದೀನ್ ಮುಖಂಡ ಸಹಾದುದ್ದೀನ್ ಸ್ವಲಾಹಿ ಪ್ರಾರ್ಥನೆ ನೆರವೇರಿಸಿ ಪ್ರವಚನ ನೀಡಿದರು. ಫಾ. ಮಾಸಿಲಾಮನಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈದ್ ನಮಾಝ್ ನಿರ್ವಹಣೆಗೆ ಚರ್ಚ್ ಆವರಣದಲ್ಲಿ ಅವಕಾಶ ಸಿಗಬಹುದೇ ಎಂದು ಅನುಮಾನದೊಂದಿಗೆ ಕೇಳಲು ಸ್ಥಳೀಯ ಮುಸ್ಲಿಮರು ಚರ್ಚ್ ಆಡಳಿತಗಾರರ ಬಳಿ ಹೋದಾಗ ಅಲ್ಲಿ ಕಂಡ ಪ್ರತಿಕ್ರಿಯೆ ಖುದ್ದು ಮುಸ್ಲಿಮರೇ ಅಚ್ಚರಿಗೊಂಡಿದ್ದರು. ಚರ್ಚ್ ನ ಧರ್ಮ ಗುರು ಸಹಿತ ಆಡಳಿತಗಾರರು ಮರು ಮಾತು ಆಡದೇ ಎಸ್ ಎಂದಿದ್ದರು.

ಇಂತಹ ಸೌಹಾರ್ದ ಧಾರ್ಮಿಕ ಪರಂಪರೆ ಇಲ್ಲಿಗೆ ಹೊಸದೇನೂ ಅಲ್ಲ. ಮಂಜೇರಿಯಲ್ಲಿ 1897ರಲ್ಲಿ ಸ್ಥಾಪಿತವಾದ ಹಿದಾಯತುಲ್ ಮುಸ್ಲಿಮೀನ್ ಸಭಾ ಎಂಬ ಮುಸ್ಲಿಂ ಸಂಘಟನೆಯ ಮೊದಲ ಮಹಾ ಸಭೆಯಲ್ಲಿ ಕ್ರೈಸ್ತ ನಾಯಕರಾದ ಚಾಕೋ ಮಾಸ್ತರ್ ಮತ್ತು ವರ್ಗೀಸ್ ಮಾಸ್ತರರಂತಹರನ್ನು ಕರೆಯಲಾಗಿತ್ತು.. ಸಂಸ್ಥೆಯ ಮೊದಲ ಅಧ್ಯಕ್ಷರನ್ನು ಸೂಚಿಸಿದವರು ಚಾಕೋ ಮಾಸ್ತರ್.

ಮಲಬಾರಿನಲ್ಲಿ ಧಾರ್ಮಿಕ ಐಕ್ಯವೇ ಅಂಥದ್ದು, ಆ ಪರಂಪರೆ ಇನ್ನೂ ಮುಂದುವರಿದಿದೆ,” ಎಂದು ಹಳೆಯ ಘಟನೆಯನ್ನು ಸ್ಥಳೀಯರಾದ ಕೆಎನ್‌ಎಂ ಸಂಘಟನೆಯ ನಾಯಕ ಅಲಿ ಎಂಬವರು ನೆನಪಿಸಿಕೊಳ್ಳುತ್ತಾರೆ. ಕೇರಳದಲ್ಲಿ ಏನೋ ನಡೆಯುತ್ತಿದೆ. ಎಂದು ಹುಯಿಲು ಎಬ್ಬಿಸಿ ರಾಜಕೀಯ ಲಾಭ ಪಡೆಯಲು ಬಯಸುವವರಿಗೆ ಕೇರಳದ ಇಂತಹ ನೈಜ ಸ್ಟೋರಿಗಳು ಬಾಯಿ ಮುಚ್ಚಿಸುತ್ತಿವೆ.

LEAVE A REPLY

Please enter your comment!
Please enter your name here