ಬಕ್ರೀದ್ ಸುತ್ತೋಲೆ: ಸರ್ಕಾರದ ಉದ್ದೇಶವೇನು?

0
326

ಸನ್ಮಾರ್ಗ ಸಂಪಾದಕೀಯ

ಈದುಲ್ ಅಝ್ಹಾ ಅಥವಾ ಬಕ್ರೀದ್‌ನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ರಾಜ್ಯ ಸರಕಾರ 3 ದಿನಗಳ ಮುಂಚಿತವಾಗಿಯೇ ಕೆಲವು ಎಚ್ಚರಿಕೆಗಳನ್ನು ರವಾನಿಸಿದೆ. ಪ್ರಾಣಿ ವಧೆಗೆ ಸಂಬಂಧಿಸಿದಂತೆ ಇರುವ ಕಠಿಣ ಕಾಯ್ದೆಗಳನ್ನು ಅದು ಮುಸ್ಲಿಮರಿಗೆ ನೆನಪಿಸಿದೆ. ‘ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ನೀಡುವ ಬದಲಾಗಿ ಅವುಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡೋಣ..’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮೂರು ದಿನಗಳ ಮೊದಲೇ ಮುಸ್ಲಿಮರಿಗೆ ಹಿತವಚನ ನೀಡಿದ್ದಾರೆ. ಅಲ್ಲದೆ,

‘ಬಕ್ರೀದ್ ವೇಳೆ ಜಾನುವಾರು ಬಲಿ ನೀಡಲು ಅವಕಾಶ ಕೊಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ರಾಜ್ಯದ ಎಲ್ಲ ಗಡಿಭಾಗಗಳಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘ ನೆಯಾಗದಂತೆ ಜಾಗ್ರತೆ ವಹಿಸಬೇಕು, ಅಂಥ ಪ್ರಕರಣ ಎಲ್ಲಾದರೂ ಕಂಡುಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು, ಗೋವು, ಹಸು, ಎತ್ತು, ಹೋರಿ, ಕರು, ಒಂಟೆ ಮತ್ತು ಹದಿಮೂರು ವರ್ಷದೊಳಗಿನ ಎಮ್ಮೆ-ಕೋಣ ಸೇರಿದಂತೆ ಯಾವುದರ ಬಲಿಯೂ ನಡೆಯಬಾರದು, ಒಂದುವೇಳೆ ಉಲ್ಲಂಘಿಸಿದರೆ ಪ್ರಾಣಿ ಬಲಿ ತಡೆ ಕಾಯ್ದೆಯನ್ವಯ 6 ತಿಂಗಳ ಶಿಕ್ಷೆ ಮತ್ತು ಭಾರತೀಯ ದಂಡಸಂಹಿತೆಯ ಅನ್ವಯ 5 ವರ್ಷಗಳ ಶಿಕ್ಷೆ ವಿಧಿಸಲಾಗುವುದು…’ ಎಂದು ರಾಜ್ಯ ಸರಕಾರ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೇ, ಪ್ರಾಣಿವಧೆ ಕಾಯ್ದೆಯನ್ವಯ ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧಿಸುವಂತೆಯೂ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಬಕ್ರೀದ್‌ಗಿಂತ ಮೂರು ದಿನಗಳ ಮೊದಲು ಸಚಿವರು ನೀಡಿದ ಎಚ್ಚರಿಕೆ ಮತ್ತು ಮರುದಿನ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ನೋಡುವಾಗ ಮುಸ್ಲಿಮ್ ಸಮುದಾಯ ಯಾವುದೋ ಕಾನೂನುಬಾಹಿರ ಚಟುವಟಿಕೆಗೆ ಸಿದ್ಧವಾಗುತ್ತಿದೆ ಎಂದೇ ನಂಬಬೇಕು. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವ ಮತ್ತು ಗೋಹತ್ಯೆ ನಡೆಸಲು ಅವರು ಸಂಚು ಹೂಡಿರುವಂತೆ ಸಂದೇಶ ರವಾನಿಸುವ ಪ್ರಯತ್ನ ಸಚಿವರ ಹೇಳಿಕೆ ಮತ್ತು ಸರ್ಕಾರದ ಸುತ್ತೋಲೆಯಲ್ಲಿ ಇರುವಂತಿದೆ. ಪ್ರಾಣಿಬಲಿ ಬಕ್ರೀದ್‌ನ ಭಾಗ. ಜಾನುವಾರುಗಳನ್ನು ಬಲಿ ನೀಡುವುದಕ್ಕೆ ಸರ್ಕಾರದ ಸುತ್ತೋಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಆದ್ದರಿಂದ ಬಲಿ ನೀಡಲು ಉಳಿದಿರುವುದು ಆಡು, ಮೇಕೆ ಮತ್ತು ಕುರಿಗಳು ಮಾತ್ರ. ಆದರೆ ಇದಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ. ಅಧಿಕೃತ ಕಸಾಯಿಖಾನೆಯ ಹೊರತು ಇನ್ನೆಲ್ಲೂ ಇವುಗಳನ್ನು ವಧೆ ಮಾಡಬಾರದೆಂದು ಎಚ್ಚರಿಸಲಾಗಿದೆ. ನಿಜವಾಗಿ,

