ನೀವು ಶ್ರೀಮಂತರಾಗಲು ಬಯಸುತ್ತೀರಾ…?

0
275

ಲೇಖಕಿ: ಖದೀಜ ನುಸ್ರತ್ ಅಬುಧಾಬಿ

ಶ್ರೀಮಂತಿಕೆಯೆಂಬುದು ಒಂದು ದೊಡ್ಡ ಅನುಗ್ರಹವಾಗಿದೆ. ವಿಶಾಲವಾದ ಆಧುನಿಕ ಸೌಕರ್ಯಗಳಿರುವ ಅತ್ಯಾಕರ್ಷಕ ಒಳಾಂಗಣ ವಿನ್ಯಾಸವಿರುವ ಮತ್ತು ಹೊರಾಂಗಣ ಉದ್ಯಾನವಿರುವ ಸುಂದರವಾದ ಮನೆ, ಬ್ರಾಂಡೆಡ್ ಉಡುಗೆ ತೊಡುಗೆಗಳು, ಆಭರಣಗಳು, ವಾಚುಗಳು, ಆಡಂಭರದ ವಾಹನಗಳು, ಅದ್ದೂರಿಯಾದ ವಿವಾಹ, ವಿದೇಶ ವಿನೋಧ ಯಾತ್ರೆ, ಅತ್ಯುತ್ತಮ ವ್ಯಾಪಾರ ಮತ್ತು ಅತ್ಯುನ್ನತ ಅಧಿಕಾರದ ಹುದ್ದೆಗಳನ್ನು ಆಧುನಿಕ ಕಾಲದ ಶ್ರೀಮಂಕೆಯ ಸಂಕೇತವೆಂದು ಜನರು ಭಾವಿಸುತ್ತಾರೆ. ಮನೆ, ವಸ್ತ್ರಾಭರಣ, ವಾಹನ, ಆಹಾರ ಇತ್ಯಾದಿಗಳ ಶ್ರೀಮಂತಿಕೆಯನ್ನು ತೋರ್ಪಡಿಸುವಂತಹ ಮನೋಭಾವವು ಆಧುನಿಕ ಕಾಲದಲ್ಲಿ ಹೆಚ್ಚುತ್ತಿದ್ದು ಇದು ಜನರ ಮಧ್ಯೆ ಸ್ಪರ್ಧಾತ್ಮಕ ಹಾಗೂ ಪೈಪೋಟಿಯನ್ನುಂಟು ಮಾಡುತ್ತಿದೆ. ಏನೂ ಇಲ್ಲದವರೂ ಕೂಡಾ ಸಾಲಮಾಡಿಯಾದರೂ ತಮ್ಮಲ್ಲಿಲ್ಲದ ಶ್ರೀಮಂತಿಕೆಯನ್ನು ತೋರ್ಪಡಿಸಲು ಪ್ರಯತ್ನಿಸುತ್ತಾರೆ. ಮಾತ್ರವಲ್ಲ ಜನರು ಶ್ರೀಮಂತರಾಗಲು ಲಂಚ, ಭ್ರಷ್ಟಾಚಾರ, ಕಳ್ಳತನ, ಮದ್ಯ, ಬಡ್ಡಿ ವ್ಯವಹಾರದಂತಹ ಧರ್ಮನಿಷಿದ್ಧ ಸಂಪಾದನೆಯಂತಹ ವಕ್ರ ಮಾರ್ಗವನ್ನು ಅನುಸರಿಸುತ್ತಾರೆ.

