ಸುವರ್ಣ ಮಂದಿರದ ಪೊಲೀಸ್ ಕಾರ್ಯಾಚರಣೆ ಬಳಿಕ 1985ರಲ್ಲಿ ನಡೆದ ಟ್ರಾನ್ಸಿಸ್ಟರ್ ಸರಣಿ ಸ್ಫೋಟ; 30 ಮಂದಿ ಖುಲಾಸೆ

0
538

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.10: 1985ರಲ್ಲಿ ಟ್ರಾನಿಸ್ಟರ್ ಸರಣಿ ಸ್ಫೋಟ ನಡೆದಿದ್ದು ಈ ಪ್ರಕರಣದಲ್ಲಿ ದಿಲ್ಲಿ ಕೋರ್ಟು ಮೂವತ್ತು ಮಂದಿಯನ್ನು ಖುಲಾಸೆಗೊಳಿಸಿದೆ. ಪ್ರಕರಣದಲಿ ಒಟ್ಟು 49 ಮಂದಿ ಇದ್ದರು. ತನಿಖೆಯಲ್ಲಿ ಆದ ದೋಷ ಇಷ್ಟು ಮಂದಿಯ ಬಿಡುಗಡೆಗೆ ಕಾರಣವಾಗಿದೆ.

ಸರಣಿ ಸ್ಫೋಟದಲ್ಲಿ 69 ಮಂದಿ ಹತ್ಯೆಯಾಗಿದ್ದರು. 127 ಮಂದಿ ಗಾಯಗೊಂಡಿದ್ದರು. ತನಿಖಾ ತಂಡ ಸಂಗ್ರಹಿಸಿದ ಪುರಾವೆಗಳು ಬಲವಾದುದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಅಡಿಷನಲ್ ಸೆಶನ್ಸ್ ಜಡ್ಜ್ ಸಂದೀಪ್ ಯಾದವ್ ತಿಳಿಸಿದರು.

ದಿಲ್ಲಿಯ ಸಮೀಪದ ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ 1985 ಮೇ ಹತ್ತರಂದು ಸಂಜೆ ಟ್ರಾನ್ಸಿಸ್ಟರ್ ಬಾಂಬುಗಳು ಸ್ಫೋಟಗೊಂಡಿದ್ದುವು. ಬಸ್‍ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟ ನಡೆದಿತ್ತು. ವಿಶೇಷ ತನಿಖಾ ತಂಡ 59 ಮಂದಿಯ ವಿರುದ್ಧ ಕೇಸು ದಾಖಲಿಸಿತ್ತು. ಐವರು ಆರೋಪಿಗಳನ್ನು 2006ರಲ್ಲಿ ಕೋರ್ಟು ಖುಲಾಸೆಗೊಳಿಸಿತ್ತು. ಹತ್ತೊಂಬತ್ತು ಮಂದಿ ವಿಚಾರಣಾವಧಿಯಲ್ಲಿ ಮೃತಪಟ್ಟಿದ್ದರು. ಉಳಿದ ಮೂವತ್ತು ಮಂದಿಗೆ 1986ರಿಂದ ಜಾಮೀನು ನೀಡಲಾಗಿತ್ತು.

ಸುವರ್ಣ ಮಂದಿರದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ, 84ರ ಸಿಖ್ ವಿರೋಧಿ ಗಲಭೆಗಳಿಗೆ ಪ್ರತೀಕಾರವೆಸಗುವ ಸಲುವಾಗಿ ಸರಣಿ ಬಾಂಬುಸ್ಫೋಟ ನಡೆಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಶನ್ ವಾದಿಸಿತ್ತು. ಆದರೆ, ಇದು ಸಾಬೀತುಗೊಂಡಿಲ್ಲ.