ಹಬ್ಬದ ಸಂದರ್ಭದಲ್ಲಿ ಪ್ರಾಣಿಬಲಿ ನೀಡುವುದು ಮುಸ್ಲಿಮರು ಮಾತ್ರ ಅಲ್ಲ. ಜಾತ್ರೆ ಅಥವಾ ಊರ ಹಬ್ಬದ ವೇಳೆ ಮುಸ್ಲಿಮೇತರ ಸಮುದಾಯದಲ್ಲೂ ಪ್ರಾಣಿಬಲಿ ಸಂಪ್ರದಾಯವಿದೆ. ಕೋಳಿ, ಕುರಿ, ಮೇಕೆಗಳನ್ನು ಬಲಿ ಕೊಟ್ಟು ಊರ ಹಬ್ಬ ಆಚರಿಸಿದ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲೂ ವರದಿಯಾಗುತ್ತಿರುತ್ತವೆ. ಆದರೆ ಸರ್ಕಾರ ಎಂದೂ ಕೂಡ ಇಂಥ ಊರ ಹಬ್ಬಗಳ ವೇಳೆ ನಿಯಮಗಳ ಪಟ್ಟಿಯನ್ನು ಜಾರಿಗೊಳಿಸಿದ ಉದಾಹರಣೆಯಿಲ್ಲ. ಕಸಾಯಿಖಾನೆಯ ಹೊರತು ಇನ್ನೆಲ್ಲೂ ಪ್ರಾಣಿವಧೆ ಅಪರಾಧ ಎಂದು ಸರ್ಕಾರ ಬಕ್ರೀದ್‌ನ ಹೊರತಾದ ಬೇರೆ ಯಾವ ಸಂದರ್ಭದಲ್ಲೂ ಘೋಷಿಸಿದ ಉದಾಹರಣೆ ಇದೆಯೇ? ಇದು ಎಷ್ಟು ಪ್ರಾಯೋಗಿಕ? ರಾಜ್ಯದಲ್ಲಿ ಈ ಮೊದಲು ಬಕ್ರೀದ್ ನಡೆದಿಲ್ಲವೇ? ಪ್ರಾಣಿಬಲಿ ಕೊಟ್ಟಿಲ್ಲವೇ? ಆಗೆಲ್ಲ ಜಾರಿಯಾಗದ ಸುತ್ತೋಲೆಗಳು ಈಗ ದಿಢೀರ್ ಆಗಿ ಜಾರಿಯಾಗಿರುವುದಕ್ಕೆ ಕಾರಣಗಳೇನು? ಬಕ್ರೀದ್‌ನ ಸಮಯದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿಯೋದು ಮತ್ತು ಒಂದು ರೀತಿಯಲ್ಲಿ ಭಯವನ್ನು ಸಮಾಜದಲ್ಲಿ ಸೃಷ್ಟಿಸುವುದರಿಂದ ಸರ್ಕಾರಕ್ಕೆ ಸಿಗುವ ಲಾಭವೇನು? ಅಷ್ಟಕ್ಕೂ,