ಒಬ್ಬ ವ್ಯಕ್ತಿಯ ಸ್ವರ್ಗ ನರಕ ತೀರ್ಮಾನದಲ್ಲಿ ಸಂಪತ್ತು ಪ್ರಮುಖ ಪಾತ್ರ ವಹಿಸುತ್ತದೆ. ಝಕಾತ್, ದಾನಧರ್ಮಗಳು, ಧರ್ಮಸಮ್ಮತ ವ್ಯಾಪಾರ ವಹಿವಾಟು, ಅಗತ್ಯವಿರುವವರಿಗೆ ಸಾಲ ನೀಡುವುದು ಇತ್ಯಾದಿ ಮನುಷ್ಯನ ಸತ್ಕರ್ಮದ ತಟ್ಟೆ ಭಾರಗೊಳಿಸಿದರೆ ಧರ್ಮನಿಷಿದ್ಧ ಮಾರ್ಗದ ಸಂಪಾದನೆ, ಬಡ್ಡಿ ವ್ಯವಹಾರ, ದುಂದುವೆಚ್ಚ, ಬಡ ನಿರ್ಗತಿಕರ ಹಕ್ಕು ನೀಡಲು ನಿರಾಕರಿಸುವುದು ದುಷ್ಕರ್ಮದ ತಟ್ಟೆಯನ್ನು ಭಾರಗೊಳಿಸುವುದು. ಯೌವನವೂ ಆರೋಗ್ಯವೂ, ಸಂಪತ್ತಿನೊಂದಿಗೆ ಮೋಹ, ಜವಾಬ್ದಾರಿಗಳು ಇರುವ ಕಾಲದಲ್ಲಿ ಮಾಡುವ ದಾನಧರ್ಮವು ಶ್ರೇಷ್ಠವಾಗಿರುತ್ತದೆ. ನಮ್ಮ ಮರಣಾನಂತರ ನಮ್ಮ ಸಂಪತ್ತಿನ ಒಡೆತನವು ವಾರೀಸುದಾರರಿಗೆ ಸೇರುತ್ತದೆ. ಆದುದರಿಂದ ನಿಮ್ಮ ಕೈಯಲ್ಲಿ ಹಣವಿರುವಾಗ ನಿಮ್ಮ ಇಹಪರ ಜೀವನಕ್ಕಾಗಿಯೇ ಹೂಡಿಕೆ ಮಾಡಿರಿ. ಆದರೆ ಒಬ್ಬ ವ್ಯಕ್ತಿ ತನ್ನ ಸಂಪತ್ತಿನ ಮೂರನೆಯ ಒಂದಂಶದವರೆಗೆ ಮಾತ್ರ ದಾನ ಮಾಡಲು ಅನುಮತಿಸಲಾಗಿದೆ.

ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಸಂಪತ್ತನ್ನುಂಟು ಮಾಡುವ ಬಗ್ಗೆ ಆಲೋಚಿಸಬೇಡಿರಿ. ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿರಿ. ಜೀವಿಸುವ, ಹಣ ಸಂಪಾದಿಸುವ ಕಲೆಯನ್ನು ಕಲಿಸಿ, ಪ್ರಬಲವಾದ ರೆಕ್ಕೆಗಳನ್ನು ಕೊಟ್ಟು ಸ್ವತಂತ್ರವಾಗಿ ಹಾರಲು ಕಲಿಸಿರಿ. ಉತ್ತಮ ಗುಣಮಟ್ಟದ ವಸ್ತ್ರ, ಪೌಷ್ಠಿಕಾಂಶವಿರುವ ಆಹಾರ ನೀಡಿರಿ. ನಿಮ್ಮ ಹಣದಿಂದ ಐಶಾರಾಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಡಿರಿ. ಜಗತ್ತಿನ ಶ್ರೀಮಂತರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ಕುಟುಂಬಗಳಲ್ಲಿ ಬೆಳೆದವರು. ಹಿರಿಯರ ಆಸ್ತಿಯಿಂದ ಸುಖವಾಗಿ ಜೀವಿಸಿದವರು ವಿರಳ. ಹಿರಿಯರ ಆಸ್ತಿ ಉಚಿತವಾಗಿ ಸಿಗುವಾಗ ಅದರ ಮೌಲ್ಯವು ಅವರಿಗೆ ತಿಳಿಯುವುದಿಲ್ಲ. ಅದು ಎರಡು ತಲೆಮಾರಿಗೆ ಕೂಡಾ ತಲುಪುವುದೂ ಇಲ್ಲ. ಬಿಟ್ಟುಹೊಗಿರುವ ಸಂಪತ್ತಿನ ಸರಿಯಾಗಿ ಪಾಲು ಮಾಡಲು ಸಾಧ್ಯವಾಗದೇ ಕೆಲವೊಮ್ಮೆ ಜಗಳವಾಡಿ ಕುಟುಂಬ ಸಂಬಂಧ ಮುರಿದು ಹೋಗುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ.

