ಸನ್ಮಾರ್ಗ ವಾರ್ತೆ
ನವದೆಹಲಿ: ರೈತರ ಪ್ರತಿಭಟನೆಯ ಸುತ್ತ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯವನ್ನು ಹರಡಿದ ಆರೋಪದಡಿಯಲ್ಲಿ ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆಗೆದು ಹಾಕುವಂತೆ ಭಾರತ ಸರ್ಕಾರ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ಗೆ ಸೂಚಿಸಿದೆ.
ಪಟ್ಟಿ ಮಾಡಲಾದ 1,178 ಟ್ವಿಟ್ಟರ್ ಹ್ಯಾಂಡಲ್ಗಳು ಪಾಕಿಸ್ತಾನಿ ಮತ್ತು ಖಲಿಸ್ತಾನಿ ಬಳಕೆದಾರರನ್ನು ಹೊಂದಿವೆ ಎಂಬುದಾಗಿ ಸರಕಾರ ಆರೋಪಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಜನವರಿ 31ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇದೇ ರೀತಿಯ ಕಾರಣಗಳಿಗಾಗಿ ನಿರ್ಬಂಧಿಸಬೇಕಾದ 257 ಹ್ಯಾಂಡಲ್ ಮತ್ತು ಟ್ವೀಟ್ಗಳ ಪಟ್ಟಿಯನ್ನು ಕಳುಹಿಸಿತ್ತು. ಕೆಲವು ಖಾತೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಹಾಗೂ ಇನ್ನೂ ಕೆಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಮೂಲಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇವುಗಳಲ್ಲಿ ರೈತ ನಾಯಕರ ಖಾತೆಗಳ ವಿರುದ್ಧವೂ ಕ್ರಮ ಜರುಗಿಸಿದ ಟ್ವಿಟ್ಟರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರ ಪ್ರತಿಭಟನೆಯ ಸುತ್ತಲಿನ ಟೂಲ್ ಕಿಟ್ ವಿವಾದದ ಮಧ್ಯೆ ಈ ನಡೆಯನ್ನು ಸರಕಾರ ಸ್ವೀಕರಿಸಿದ್ದು, ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಕಳೆದ ವಾರ ಟೂಲ್ ಕಿಟ್ ಅನ್ನು ಟ್ವೀಟ್ ಮಾಡಿದ್ದರಲ್ಲದೇ ಅದನ್ನು ಅವರು ನಂತರ ಅಳಿಸಿದ್ದರು. ಪೊಲೀಸರ ಪ್ರಕಾರ, ಈ ಟೂಲ್ ಕಿಟ್ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ಮತ್ತು ಕೆಟ್ಟ ಇಚ್ಛೆಯನ್ನು ಹರಡುವ ಗುರಿಯನ್ನು ಹೊಂದಿದೆ ಮತ್ತು ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಗುಂಪುಗಳ ನಡುವೆ ಅಸಂಗತತೆಯನ್ನು ಉಂಟುಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿತ್ತಲ್ಲದೇ ಇದರ ಕುರಿತು ತನಿಖೆಯನ್ನು ಆರಂಭಿಸಿತ್ತು.
ಸೆಲೆಬ್ರಿಟಿಗಳ ಕೆಲವು ಟ್ವೀಟ್ಗಳಿಗೆ ಲೈಕ್ ನೀಡುವ ಟ್ವಿಟರ್ ಸಿಇಒರವರ ನಡೆಯು ತಟಸ್ಥತೆಯ ನಿಯಮಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂಬುದಾಗಿ ಸರ್ಕಾರವು ಆಕ್ಷೇಪಿಸಿದೆ ಎಂದೂ ಮೂಲಗಳು ತಿಳಿಸಿವೆ.
ಥನ್ಬರ್ಗ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಟೀಕೆಗಳಿಗೆ ತಮ್ಮ ಸಚಿವಾಲಯ ಪ್ರತಿಕ್ರಿಯಿಸಿದ್ದರ ಹಿಂದೆ ಒಂದು ಕಾರಣವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.












