ಮೋದಿಯವರಿಗೆ ಜ್ಞಾನೋದಯವಾಗಲು ಚುನಾವಣೆ ಬರಬೇಕಾಯಿತು: ಮಲ್ಲಿಕಾರ್ಜುನ ಖರ್ಗೆ

0
299

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಂಬರುವ ಚುನಾವಣೆಗಳನ್ನು ಗುರಿಯಾಗಿಸಿ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು. ಕೃಷಿ ಕಾನೂನುಗಳ ಕುರಿತಾಗಿ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಅವರು
“(ರೈತರ ಹೋರಾಟಕ್ಕೆ)ಒಂದು ವರ್ಷ, ಮೂರು ತಿಂಗಳಾದ ನಂತರ ನಿಮಗೆ ಜ್ಞಾನೋದಯವಾಯಿತು… ಮತ್ತು ಈಗ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೀರಿ” ಎಂದು ಟೀಕಿಸಿದರು.

ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಅದನ್ನು ಹಿಂಪಡೆಯಲು ತಯಾರಾಯಿತು. ಮೂರು ಕಾನೂನುಗಳನ್ನು ಮಂಡಿಲ ಸಿದಾಗಲೇ ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರು, ರೈತ ಸಂಘಟನೆಗಳು ಸರಕಾರ ಇತರ ಸ್ವಯಂ ಸೇವಾ ಸಂಘಟನೆಗಳೂ ಅದನ್ನು ವಿರೋಧಿಸಿತ್ತು.

ಇಡೀ ದೇಶದಲ್ಲಿ ಕೃಷಿ ಕಾನೂನು ವಿರೋಧಿ ವಾತಾವರಣ ರೂಪುಗೊಂಡಿತ್ತು. ಅದರ ಫಲಿತಾಂಶ ಚುನಾವಣೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣತೊಡಗಿತು. ನಂತರ ಐದು ರಾಜ್ಯಗಳ ಚುನಾವಣೆ ನಡೆಯಿತು. ತದನಂತರದ ಉಪಚುನಾವಣೆಯ ಫಲಿತಾಂಶವೇ ಹೀಗಾದರೆ ಮುಂಬರುವ ಚುನಾವಣೆಗಳ ಫಲಿತಾಂಶ ಹೇಗಿರಬೇಡ ಎಂಬುದನ್ನು ಗಮನಿಸಿ ಸರಕಾರ ಕೃಷಿ ಕಾನೂನು ಹಿಂಪಡೆದಿದೆ ಎಂದು ಖರ್ಗೆ ಹೇಳಿದರು.

ಇಷ್ಟು ಹೇಳಿದಾಗ ಆಡಳಿತ ಪಕ್ಷದವರು ಬೊಬ್ಬೆ ಹಾಕಿದರು. ಭಾಷಣಕ್ಕೆ ಅಡ್ಡಿಪಡಿಸಿದರು. ಎರಡು ನಿಮಿಷಗಳ ಬದಲಿಗೆ ಖರ್ಗೆ ನಾಲ್ಕು ನಿಮಿಷ ಮಾತಾಡಿದರು ಎಂದು ರಾಜ್ಯಸಭಾ ಉಪಾಧ್ಯಕ್ಷರು ಮೈಕ್ ಆಫ್ ಮಾಡಿದರು.

ರೈತರ ಆರು ಬೇಡಿಕೆಗಳು:

  1. ಕನಿಷ್ಠ ಬೆಂಬಲ ಬೆಲೆಗೆ ಎಂಎಸ್‍ಪಿಗೆ ಕಾನೂನು ಮಾಡಬೇಕು.
  2. ವಿದ್ಯುತ್ ಕಾನೂನು ಕರಡು ಹಿಂಪಡೆಯಬೇಕು.
  3. ವಾಯು ಮಾಲಿನ್ಯದ ಹೆಸರಿನಲ್ಲಿ ರೈತರ ಮೇಲೆ ಹಾಕಿದ ದಂಡ ಹಿಂಪಡೆಯಬೇಕು.
  4. 2020 ಜೂನ್‍ನಿಂದ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು.
  5. ಅಜಯ್ ಮಿಶ್ರನನ್ನು ಸಚಿವ ಸಂಪುಟದಿಂದ ಹೊರಹಾಕಿ ಬಂಧಿಸಬೇಕು.
  6. ಹೋರಾಟದಲ್ಲಿ ಮೃತಪಟ್ಟಿರುವ 700ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನಷ್ಟಪರಿಹಾರ ಕೊಟ್ಟು ಪುನರ್ವಸತಿ ಮಾಡಿಕೊಡಬೇಕು. ಹುತಾತ್ಮರ ಸ್ಮಾರಕಕ್ಕೆ ಸಿಂಘು ಗಡಿಯಲ್ಲಿ ಜಾಗ ಅನುಮತಿಸಬೇಕು.