ಶ್ರೀಮಂತರು ಸಂಪತ್ತನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದರೆ ಕೆಲವು ವರ್ಷಗಳ ನಂತರ ಸಾಲಗಾರರೂ, ತಮ್ಮ ಸಂಪತ್ತನ್ನು ಕಳೆದುಕೊಳ್ಳುವುದುದನ್ನೂ ಕಾಣುತ್ತೇವೆ. ಯಾವುದೇ ಶಾಲಾ ಕಾಲೇಜುಗಳು ವೈಯಕ್ತಿಕ ಹಣಕಾಸು ನಿರ್ವಹಣೆಯನ್ನು ಕಲಿಸುವುದಿಲ್ಲ. ಆಧುನಿಕ ಕಾಲದಲ್ಲಿ ವೈಯಕ್ತಿಕ ಹಣಕಾಸು ನಿರ್ವಣೆಯ ಬಗ್ಗೆ ತಜ್ಞರಿಂದ ಸಲಹೆ, ಮಾರ್ಗದರ್ಶನ, ಆಪ್ತ ಸಮಾಲೋಚನೆ ಕೂಡಾ ಅಗತ್ಯವಾಗಿದೆ.

ಬ್ರಾಂಡ್ ಗಳೆಂಬುದು ಕೇವಲ ಮನಸ್ಸಿನ ಭಾವನೆಗಳಾಗಿದೆ. ಅದು ಬಂಡವಾಳಷಾಹಿಗಳು ತಮ್ಮ ಲಾಭಕ್ಕಾಗಿ ಮಾಡುವಂತಹ ಕುತಂತ್ರವಾಗಿದೆ. ವಾಚ್‌ನ ಉದ್ದೇಶ ಸಮಯ ನೋಡುವುದಾಗಿದೆ, ಕಾರಿನ ಉದ್ದೇಶ ಪ್ರಯಾಣವನ್ನು ಸುಲಭಗೊಳಿಸುವುದು, ವಸ್ತ್ರದ ಉದ್ದೇಶ ಮಾನವನ್ನು ಮುಚ್ಚುವುದು ಮಾತ್ರ, ಮನೆಯ ಉದ್ದೇಶ ವಿಶ್ರಾಂತಿ ಮಾತ್ರ. ಆದ್ದರಿಂದ ತಮ್ಮ ಹಣಕಾಸಿನ ಲಭ್ಯತೆ ಮತ್ತು ಅಗತ್ಯನುಸಾರವಾಗಿ ಮಾತ್ರ ತಮ್ಮ ಮನೆ, ಕಾರು, ವಸ್ತ್ರಾಭರಣ ಮತ್ತಿತರ ವಸ್ತುಗಳನ್ನು ಖರೀದಿಸಬೇಕು.

“(ರಹ್ಮಾನನ ದಾಸರು) ಅವರು ಖರ್ಚು ಮಾಡುವಾಗ ದುಂದುವೆಚ್ಚವನ್ನೂ ಮಾಡುವುದಿಲ್ಲ. ಜಿಪುಣತೆಯನ್ನೂ ತೋರುವುದಿಲ್ಲ. ಅವರ ಖರ್ಚು ಇವೆರಡರ ನಡುವೆ ಸಮತೂಕದಲ್ಲಿ ನಿಂತಿರುತ್ತದೆ.”(ಪವಿತ್ರ ಕುರ್ ಆನ್ 25: 67)

“ದುಂದುಗಾರರು ಶೈತಾನನ ಸೋದರರಾಗಿರುತ್ತಾರೆ ಮತ್ತು ಶೈತಾನನು ತನ್ನ ಪ್ರಭುವಿಗೆ ಕೃತಘ್ನನು.” (ಪವಿತ್ರ ಕುರ್ ಆನ್17: 27)

