ಹೂಡಿಕೆಯ ಬಗ್ಗೆ ನೀವು ಆಲೋಚಿಸುವುದಿಲ್ಲವೇ?

0
323

ಸನ್ಮಾರ್ಗ ವಾರ್ತೆ

ಹಣ ಸಂಪಾದಿಸುವ ನೈಜ ಉದ್ದೇಶವು ತಮ್ಮೆಲ್ಲಾ ಮೂಲಭೂತ ಮತ್ತು ಧರ್ಮಸಮ್ಮತ ಬೇಡಿಕೆಗಳನ್ನು ಅತ್ಯಂತ ಸುಂದರವಾಗಿ ಪೂರೈಸುವುದಾಗಿದೆ. ನಮ್ಮ ಜವಾಬ್ದಾರಿಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿ ಸಾಲವಿಲ್ಲದೇ ಸಂತೋಷದಿಂದ ಸುಖವಾಗಿ ಜೀವಿಸುವುದಾಗಿದೆ.

ಸಂಪತ್ತಿನ ವಿಷಯದಲ್ಲಿ ಧರ್ಮದ ಚೌಕಟ್ಟುಗಳನ್ನು ಪಾಲಿಸುತ್ತಾ ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿ ಇರಬೇಕು. ಪ್ರತಿಯೊಬ್ಬರೂ ತಾವು ಸಂಪಾದನೆ ಮಾಡುವ ಉದ್ದೇಶವೇನು ಎಂಬುದನ್ನು ಅರಿತಿರಬೇಕು. ಯೌವನದಲ್ಲಿ ಉಳಿತಾಯ ಮಾಡಿದ ಹಣ ನಿಮ್ಮ ಅಗತ್ಯದ ಸಮಯದಲ್ಲಿ ಮತ್ತು ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ನೆರವೇರಿಸಲು ಸಹಾಯಕವಾಗುವಂತಿರಬೇಕು. ನಿಮ್ಮ ಕೈಯಲ್ಲಿ ಹಣ, ಆರೋಗ್ಯ, ಸಮಯವಿರುವಾಗ ಆಪ್ತ ಸಂಬಂಧಿಕರ ಎಲ್ಲಾ ಆಸೆಗಳನ್ನು ಈಡೇರಿಸುವುದಕ್ಕಿಂತಲೂ ನೀವು ಸ್ವತಃ ನಿಮ್ಮನ್ನೇ ಪ್ರೀತಿಸಿರಿ. ನಿಮ್ಮ ಇಹಪರ ಜೀವನಕ್ಕಾಗಿ ಹೂಡಿಕೆ ಮಾಡಿರಿ. ನಿಮ್ಮ ಜೀವನದಲ್ಲಿ ಆರ್ಥಿಕ ಭದ್ರತೆಯ ಬಗ್ಗೆ ಆಲೊಚಿಸಿರಿ.

ತಂತ್ರ ಜ್ಞಾನವು ಕ್ಷಿಪ್ರ ಪ್ರಗತಿಯಲ್ಲಿ ಓಡುತ್ತಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ದಿನಂಪ್ರತಿ ಮಾರುಕಟ್ಟೆಯಲ್ಲಿ ಶೀಘ್ರ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಒಬ್ಬ ವ್ಯಕ್ತಿ ಇಪ್ಪತ್ತೊಂದು ವರ್ಷವಿರುವಾಗ ಕಲಿತಂತಹ ವಿದ್ಯಾಭ್ಯಾಸ, ಮಾರುಕಟ್ಟೆ ,ವ್ಯಾಪಾರದ ಶೈಲಿ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಕಾಲ ಕಳೆದಂತೆ ಭಾರೀ ಬದಲಾವಣೆಗಳಾಗುತ್ತಿರುತ್ತದೆ. ಆದ್ದರಿಂದ ಬೇಡಿಕೆ, ಕಾಲಕ್ಕೆ ತಕ್ಕಂತೆ ನಮ್ಮ ವೃತ್ತಿ ಜೀವನದಲ್ಲಿಯೂ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ನಮ್ಮ ತಾಂತ್ರಿಕ ಜ್ಞಾನದಲ್ಲಿ ಬದಲಾವಣೆಗಳನ್ನುಂಟು ಮಾಡುವ ಅಗತ್ಯವಿದೆ.