ಕುರ್ಬಾನಿ (ಪ್ರಾಣಿಬಲಿ) ಎಂಬುದು ಮಾಂಸದ ಉದ್ದೇಶದಿಂದ ಮಾಡುವ ವಧೆ ಅಲ್ಲ. ಮತ್ತು ಬಕ್ರೀದ್ ಹೊರತಾದ ದಿನಗಳಲ್ಲಿ ಮಾಡುವ ವಧೆಯು ಪ್ರಾಣಿಬಲಿ ಆಗುವುದೂ ಇಲ್ಲ. ಕುರ್ಬಾನಿಗೆ ಒಂದು ಹಿನ್ನೆಲೆ ಇದೆ. ಪ್ರವಾದಿ ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್‌ರ ಮೌಲ್ಯಯುತ ಬದುಕನ್ನು ನೆನಪಿಸುವ ಉದ್ದೇಶದ ಸಾಂಕೇತಿಕ ಕ್ರಮ ಇದು. ಮಾತ್ರವಲ್ಲ, ಆರ್ಥಿಕವಾಗಿ ಸಬಲರ ಮೇಲೆ ಮಾತ್ರ ಇಂಥ ಬಲಿ ನೀಡುವ ಹೊಣೆಗಾರಿಕೆ ಇದೆ. ಬಲಿ ನೀಡಲಾದ ಬಳಿಕ ಮಾಂಸವನ್ನು ಬಡಬಗ್ಗರಿಗೆ ಹಂಚಲಾಗುತ್ತದೆ. ಅಂದಹಾಗೆ, ಇಲ್ಲಿ ಬಲಿ ಎಂಬ ಪದ ಬಳಕೆಯಲ್ಲಿದ್ದರೂ ಸಾಮಾನ್ಯ ವಧಾ ಕ್ರಮವನ್ನೇ ಇಲ್ಲೂ ಅನುಸರಿಸಲಾಗುತ್ತದೆ. ಬಕ್ರೀದ್‌ನ ಸಮಯದಲ್ಲಿ ಮಾಡುವ ಪ್ರಾಣಿವಧೆಗೂ ಇತರ ಸಂದರ್ಭಗಳಲ್ಲಿ ಮಾಡುವ ಪ್ರಾಣಿವಧೆಗೂ ವಧೆ ಎಂಬ ನೆಲೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ.
ಆದರೆ, ಸರ್ಕಾರದ ಆದೇಶವು ಈ ಬಲಿಕರ್ಮದ ಸ್ಫೂರ್ತಿಯನ್ನೇ ತಗ್ಗಿಸುವಂತಿದೆ. ಬಡಬಗ್ಗರಲ್ಲಿ ಮಾಂಸ ವನ್ನು ಹಂಚುವ ಈ ಧಾರ್ಮಿಕ ಕ್ರಿಯೆಯ ಕತ್ತು ಹಿಸುಕುವ ಉದ್ದೇಶವನ್ನಷ್ಟೇ ಹೊಂದಿರುವಂತಿದೆ. ಅಷ್ಟಕ್ಕೂ,

ಪ್ರಾಣಿಬಲಿ ನೀಡಬಯಸುವ ವ್ಯಕ್ತಿಯೋರ್ವ ಅದಕ್ಕಾಗಿ ಕಸಾಯಿಖಾನೆಯನ್ನೇ ಆಶ್ರಯಿಸುವುದು ಎಷ್ಟು ಪ್ರಾಯೋಗಿಕ ಎಂದು ಸರ್ಕಾರ ಅಧ್ಯಯನ ನಡೆಸಿದೆಯೇ? ಒಂದು ಜಿಲ್ಲೆಯಲ್ಲಿ ಎಷ್ಟು ಕಸಾಯಿಖಾನೆಗಳಿವೆ? ಇರುವ ಕಸಾಯಿಖಾನೆಗಳಲ್ಲಿ ಬಕ್ರೀದ್‌ನ ಬಲಿಕರ್ಮಕ್ಕೆ ಬೇಕಾದಷ್ಟು ಸೌಲಭ್ಯ ಗಳಿವೆಯೇ? ಕೇವಲ ಮೂರು ದಿನಗಳವರೆಗೆ ಮಾತ್ರ ಬಲಿಕರ್ಮವನ್ನು ನಿಭಾಯಿಸಲು ಅವಕಾಶ ಇದೆ. ಈ ಅವ ಧಿಯೊಳಗೆ ಎಲ್ಲ ಬಲಿಕರ್ಮಗಳೂ ಮುಗಿದಿರಬೇಕು ಎಂದು ಮಾತ್ರವಲ್ಲ, ಚರ್ಮ ಸುಲಿಯುವ ಮತ್ತು ಮಾಂಸ ಮಾಡುವ ಪ್ರಕ್ರಿಯೆಗಳೂ ಅಲ್ಲೇ ನಡೆಯಬೇಕಾಗುತ್ತದೆ. ಇವೆಲ್ಲಕ್ಕೂ ಕಸಾಯಿಖಾನೆಗಳಲ್ಲಿ ಪೂರಕ ವ್ಯವಸ್ಥೆಯಿದೆಯೇ? ಈ ಬಗ್ಗೆ ಸರ್ಕಾರ ವರ ದಿಯನ್ನು ತರಿಸಿಕೊಂಡಿದೆಯೇ?