ಹಣದ ವಿಷಯದಲ್ಲಿ ನೀವು ಯಾವ ತೀರ್ಮಾನವನ್ನು ಕೈಗೊಳ್ಳುತ್ತೀರೋ ಅದು ಸಮಾಜ ಹಾಗೂ ನಮ್ಮ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಶ್ರೀಮಂತರು ಬಡವರಿಗೆ ಆಹಾರ ವಿತರಣೆ, ವಸ್ತ್ರ ವಿತರಣೆ, ರೋಗಿಗಳ ಚಿಕಿತ್ಸೆ, ವಿದ್ಯಾಭ್ಯಾಸ ಹಾಗೂ ಇನ್ನಿತರ ಸಮಾಜ ಸೇವೆಗಳಲ್ಲಿ ತೊಡಗುವಾಗ ಸಮಾಜವು ಅದನ್ನು ಅನುಕರಣೆ ಮಾಡುತ್ತದೆ. ಶ್ರೀಮಂತರು ದುಂದುವೆಚ್ಚದಲ್ಲಿ ಹಣ ವ್ಯರ್ಥ ಮಾಡತೊಡಗಿದರೆ ಸಮಾಜವು ಅದನ್ನೂ ಹಿಂಬಾಲಿಸುತ್ತದೆ. ನಿಮ್ಮ ಸಣ್ಣ ಸಣ್ಣ ಭೌತಿಕ ವಸ್ತುಗಳನ್ನು ಜನರಿಗೆ ತೋರಿಸಿ ಇತರರ ಮನಸ್ಸಿನಲ್ಲಿ ಆಸೆ, ಅಸೂಯೆಯನ್ನುಂಟು ಮಾಡಬೇಡಿರಿ. ಶ್ರೀಮಂತಿಕೆಯೆಂಬುದು ಸ್ವತಃ ಅನುಭವಿಸಲು ಇರುವುದು. ಜನರಮುಂದೆ ತೋರಿಸಲು, ಪ್ರದರ್ಶಿಸಲು ಇರುವುದಲ್ಲ. ಸಮಾಜದಲ್ಲಿ ಬಡವರು ಸಂಕಷ್ಟದಲ್ಲಿರುವಾಗ ಶ್ರೀಮಂತರ ಸುಸ್ಥಿಗೆ ಬೆಲೆ ಇರುವುದಿಲ್ಲ. ಜನರು ನಿಮ್ಮ ಮನೆ, ವಸ್ತ್ರಾಭರಣ, ಕಾರು ಇತ್ಯಾದಿ ಯಾವುದನ್ನೂ ನೆನಪಿಡುವುದಿಲ್ಲ. ನಿಮ್ಮ ಒಳ್ಳೆಯ ಗುಣಗಳಿಂದ ಮಾತ್ರ ಸ್ಮರಿಸುತ್ತಾರೆ. ಇನ್ನು ನೀವು ಯಾರಿಗಾದರೂ ಏನಾದರೂ ಉಪಕಾರ ಮಾಡಿದ್ದರೆ ಅದನ್ನು ನೆನಪಿಸುತ್ತಾರೆ, ಆ ಒಳಿತಿಗಾಗಿ ನಿಮಗೆ ಪ್ರಾರ್ಥಿಸಲೂಬಹುದು. ನಿಮ್ಮ ಹಣದಿಂದ ಇತರರಿಗೆ ಪ್ರಯೋಜನವಾಗುವಾಗ ಅತಿ ಹೆಚ್ಚು ಮನಃಶ್ಶಾಂತಿ ಮತ್ತು ಸಂತೃಪ್ತಿ ಸಿಗುತ್ತದೆಂದು ಹಲವಾರು ಅಧ್ಯಯನಗಳು ಹೇಳುತ್ತದೆ.

