ಫೆಮಿ ಬೆಂಗಳೂರು – ಶಾಲಾ ನಾಯಕತ್ವ ಪ್ರಶಸ್ತಿ ಸಮಾವೇಶ 2026

0
368

ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಗ್ಗಟ್ಟೇ ನಿಜವಾದ ಶಕ್ತಿ: ಎಂ.ಎಲ್.ಸಿ. ನಸೀರ್ ಅಹ್ಮದ್

ಸನ್ಮಾರ್ಗ ವಾರ್ತೆ

ಬೆಂಗಳೂರು: ಫೆಡರೇಶನ್ ಆಫ್ ಮೈನಾರಿಟೀಸ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್, ಕರ್ನಾಟಕ ಚಾಪ್ಟರ್ (ಫೇಮಿ) ಇದರ ಆಶ್ರಯದಲ್ಲಿ ಶಾಲಾ ಲೀಡರ್ಸ್ ಅವಾರ್ಡ್ ಕಾನ್ಫರೆನ್ಸ್ 17 ಜನವರಿ 2026 ರಂದು ಬ್ಯಾರಿಸ್ ಸೌಹಾರ್ದ ಭವನ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಸಮಾವೇಶದಲ್ಲಿ ಬೆಂಗಳೂರಿನ 150ಕ್ಕೂ ಹೆಚ್ಚು ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ಸಮಾವೇಶದ ಮುಖ್ಯ ಅತಿಥಿ ನಸೀರ್ ಅಹ್ಮದ್ ಎಂಎಲ್‌ಸಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ತಮ್ಮ ಭಾಷಣದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಇದು ಅವುಗಳ ಪರಿಶ್ರಮ, ಶಿಸ್ತು ಮತ್ತು ಶೈಕ್ಷಣಿಕ ಬದ್ಧತೆಯ ಸಾಕ್ಷಿ ಎಂದು ಹೇಳಿದರು.

ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆಗಳು ಪ್ರಮುಖ ಸ್ಥಾನ ಪಡೆದಿವೆ ಎಂದು ಅವರು ನುಡಿದರು. ಫೆಮಿಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಗ್ಗಟ್ಟಿನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷೀಯ ಭಾಷಣದಲ್ಲಿ ಫೆಡರೇಶನ್ ಆಫ್ ಮೈನಾರಿಟೀಸ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಇದರ ರಾಷ್ಟೀಯ ಪ್ರಧಾನ ಕಾರ್ಯದರ್ಶಿ, ಸೈಯದ್ ತನ್ವೀರ್ ಅಹ್ಮದ್ ಅವರು ಮಾತನಾಡುತ್ತಾ, “ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳು ದೃಢವಾದ ಒಗ್ಗಟ್ಟಿನ ರೂಪವನ್ನು ಪಡೆದರೆ, ಅವುಗಳ ಅಗತ್ಯವನ್ನು ರಾಜಕೀಯ ಪ್ರತಿನಿಧಿಗಳಷ್ಟೇ ಅಲ್ಲ, ಸರ್ಕಾರವೂ ಕೂಡಾ ಗಮನಿಸುತ್ತದೆ. ನಮ್ಮ ಶಿಕ್ಷಕರು ಹಾಗೂ ಪದವೀಧರರ ಮೂಲಕ ಮತಬ್ಯಾಂಕ್ ಹೆಚ್ಚಾಗುತ್ತದೆ; ಈ ಶಕ್ತಿಯೇ ರಾಜಕೀಯ ಮಟ್ಟದಲ್ಲಿ ನಮ್ಮ ಮಾತನ್ನು ಪರಿಣಾಮಕಾರಿಯಾಗಿ ಮುಂದಿಟ್ಟುಕೊಳ್ಳಲು ಅವಕಾಶ ಸಿಗುತ್ತದೆ.” ಎಂದರು.

ಅವರು ಸಂಸ್ಥೆಗಳು ಪಂಥೀಯ ಭೇದಗಳನ್ನು ಮೀರಿ, ಶೈಕ್ಷಣಿಕ ಗುಣಮಟ್ಟ, ಸಂಸ್ಥೆಯ ಅಭಿವೃದ್ಧಿ, ಸಾಮೂಹಿಕ ಹಿತ ಮತ್ತು ಸಾಮಾಜಿಕ ಹೊಣೆಗಾರಿಕೆಗಳತ್ತ ಗಮನ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು.