ದಕ್ಷಿಣ ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ, ಸದ್ಯ ಒಂದು ರೀತಿಯ ಮಂಕು ಕವಿದ ವಾತಾವರಣವಿದೆ. ಮಂಗಳೂರು ನಗರದಲ್ಲಿ ಇರುವ ಏಕೈಕ ಕಸಾಯಿಖಾನೆಯನ್ನು ದುರಸ್ತಿಯ ನೆಪದಲ್ಲಿ ಜಿಲ್ಲಾಡಳಿತ ದಿನಗಳ ಹಿಂದೆಯೇ ಮುಚ್ಚಿದೆ. ಅಲ್ಲದೇ, ಕುರ್ಬಾನಿಗಾಗಿ ಪರ್ಯಾಯ ವ್ಯವಸ್ಥೆಯನ್ನೂ ಮಾಡಿದಂತಿಲ್ಲ. ಏನಿದರ ಅರ್ಥ? ಒಂದುಕಡೆ, ಕುರಿ, ಮೇಕೆ ಮತ್ತು ಆಡುಗಳನ್ನು ಕಸಾಯಿಖಾನೆಯಲ್ಲಿ ಬಲಿಗಾಗಿ ವಧೆ ಮಾಡಬೇಕು ಎಂದು ಹೇಳುವ ಸರ್ಕಾರ, ಇನ್ನೊಂದು ಕಡೆ ಇರುವ ಏಕೈಕ ಕಸಾಯಿಖಾನೆಯನ್ನೂ ಮುಚ್ಚಿಸುತ್ತದೆ ಎಂದರೆ, ಮುಸ್ಲಿಮ್ ಸಮುದಾಯವನ್ನು ಕಾನೂನು ಉಲ್ಲಂಘಿಸಲು ಪರೋಕ್ಷವಾಗಿ ಪ್ರೇರೇಪಿಸುತ್ತಿದೆ ಎಂದೇ ಅರ್ಥವಲ್ಲವೇ? ಹಾಗಂತ,