ಆಧುನಿಕ ಕಾಲದಲ್ಲಿ ವಿದ್ಯಾಭ್ಯಾಸಲ್ಲಿ ಮಾಡುವ ಹೂಡಿಕೆಯೇ ಅತ್ಯುತ್ತಮ ಹೂಡಿಕೆಯಾಗಿದೆ. ನಿಮ್ಮ ಸಾಮರ್ಥ್ಯ, ಆಸಕ್ತಿ, ಅಭಿರುಚಿ, ಕಲೆ, ಕೌಶಲ್ಯವನ್ನು ಕಂಡುಹಿಡಿದು ಅದನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆಸಕ್ತಿ ವಹಿಸಿರಿ.

ನಿಮ್ಮ ಕೌಶಲ್ಯ ಮತ್ತು ಜ್ಞಾನವನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು ಪ್ರಸಕ್ತ ಕಾಲದಲ್ಲಿ ನಿಮ್ಮ ಕ್ಷೇತ್ರ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳ ಕುರಿತು ಮಾಹಿತಿಯನ್ನು ಪಡೆಯುತ್ತಿರಿ. ಸಮಾನ ಮನಸ್ಕ ವ್ಯಕ್ತಿಗಳು, ಸಂಭಾವ್ಯ ಮಾರ್ಗದರ್ಶಕರು, ಹೂಡಿಕೆದಾರರು ಮತ್ತು ಇತರ ವೃತ್ತಿಪರರೊಂದಿಗೆ ಸಂಪರ್ಕವಿಡುತ್ತಾ ಅಮೂಲ್ಯವಾದ ಸಲಹೆಯನ್ನು ಪಡೆಯುತ್ತಿರಿ. ತಮ್ಮ ಸಾಮರ್ಥ್ಯವನ್ನು ಕಂಡು ಹಿಡಿಯದೆ ಅಭಿವೃದ್ಧಿ ಹೊಂದಲು ಸಾಧ್ಯವಾಗದಿದ್ದರೆ ಅವರಲ್ಲಿ ಅಸೂಯೆ, ಕೋಪ, ನಿರಾಸೆ ಉಂಟಾಗಲು ಸಾಧ್ಯವಿದೆ.

ನೀವು ಮೂವತ್ತು ಮೂವತ್ತೈದು ವರ್ಷ ಪ್ರಾಯದವರಾಗಿದ್ದರೆ ಯಾರದೋ ಕೈಯಲ್ಲಿ ಹಣ ಕೊಟ್ಟು ಅಧಿಕ ಲಾಭ ಪಡೆಯುವುದನ್ನು ನಿರೀಕ್ಷಿಸಬೇಡಿರಿ. ಲಾಭ ಕಡಿಮೆಯಾದರೂ ನಿಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಲು ಪ್ರಯತ್ನಿಸಿರಿ. ಎಲ್ಲರೂ ನಿದ್ರಿಸುತ್ತಿರುವಾಗ, ಸಂಭ್ರಮಿಸುವಾಗ ನೀವು ಕುಳಿತು ಏನಾದರೂ ಕಲಿತರೆ, ಹೂಡಿಕೆ ಮಾಡಿದರೆ, ಪರಿಶ್ರಮ ಪಟ್ಟರೆ ನಂತರದ ದಿನಗಳಲ್ಲಿ ವಿಜಯ ಕಾಣುವಿರಿ.