ಫೆಮಿ ಕರ್ನಾಟಕ ಚಾಪ್ಟರ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆಸಿಫುದ್ದೀನ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಬೆಂಗಳೂರಿನಲ್ಲಿ ನಡೆದ ಈ ಶಾಲಾ ಲೀಡರ್ಸ್ ಅವಾರ್ಡ್ ಕಾನ್ಫರೆನ್ಸ್ ನ ಮುಖ್ಯ ಉದ್ದೇಶವು ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಸೇವೆಗಳನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡುವುದರ ಮೂಲಕ ಅವರ ಸೇವೆಯನ್ನು ಗುರುತಿಸುವುದಾಗಿದೆ. ಈ ಮೂಲಕ ಅವರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಶಾಲಾ ನಾಯಕರುಗಳಿಗೆ ಗಣ್ಯ ಅತಿಥಿಗಳ ಕೈಯಿಂದ ಅವಾರ್ಡ್ ಗಳನ್ನು ನೀಡಲಾಯಿತು.

ಈ ವೇಳೆ ಮುಹಮ್ಮದ್ ಆಸಿಫುದ್ದೀನ್ ಅವರು ಒಂದು ಮನವಿ ಪತ್ರವನ್ನು ನಸೀರ್ ಅಹ್ಮದ್ ಅವರ ಮೂಲಕ ಶಿಕ್ಷಣ ಸಚಿವಾಲಯ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯಕ್ಕೆ ರವಾನಿಸಿದರು. ಮೆಮೊರಂಡಂನಲ್ಲಿ ಈ ಬೇಡಿಕೆಗಳನ್ನು ಮುಂದಿಡಲಾಯಿತು.

  • ಶಾಲೆಗಳ ನವೀಕರಣ ಮಾನ್ಯತೆ ಪ್ರಕ್ರಿಯೆಯಲ್ಲಿ ಸಡಿಲಿಕೆ ನೀಡಬೇಕು.
  • ಮೈನಾರಿಟಿ ಸ್ಟೇಟಸ್ ಪ್ರಮಾಣಪತ್ರದ ಜಾರಿಯನ್ನು ಸುಲಭಗೊಳಿಸಬೇಕು.
  • ಪ್ರೀ-ಮೆಟ್ರಿಕ್ ವಿದ್ಯಾರ್ಥಿವೇತನದ ಬಜೆಟ್ ಅನ್ನು 2026–27ರಲ್ಲಿ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿಸಬೇಕು.
  • ಮುಸ್ಲಿಂ ಶಾಲೆಗಳಿಗೆ ಸರ್ಕಾರಿ ಭೂಮಿಯ ಹಂಚಿಕೆ ಹಾಗೂ ಮೂಲ ಸೌಕರ್ಯಕ್ಕಾಗಿ ಅನುದಾನಗಳನ್ನು ಒದಗಿಸಬೇಕು.
  • ಪೋಸ್ಟ್-ಮೆಟ್ರಿಕ್ ಹಾಗೂ ಉನ್ನತ ಶಿಕ್ಷಣ (ಓವರ್‌ಸೀಸ್ ಯೋಜನೆ) ಬಜೆಟ್ ಅನ್ನು ದ್ವಿಗುಣಗೊಳಿಸಬೇಕು.
  • ದೀನೀ ಮದರಸಾಗಳ ಆಧುನೀಕರಣಕ್ಕಾಗಿ ಅರ್ಜಿಗಳನ್ನು ಮಧ್ಯವರ್ತಿ ಸಂಸ್ಥೆಗಳನ್ನು ತಪ್ಪಿಸಿ ನೇರವಾಗಿ (ಆನ್‌ಲೈನ್) ಮದರಸಾಗಳಿಂದಲೇ ಸ್ವೀಕರಿಸಬೇಕು.

