ಎಪ್ಸ್ಟೀನ್ ಫೈಲ್ಸ್ ವಿವಾದ: ಬಿಲ್ ಗೇಟ್ಸ್ ಭಾರತ AI ಶೃಂಗಸಭೆಗೆ ಗೈರು

0
330

ಸನ್ಮಾರ್ಗ ವಾರ್ತೆ

ನವದೆಹಲಿ: ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿತ “ಎಪ್ಸ್ಟೀನ್ ಫೈಲ್ಸ್” ವಿಚಾರವಾಗಿ ವಿವಾದ ಎದುರಿಸುತ್ತಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಭಾರತದಲ್ಲಿ ನಡೆಯುತ್ತಿರುವ AI ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ಗೇಟ್ಸ್ ಫೌಂಡೇಶನ್ ಪ್ರಕಟಣೆ ತಿಳಿಸಿದೆ. ಗೇಟ್ಸ್ ಅವರ ಬದಲಿಗೆ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತ ವಿಭಾಗದ ಅಧ್ಯಕ್ಷ ಅಂಕುರ್ ವೋರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಗೇಟ್ಸ್ ಫೌಂಡೇಶನ್ ಸಂಪೂರ್ಣ ಬದ್ಧವಾಗಿದೆ ಎಂದು ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. ಆರು ದಿನಗಳ ಶೃಂಗಸಭೆಯ ಪ್ರಮುಖ ವ್ಯಕ್ತಿಗಳ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಅವರ ಹೆಸರು ಕಾಣಿಸದ ಹಿನ್ನೆಲೆಯಲ್ಲಿ ಉಂಟಾದ ಗೊಂದಲದ ನಡುವೆ ಈ ಸ್ಪಷ್ಟನೆ ಬಂದಿದೆ.

ಆರು ದಿನಗಳ ಈ ಅಂತರರಾಷ್ಟ್ರೀಯ AI ಸಮ್ಮೇಳನ ಸೋಮವಾರ ಆರಂಭವಾಗಿದೆ. 2023ರಲ್ಲಿ ಯುಕೆ, 2024ರಲ್ಲಿ ದಕ್ಷಿಣ ಕೊರಿಯಾ ಮತ್ತು 2025ರಲ್ಲಿ ಫ್ರಾನ್ಸ್‌ನಲ್ಲಿ ಈ ಸಮ್ಮೇಳನ ನಡೆದಿತ್ತು.