ಮಾಸ್ಕ್ ಬಗ್ಗೆ ಮಂಗಳೂರಿಗರ ನಿರ್ಲಕ್ಷ್ಯ: ಸ್ವತಃ ಫೀಲ್ಡ್ ಗಿಳಿದ ದ.‌ಕ. ಜಿಲ್ಲಾಧಿಕಾರಿ

0
494

ಸನ್ಮಾರ್ಗ ವಾರ್ತೆ

ಮಂಗಳೂರು: ಕೋವಿಡ್ ನ ಎರಡನೇ ಅಲೆಯ ಬಗ್ಗೆ ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ಮಾಡಿದೆಯಾದರೂ ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ತೋರಿದ ಮಂಗಳೂರಿನ ಜನರಿಗೆ ಎಚ್ಚರಿಕೆ ನೀಡಲು ಸ್ವತಃ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೇ ಫೀಲ್ಡ್ ಗಿಳಿಯುವ ಮೂಲಕ ಜನರಿಗೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಸಂಭವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಆದರೂ ಸಾರ್ವಜನಿಕರು ಅಂಗಡಿ, ಮಾಲ್‍ಗಳ ಮಾಲೀಕರು ನಿಯಮ ಉಲಂಘನೆ ಮಾಡುವುದರ ಕುರಿತು ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ದಂಡ ವಿಧಿಸುವ ವೇಳೆ ವಾಗ್ವಾದ ಮಾಡುತ್ತೀರ, ಇದರ ಬದಲು ಸ್ವಯಂ ಪ್ರೇರಿತರಾಗಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಹಾಗೂ ಕೊರೊನಾ ಸೋಂಕಿನಿಂದ ದೂರ ಇರಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಇದರಿಂದ ತಮ್ಮ, ತಮ್ಮ ಕುಟುಂಬದ ಹಾಗೂ ನೆರೆಹೊರೆಯವರ ಆರೋಗ್ಯವನ್ನು ಕಾಪಾಡಬಹುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಎಚ್ಚರಿಕೆ ರವಾನಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳು, ಸಾರ್ವಜನಿಕ ಸ್ಥಳ ಹಾಗೂ ಬಸ್ ನಂತರ ಮಾಲ್‍ಗಳಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ನಗರದ ಸಿಟಿ ಸೆಂಟರ್ ಮಾಲ್ ಮೇಲುಸ್ತುದಾರರಿಗೆ ಮಾಲ್‍ಗಳಲ್ಲಿ ಸಾರ್ವಜನಿಕರು ಪ್ರವೇಶಿಸುವ ಸಂದರ್ಭದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಬೇಕು. ಹವಾನಿಯಂತ್ರಣ ಇರುವ ಹಿನ್ನೆಲೆ ಸೋಂಕು ವ್ಯಾಪಕವಾಗಿ ಹರಡುತ್ತದೆ. ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಂಡುಬಂದರೆ ಮಾಲ್‍ಗಳನ್ನು ಬಂದ್ ಮಾಡುವಂತೆ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ನಗರದ ಖಾಸಗಿ ಬಸ್‍ಗಳನ್ನು ತಡೆದು ಸರಿಯಾಗಿ ಮಾಸ್ಕ್ ಧರಿಸದೇ ಕಾರ್ಯನಿರ್ವಹಿಸುತ್ತಿದ್ದ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡರು. ಬಸ್‍ನಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ದಂಡ ವಿಧಿಸಿದರು. ಪ್ರಯಾಣಿಕರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಮುಂದೆ ಇಂತಹಾ ನಿರ್ಲಕ್ಷ ಕಂಡು ಬಂದರೆ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದರು.