ನಸೀರ್ ಅಹ್ಮದ್ ಅವರು ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರೊಂದಿಗೆ ಚರ್ಚಿಸಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಮೌಲಾನಾ ಡಾ. ಮುಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ (ಇಮಾಮ್ ಹಾಗೂ ಖತೀಬ್, ಸಿಟಿ ಜಾಮಿಯಾ ಮಸೀದಿ, ಬೆಂಗಳೂರು) ಅವರು ” ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳು ಕೇವಲ ಆಧುನಿಕ ಶಿಕ್ಷಣಕ್ಕೆ ಸೀಮಿತವಾಗದೆ ಧಾರ್ಮಿಕ ಶಿಕ್ಷಣ ಹಾಗೂ ನೈತಿಕ ತರಬೇತಿಯ ಕುರಿತು ಗಮನಹರಿಸಿ ಇದಕ್ಕಾಗಿ ಸಮರ್ಪಕ, ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಡಾ. ಬೆಲಗಾಮಿ ಮೊಹಮ್ಮದ್ ಸಾದ್ (ಅಧ್ಯಕ್ಷರು, ಮನ್ಸೂರಾ ಎಜುಕೇಷನಲ್ & ವೆಲ್ಫೇರ್ ಟ್ರಸ್ಟ್) ತಮ್ಮ ಭಾಷಣದಲ್ಲಿ, ಜ್ಞಾನ, ಇಸ್ಲಾಮೀ ಚಿಂತನೆ ಮೌಲ್ಯಗಳು ಮತ್ತು ನೈತಿಕತೆ — ಈ ಮೂರನ್ನೂ ಒಟ್ಟಿಗೆ ಪರಿಚಯಿಸುವ ಸಂಸ್ಥೆಯೇ ಸಮಗ್ರ ಶೈಕ್ಷಣಿಕ ಸಂಸ್ಥೆಯಾಗುತ್ತದೆ. ನವ ಪೀಳಿಗೆಯನ್ನು ಬೌದ್ಧಿಕವಾಗಿ ದೃಢ ಮತ್ತು ನೈತಿಕವಾಗಿ ಪ್ರಬಲರಾಗಿಸುವ ಹೊಣೆಗಾರಿಕೆ ಸಂಸ್ಥೆಗಳ ಹೊಣೆಗಾರರ ಮೇಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಮುಹಮ್ಮದ್ ತಾಹಾ ಮತೀನ್ (ಟ್ರಸ್ಟಿ, ತಕ್ವಾ ಎಜುಕೇಷನಲ್ ಟ್ರಸ್ಟ್) ಅವರು ಮಾತನಾಡುತ್ತ, ಪ್ರತಿಯೊಂದು ಸಮಾಜವೂ ತನ್ನ ಶೈಕ್ಷಣಿಕ ಸಂಸ್ಥೆಗಳ ರಕ್ಷಣೆ, ಮಾರ್ಗದರ್ಶನ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಬಲವಾದ ಸಂಘಟನೆಗಳು ಹಾಗೂ ಅಸೋಸಿಯೇಷನ್‌ಗಳನ್ನು ನಿರ್ಮಿಸಿಕೊಂಡಿದೆ; ಹಾಗಿದ್ದರೆ ಮುಸ್ಲಿಮರು ತಮ್ಮ ಶೈಕ್ಷಣಿಕ ಸಂಸ್ಥೆಗಳಿಗಾಗಿ ಏಕೆ ಇಂತಹ ಸಾಮೂಹಿಕ ವೇದಿಕೆಯನ್ನು ನಿರ್ಮಿಸಬಾರದು ಎಂದು ಪ್ರಶ್ನಿಸಿದರು. ಫೆಮಿ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಸಮಸ್ಯೆಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಮಟ್ಟದಲ್ಲಿ ಪರಿಹರಿಸಲು ಸೂಕ್ತ, ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹ ವೇದಿಕೆಯಾಗಿದ್ದು, ಎಲ್ಲ ಸಂಸ್ಥೆಗಳು ಒಂದೇ ಸೂರಿನೆಡೆ ಒಂದಾಗಬೇಕು ಎಂದು ಹೇಳಿದರು. ಎಲ್ಲಾ ಅತಿಥಿಗಳಿಗೆ ಫೆಮಿಯ ವತಿಯಿಂದ ಸ್ಮರಣಿಕೆಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಡಾ. ಬೆನಝೀರ್ ಅವರು ಪಿಪಿಟಿ ಮೂಲಕ “Connecting Schools with the Community” ವಿಷಯದ ಮೇಲೆ ಪರಿಣಾಮಕಾರಿ ಹಾಗೂ ತರ್ಕಬದ್ಧ ವಿಷಯವನ್ನು ಮಂಡಿಸಿದರು. ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಶಾಲೆಗಳ ಸಕ್ರಿಯ ಮತ್ತು ಸಕಾರಾತ್ಮಕ ಪಾತ್ರ ಕಾಲದ ಅವಶ್ಯಕತೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಮಾವೇಶ ಸಂಚಾಲಕ ಇಕ್ಬಾಲ್ ಅಹ್ಮದ್ (ಅಧ್ಯಕ್ಷರು, ಫೆಮಿ ಬೆಂಗಳೂರು), ಹಾರೂನ್ ಬಾಷಾ (ಕಾರ್ಯದರ್ಶಿ, ಫೆಮಿ), ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ, ರಿಯಾಝ್ ಅಹ್ಮದ್ ರೋಣ, ಸೈಯದ್ ಬಶಾರತ್ ಅಹ್ಮದ್, ಅಸ್ಲಂ ಹೈಕಾಡಿ ಉಡುಪಿ, ಅತೀಕ್ ಪಾಶಾ ಹ, ರೇಷ್ಮಾ ಇಕ್ಬಾಲ್, ಸೈಯದ್ ಇಜಾಜ್, ಸೈಯದ್ ಮುನೀರ್, ಜುಲ್ಫಿಕಾರ್ ಅಹ್ಮದ್, ಡಾ. ಜುಹೈಬ್ ಜಾವೇದ್ ಖಾನ್, ಮೊಹಮ್ಮದ್ ಅಲ್ತಾಫ್ ಅಹ್ಮದ್, ಇಫ್ತಿಖಾರ್ ಶರೀಫ್ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ. ಫರೀದಾ ರಹ್ಮತುಲ್ಲಾಹ್ ಧನ್ಯವಾದಗಳನ್ನು ಸಲ್ಲಿಸಿದರು.