ತೋತಾಪುರಿ ಸಹಿತ ವಿವಿಧ ಮಾವಿನ ಹಣ್ಣಿಗೆ ಬೆಲೆ ಕುಸಿತ: ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು

0
716

ಸನ್ಮಾರ್ಗ ವಾರ್ತೆ

ಬೆಂಗಳೂರು: ಬಂಗನಪಳ್ಳಿ, ಬೆನಿಶಾನ್ ಮತ್ತು ತೋತಾಪುರಿ ಮಾವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೆ ಮಾಡಿರುವುದರಿಂದ ಮಾವಿನ ತಳಿಗಳಾದ ತೋತಾಪುರಿ, ಬಂಗನಪಳ್ಳಿ ಮತ್ತು ಬೆನಿಶಾನ್ ಗೆ ವಿಪರೀತ ಬೆಲೆ ಕುಸಿತ ಕಂಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ತಮ್ಮ ಬೆಲೆಗಳಿಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗದೇ ಇರುವುದರಿಂದ ಕ್ವಿಂಟಾಲ್ ಗಟ್ಟಲೆ ಮಾವುಗಳನ್ನು ರಸ್ತೆಗೆ ಸುರಿದಿದ್ದಾರೆ.
ಮಾವು ರಸ್ತೆ ಬದಿ ಬಿಸಾಡಿರುವುದನ್ನು ಗಮನಿಸಿ ಹಲವಾರು ಮಂದಿ ದಾರಿಹೋಕರು ತಮ್ಮ ಮನೆಗಳಿಗೆ ಕೊಂಡೊಯ್ಯುವ ದೃಶ್ಯ ಕಂಡು ಬಂತು.

ತೋತಾಪುರಿ ಮತ್ತು ಬೆನಿಷಾನ್ ವಿಧದ ಮಾವಿನಹಣ್ಣಿಗೆ ಖರೀದಿದಾರರು ಇಲ್ಲ. ಪ್ರತಿ ಟನ್ ಬೆನಿಷಾನ್ ಅನ್ನು 2019 ರಲ್ಲಿ 1 ಲಕ್ಷ ರೂ., ಮತ್ತು ಕಳೆದ ವರ್ಷ 50,000 ರಿಂದ 80,000 ರೂ. ಆದರೆ, ಈ ವರ್ಷ ಬೆಲೆ 10,000-15,000 ರೂ.ಗೆ ಇಳಿದಿದೆ. ಸಾರಿಗೆ ವೆಚ್ಚವನ್ನು ಸಹ ಭರಿಸಲು ರೈತರು ಹೆಣಗಾಡುತ್ತಿದ್ದಾರೆ ಎಂದು ಹೇಳಿರುವ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ, ಈ ವರ್ಷ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಕೂಡ ಯಾವುದೇ ಖರೀದಿದಾರರು ಬಂದಿಲ್ಲ.‌ ಆದ್ದರಿಂದ ಸರಕಾರ ನಮಗೆ ಪ್ಯಾಕೇಜ್ ಘೋಷಣೆ ಮಾಡಿ ರೈತರಿಗೆ ನೆರವು ನೀಡಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ತೋತಾಪುರಿ ಪ್ರಭೇದವನ್ನು ಶ್ರೀನಿವಾಸಪುರದಲ್ಲಿ 60,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಬೆಲೆ ಕುಸಿದಿರುವುರಿಂದ ಮಾವು ಬೆಳೆದ ರೈತರು ಕಂಗಾಲಾಗಿದ್ದಾರೆ.