ನಗರದ ಜೋಸ್ ಆಲುಕ್ಕಾಸ್ ಮಳಿಗೆಗೆ ದಾಳಿ ನಡೆಸಿದ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡಿದ ಗ್ರಾಹಕರು ಮಾಸ್ಕ್ ಧರಿಸದೇ ಇರುವುದಕ್ಕೆ ಮಳಿಗೆಯ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಗ್ರಾಹಕರು ನಿಯಮಗಳನ್ನು ಪಾಲನೆ ಮಾಡದೇ ಇರುವುದು ಕಂಡುಬಂದರೆ ಮಳಿಗೆಯ ಸಿಬ್ಬಂದಿಗಳು ಜವಾಬ್ದಾರರಾಗಿರುತ್ತಾರೆ. ಆದ್ದರಿಂದ ಅವರ ಮೇಲೆಯೇ ದಂಡ ವಿಧಿಸಲಾಗುವುದು ಎಂದ ಅವರು ಮಳಿಗೆ ಒಳಗೆ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ಅನುಮತಿ ನೀಡಬೇಕು ಮತ್ತು ಸಾಮಾಜಿಕ ಅಂತರವಿಲ್ಲದೇ ಗ್ರಾಹಕರು ಖರೀದಿ ನಡೆಸದಂತೆ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದರು.

ನಂತರ ನವಭಾರತ್ ಸರ್ಕಲ್ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್‍ಗೆ ಭೇಟಿ ನೀಡಿ ಮಾಸ್ಕ್ ಧರಿಸದೇ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ದಂಡ ವಿಧಿಸಿದರು. ಇನ್ನು ಮುಂದೆ ಇಂತಹಾ ಪ್ರಕರಣಗಳು ಕಂಡು ಬಾರದಂತೆ ಎಚ್ಚರಿಸಿದರು.

ಬಳಿಕ M.G. ರಸ್ತೆಯ ಬಳಿ ಭೇಟಿ ನೀಡಿ ಜಿಲ್ಲಾಡಳಿತದ ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಿದಾಗ ಕಾಲೇಜು ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರಲ್ಲದೆ ಅಲ್ಲಿಯೇ ಪಕ್ಕದಲ್ಲಿರುವ ಆಟೋ ಸ್ಟ್ಯಾಂಡ್‍ಗೆ ಹೋಗಿ ಆಟೋ ಚಾಲಕರಿಗೆ ಕೋವಿಡ್ ನಿಯಂತ್ರಣ ಕುರಿತಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತರಾಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕೆ.ಎಸ್.ಆರ್.ಟಿ.ಸಿ ಪಕ್ಕದಲ್ಲಿರುವ ಕೆಲವು ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿದ ಅವರು ಮಾಸ್ಕ್ ಧರಿಸದೇ ಇದ್ದ ಸಾರ್ವಜನಿಕರಿಗೆ ಮಾಸ್ಕ್ ನೀಡುವ ಮೂಲಕ ಅರಿವು ಮೂಡಿಸಿದರು ಹಾಗೂ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.

ಹೆಚ್ಚಿನ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ನಿಯಮಗಳ ಉಲಂಘನೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದರೇ ದಿಡೀರ್ ದಾಳಿ ನಡೆಸಿ ದಂಡ ವಿಧಿಸುವುದರೊಂದಿಗೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಗರಿಕರು ದಂಡ ವಿಧಿಸಿಕೊಂಡು ಮಾಸ್ಕ್ ಹಾಕಿಕೊಳ್ಳುವ ಪ್ರಮೇಯಕ್ಕೆ ಹೋಗಬಾರದು ಹಾಗೂ ಸ್ವ ಇಚ್ಛೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಿ. ಇದರಿಂದ ಪ್ರತಿಯೊಬ್ಬರ ಕುಟುಂಬದವರಿಗೂ ಒಳಿತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಎ. ಬಾಯರಿ, ಡಿಸಿಪಿ ಹರಿರಾಮ್ ಶಂಕರ್, ಪಾಲಿಕೆ ಆಯುಕ್ತ ದಿನೇಶ್, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮಂಜೇಶ್ ಶೆಟ್ಟಿ, ಹಾಗೂ ಮತ್ತಿತರ ಪಾಲಿಕೆಯ ಸಿಬ್ಬಂದಿಗಳು ಸಾಥ್ ನೀಡಿದರು.