ಮಂಗಳೂರಿನ ಕಸಾಯಿಖಾನೆಗೆ ಬಂದಿರುವ ದುಃಸ್ಥಿತಿ, ರಾಜ್ಯದ ಬೇರೆ ಕಸಾಯಿಖಾನೆಗಳಿಗೆ ಬಂದಿದೆಯೇ ಎಂಬ ವರದಿಯಿಲ್ಲ. ಮುಸ್ಲಿಮ್ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆಗೆ ಸರ್ಕಾರ ಪ್ರಚೋದಿಸುತ್ತಿದೆಯೇ? ಧಾರ್ಮಿಕ ಕರ್ಮವೊಂದನ್ನು ಸುಲಲಿತವಾಗಿ ನೆರವೇರಿ ಸುವುದಕ್ಕೆ ಅವಕಾಶ ಮಾಡಿಕೊಡಬೇಕಾದ ಸರ್ಕಾರವೊಂದು ಅದಕ್ಕೆ ಅಡ್ಡಗಾಲಿಡುವಂತೆ ವರ್ತಿಸುತ್ತಿರು ವುದೇಕೆ? ಆಡು, ಕುರಿ, ಮೇಕೆಗಳನ್ನು ಮುಸ್ಲಿಮರು ತಂತಮ್ಮ ಮನೆಗಳಲ್ಲಿ ಬಲಿಯರ್ಪಿಸುವುದರಿಂದ ಸರ್ಕಾರಕ್ಕೆ ಆಗುವ ತೊಂದರೆಯೇನು? ಹಾಗಂತ, ಎಲ್ಲ ಮನೆಗಳಲ್ಲೂ ಇಂಥ ಬಲಿಯರ್ಪಣೆ ನಡೆಯುವುದಿಲ್ಲ. ಆರ್ಥಿಕವಾಗಿ ಸಬಲರಾಗಿರುವ ಮುಸ್ಲಿಮರು ಮಾತ್ರ ಬಲಿಯರ್ಪಿಸುತ್ತಾರೆ. ಅಂಥವರನ್ನು ಕಸಾಯಿಖಾನೆಗೆ ಅಟ್ಟುವುದೇಕೆ? ಇಂಥ ನಿಯಮ ಬಲಿಯರ್ಪಿಸಲು ಬಯಸುವವರಿಗಷ್ಟೇ ಅಲ್ಲ, ಕಸಾಯಿಖಾನೆಯನ್ನು ನಿರ್ವಹಿಸುವವರಿಗೂ ಸಮಸ್ಯೆಯನ್ನು ತಂದೊಡ್ಡುತ್ತದೆ. ನಿಜವಾಗಿ,

ಸರ್ಕಾರದ ನಿಯಮದಿಂದ ಸಾತ್ವಿಕ ಮುಸ್ಲಿಮರು ಮತ್ತು ವ್ಯಾಪಾರಸ್ಥರು ಖಂಡಿತ ತೊಂದರೆಯನ್ನು ಎದುರಿಸುತ್ತಾರೆ. ಮಾಂಸ ಮಾರಾಟಗಾರರನ್ನು ದಬಾಯಿಸುವುದಕ್ಕೆ ಮತ್ತು ಕಿರುಕುಳ ಕೊಟ್ಟು ಬಂಧಿಸು ವುದಕ್ಕೆ ಪೊಲೀಸರಿಗೆ ಈ ಸುತ್ತೋಲೆ ಅಪರಿಮಿತ ಅ ಧಿಕಾರವನ್ನು ನೀಡುತ್ತದೆ. ಮುಸ್ಲಿಮರು ಹಬ್ಬದ ಖುಷಿಯನ್ನು ಅನುಭವಿಸದಂತೆ ಮತ್ತು ಭೀತಿಯಲ್ಲಿ ಕಳೆಯುವಂತೆಯೂ ಮಾಡುತ್ತದೆ. ಅಲ್ಲದೇ, ಕುರಿ, ಮೇಕೆ, ಆಡು ಮಾಂಸವನ್ನು ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ದುಷ್ಕರ್ಮಿಗಳಿಗೆ ಏರಿ ಹೋಗುವುದಕ್ಕೂ ದಾಂಧಲೆ ನಡೆಸುವುದಕ್ಕೂ ಈ ಸುತ್ತೋಲೆ ಪ್ರೇರಣೆ ನೀಡುತ್ತದೆ. ಇದು ಅನ್ಯಾಯ. ಪ್ರಭುತ್ವ ಮತ್ತು ಅದರ ಬೆಂಬಲಿಗರ ವರ್ತನೆಯಿಂದ ಈಗಾಗಲೇ ರೋಸಿ ಹೋಗಿರುವ ಮುಸ್ಲಿಮರಿಗೆ ಕನಿಷ್ಠ ಹಬ್ಬದ ಖುಷಿಯನ್ನು ಅನುಭವಿಸುವುದಕ್ಕೂ ಸರ್ಕಾರ ಅಡ್ಡಿಪಡಿಸುತ್ತಿರುವುದು ಖಂಡನಾರ್ಹ. ಕುರಿ, ಮೇಕೆ, ಆಡುಗಳ ಬಲಿಗೆ ವಿಧಿಸಲಾಗಿರುವ ಷರತ್ತುಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಜೊತೆಗೇ ಮುಸ್ಲಿಮ್ ಸಮುದಾಯವನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು.