ಸನ್ಮಾರ್ಗ: ರಾಜಿ ಮಾಡಿಕೊಳ್ಳದ 45 ವರ್ಷಗಳು

0
178

ಸನ್ಮಾರ್ಗ ವಿಶೇಷ ಸಂಪಾದಕೀಯ

1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಎರಡು ರೀತಿಯ ಸವಾಲುಗಳಿದ್ದುವು-

  1. ಕನ್ನಡ ಭಾಷೆಯಲ್ಲಿರುವ ಇಂಥದ್ದೊಂದು ಪತ್ರಿಕೆಗೆ ಆ ಕಾಲದಲ್ಲಿ ಮಾರುಕಟ್ಟೆ ಇರಲಿಲ್ಲ. ಆದ್ದರಿಂದ ಈ ಪತ್ರಿಕೆ ದೀರ್ಘಕಾಲ ಬದುಕಿ ಉಳಿಯಲಿದೆ ಎಂಬ ಆತ್ಮವಿಶ್ವಾಸ ಸಾರ್ವಜನಿಕರಲ್ಲಿರುವುದಕ್ಕೆ ಸಾಧ್ಯವೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸವನ್ನು ತುಂಬುವುದರ ಜೊತೆಗೇ ಸ್ವಯಂ ಆತ್ಮವಿಶ್ವಾಸವನ್ನು ಹೊಂದುವುದೂ ಪತ್ರಿಕೆ ನಡೆಸುವವರ ಮೇಲಿನ ಆನೆಭಾರದ ಸವಾಲಾಗಿತ್ತು. ಹಾಗೆಯೇ, ಅಕ್ಷರ ಬಲ್ಲವರ ಸಂಖ್ಯೆ ಆ ಕಾಲದಲ್ಲಿ ತೃಪ್ತಿಪಡುವ ರೀತಿಯಲ್ಲೇನೂ ಇರಲಿಲ್ಲ. ಅದರಲ್ಲೂ ಮುಸ್ಲಿಮ್ ಸಮುದಾಯದಲ್ಲಂತೂ ಓದು-ಬರಹ ಬಲ್ಲವರ ಸಂಖ್ಯೆ ಶೋಚನೀಯ ಸ್ಥಿತಿಯಲ್ಲಿತ್ತು. ಅಕ್ಷರ ಬಲ್ಲವರೇ ಕಡಿಮೆ ಇರುವ ಸಮಾಜದಲ್ಲಿ ಆಗತಾನೇ ಹುಟ್ಟಿಕೊಂಡ ಪತ್ರಿಕೆಯನ್ನು ಮಾರಾಟ ಮಾಡುವುದೆಂದರೆ, ಅದು ಪ್ರವಾಹದ ವಿರುದ್ಧ ಈಜಲು ಹೊರಟಂತೆ. ಬಡವರೇ ತುಂಬಿರುವ ಮತ್ತು ನಕ್ಷತ್ರದಂತೆ ಅಲ್ಲೊಂದು ಇಲ್ಲೊಂದು ಶ್ರೀಮಂತರಿದ್ದ ಸಮಾಜದಲ್ಲಿ ಪತ್ರಿಕೆಯನ್ನು ಖರೀದಿಸಿ ಓದುವುದಕ್ಕೆ ಪ್ರೇರೇಪಿಸುವುದು ಸುಲಭವಾಗಿರಲಿಲ್ಲ. ಇಂದಿನಂತೆ ಡಿಜಿಟಲ್ ಜಮಾನ ಅಲ್ಲದಿದ್ದ ಮತ್ತು ಸಾರಿಗೆ ಸಂಪರ್ಕಗಳೂ ವಿರಳವಾಗಿದ್ದ ಕಾಲದಲ್ಲಿ ಸನ್ಮಾರ್ಗವನ್ನು ಜನರ ನಡುವೆ ಜನಪ್ರಿಯ ಗೊಳಿಸುವುದಕ್ಕೆ ಅಪಾರ ಶ್ರಮ, ಸಹನೆ ಮತ್ತು ಆತ್ಮವಿಶ್ವಾಸದ ಪರ್ವತವೇ ಬೇಕಿತ್ತು. ಮುಖ್ಯವಾಗಿ,‘ನಾವು ದೀರ್ಘಕಾಲ ಬಾಳುವೆವು ಮತ್ತು ಅದಕ್ಕೆ ಬೇಕಾದ ಸಿದ್ಧತೆ ನಮ್ಮಲ್ಲಿದೆ..’ ಎಂಬ ಸಕಾರಾತ್ಮಕ ಸಂದೇಶವನ್ನು ಸಾರ್ವಜನಿಕರಲ್ಲಿ ತುಂಬುವ ಕಠಿಣ ಸವಾಲೂ ಇತ್ತು.

 2. ಸಂಪಾದಕೀಯ ಬಳಗ ತೀರಾ ಅನನುಭವಿಯಾಗಿತ್ತು. ಆವರೆಗೆ ಯಾವ ಪತ್ರಿಕೆಯಲ್ಲಿ ದುಡಿದೂ ಅನುಭವವಿರದ ಇಬ್ರಾಹೀಮ್ ಸಈದ್ ಸನ್ಮಾರ್ಗದ ಸಂಪಾದಕರಾಗಿದ್ದರು. ಅವರಿಗೆ ಜೊತೆಗಾರರಾಗಿ ಸಂಪಾದಕೀಯ ಬಳಗ ಸೇರಿಕೊಂಡ ನೂರ್ ಮುಹಮ್ಮದ್ ಮತ್ತು ಸಾದುಲ್ಲಾರಲ್ಲೂ ಜರ್ನಲಿಸಂ ಸರ್ಟಿಫಿಕೇಟೋ ಅಥವಾ ಪತ್ರಿಕಾ ವೃತ್ತಿಯಲ್ಲಿದ್ದ ಅನುಭವವೋ ಯಾವುದೂ ಇರಲಿಲ್ಲ.

ಪತ್ರಿಕೆಗೆ 45 ವರ್ಷಗಳು ತುಂಬಿದ ಈ ಹೊತ್ತಿನಲ್ಲಿ ಆ ಚೊಚ್ಚಲ ಸಂಪಾದಕೀಯ ಬಳಗವನ್ನು ಕಣ್ಣೆದುರು ತರುವಾಗ ಅಚ್ಚರಿ ಉಂಟಾಗುತ್ತದೆ. ಶೂನ್ಯ ಅನುಭವ ಇರುವ ತಂಡವೊಂದು ವಾರಪತ್ರಿಕೆ ತಯಾರಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದೆಂದರೆ, ಅದಕ್ಕೆ ಅಪಾರ ಧೈರ್ಯ, ಛಲ, ಆತ್ಮವಿಶ್ವಾಸದ ಅಗತ್ಯ ಇರುತ್ತದೆ. ಪತ್ರಿಕೆಯ ಅಷ್ಟೂ ಪುಟಗಳಲ್ಲಿ ವೈವಿಧ್ಯತೆಯನ್ನು ತುಂಬುವುದು, ಓದುಗರ ಗಮನ ಸೆಳೆಯುವಂತೆ ಲೇಔಟ್ ತಯಾರಿಸುವುದು, ಇಂಗ್ಲಿಷ್-ಹಿಂದಿ -ಉರ್ದು-ಮಲಯಾಳಂ ಭಾಷೆಯಲ್ಲಿರುವ ಅತ್ಯುತ್ತಮ ಬರಹಗಳನ್ನು ಕನ್ನಡಕ್ಕೆ ತರ್ಜುಮೆಗೊಳಿಸುವುದು, ಪ್ರತಿವಾರವೂ ಈ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವುದು, ಪ್ರೂಫ್ ರೀಡಿಂಗ್‌ನಿಂದ ಹಿಡಿದು ಮುದ್ರಣವಾಗುವಲ್ಲಿವರೆಗೆ ಪ್ರತಿಯೊಂದನ್ನೂ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಪರಿಶೀಲಿಸುವುದೆಲ್ಲ ಅನನುಭವಿ ತಂಡದ ನಿದ್ದೆಗೆಡಿಸುವುದಕ್ಕೆ ಧಾರಾಳ ಸಾಕಿತ್ತು. ಆದರೆ,

ಇಬ್ರಾಹೀಮ್ ಸಈದ್ ನೇತೃತ್ವದ ಈ ತಂಡ ಎಷ್ಟು ಅದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತೆಂದರೆ, ಪತ್ರಿಕೆಯ ಆಯುಷ್ಯದ ಬಗ್ಗೆ ಅನುಮಾನಿಸಿದ್ದವರೆಲ್ಲ ಅಭಿಮಾನಿಗಳಾಗಿ ಮಾರ್ಪಟ್ಟರು.

ಮಂಗಳೂರಿನಲ್ಲಿ ಹುಟ್ಟಿಕೊಂಡ ಸನ್ಮಾರ್ಗ ಬೆಂಗಳೂರನ್ನು ತಲುಪಿತು ಮತ್ತು ರಾಜ್ಯದ ಉದ್ದಗಲದಿಂದಲೂ ಬೇಡಿಕೆ ಬರತೊಡಗಿತು. ಸ್ವತಃ ಸಂಪಾದಕರೇ ಪತ್ರಿಕೆಯ ಪ್ರಚಾರ ರಾಯಭಾರಿಯಾದರು. ಚಂದಾದಾರಿಕೆ ಮಾಡುವುದಕ್ಕಾಗಿ ರಾಜ್ಯ ಸುತ್ತಿದರು. ಅವರ ಜೊತೆಗೇ ಉತ್ಸಾಹಿ ಯುವಕರೂ ಸೇರಿಕೊಂಡರು. ತಂಡಗಳಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಹಂಚಿಹೊದ ಇವರು, ಮನೆಮನೆಗೆ ಭೇಟಿ ಕೊಟ್ಟರು. ಸನ್ಮಾರ್ಗವನ್ನು ಪರಿಚಯಿಸಿದರು. ಸನ್ಮಾರ್ಗ ಯಾವೆಲ್ಲ ಮೌಲ್ಯಗಳನ್ನು ಪ್ರತಿಪಾದಿಸುತ್ತಿತ್ತೋ ಅವುಗಳನ್ನು ದರ್ಶಿಸುವಷ್ಟು ಅವರ ಬದುಕು ಪಾರದರ್ಶಕವಾಗಿತ್ತು. ಜನರು ಮೊದಲು ಅವರನ್ನು ಅಳೆದರು. ಮೆಚ್ಚಿಕೊಂಡರು. ಬಳಿಕ ಪತ್ರಿಕೆಯ ಚಂದಾದಾರರಾದರು. ಅಂದಹಾಗೆ,

ಧರ್ಮದ ಭಾಗವೆಂದೇ ನಂಬಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದ ಕಂದಾಚಾರಗಳ ಬಗ್ಗೆ ಸನ್ಮಾರ್ಗ ಪ್ರತಿವಾರ ಜಾಗೃತಿ ಬರಹಗಳನ್ನು ಪ್ರಕಟಿಸುತ್ತಲೇ ಇತ್ತು. ಮುಸ್ಸಿಮ್ ಸಮಾಜದಲ್ಲಿ ವರದಕ್ಷಿಣೆ ಇತ್ತು. ಮಾಟ, ಮಂತ್ರ, ತಾಯಿತ, ಜ್ಯೋತಿಷ್ಯ, ಬಡ್ಡಿ, ಧೂಮಪಾನ ಇತ್ಯಾದಿಗಳ ಜೊತೆಗೇ ಶಿಕ್ಷಣದ ಬಗ್ಗೆ ಅಪಾಯಕಾರಿ ಅಸಡ್ಡೆ ಕೂಡ ಇತ್ತು. ಮುಸ್ಲಿಮ್ ಹೆಸರಿನ ಹೊರತಾಗಿ ಇಸ್ಲಾಮ್ ಬಯಸುವ ಮೌಲ್ಯಗಳ ಕೊರತೆ ಸಮುದಾಯದಲ್ಲಿತ್ತು. ಅರಬಿ ಭಾಷೆಯ ಕುರ್‌ಆನನ್ನು ಅರ್ಥವರಿತು ಓದುವ ಅಭ್ಯಾಸವಾಗಲಿ, ಓದಬೇಕೆನ್ನುವ ಪರಿಕಲ್ಪನೆಯಾಗಲಿ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಹದೀಸ್ ಎಂದರೆ ಏನು ಮತ್ತು ಅದಕ್ಕೂ ಕುರ್‌ಆನಿಗೂ ನಡುವೆ ಇರುವ ಸಂಬಂಧ ಏನು ಮತ್ತು ಪ್ರಾಮುಖ್ಯತೆ ಏನು ಎಂಬ ಬಗ್ಗೆ ಸಾರ್ವಜನಿಕವಾಗಿ ಭಾರೀ ಅನ್ನಬಹುದಾದ ತಿಳುವಳಿಕೆಯೇನೂ ಇರಲಿಲ್ಲ. ಮಾಧ್ಯಮಗಳಿಗಂತೂ ಇಸ್ಲಾಮೀ ಪಾರಿಭಾಷಿಕ ಪದಗಳ ಅರ್ಥವಾಗಲಿ ವಿವರಣೆಯಾಗಲಿ ಗೊತ್ತೂ ಇರಲಿಲ್ಲ. ಮುಸ್ಲಿಮ್ ಪತ್ರಕರ್ತರು ಪತ್ರಿಕೆಗಳಲ್ಲಿ ವಿರಳವಾಗಿರುವುದು ಇದಕ್ಕೆ ಒಂದು ಕಾರಣವಾದರೆ, ಇರುವವರಿಗೂ ಇಸ್ಲಾಮಿನ ಸಮಗ್ರ ಪರಿಚಯ ಇಲ್ಲದಿದ್ದುದೂ ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಮುಸ್ಲಿಮೇತರರಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ಬೇಕಾದ ಬರಹಗಳು ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದುದೂ ಇದಕ್ಕೆ ಮತ್ತೊಂದು ಕಾರಣವಾಗಿತ್ತು.

ಸನ್ಮಾರ್ಗ ಈ ಎಲ್ಲ ಕೊರತೆಗೂ ಉತ್ತರ ನೀಡುವ ಗುರಿಯೊಂದಿಗೆ ತನ್ನನ್ನು ತೊಡಗಿಸಿಕೊಂಡಿತು. ಪ್ರತೀವಾರ ಅರ್ಥಸಹಿತ ಕುರ್‌ಆನನ್ನು ಪ್ರಕಟಿಸತೊಡಗಿತು. ಕನ್ನಡದಲ್ಲಿ ಪತ್ರಿಕೆಯೊಂದು ಕುರ್‌ಆನನ್ನು ಕನ್ನಡ ಅರ್ಥ ಸಹಿತ ಪ್ರಕಟಿಸಲು ಪ್ರಾರಂಭಿಸಿದ್ದು ಅದೇ ಮೊದಲು. ಹದೀಸನ್ನೂ ಪ್ರಕಟಿಸತೊಡಗಿತು. ಜೊತೆಗೇ ಮಹಿಳೆಯರ ಕುರಿತಂತೆ ಕುರ್‌ಆನ್‌ನ ನಿಲುವು, ಮದ್ಯಪಾನ, ಬಡ್ಡಿ ವ್ಯವಹಾರ, ಮದುವೆ, ವಿಚ್ಛೇದನ, ವಿವಾಹ ಧನ, ಮುಂಜಿ, ಜಿಹಾದ್, ಕಾಫಿರ್, ಉಪವಾಸ, ಹಜ್ಜ್, ಔಲಿಯಾಗಳು, ಗೋರಿ, ದರ್ಗಾಗಳು, ಪ್ರವಾದಿ ಪ್ರೇಮ, ಪ್ರವಾದಿ ಇತಿಹಾಸ, ಬಹುಸಂಸ್ಕೃತಿಯ ಸಮಾಜದಲ್ಲಿ ಮುಸ್ಲಿಮರ ಜವಾಬ್ದಾರಿ, ಮಾದರಿ ಮುಸ್ಲಿಮ್‌ನ ಪರಿಚಯ, ಶಿಶುವಿನಿಂದ ಮರಣದ ವರೆಗೆ ಮುಸ್ಲಿಮ್ ವ್ಯಕ್ತಿಯ ಬದುಕು-ಭಾವ, ಆಚಾರ-ಕರ್ಮಗಳು… ಇತ್ಯಾದಿ ಎಲ್ಲವನ್ನೂ ಪ್ರತೀವಾರ ಪತ್ರಿಕೆ ತನ್ನ ಒಡಲಲ್ಲಿ ತುಂಬಿಸಿಕೊಂಡು ಜನರ ಬಳಿಗೆ ತೆರಳಿತು. ಜೊತೆಗೇ ‘ಕೇಳಿದಿರಾ ಕೇಳಿ’ ಎಂಬ ಅಂಕಣವನ್ನು ಪ್ರಾರಂಭಿಸಿ ಓದುಗರ ಪ್ರಶ್ನೆಗೆ ಉತ್ತರವನ್ನು ಕೊಡುವ ವಿನೂತನ ಪ್ರಯತ್ನಕ್ಕೂ ಇಳಿಯಿತು. ಹಾಗೆಯೇ ಮುಂದೆ ಸನ್ಮಾರ್ಗದ ಅಷ್ಟೂ ಪುಟಗಳಲ್ಲಿ ಅತೀ ಜನಪ್ರಿಯ ಕಾಲಂ ಆಗಿ ಇದು ಮಾರ್ಪಟ್ಟಿತು. ಹಾಗಂತ,

ಕಳೆದ 45 ವರ್ಷಗಳಲ್ಲಿ ಅಸಂಖ್ಯ ಮಂದಿಗೆ ಕುರ್‌ಆನನ್ನು ಕಲಿಸಿಕೊಟ್ಟ, ಅಸಂಖ್ಯ ಮಂದಿಯನ್ನು ಕಂದಾಚಾರಗಳಿಂದ ಬಿಡುಗಡೆಗೊಳಿಸಿದ, ಅಸಂಖ್ಯ ಮಂದಿಯನ್ನು ಇಸ್ಲಾಮಿನ ಮಾದರಿ ವ್ಯಕ್ತಿತ್ವಗಳಾಗಿ ಮಾರ್ಪಡಿಸಿದ ಮತ್ತು ಪತ್ರಕರ್ತರು, ಸಾಹಿತಿಗಳಿಂದ ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವವರ ವರೆಗೆ ಇಸ್ಲಾಮಿನ ಉದಾರವಾದಿ ನಿಲುವುಗಳನ್ನು ದಿಟ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳಬಲ್ಲ ಅಸಂಖ್ಯ ಮಂದಿಯನ್ನು ತಯಾರಿಸಿದ ಸನ್ಮಾರ್ಗ; 45 ವರ್ಷಗಳ ಹಿಂದೆ ಯಾವೆಲ್ಲ ನಿಯಮಗಳನ್ನು ತನ್ನ ಮೇಲೆ ಹೇರಿಕೊಂಡಿತ್ತೋ ಅವೆಲ್ಲವನ್ನೂ ಈಗಲೂ ಚಾಚೂ ತಪ್ಪದೇ ಪಾಲಿಸಿಕೊಂಡೂ ಬರುತ್ತಿದೆ. ಆದ್ದರಿಂದಲೇ,

45 ವರ್ಷಗಳ ಹಿಂದೆ ಸನ್ಮಾರ್ಗದ ಬ್ಯಾಂಕ್ ಬ್ಯಾಲೆನ್ಸ್ ಏನಿತ್ತೋ ಬಹುತೇಕ ಇವತ್ತೂ ಹಾಗೆಯೇ ಇದೆ. ತನ್ನ ನಿಲುವಿನಲ್ಲಿ ಒಂದಿಷ್ಟು ಸಡಿಲಿಕೆ ಮಾಡಿಕೊಂಡು ಮದ್ಯ, ಬ್ಯಾಂಕು, ಫೈನಾನ್ಸು, ಜ್ಯೋತಿಷ್ಯ, ಸಿನಿಮಾ, ಜೂಜು, ಹುಟ್ಟುಹಬ್ಬ, ತಂಬಾಕು ಇತ್ಯಾದಿಗಳ ಜಾಹೀರಾತುಗಳನ್ನು ಪ್ರಕಟಿಸಿರುತ್ತಿದ್ದರೆ ಮತ್ತು ರಾಜಕಾರಣಿಗಳ ಜಾಹೀರಾತು ರೂಪದ ಸುದ್ದಿಗಳನ್ನು ಪ್ರಕಟಿಸಿರುತ್ತಿದ್ದರೆ ಪತ್ರಿಕೆಯಂತೂ ಲಾಭದಲ್ಲೇ ನಡೆಯುತ್ತಿತ್ತು. ಆದರೆ ಜನರ ದೃಷ್ಟಿಯಲ್ಲಿ ಮಾತ್ರ ಕುಬ್ಜವಾಗುತ್ತಿತ್ತು. ಇವತ್ತಿಗೂ ಸನ್ಮಾರ್ಗ ಅಪಾರ ಪ್ರಮಾಣದ ಓದುಗರನ್ನು ಗಳಿಸಿಕೊಂಡಿದ್ದರೆ ಮತ್ತು ಬಹುದೊಡ್ಡ ಅಭಿಮಾನಿ ಬಳಗವನ್ನು ದೇಶ-ವಿದೇಶಗಳಲ್ಲಿ ಉಳಿಸಿಕೊಂಡಿದ್ದರೆ ಅದಕ್ಕೆ ಪತ್ರಿಕೆ ತನ್ನ ನಿಲುವಿನಲ್ಲಿ ಒಂದಿಷ್ಟೂ ರಾಜಿ ಮಾಡಿಕೊಳ್ಳದಿರುವುದೇ ಬಹುಮುಖ್ಯ ಕಾರಣ. ಹಾಗಂತ,

ಈ 45 ವರ್ಷಗಳ ಪಯಣದಲ್ಲಿ ಪತ್ರಿಕೆ ಏಳು-ಬೀಳುಗಳನ್ನು ಎದುರಿಸುತ್ತಲೇ ಬೆಳೆದಿದೆ. ಒಂದಕ್ಕಿಂತ ಹೆಚ್ಚು ಕೇಸುಗಳೂ ದಾಖಲಾಗಿವೆ. ಸಂಪಾದಕೀಯ ಬಳಗ ನ್ಯಾಯಾಲಯದ ಕಟಕಟೆಯಲ್ಲೂ ನಿಂತಿದೆ. ಹಣಕಾಸಿನ ಸವಾಲಂತೂ ಸ್ಥಾಪನೆಯ ದಿನದಿಂದ ಇಂದಿನವರೆಗೂ ಮುಂದುವರಿದೇ ಇದೆ. ಅದರ ಜೊತೆಗೇ ಸನ್ಮಾರ್ಗ ಡಿಜಿಟಲ್ ಯುಗಕ್ಕೆ ಅತ್ಯಂತ ಯಶಸ್ವಿಯಾಗಿ ಕಾಲಿರಿಸಿದೆ. ಸನ್ಮಾರ್ಗ ವೆಬ್‌ಪೋರ್ಟಲ್ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್- ಎರಡೂ ಭಿನ್ನ ಸ್ವರೂಪ, ವಿಭಿನ್ನ ದೃಷ್ಟಿಕೋನ ಮತ್ತು ಪ್ರಸ್ತುತಿಯೊಂದಿಗೆ ಜನರನ್ನು ಅತ್ಯಂತ ವೇಗವಾಗಿ ತಲುಪುವಲ್ಲಿ ಯಶಸ್ವಿಯೂ ಆಗಿದೆ. ಜೊತೆಗೇ ಅನುಪಮ ಎಂಬ ಸಹೋದರಿಯನ್ನೂ ಸನ್ಮಾರ್ಗ ಪೋಷಿಸಿ ಬೆಳೆಸಿದೆ.
ಅಂದಹಾಗೆ,

ಸನ್ಮಾರ್ಗದ ಪಯಣ ಸರಾಗ ಮತ್ತು ಯಶಸ್ವಿ ಆಗಬೇಕಾದರೆ ಓದುಗರಾದ ನಿಮ್ಮ ನೆರವಿನ ಅಗತ್ಯವಿದೆ. ಪತ್ರಿಕೆಯನ್ನು ಖರೀದಿಸುವುದು ಮತ್ತು ಇತರರನ್ನು ಚಂದಾದಾರರನ್ನಾಗಿ ಮಾಡುವುದರ ಜೊತೆಗೇ ಹಣಕಾಸಿನ ನೆರವನ್ನೂ ನೀಡಬೇಕಾದ ತುರ್ತು ಅಗತ್ಯವಿದೆ. ಸನ್ಮಾರ್ಗ ಜಾಹೀರಾತು ಆಧಾರಿತ ಪತ್ರಿಕೆ ಅಲ್ಲವಾದ್ದರಿಂದ ಓದುಗರು ಮತ್ತು ಹಿತೈಷಿಗಳೇ ಜಾಹೀರಾತು ಸ್ಥಾನವನ್ನು ತುಂಬಬೇಕಾದುದು ಅನಿವಾರ್ಯ. ಅಲ್ಲಾಹನ ಮೇಲೆ ಅಪಾರವಾದ ಭರವಸೆ ಮತ್ತು ಓದುಗರ ಮೇಲಿನ ನಿರೀಕ್ಷೆಯೇ ಸನ್ಮಾರ್ಗದ ಶಕ್ತಿ. ಅಲ್ಲಾಹನಿಗೆ ಸ್ತುತಿ. ಎಲ್ಲರಿಗೂ ಕೃತಜ್ಞತೆಗಳು.