ಇಲ್ಲಿ ನೀವು ಎಷ್ಟು ಹಣ ಸಂಪಾದಿಸುತ್ತೀರೆಂಬುದು ಮುಖ್ಯವಲ್ಲ. ಅದನ್ನು ಯಾವ ರೀತಿ ನಿರ್ವಹಿಸುತ್ತೀರಿ? ಅದರಿಂದ ಸಮಾಜದಲ್ಲಿ ಇತರರಿಗೆ ಎಷ್ಟು ಉಪಕಾರವಾಗುತ್ತದೆಂಬುದು ಮುಖ್ಯವಾಗಿದೆ. ಪ್ರಸಕ್ತ ಸಮಾಜ ಎದುರಿಸುತ್ತಿರುವ ಬಡತನ, ನಿರುದ್ಯೋಗ ಹೋಗಲಾಡಿಸುವಲ್ಲಿ ನಮ್ಮ ಹಣದ ಒಂದು ಭಾಗವಾದರೂ ಇದೆಯೇ? ದಾನಧರ್ಮ ಹಾಗೂ ಝಕಾತ್ ನೀಡುವ ಶ್ರೇಷ್ಠ ಸ್ಥಾನದಲ್ಲಿ ನಾವಿದ್ದೇವೆಯೇ? ಎಂದು ಅವಲೋಕನ ನಡೆಸಬೇಕು. ಕೆಲವೊಂದು ಸರಕಾರಗಳು 30% ತೆರಿಗೆ ಪಾವತಿಸಲು ನಿರ್ಬಂಧಿಸುತ್ತದೆ. ಆದರೆ ಝಕಾತ್ ಎಂಬುದು ಉಳಿತಾಯಕ್ಕೆ ಒಂದು ವರ್ಷ ಕಳೆದ ನಂತರ 2.5% ಮಾತ್ರ. ಶ್ರೀಮಂತರನ್ನು ಅತಿ ಶ್ರೀಮಂತರನ್ನಾಗಿ ಮಾಡುವ ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಬಂಡವಾಳಷಾಹಿ ನಿಯಮವನ್ನು ಇಸ್ಲಾಮ್ ಧರ್ಮವು ಪ್ರೋತ್ಸಾಹಿಸುವುದಿಲ್ಲ. ನಮ್ಮ ಸಮಾಜದಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಕಡ್ಡಾಯ ದಾನಧರ್ಮವನ್ನು ಸರಿಯಾಗಿ ನೀಡಿದರೆ ಬಡತನವನ್ನು ಹೋಗಲಾಡಿಸಲು ಸಾಧ್ಯವಿದೆ. ಝಕಾತ್ ನೀಡುವವರು ಶ್ರೇಷ್ಠವಾದ ಜನ್ನಾತುಲ್ ಫಿರ್ದೌಸ್ ನ ವಾರೀಸುದಾರರು ಎಂದು ಪವಿತ್ರ ಕುರ್ ಆನ್ ನಲ್ಲಿ ಹೇಳಲಾಗಿದೆ.

ಜಿಪುಣತೆ ಮತ್ತು ಅತ್ಯಾಸೆ ಎಂಬುದು ಮನಸ್ಸಿನಲ್ಲಿರುವ ದಾರಿದ್ರ್ಯವಾಗಿದೆ. ನೀವು ಶ್ರೀಮಂತರಾಗಬೇಕಿದ್ದರೆ ಮೊದಲು ಮನಸ್ಸಿನ ದಾರಿದ್ರ್ಯವನ್ನು ಹೋಗಲಾಡಿಸಬೇಕು. ಕೆಲವು ಬಡವರ ಮಕ್ಕಳು ಉನ್ನತ ವಿದ್ಯಾಭ್ಯಾಸ ಗಳಿಸುವುದು ಅವರ ಹೆತ್ತವರ ಮನಸ್ಸಿನ ಶ್ರೀಮಂತಿಕೆಯಿಂದಾಗಿರುತ್ತದೆ. ಪ್ರವಾದಿ ಮುಹಮ್ಮದ್(ಸ)ರವರ ಕಾಲದಲ್ಲಿ ಪುಟ್ಟ ಮದೀನಾ ನಗರವು ಸಾವಿರಾರು ವಲಸಿಗರನ್ನು ಸ್ವೀಕರಿಸಿ ಅವರಿಗೆ ಎಲ್ಲ ಮೂಲಭೂತ ಬೇಡಿಕೆಗಳ ಸೌಲಭ್ಯ ಒದಗಿಸಿದುದು ಅವರ ಮನಸ್ಸಿನ ಶ್ರೀಮಂತಿಕೆಯಿಂದಾಗಿರುತ್ತದೆ.

ಪ್ರವಾದಿ(ಸ) ಹೇಳಿರುವರು: “ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯಾಗಿದೆ.”