“ಅಲ್ಲಾಹನು ವ್ಯಾಪಾರವನ್ನು ಧರ್ಮಸಮ್ಮತಗೊಳಿಸಿರುತ್ತಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿರುತ್ತಾನೆ.” (ಪವಿತ್ರ ಕುರ್ ಆನ್ 2:275)

ನೀವು ವಿದೇಶದಲ್ಲಿ ದುಡಿಯುವವರಾಗಿದ್ದರೆ ಸ್ವದೇಶದಲ್ಲಿಯೂ, ವಿದೇಶದಲ್ಲಿಯೂ ಸ್ವಲ್ಪ ಸ್ವಲ್ಪ ಹೂಡಿಕೆ ಮಾಡಿರಿ. ನಿಮ್ಮ ಹಣದಿಂದ ನೂರಾರು ಜನರಿಗೆ ಉಪಕಾರವಾಗಲಿ, ಅವರ ಸಮಸ್ಯೆಗಳೂ ಪರಿಹಾರವಾಗಲಿ, ಇತರರ ಮನೆಯಲ್ಲಿ ಒಲೆ ಉರಿಯಲು ಕಾರಣವಾಗಲಿ ಎಂಬ ಉತ್ತಮವಾದ ಗುರಿ ಇರಬೇಕು. ನಿಮ್ಮ ಹಣದಿಂದ ಸಮಾಜಕ್ಕೆ ಉಪಕಾರಿಯಾಗುವ ಹಲವಾರು ಆಲೋಚನೆ, ಯೋಜನೆಗಳೂ ಇರಬೇಕು. ನಿಮ್ಮ ಹಣ ಸರಿಯಾದ ರೀತಿಯಲ್ಲಿ ಪ್ರಯೋಜನವಾಗದಿದ್ದರೆ ಎಷ್ಟು ಹಣವಿದ್ದರೂ ಜೀವನ ಅಂಧಕಾರವಾಗಿರುವುದು.

ಜಗತ್ತಿನಲ್ಲಿ ನಡೆದ ಎಲ್ಲಾ ಕ್ರಾಂತಿಗಳು ವ್ಯಾಪಾರ ಕ್ಷೇತ್ರದಲ್ಲಿ ಬಾರಿ ಬದಲಾವಣೆಗಳನ್ನು ಮತ್ತು ಹೊಸ ಹೊಸ ಅವಕಾಶಗಳನ್ನುಂಟು ಮಾಡಿದೆ. ಎಲ್ಲರಿಗೂ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನೂರರಲ್ಲಿ 10-20% ಜನರಿಗೆ ಮಾತ್ರ ಯಶಸ್ವಿಯಾಗಿ ವ್ಯಾಪರ ಮಾಡುವ ಸಾಮರ್ಥ್ಯ ಇರುತ್ತದೆ. ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಸೂಕ್ತ ಸಮಯದ ಅವಕಾಶಗಳ ಪ್ರಯೋಜನ ಪಡೆದು ನಿರ್ಧಾರವನ್ನು ಕೈಗೊಳ್ಳುವವರಿಗೆ ಮಾತ್ರ ವ್ಯಾಪಾರ ಕ್ಷೇತ್ರದಲ್ಲಿ ವಿಜಯವನ್ನು ಹೊಂದಲು ಸಾಧ್ಯ.

ನಿಮ್ಮ ಹಣ ಯಾರದೋ ಮನೆ, ಮದುವೆ ಮಂಟಪ, ಔತಣ ಕೂಟವೆಂದು ಜನರನ್ನು ಸಂತೃಪ್ತಿ ಪಡಿಸಲು ತೋರಿಕೆಗಾಗಿ ಖರ್ಚು ಮಾಡಿ ನಿಷ್ಫಲವಾಗದಿರಲಿ. ಮಕ್ಕಳ ವಿದ್ಯಾಭ್ಯಾಸ, ವಿವಾಹ, ಚಿನ್ನಾಭರಣ ಉಡುಗೊರೆ ಎಂದು ಸಂಪಾದಿಸಿದ ಹಣವನ್ನೆಲ್ಲಾ ಖರ್ಚು ಮಾಡಬೇಡಿರಿ. ನಿಮ್ಮ ಅಗತ್ಯದಲ್ಲಿ ಸಮಯದಲ್ಲಿ ಮಕ್ಕಳು ಖರ್ಚು ಮಾಡುವರೆಂಬ ಯಾವ ಭರವಸೆಯನ್ನಿಡಬೇಡಿರಿ. 50 -60 ವರ್ಷ ಪ್ರಾಯದ ನಂತರ ಕೈಕಾಲುಗಳು ದುರ್ಬಲವಾಗುವಾಗ, ರೋಗಗಳಿಗೆ ತುತ್ತಾಗುವಾಗ ನಮ್ಮ ಪ್ರಾಯಲ್ಲಿರುವವರು ಎಲ್ಲಿಯೋ ತಲುಪಿ ವಿಜಯ ಹೊಂದುವಾಗ ನಾನು ಜೀವನದಲ್ಲಿ ಏನೂ ಸಾಧನೆ ಮಾಡಲಿಲ್ಲವಲ್ಲಾ ಎಂದು ಖೇದಿಸುವಂತಾಗದಿರಲಿ.

ಕೈಯಲ್ಲಿ ಹಣವಿರುವಾಗ ಹೆಚ್ಚಿನವರು ಮನೆ ನವೀಕರಣಗೊಳಿಸುವುದು, ಕಾರು ಮತ್ತಿತರ ನಿತ್ಯೋಪಯೋಗ ವಸ್ತುಗಳನ್ನು ಮಾರಿ ಹೊಸತನ್ನು ಖರೀದಿಸುವುದು, ವಿನೋಧ ಯಾತ್ರೆಗಳಿಗೆ ಹೋಗುವುದು, ದುಬಾರಿ ಆಹಾರ ತಿನ್ನುವುದು, ಉಡುಗೊರೆ ನೀಡುವುದು, ಸ್ಥಾನಮಾನ, ಪ್ರತಿಷ್ಠೆಗಾಗಿ ಖರ್ಚು ಮಾಡುವುದು, ಸುತ್ತ ಮುತ್ತಲಿನವರು ಖರ್ಚು ಮಾಡುತ್ತಿದ್ದಾರೆ ಎಂದು ಖರ್ಚು ಮಾಡುವುದನ್ನು ಕಾಣಬಹುದಾಗಿದೆ.

ಆದರೆ ಇದು ನಮ್ಮ ಅಗತ್ಯದ ಸಮಯದಲ್ಲಿ ಯಾವುದೇ ವರಮಾನವನ್ನು ನೀಡುವುದಿಲ್ಲ. ಐಶಾರಾಮಿ ಸೌಕರ್ಯಗಳಲ್ಲಿ ವಾಸಿಸುವ ಬಡ ನಿರ್ಗತಿಕ ಯಜಮಾನನಂತಹ ಪರಿಸ್ಥಿತಿ ಬರದಿರಲಿ. ಹಣವಿರುವಾಗ ನಿಮ್ಮ ಜೊತೆಗಿರುವ ಆಪ್ತ ಕುಟುಂಬವು ಹಣವಿಲ್ಲದ ಸಮಯದಲ್ಲಿ ಶತ್ರುಗಳಾಗಿ ಮಾರ್ಪಡುವ ಸಾಧ್ಯತೆಯೂ ಇದೆ.

ಆದುದರಿಂದ ಬುದ್ಧಿವಂತಿಕೆಯಿಂದ ಹಣಕಾಸಿನ ನಿರ್ವಹಣೆ ಮಾಡಿರಿ. ನಿಮ್ಮ ಖರ್ಚುಗಳ ಬಗ್ಗೆ ನಿಗಾ ಇಡಿರಿ. ಸಾಲದ ವ್ಯವಹಾರವನ್ನು ಕಡಿಮೆಗೊಳಿಸಿರಿ. ಸ್ಥಿರ ಆಸ್ತಿಗಳ ಮೇಲೂ ಹೂಡಿಕೆ ಮಾಡಿರಿ. ಸ್ಥಿರತೆಯಿಂದ ನಿರಂತರ ಪರಿಶ್ರಮ ಪಡಿರಿ. ಆರ್ಥಿಕವಾಗಿ ಬೆಳವಣಿಗೆ ಹೊಂದುವ ಮನಃಸ್ಥಿತಿಯನ್ನು ಹೊಂದಿರಿ.

✍️ ಖದೀಜ ನುಸ್ರತ್